ಕ್ಯಾನ್ಸಸ್‍ನ ‘ಗಾರ‍್ಡನ್ ಆಪ್ ಈಡನ್’ – ವಿಲಕ್ಶಣ ಶಿಲ್ಪಕಲೆಯ ತಾಣ

– ಕೆ.ವಿ.ಶಶಿದರ.

ದ ಗಾರ‍್ಡನ್ ಆಪ್ ಈಡನ್, The Garden of Eden

ಲ್ಯೂಕಾಸ್ 500 ಜನಸಂಕ್ಯೆಯುಳ್ಳ ಪುಟ್ಟ ಹಳ್ಳಿ. ಈ ಹಳ್ಳಿಯಲ್ಲಿ ಈಡನ್ ಗಾರ‍್ಡನ್ ಹೊರತು ಪಡಿಸಿದರೆ ಬೇರೇನೂ ವಿಶೇಶತೆಯಿಲ್ಲ. ಕ್ಯಾನ್ಸಸ್‍ನ ಎಂಟನೇ ಅಚ್ಚರಿಗಳ ಅಂತಿಮ ಸುತ್ತಿನಲ್ಲಿ ಸ್ಪರ‍್ದಿಯಾಗಿದ್ದುದು ಈ ‘ಈಡನ್ ಗಾರ‍್ಡನ್’. ಇದು ವಿಲಕ್ಶಣ ಶಿಲ್ಪ ಕಲೆಯ ಹೆಸರಾಂತ ಕಲಾ ತಾಣ. 1907ರಲ್ಲಿ ತನ್ನ 62ನೇ ಇಳಿ ವಯಸ್ಸಿನಲ್ಲಿ ಸ್ಯಾಮ್ಯುಯಲ್ ಪೆರ‍್ರಿ ಡಿನ್ಸ್ ಮೂರ್ ಎಂಬಾತ ತನ್ನ ಕುಟುಂಬಕ್ಕಾಗಿ ಮನೆಯೊಂದನ್ನು ಕಟ್ಟಲು, ಸುಣ್ಣದ ಕಲ್ಲುಗಳನ್ನು ಬಳಸುವ ಮೂಲಕ ಈ ಅಸಾಮಾನ್ಯ ತಾಣದ ನಿರ‍್ಮಾಣವನ್ನು ಆರಂಬಿಸಿದ. ನಂತರ ಡಿನ್ಸ್ ಮೂರ್, ತಾನು ಹುಟ್ಟು ಹಾಕಿರುವ ಶಿಲ್ಪ ಕಲೆಯ ಗೊಂಬೆಗಳನ್ನು ಹಿಡಿದಿಟ್ಟುಕೊಳ್ಳುವಂತ 40 ಅಡಿ ಎತ್ತರದ ಮರಗಳನ್ನು, 113 ಟನ್ನುಗಳಶ್ಟು ಸಿಮೆಂಟ್ ಬಳಸಿ ನಿರ‍್ಮಿಸಿದ. 1929ರ ಬಳಿಕ ಆತನಿಗೆ ಕುರುಡುತನ ಉಂಟಾಗಿದ್ದರಿಂದ ಶಿಲ್ಪ ಕಲೆಯ ಕೆಲಸವನ್ನು ನಿಲ್ಲಿಸಿದನು.

ಡಿನ್ಸ್ ಮೂರ್ ಅನ್ನು ಹೊರಗಟ್ಟಲು ಪ್ರಯತ್ನಿಸಿದ್ದ ಸ್ತಳೀಯರು!

ಈ ತಾಣವನ್ನು ನೋಡಬರುವವರಿಗೆ ಅಲ್ಲಿನ ಪ್ರತಿಯೊಂದು ಶಿಲ್ಪದ ವಿವರವನ್ನು ಅಲ್ಲಿನ  ಗೈಡ್ ಗಳು ತಿಳಿಸುವುದಲ್ಲದೆ, ಅವುಗಳು ಬಿಂಬಿಸುವ ರಾಜಕೀಯ, ಆದುನಿಕ ನಾಗರೀಕತೆ ಮತ್ತು ಬೈಬಲ್ ನ ತಿರುಳನ್ನು ಒಂದಕ್ಕೊಂದು ಪೋಣಿಸಿ ವಿವರಿಸುತ್ತಾರೆ. ಶಿಲ್ಪಗಳು ಹೊರ ಹೊಮ್ಮಿಸುವ ಹಾಸ್ಯ ಮತ್ತು ತಿಳಿಸುವ ಸಂದೇಶಗಳು ವೀಕ್ಶಕರನ್ನು ಅಚ್ಚರಿಗೊಳಿಸುತ್ತವೆ. ಕ್ಯಾನ್ಸಸ್‍ನ ಲ್ಯೂಕಾಸ್‍ನಲ್ಲಿ ಡಿನ್ಸ್ ಮೂರ್ ಈ ಕಟ್ಟಡವನ್ನು ನಿರ‍್ಮಿಸಿ ತನ್ನ ಮನದಾಳದ ಶಿಲ್ಪ ಕಲೆಗೆ ಮೂರ‍್ತ ರೂಪ ಕೊಡಲು ಶ್ರಮಿಸುತ್ತಿದ್ದಾಗ ಅವನನ್ನು ಅಲ್ಲಿಂದ ಹೊರಗೋಡಿಸಲು ಸ್ತಳೀಯರು ಪ್ರಯತ್ನಿಸಿದ್ದರಂತೆ. ಅದೇ ಈಡನ್ ಗಾರ‍್ಡನ್ ಇಂದು ಈ ಪಟ್ಟಣದ ಪ್ರಮುಕ ಆಕರ‍್ಶಣೆಯ ಕೇಂದ್ರವಾಗಿ ಜನರನ್ನು ತನ್ನೆಡೆ ಸೆಳೆಯುತ್ತಿದೆ. ಇದರಿಂದಾಗಿ ‘ಗ್ರಾಸ್‍ರೂಟ್ ಆರ‍್ಟ್ ಕ್ಯಾಪಿಟಲ್ ಆಪ್ ಕ್ಯಾನ್ಸಸ್‍’ ಎಂಬ ಪಟ್ಟವನ್ನೂ ಲ್ಯೂಕಾಸ್ ಅಲಂಕರಿಸಿದೆ. ದ ಗಾರ‍್ಡನ್ ಆಪ್ ಈಡನ್, The Garden Of Eden

‘ದ ಗಾರ‍್ಡನ್ ಆಪ್ ಈಡನ್’ ನಲ್ಲಿ ಆತನ ಕೈಯಿಂದ ನಿರ‍್ಮಾಣವಾದ ಪೀಟೋಪಕರಣಗಳು, ಮೇಜುಗಳು ಬಹಳಶ್ಟಿವೆ. ಅವುಗಳ ಪೈಕಿ ರಹಸ್ಯ ಪೆಟ್ಟಿಗೆಗಳಲ್ಲಿ 62 ವರ‍್ಶದ ಈ ಕಲಾಸಾಮ್ರಾಟ ತನ್ನೆಲ್ಲಾ ಉಳಿತಾಯವನ್ನೂ ಅಡಗಿಸಿಟ್ಟಿದ್ದನಂತೆ. ಡಿನ್ಸ್ ಮೂರ್ 150 ಕಲಾಕ್ರುತಿಗಳನ್ನು ರಚಿಸಿ ಮನೆಯ ಒಳಗೂ ಹೊರಗೂ ಜೋಡಿಸಿದ್ದ. ಇದರಲ್ಲಿ ಬಹಳಶ್ಟು ಕಲಾಕ್ರುತಿಗಳು ಆತನ ರಾಜಕೀಯ ಹಾಗೂ ಸಾಂಸ್ಕ್ರುತಿಕ ದ್ರುಶ್ಟಿಕೋನವನ್ನು ಪ್ರತಿನಿದಿಸುತ್ತಿತ್ತು. ಇದರೊಂದಿಗೆ ದೊಡ್ಡ ಕೀಟಗಳ, ದೇವತೆಗಳ, ಅಮೇರಿಕಾದ ದ್ವಜದ ಮತ್ತು ಮಕ್ಕಳ ಶಿಲ್ಪಗಳನ್ನೂ ವಿನ್ಯಾಸಗೊಳಿಸಿದ್ದ.

ತನ್ನ ಸಮಾದಿಯನ್ನು ತಾನೇ ನಿರ‍್ಮಿಸಿಕೊಂಡಿದ್ದ ಡಿನ್ಸ್ ಮೂರ್!

ಡಿನ್ಸ್  ಮೂರ್ ತನ್ನ ಜೀವನದ ಕೊನೆಯ ಹಲವು ವರ‍್ಶ, ಮನೆಯ ಆವರಣದಲ್ಲಿ ಕಾಂಕ್ರೀಟ್ ಸಮಾದಿ ವಿನ್ಯಾಸಗೊಳಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿದ್ದ. ಇದೇ ಡಿನ್ಸ್ ಮೂರ್ ನ ಕೊನೆಯ ಕಲಾಕ್ರುತಿ ಆಗಿದ್ದು ವಿಪರ‍್ಯಾಸ. ಅವನ ಅಂತಿಮ ಆಸೆ ಗಾಜಿನ ಶವಪೆಟ್ಟಿಗೆಯಲ್ಲಿ ಸಮಾದಿಯಾಗಬೇಕು ಎನ್ನುವುದಾಗಿತ್ತು. ಡಿನ್ಸ್ ಮೂರ್ ತಾನು ಸತ್ತ ಬಳಿಕ ತನ್ನ ದೇಹವನ್ನು ಕೆಡದಂತೆ ಇರಿಸಲು ತನ್ನ ಸಮಾದಿಯನ್ನು ತಾನೇ ನಿರ‍್ಮಿಸಿಕೊಂಡಿದ್ದ.

ತನ್ನ ವೆಚ್ಚವನ್ನು ತಾನೇ ನಿಬಾಯಿಸುವ ಈಡನ್ ಗಾರ‍್ಡನ್!

ಯಾವಾಗಲೂ ಹಾಸ್ಯ ಚಟಾಕಿಯನ್ನು ಹಾರಿಸುತ್ತಿದ್ದ ಡಿನ್ಸ್ ಮೂರ್ ತನ್ನ ಸಮಾದಿಯನ್ನು ನೋಡಲು ಈಡನ್ ಗಾರ‍್ಡನ್ ಗೆ ಹಣ ಪಾವತಿಸಿ ಬಂದವರಿಗೆ, ‘ಕಣ್ಣು ಹೊಡೆಯುತ್ತೇನೆ'(wink) ಎಂದು ಹೇಳುತ್ತಿದ್ದನಂತೆ.  “ನನ್ನ ವಿದವೆ ಹೆಂಡತಿ, ನನ್ನ ವಂಶಸ್ತರು, ಅವರ ಗಂಡ, ಹೆಂಡತಿಯರನ್ನು ಹೊರತುಪಡಿಸಿ ಬೇರಾರಿಗೂ ಒಂದು ಡಾಲರಿಗಿಂತ ಕಡಿಮೆ ಮೊತ್ತಕ್ಕೆ ನನ್ನನ್ನು ನೋಡಲು ಅವಕಾಶವಿಲ್ಲ” ಎಂದು ಬರೆದಿಟ್ಟಿದ್ದನಂತೆ! ಈಡನ್ ಗಾರ‍್ಡನ್ ನೋಡಲು ನೋಡುಗರು ಕೊಡುವ ಹಣದಿಂದ ಈಡನ್ ಗಾರ‍್ಡನ್ ನ ಕರ‍್ಚನ್ನು ನಿಬಾಯಿಸಲಾಗುತ್ತಿದೆ. ಕರ‍್ಚು-ವೆಚ್ಚಕ್ಕಾಗಿ ಈಡನ್ ಗಾರ‍್ಡನ್ ಯಾವ ಸಂಸ್ತೆಯನ್ನೂ ಅವಲಂಬಿಸಿಲ್ಲ!!

( ಮಾಹಿತಿ ಮತ್ತು ಚಿತ್ರ ಸೆಲೆ: kansassampler.org, atlasobscura.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: