ಮಿಕ್ಕಿ ಮೌಸ್ – ಕಾರ‍್ಟೂನ್ ಜಗತ್ತಿನ ಐಕಾನ್

– ಪ್ರಶಾಂತ. ಆರ್. ಮುಜಗೊಂಡ.

mickey mouse, cartoon, disney, ಮಿಕಿ ಮೌಸ್, ಕಾರ್ಟೂನು

ಕಾರ‍್ಟೂನ್ ಜಗತ್ತಿನ ಐಕಾನ್ ಎಂದೇ ಕರೆಯಿಸಿಕೊಳ್ಳುವ ಮುದ್ದಾದ ಬೊಂಬೆ ಮಿಕ್ಕಿ ಮೌಸ್ ಚಿಣ್ಣರ ಮೆಚ್ಚಿನ ಪಾತ್ರಗಳಲ್ಲೊಂದು. 1928 ರಲ್ಲಿ ವಾಲ್ಟ್ ಡಿಸ್ನಿ ಅವರ ಕುಂಚದಿಂದ ಮೂಡಿದ ಮಿಕ್ಕಿ ಮೌಸ್, ದಿ ವಾಲ್ಟ್ ಡಿಸ್ನಿ ಕಂಪನಿಯ ಅದ್ರುಶ್ಟದವನ್ನೇ ಬದಲಾಯಿಸಿತು. ಕೆಂಪು ಬಣ್ಣದ ಚಡ್ಡಿ, ದೊಡ್ಡದಾದ ಶೂ, ಬಿಳಿಯ ಬಣ್ಣದ ಕೈಗವಸು(glove) ಹಾಕಿರುವ ಈ ಪ್ರಾಣಿ ಮನುಶ್ಯನಂತೆ ಮಾತನಾಡುತ್ತಾ, ಅಳುತ್ತಾ, ನಗುತ್ತಾ, ಚಿಣ್ಣರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾ ಎಲ್ಲರಿಗೂ ಹತ್ತಿರವಾಯಿತು. ಹಾಲಿವುಡ್‌ನ ವಾಕ್ ಆಪ್ ಪೇಮ್‌ನಲ್ಲಿ ಸ್ಟಾರ್ ಆಗಿ ಮಿಂಚಿದ ಮೊದಲ ಕಾರ‍್ಟೂನ್ ಎಂಬ ಹೆಗ್ಗಳಿಕೆ ಮಿಕ್ಕಿ ಮೌಸ್‌ಗೆ ಸಲ್ಲುತ್ತದೆ.

ಮಾತನಾಡಿದ ಮೊದಲ ಕಾರ‍್ಟೂನ್

1928 ರ ಮುಂಚೆ ಬಗೆಬಗೆಯ ಕಾರ‍್ಟೂನುಗಳು ಮಕ್ಕಳನ್ನು ರಂಜಿಸಲು ಟಿವಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದವು. ಕೇವಲ ತಮ್ಮ ಚಿತ್ರ ವಿಚಿತ್ರ ಕುಣಿತ, ತುಂಟಾಟಗಳಿಂದಲೇ ಚಿಣ್ಣರ ಮನದಲ್ಲಿ ನಗು ಮೂಡಿಸಿ, ಎಲ್ಲ ವಯಸ್ಸಿನವರಿಗೂ ಇಶ್ಟವಾಗಿ ಮಂದಿ ಮೆಚ್ಚುಗೆಯನ್ನು ಗಳಿಸುತ್ತಿದ್ದವು. ಈ ಹೊತ್ತಿನಲ್ಲಿ ಹೊಸದೊಂದು ಪ್ರಯತ್ನದೊಂದಿಗೆ ಮತ್ತಶ್ಟು ಸಂತಸವನ್ನು ಚಿಣ್ಣರಿಗೆ ತಂದುಕೊಡಲೆಂದು ಮಾತನಾಡುವ ಮೊದಲ ಕಾರ‍್ಟೂನ್ ಶೋ ಆಗಿ ಮಿಕ್ಕಿ ಮೌಸ್‌ಅನ್ನು ವಾಲ್ಟ್ ಡಿಸ್ನಿ ಕಂಪನಿ ಹೊರತಂದಿತು. ಈ ಪಾತ್ರಕ್ಕೆ ಸ್ವತ ವಾಲ್ಟ್ ಡಿಸ್ನಿ ಅವರೇ ದ್ವನಿ ನೀಡಿದ್ದರು.

ಚಾರ‍್ಲಿ ಚಾಪ್ಲಿನ್‌ರಿಂದ ಸ್ಪೂರ‍್ತಿ ಪಡೆದ ಮಿಕ್ಕಿ ಮೌಸ್

ತಮ್ಮ ನಟನೆಯ ಮೂಲಕ ಹೆಸರು ಮಾಡಿದ್ದ ಚಾರ‍್ಲಿ ಚಾಪ್ಲಿನ್ ರೀತಿಯಲ್ಲಿ ಮಾತನಾಡುತ್ತ ನಟಿಸುವ ಕಾರ‍್ಟೂನ್ ಪಾತ್ರವನ್ನು ಹೊರತಂದರೆ, ಈ ಪಾತ್ರವನ್ನು ಕಾರ‍್ಟೂನ್ ಲೋಕದ ಮೈಲಿಗಲ್ಲಾಗಿಸಬಹುದು ಎಂಬ ನಂಬಿಕೆಯನ್ನು ಇಟ್ಟು ಮಿಕ್ಕಿ ಮೌಸ್ಅನ್ನು ಹುಟ್ಟುಹಾಕಲಾಯಿತು. ಮೊದಲಿಗೆ ಮಾರ‍್ಟಿಮರ ಎಂಬ ಹೆಸರನ್ನು ಮಿಕ್ಕಿ ಮೌಸ್‌ಗೆ ಇಡಲು ನಿರ‍್ದರಿಸಲಾಗಿತ್ತು ಆದರೆ ಇಲಿಯಂತೆ ಹೋಲುವ ಇದರ ಮೈಮಾಟವನ್ನು ಕಂಡು ಮಿಕ್ಕಿ ಮೌಸ್ ಎಂದು ಹೆಸರಿಡಲಾಯಿತು.

ಮೊದಲು ಬರಿಗೈಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಿಕ್ಕಿ ಮೌಸ್, 1929 ರಲ್ಲಿ ಬಿಡುಗಡೆಯಾದ ವೆನ್ ದ ಕ್ಯಾಟ್ ಈಸ್ ಅವೇ ಕಿರು ವಿಡಿಯೋದಲ್ಲಿ ಮೊದಲ ಬಾರಿಗೆ ಕೈಗವಸುಗಳನ್ನು ಹಾಕಿತ್ತು. ಮಿಕ್ಕಿ ಮೌಸ್‌ನ ಏಳೂವರೆ ನಿಮಿಶದ ಒಂದು ವಿಡಿಯೋದಲ್ಲಿ 10,000 ಕ್ಕೂ ಹೆಚ್ಚು ಚಿತ್ರಗಳಿರುತ್ತವೆ. ಈ ಚಿತ್ರಗಳನ್ನು ಬಿಡಿಸಲು 6 ತಿಂಗಳಿಂದ 2 ವರುಶಗಳಶ್ಟು ಹೊತ್ತು ಬೇಕಾಗುತ್ತದೆ.

ಅಮೇರಿಕಾ ಅದ್ಯಕ್ಶರ ಚುನಾವಣೆಯಲ್ಲೂ ಸದ್ದು ಮಾಡಿದ ಮಿಕ್ಕಿ

ಮತಪತ್ರದಲ್ಲಿ ಹೆಸರಿಲ್ಲದಿದ್ದರೂ ತಮ್ಮ ಆಯ್ಕೆಯ ಅಬ್ಯರ‍್ತಿಯ ಹೆಸರನ್ನು ಬರೆದು ಮತ ಹಾಕುವ ರೈಟ್-ಇನ್ (write-in) ಆಯ್ಕೆ ಅಮೆರಿಕಾದಲ್ಲಿದೆ. 1932 ರಲ್ಲಿ ನಡೆದ ಅಮೇರಿಕಾದ ಅದ್ಯಕ್ಶರ ಚುನಾವಣೆಯಲ್ಲಿ ರೈಟ್-ಇನ್ ಮತ ಪಡೆದ ಮಿಕ್ಕಿ ಮೌಸ್ ಎಲ್ಲರ ಗಮನ ಸೆಳೆಯಿತು. ನಂತರ ನಡೆದಂತಹ ಪ್ರತಿಯೊಂದು ಅದ್ಯಕ್ಶೀಯ ಚುನಾವಣೆಗಳಲ್ಲಿ ಮಿಕ್ಕಿ ಮೌಸ್ ಪಡೆದ ಮತಗಳ ಸಂಕ್ಯೆ ಹೆಚ್ಚಾಗುತ್ತಾ ಬಂದಿದೆ. 2008ರ ಅಮೆರಿಕಾದ ಅದ್ಯಕ್ಶೀಯ ಚುನಾವಣೆಯ ಹೊತ್ತಿನಲ್ಲಿ ಮತದಾರರ ಪಟ್ಟಿಯಲ್ಲಿ ಸೇರಿಕೊಂಡ ಸುಳ್ಳು ಹೆಸರುಗಳಲ್ಲಿ ಮಿಕ್ಕಿ ಮೌಸ್‌ ಕೂಡ ಸೇರಿತ್ತು.

ಮಾರುಕಟ್ಟೆಗೆ ಲಗ್ಗೆಯಿಟ್ಟ ಮಿಕ್ಕಿ ಮೌಸ್

ಕಾರ‍್ಟೂನ್ ಶೋಗಳನ್ನು ಮೀರಿ ಮಾರುಕಟ್ಟೆಯಲ್ಲಿಯೂ ಮಿಕ್ಕಿ ಮೌಸ್ ತುಂಬಾ ಹೆಸರು ಮಾಡಿದೆ. 1933 ರಲ್ಲಿ ಇಂಗರ‍್‌ಸಲ್-ವಾಟರ‍್‌ಬೈ ಕಂಪನಿ ಮಿಕ್ಕಿ ಮೌಸ್ ಕೈಗಡಿಯಾರ ಹೊರತಂದಿತು. 1957ರ ಹೊತ್ತಿಗೆ 2.5 ಕೋಟಿಯಶ್ಟು ಮಿಕ್ಕಿ ಮೌಸ್ ಕೈಗಡಿಯಾರಗಳು ಮಾರಾಟವಾಗಿದ್ದವು. ಇಂಗರ‍್‌ಸಲ್-ವಾಟರ‍್‌ಬೈ ಕಂಪನಿಯು ವಾಲ್ಟ್ ಡಿಸ್ನಿರವರಿಗೆ 2.5 ಮಿಲಿಯನ್‌ ನೆಯ ಕೈಗಡಿಯಾರವನ್ನು ಉಡುಗೊರೆಯನ್ನಾಗಿ ನೀಡಿತು. ಈಗ ಆಪಲ್ ಕಂಪನಿಯು ಮಾರಾಟ ಮಾಡುತ್ತಿರುವ ಕೈಗಡಿಯಾರ ಕೂಡ ಮಿಕ್ಕಿ ಮೌಸ್ ವಿನ್ಯಾಸ ಮತ್ತು ಮಿಕ್ಕಿ ದನಿಯನ್ನು ಹೊಂದಿದೆ.

ಈಗಲೂ ಟಿವಿ ಪರದೆಯ ಮೇಲೆ ಮಿಕ್ಕಿ ಮೌಸ್ ಕಂಡರೆ ಸಾಕು, ಮಾಡುತ್ತಿದ್ದ ಕೆಲಸವನ್ನೆಲ್ಲ ಅಲ್ಲೇ ಬಿಟ್ಟು ಟಿವಿ ಮುಂದೆ ಕೂರುವವರು ಇದ್ದಾರೆ. ಕಾರ‍್ಟೂನ್ ಲೋಕದಲ್ಲಿ ಇಂದಿಗೂ ಅಚ್ಚಾಗಿ ಉಳಿದಿರುವ ಚಿಣ್ಣರ ಮೆಚ್ಚಿನ ಮಿಕ್ಕಿ ಮೌಸ್ ಗೆ ಈಗ 88 ವರುಶ. ಕಾರ‍್ಟೂನ್ ಲೋಕದ ಪಾತ್ರಗಳಿಗೆ ವಯಸ್ಸು ಎಂಬುದಿದ್ದರೆ ಅದು ಕೇವಲ ಅಂಕಿ ಮಾತ್ರ, ಅಲ್ಲಿನ ಪಾತ್ರಗಳಿಗೆ ವಯಸ್ಸಾಗುವುದೇ ಇಲ್ಲ. ಆದರೆ ನೋಡುಗರಿಗೆ ವಯಸ್ಸಾಗುತ್ತಾ ಹೋಗುತ್ತಿರುತ್ತದೆ. ಕಾರ‍್ಟೂನ್ ನೋಡಲು ಎಶ್ಟು ವಯಸ್ಸಾದರೇನು, ಕಾರ‍್ಟೂನ್ ಎಲ್ಲ ವಯಸ್ಸಿನವರಿಗೂ ಸಂತಸವನ್ನುಂಟು ಮಾಡುವುದರಲ್ಲಿ ಎರಡು ಮಾತಿಲ್ಲ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia,mirror.co.uksimplemost.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: