ಮಳೆಗಾಗಿ ಮಹಿಳೆಯರ ಹೊಡೆದಾಟ

– ಕೆ.ವಿ.ಶಶಿದರ.

ಕಾದಾಟ, Fight

ಬಾರತದಲ್ಲಿ ಕುಡಿಯುವ ನೀರಿನ ಹಾಹಾಕಾರ ಬೇಸಿಗೆಯಲ್ಲಿ ಮಾತ್ರ ಕಂಡು ಬಂದರೆ ಕೆಲವು ಪ್ರದೇಶಗಳಲ್ಲಿ ಇದು ವರುಶ ಪೂರ‍್ತಿಯ ಬವಣೆ. ಈ ಬವಣೆಯನ್ನು ನೀಗಿಸುವಲ್ಲಿ ಮಹಿಳೆಯರ ಪಾತ್ರ ಬಹಳ ಹಿರಿದು. ಬೊಗಸೆ ಕುಡಿಯುವ ನೀರಿಗಾಗಿ ಹತ್ತಾರು ಮೈಲಿ ಕ್ರಮಿಸಬೇಕಾದ ಹಳ್ಳಿಗಳು ನಮ್ಮ ದೇಶದಲ್ಲಿ ಸಾಕಶ್ಟಿವೆ. ಹಳ್ಳಿಗಾಡಿನ ಚಿತ್ರ ಇದಾದರೆ, ಪಟ್ಟಣ ಮತ್ತು ನಗರ ಪ್ರದೇಶಗಳ ಚಿತ್ರಣವೇ ಬೇರೆ.  ಸಾರ‍್ವಜನಿಕ ನಲ್ಲಿಗಳ ಮುಂದೆ ನೀರಿಗಾಗಿ ಮಹಿಳೆಯರು ಬೇರೊಬ್ಬ ಮಹಿಳೆಯ ಉದ್ದನೆ ಕೂದಲನ್ನು ಹಿಡಿದು ಬಡಿದಾಡುವುದು ಸಾಮಾನ್ಯ ದ್ರುಶ್ಯ. ನೀರಿನ ಬವಣೆಯನ್ನು ಈ ಸನ್ನಿವೇಶಗಳು ತೋರಿಸುತ್ತವೆ.

ಕೈ ಕೈ ಮಿಲಾಯಿಸಿ ಕಾದಾಡಿದರೆ ಬರಗಾಲ ತಪ್ಪುತ್ತದೆಯೇ?

ಮೆಕ್ಸಿಕನ್ ಸಮುದಾಯದಲ್ಲಿನ ಮಹಿಳೆಯರು ಹವಾಮಾನ ವೈಪರೀತ್ಯದಿಂದ ಉಂಟಾಗಬಹುದಾದ ಬರಗಾಲದ ಅಪಾಯವನ್ನು ತಪ್ಪಿಸಲು ಹಾಗೂ ವರುಶದ ಜೀವನ ಹಸನಾಗಿರಲು ಕೈ ಕೈ ಮಿಲಾಯಿಸಿ ಹೋರಾಟ ನಡೆಸುತ್ತಾರೆ. ಇದೇನಿದು ಕೈ ಕೈ ಮಿಲಾಯಿಸಿ ಮಹಿಳೆಯರು ಕಾದಾಡಿದರೆ ಬರಗಾಲ ತಪ್ಪುತ್ತದೆಯೇ? ಎಂದು ಪ್ರಶ್ನಿಸಬೇಡಿ. ಇದು ಮೆಕ್ಸಿಕನ್ ಪ್ರಾಂತ್ಯದ ಜನರು ನಡೆಸಿಕೊಂಡು ಬಂದಿರುವ ಹಳೆಯ ಆಚರಣೆ. ಇದರಲ್ಲಿ ಅವರಿಗೆ ಅಪಾರ ನಂಬಿಕೆ. ಮೆಕ್ಸಿಕೋದ ನೈರುತ್ಯ ರಾಜ್ಯ ಗ್ಯುರೆರೋದ ಮಹಿಳೆಯರು ಪ್ರತಿ ವರ‍್ಶ ಮೇ ತಿಂಗಳಿನಲ್ಲಿ ಬಂದು ಸೇರುವುದು ಲಾ ಎಸ್ಪರಾಂಜಕ್ಕೆ. ಕಾರಣ ಮಳೆಯನ್ನು ಆಹ್ವಾನಿಸುವ ಆಚರಣೆಗಾಗಿ ಹಾಗೂ ಮುಂದಿನ ಬೆಳೆ ಸಮ್ರುದ್ದವಾಗಿರಲಿ ಎಂದು ಬೇಡುವ ಸಲುವಾಗಿ. ರಣ ಬೇಸಿಗೆಯಲ್ಲಿ ನೀರಿನ ಅಬಾವ ಬಾರದಂತೆ ಮಳೆ ಸುರಿಯಲಿ ಎಂದು ತಮ್ಮ ಕಾಣಿಕೆಯನ್ನು ಅರ‍್ಪಿಸಲು.

ಹೊಡೆದಾಡುವುದು ಹೆಂಗಸರು ಮಾತ್ರ

ಮಳೆಯನ್ನು ಆಹ್ವಾನಿಸಲು ಅವರುಗಳು ಬಳಸುನ ದಾರಿ ಹೊಡೆದಾಟ. ದೇಹದಿಂದ ರಕ್ತ ಸುರಿದು ಬೂಮಿ ಸೇರುವವರೆಗೂ ಹೊಡೆದಾಟ. ಈ ಆಚರಣೆ ಹೊಸ ಬಿತ್ತನೆ ಕಾರ‍್ಯದೊಂದಿಗೆ ಮೇಳೈಸಿಕೊಂಡಿದೆ. ಪರಸ್ಪರ ಹೊಡೆದಾಡುವುದು ಮಹಿಳಾ ಹೋರಾಟಗಾರರು ಮಾತ್ರ. ಗಂಡಸರು ತಮ್ಮ ಹೊಲ ಗದ್ದೆಗಳಲ್ಲಿ ದೈನಂದಿನ ಕಾರ‍್ಯ ನಿರ‍್ವಹಿಸುತ್ತಾರೆ. ಸ್ತಳೀಯ ಸಮುದಾಯದವರಿಗೆ ಹೊಡೆದಾಟದ ಮೂಲಕ ಸಾಕಶ್ಟು ಪ್ರಮಾಣದಲ್ಲಿ ಆಹಾರ, ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯಲು ಬೇಕಾಗುವಶ್ಟು ಮಳೆ ಬೀಳುವಂತೆ ಮಳೆ ದೇವರನ್ನು ಪ್ರೇರೇಪಿಸುವುದು ಈ ಆಚರಣೆಯ ಒಂದು ಬಾಗವಶ್ಟೆ. ಅದಿಕ್ರುತ ದಿನದಂದು ಮಹಿಳೆಯರು ಸಾಂಪ್ರದಾಯಿಕ ತಿನಿಸುಗಳನ್ನು ಬಾರೀ ಪ್ರಮಾಣದಲ್ಲಿ ತಯಾರಿಸುತ್ತಾರೆ. ಇದರಲ್ಲಿ ಕೋಳಿ, ಟರ‍್ಕಿ, ಅಕ್ಕಿ, ಮೊಟ್ಟೆ ಮತ್ತು ಬ್ರೆಡ್ ಮುಂತಾದವುಗಳಿಂದ ತಯಾರಿಸಿದ ಅನೇಕ ಪದಾರ‍್ತಗಳು ಸೇರಿರುತ್ತೆ. ಈ ಆಹಾರ ಪದಾರ‍್ತಗಳನ್ನು ಹೋರಾಟದ ಮೈದಾನ ಕ್ರುಜ್ಕೊಗೆ ಒಯ್ಯಲಾಗುತ್ತದೆ. ಎಲ್ಲರೂ ಈ ಪದಾರ‍್ತಗಳನ್ನು ಹಂಚಿಕೊಂಡು ತಿನ್ನುತ್ತಾರೆ. ಇದಕ್ಕೆ ಇಲ್ಲಿ ಯಾವುದೇ ರೀತಿಯ ಕಡಿವಾಣವಿಲ್ಲ. ಹಬ್ಬದ ತಿನಿಸುಗಳನ್ನು ಹಂಚಿ ತಿನ್ನಲು ಹಾಗೂ ಕಾದಾಟವನ್ನು ನೋಡಲು ಎಲ್ಲರಿಗೂ ಮುಕ್ತ ಆಹ್ವಾನವಿದೆ.

ಪವಿತ್ರ ಸ್ತಳದಲ್ಲಿ ದೇವತೆಗಳಿಗೆ ಸೂಕ್ತ ಪೂಜೆ ಪುನಸ್ಕಾರ ಪ್ರಾರ‍್ತನೆ ಸಲ್ಲಿಸಿ ಪ್ರಸಾದ ಅರ‍್ಪಣೆ ಆಗುತ್ತದೆ. ನಂತರ ಪ್ರಾರಂಬವಾಗುವುದೇ ಈ ಆಚರಣೆಗೆ ವಿಶ್ವ ವಿಕ್ಯಾತಿ ತಂದು ಕೊಟ್ಟ ಪ್ರಕ್ರಿಯೆ. ಅದೇ ಮಹಿಳೆಯರ ಕಾಳಗ. ಹೊಡೆದಾಟ. ನಹುವಾ ಸಮುದಾಯದವರು ಆಜ್ಟೆಕ್ ಜನಾಂಗದವರು. ಅವರು ಮೆಕ್ಸಿಕೊ ಮತ್ತು ಎಲ್-ಸಲ್ವಾಡರ್ ನ ಸ್ತಳೀಯರು. ನಹುವಾ ಸಮುದಾಯದ ಎಲ್ಲಾ ವಯಸ್ಸಿನ ಸಶಕ್ತ ಮಹಿಳೆಯರು ಈ ಕಾದಾಟದಲ್ಲಿ ಪಾಲ್ಗೊಳ್ಳುತ್ತಾರೆ.

ಈ ಕಾದಾಟದಲ್ಲಿ ಸೋಲು-ಗೆಲುವು ಮುಕ್ಯವಲ್ಲ!

ಬಡಿದಾಟದಲ್ಲಿ ಸೋಲು ಗೆಲುವಿಗೆ ಪ್ರಾಶಸ್ತ್ಯವಿಲ್ಲ. ವರುಣನನ್ನು ಸಂತ್ರುಪ್ತಿ ಪಡಿಸಲು ಎಶ್ಟು ಸಾದ್ಯವೋ ಅಶ್ಟು ರಕ್ತಪಾತಕ್ಕೆ ಆದ್ಯತೆ ನೀಡುವುದು ಇಲ್ಲಿ ಬಹುಮುಕ್ಯ. ಆದ್ದರಿಂದ ರಕ್ತವನ್ನು ಸುರಿಸಲಿಕ್ಕಾಗಿಯೇ ಮಹಿಳೆಯರು ಹಿಂಸಾತ್ಮಕ ಹೋರಾಟಕ್ಕೆ ಒತ್ತು ನೀಡುತ್ತಾರೆ. ಬಡಿದಾಟದಲ್ಲಿ ಮುಶ್ಟಿಯನ್ನು ಬಿಗಿಹಿಡಿದು ರಕ್ತ ಸುರಿಯುವ ಹಾಗೆ ಹೊಡೆಯುವುದು ಅವರ ಸಂಸ್ಕ್ರುತಿಯಲ್ಲಿ ಅತ್ಯಂತ ಜನಪ್ರಿಯ. ಕಾದಾಟದ ಮೈದಾನದ ಸುತ್ತ ನೆರೆದಿದ್ದ ಜನ ಈ ಮುಶ್ಟಿಯುದ್ದಕ್ಕೆ ಪ್ರಚೋದನೆ ನೀಡುವಲ್ಲಿ ಹಿಂದೆ ಬೀಳುವುದಿಲ್ಲ. ಕಾದಾಟದ ಅಂಗಳದಲ್ಲಿರುವ ಮಹಿಳೆಯರನ್ನು ಹುರಿದುಂಬಿಸಿ ಹೆಚ್ಚು ಹೆಚ್ಚು ಗಾತಕ ಹಾಗೂ ಅತ್ಯಂತ ಹಿಂಸಾತ್ಮಕ ಪ್ರಹಾರ ನೀಡಲು ಪ್ರೇರೇಪಿಸುತ್ತಾರೆ. ಸಾಕಶ್ಟು ಪ್ರಮಾಣದಲ್ಲಿ ರಕ್ತ ಸಂಗ್ರಹ ಮಾಡುವುದು ಇದರ ಪ್ರಮುಕ ದ್ಯೇಯ. ಬೌತಿಕ ಗಾಯ ಇಲ್ಲಿ ಗೌಣ.

ಬೇಸಾಯದ ಬೂಮಿಗೆ ಕಾದಾಟದ ನೆತ್ತರು

ಕಾದಾಟ, ಬಡಿದಾಟದ ಮಜಲು ತಾರಕಕ್ಕೆ ಏರುತ್ತಿದ್ದಂತೆ ಮಹಿಳೆಯರಿಗಾದ ಗಾಯದಿಂದ ರಕ್ತದ ಕೋಡಿ ಹರಿಯಲಾರಂಬಿಸುತ್ತದೆ. ಸುರಿಯುತ್ತಿರುವ ರಕ್ತವನ್ನು ಸಣ್ಣ ಸಣ್ಣ ಬಕೆಟ್‍ಗಳಲ್ಲಿ ಸಂಗ್ರಹಿಸಿ ಹತ್ತಿರದ ವ್ಯವಸಾಯದ ಬೂಮಿಗೆ ಚಿಮುಕಿಸಿ ಉಳುಮೆ ಪ್ರಾರಂಬಿಸುವುದು ಗಂಡಸರ ಕರ‍್ತವ್ಯ. ಹೊಲ ಗದ್ದೆಗಳಲ್ಲಿ ರಕ್ತವನ್ನು ಸಿಂಪಡಿಸುವುದು ಬೂ ತಾಯಿಯನ್ನು ತ್ರುಪ್ತಿಪಡಿಸಲು ಸಲ್ಲಿಸುವ ಕಾಣಿಕೆ ಎಂದು ನಹುವಾ ಸಂಪ್ರದಾಯದವರು ನಂಬಿದ್ದಾರೆ. ದಕ್ಶಿಣ ಮೆಕ್ಸಿಕೋದ ಉಶ್ಣವಲಯದಲ್ಲಿ ಈ ಪ್ರದೇಶವಿರುವುದರಿಂದ ಇಲ್ಲಿ ಪ್ರತಿ ವರ‍್ಶ 1500 ಮಿಲಿಮೀಟರ್ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಒಣಹವೆ ಇರುತ್ತದೆ.

( ಮಾಹಿತಿ ಮತ್ತು ಚಿತ್ರ ಸೆಲೆ: theweathernetwork.com, pvangels.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: