“ಮರೆಯದಿರೋಣ ನಮ್ಮ ಸಂಸ್ಕ್ರುತಿಯನ್ನ”

– ವೀರೇಶ.ಅ.ಲಕ್ಶಾಣಿ.

ಬೇರು ಮತ್ತು ಮರ, Roots and Tree

“ಹೇಗಿದ್ದವು ನಮ್ಮ ಆ ದಿನಗಳು” ಎಂದು ಸ್ಮರಿಸಿಕೊಳ್ಳುವ ದುಸ್ತಿತಿ ಇಂದು ಬಂದೊದಗಿದೆ ನಮಗೆ. ಇದು ಜೀವನ ಕ್ರಮಕ್ಕೆ ಬಂದೊದಗಿರುವ ಸ್ತಿತಿ ಮಾತ್ರವಲ್ಲ. ಎಲ್ಲ ರಂಗಗಳಲ್ಲೂ ಸಾಮಾನ್ಯವೆನಿಸಿಬಿಟ್ಟಿರುವ ಪರಿಸ್ತಿತಿ. ಇತಿಹಾಸವನ್ನೊಮ್ಮೆ ಸೂಕ್ಶ್ಮವಾಗಿ ಅವಲೋಕಿಸುವುದಾದರೆ, ಸ್ವಾತಂತ್ರ್ಯಪೂರ‍್ವ ಕಾಲದಲ್ಲಿ ಅಶ್ಟೊಂದು ಸೌಲಬ್ಯಗಳಿಲ್ಲದಿದ್ದರೂ ಸಹಕಾರ-ಸಹಬಾಳ್ವೆ, ನಂಬಿಕೆ-ವಿಶ್ವಾಸ, ನೆಮ್ಮದಿಯ ಬದುಕಿತ್ತು ಆ ದಿನಗಳಲ್ಲಿ. ಬಳಿಕ, ಕಾಲದ ಜೊತೆಗೆ ಜೀವನ ಕ್ರಮವೂ ಬದಲಾಯಿತು. ಸ್ವಾತಂತ್ರ್ಯಪೂರ‍್ವದ ದಾಸ್ಯದ ಜೀವನ ಮುಗಿದುಹೋಯಿತೇನೋ ಅನ್ನುವಶ್ಟರಲ್ಲೇ “ಬಲವೇ ಎಲ್ಲಾ” ಅನ್ನುವ ಕಾಲ ಅಡಿಯಿಡುತ್ತಿದೆ. ಹಣಬಲದಿಂದ ಜನಬಲಗಳಿಸಿಕೊಳ್ಳುವ ಸ್ವಾರ‍್ತ, ನಂಬಿಕೆ-ವಿಶ್ವಾಸಗಳ ಮೇಲೆ ಸವಾರಿಮಾಡುತ್ತಿದೆ. ಸಹಜ ಸಹಜೀವನದ ಸೂತ್ರವಾದ ವಸ್ತು ವಿನಿಮಯ ಪದ್ದತಿಯನ್ನು ನಗರದ ದಲ್ಲಾಳಿ ಮಾರುಕಟ್ಟೆಯಲ್ಲಿ ಗಿರವಿಯಿಟ್ಟು, ಬ್ಯಾಂಕುಗಳ ಸಾಲದ ತೊತ್ತಿಗರಾಗಿದ್ದೇವೆ. ಯಾಕಿದು ಎಂಬುದಕ್ಕೆ ಉತ್ತರ ಗೊತ್ತಿದ್ದೂ ಬಿಡಿಸಿಕೊಳ್ಳಲಾಗದ ಬಂದದಲ್ಲಿ ನಮ್ಮಶ್ಟಕ್ಕೆ ನಾವೇ ಸಿಲುಕಿಕೊಳ್ಳುತ್ತಿದ್ದೇವೆ.

ಒಂದು ಕಡೆ ನಾಡ ಸೊಗಡಿಗೆ 2ಜಿ, 3ಜಿ,4ಜಿ, 5ಜಿ ಗಳ ಸಂಸ್ಕ್ರುತಿಯ ಗೊಬ್ಬರ ಎರೆಯುತ್ತಿದ್ದೇವೆ. ಮತ್ತೊಂದೆಡೆ ಅಜ್ಜಿ ಸಂಸ್ಕ್ರುತಿಯನ್ನೇ ಮರೆತುಬಿಟ್ಟಿದ್ದೇವೆ. ಪಾಶ್ಚಾತ್ಯ ಸಂಸ್ಕ್ರುತಿಗೆ ಮಾರುಹೋಗಿ ದೇಶೀಯ ಸಂಸ್ಕ್ರುತಿಯನ್ನು ಮೂಲೆಗಟ್ಟಿದ್ದೇವೆ. ಜೀವನದಲ್ಲಿ ಬದಲಾವಣೆ ಬೇಕು. ಆದರೆ ಹಳೆಯದರಲ್ಲೂ ಹೊಸತನ ತುಂಬುವ ಕೆಲಸವಾಗಬೇಕು. ನಮ್ಮ ನಿತ್ಯದ ಬದುಕು ನೋಡಿದರೆ, ‘ಬಾಲ ಹೋಯ್ತು ಕತ್ತಿ ಬಂತು ಡುಂ ಡುಂ’ ಎನ್ನುವಂತಾಗಿದೆ. ಕತ್ತಿಯ ಕೆಲಸ ಕತ್ತರಿಸಿ ತೆಗೆದು ತುಂಡು ಮಾಡುವುದು ಎಂಬುದನ್ನು ಮರೆತಿದ್ದೇವೆ. “ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು” ಎಂಬ ಕವಿವಾಣಿಯಂತೆ ಹಳೆಯದಕ್ಕೆ ಹೊಸತನ, ಚೈತನ್ಯವನ್ನು ತುಂಬುವ ಕೆಲಸವಾಗಬೇಕು ವಿನಹ ಬೇರನ್ನೇ ಕೀಳುವ ಕೆಲಸವಾಗಬಾರದು. ಹಾಗಾದಲ್ಲಿ, ಬುಡ ಕಡಿದ ಮರ ಒಣಗುವಂತೆ ನಮ್ಮ ಬದುಕೂ  ಕೂಡ ಒಣಗಿ ಹೋಗುತ್ತದೆ.

12 ನೇ ಶತಮಾನದಲ್ಲಿಯೇ ಶಿವಶರಣರು ತಮ್ಮ ಸಾಹಿತ್ಯದಲ್ಲಿ ನಮಗೆ ಒಳ್ಳೆಯ ಬಾಳ್ವೆಯ ಮಾರ‍್ಗದರ‍್ಶಿ ಸೂತ್ರಗಳನ್ನು ತಿಳಿಸಿದ್ದಾರೆ.

ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ?
ಕಡೆಗೀಲು ಬಂಡಿಗಾಧಾರ
ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ
ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ! ರಾಮನಾಥ.

ಎಂಬ ಜೇಡರ ದಾಸಿಮಯ್ಯನವರ ವಚನ, ‘ನಮ್ಮ ನಿತ್ಯಜೀವನದಲ್ಲಿ ಹೊಸತನ ತುಂಬಿಕೊಳ್ಳಲು ತಿಳಿದವರ ಹಿತನುಡಿ ಕೇಳುತ್ತಿರಬೇಕು. ಆಗ ನಮ್ಮ ಜೀವನದ ಬಂಡಿ ಬೀಳದೇ ಸರಾಗವಾಗಿ ಉರುಳುತ್ತದೆ’ ಎಂಬುದನ್ನು ಹೇಳುತ್ತದೆ. ಬಸವಣ್ಣನವರ ಸಪ್ತಸುನೀತಿಗಳು, ಅಲ್ಲಮರ ಸದಾಚಾರದ ನುಡಿಗಳು, ಅಕ್ಕಮಹಾದೇವಿಯ ವಿರಕ್ತ ಜೀವನ ಸಾರ, ಸರ‍್ವಗ್ನನ ಸತ್ಯದರ‍್ಶನ, ಕಬೀರರ ಜೀವನ ದರ‍್ಶನ ಜೀವನದಲ್ಲಿ ವಿಶಮತೆಯ ರೋಗ ಉಲ್ಬಣಿಸದಂತ ಮದ್ದನ್ನು ಒದಗಿಸುತ್ತವೆ.

ನಮ್ಮ ಸಾಂಸ್ಕ್ರುತಿಕ ಜೀವನ ಹೇಗಿತ್ತು ಈಗ ಹೇಗಿದೆ ಎನ್ನುವುದರ ಕಡೆಗೆ ಆಗಾಗ ದ್ರುಶ್ಟಿ ಹರಿಸುತ್ತಾ ವಿಕಲಗೊಂಡ ಬದುಕಿನ ಬಾಗಕ್ಕೆ ನೈತಿಕ ಚಿಕಿತ್ಸೆ ನೀಡುತ್ತಲಿದ್ದರೆ ಬದುಕು ಸರಾಗ. ಕಾಲಕಾಲಕ್ಕೆ ಕತ್ತರಿಸಿ ಹೋಗುತ್ತಿರುವ ನಮ್ಮ ಸಾಂಸ್ಕ್ರುತಿಕ ಬದುಕಿನ ಅಂಗಗಳನ್ನು ನೈತಿಕ ಮೌಲ್ಯಗಳ ಬಂದದಿಂದ ಮತ್ತೆ ಕಟ್ಟಿ ಮರು ಜೋಡಣೆ ಮಾಡಬೇಕಿದೆ.

( ಚಿತ್ರ ಸೆಲೆ: dumielauxepices.net )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: