ಅಮುಗಿದೇವಯ್ಯನ ವಚನದ ಓದು

– ಸಿ.ಪಿ.ನಾಗರಾಜ.

ಅಮುಗಿದೇವಯ್ಯ, AmugiDevayya

——————————————————

ಹೆಸರು: ಅಮುಗಿದೇವಯ್ಯ

ಕಾಲ: ಕ್ರಿ.ಶ.1100–1200

ಊರು: ಹುಟ್ಟಿದ ಊರು ಸೊನ್ನಲಿಗೆ/ಸೊನ್ನಲಾಪುರ. ಅನಂತರ ಬಸವಣ್ಣನವರು ಇದ್ದ ಕಲ್ಯಾಣನಗರಕ್ಕೆ ಬಂದು ನೆಲೆಸಿದರು.

ಕಸುಬು: ನೆಯ್ಗೆ/ನೂಲಿನಿಂದ ಬಟ್ಟೆಯನ್ನು ನೇಯುವುದು.

ದೊರೆತಿರುವ ವಚನಗಳು: 31

ವಚನಗಳ ಅಂಕಿತನಾಮ: ಸಿದ್ಧ ಸೋಮನಾಥಲಿಂಗ

——————————————————

ಜ್ಞಾನದಲರಿದಡೇನಯ್ಯ
ಕ್ರೀಯನಾಚರಿಸದನ್ನಕ್ಕ
ನೆನೆದ ಮಾತ್ರದಲಿ ಅಹುದೆ
ಕಾರ್ಯದಲಲ್ಲದೆ
ಕುರುಡ ಕಾಣ ಪಥವ
ಹೆಳವ ನಡೆಯಲರಿಯ
ಒಂದಿಲ್ಲದಿರ್ದಡೊಂದಾಗದು
ಜ್ಞಾನವಿಲ್ಲದಿರ್ದ ಕ್ರೀ ಜಡನು
ಕ್ರೀಯಿಲ್ಲದ ಜ್ಞಾನ ವಾಗ್ಜಾಲ ಭ್ರಾಂತು
ಇದು ಕಾರಣ
ಸಿದ್ಧ ಸೋಮನಾಥಲಿಂಗವ ಕೂಡುವ
ಶರಣಂಗೆ ಎರಡೂ ಬೇಕು.

ವ್ಯಕ್ತಿಯು ಜೀವನವನ್ನು ಚೆನ್ನಾಗಿ ರೂಪಿಸಿಕೊಂಡು ನೆಮ್ಮದಿಯಿಂದ ಬಾಳಬೇಕಾದರೆ ಒಳ್ಳೆಯ ತಿಳುವಳಿಕೆಯನ್ನು ತನ್ನದಾಗಿಸಿಕೊಳ್ಳುವ/ಪಡೆದುಕೊಳ್ಳುವ ಮತ್ತು ಒಳ್ಳೆಯ ಕಸುಬನ್ನು ಮಾಡುವ ಎರಡು ಗುಣಗಳನ್ನು ಹೊಂದಿರಬೇಕು ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

ಒಳ್ಳೆಯ ತಿಳುವಳಿಕೆ ಎಂದರೆ “ಜೀವನದಲ್ಲಿ ಯಾವುದು ಸರಿ-ಯಾವುದು ತಪ್ಪು; ಯಾವುದನ್ನು ಮಾಡಬೇಕು-ಯಾವುದನ್ನು ಮಾಡಬಾರದು; ಯಾವುದು ನೀತಿ-ಯಾವುದು ಅನೀತಿ; ಯಾವುದು ದಿಟ-ಯಾವುದು ಸಟೆ ಎಂಬುದನ್ನು ವಿಂಗಡಿಸಿ ನೋಡಿ ಅರಿತುಕೊಳ್ಳುವುದು”.

ಒಳ್ಳೆಯ ಕಸುಬು ಎಂದರೆ “ವ್ಯಕ್ತಿಯು ತನಗೆ ಒಳಿತನ್ನು ಮಾಡಿಕೊಳ್ಳುವುದಕ್ಕಾಗಿ ಮಾಡುವ ಕೆಲಸ/ಕಾರ‍್ಯ/ಕ್ರಿಯೆಯು ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವಂತಿರಬೇಕು”.

( ಜ್ಞಾನದಲ್+ಅರಿದಡೆ+ಏನ್+ಅಯ್ಯಾ; ಜ್ಞಾನ=ತಿಳುವಳಿಕೆ/ವಿದ್ಯೆ; ಜ್ಞಾನದಲ್=ತಿಳುವಳಿಕೆಯಲ್ಲಿ/ವಿದ್ಯೆಯಲ್ಲಿ; ಅರಿ=ಕಲಿ/ತಿಳಿ; ಅರಿದಡೆ=ಕಲಿತರೆ/ತಿಳಿದುಕೊಂಡರೆ; ಏನು=ಯಾವುದು/ಯಾವ ಪ್ರಯೋಜನ; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ಕ್ರೀ+ಅನ್+ಆಚರಿಸದ+ಅನ್ನಕ್ಕ; ಕ್ರೀ=ಕ್ರಿಯೆ/ಕೆಲಸ/ಕಸಬು/ಕಾರ‍್ಯ; ಅನ್=ಅನ್ನು; ಕ್ರೀಯನ್=ಕೆಲಸವನ್ನು/ಕಸುಬನ್ನು/ಕಾರ‍್ಯವನ್ನು; ಆಚರಿಸು=ನಡೆಸು/ನೆರವೇರಿಸು/ಈಡೇರಿಸು; ಆಚರಿಸದ=ಮಾಡದ/ನಡೆಸದ/ನೆರವೇರಿಸದ; ಅನ್ನಕ್ಕ=ವರೆಗೆ/ತನಕ;

ಜ್ಞಾನದಲರಿದಡೇನಯ್ಯಾ ಕ್ರೀಯನಾಚರಿದನ್ನಕ್ಕ=ವ್ಯಕ್ತಿಯು ತಾನು ಕಲಿತ ವಿದ್ಯೆಯಿಂದ/ಪಡೆದ ತಿಳುವಳಿಕೆಯಿಂದ ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು/ಏಳಿಗೆಯನ್ನು/ನೆಮ್ಮದಿಯನ್ನು/ಆನಂದವನ್ನು ಉಂಟುಮಾಡುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಒಳ್ಳೆಯ ರೀತಿಯಲ್ಲಿ ದುಡಿಮೆಯನ್ನು ಮಾಡದೆ ಕೇವಲ ವಿದ್ಯೆಯನ್ನು ಕಲಿಯುವುದರಿಂದ/ಅರಿವನ್ನು ಪಡೆದುಕೊಳ್ಳುವುದರಿಂದ ಯಾವ ಪ್ರಯೋಜನವೂ ಇಲ್ಲ;

ನೆನೆ=ಮನದಲ್ಲಿ ಕಲ್ಪಿಸಿಕೊಳ್ಳುವುದು/ಊಹಿಸಿಕೊಳ್ಳುವುದು/ಸ್ಮರಿಸಿಕೊಳ್ಳುವುದು; ಮಾತ್ರ=ಕೇವಲ/ಬರಿಯ; ಅಹುದು=ಆಗುವುದು/ನೆರವೇರುವುದು/ಈಡೇರುವುದು/ಉಂಟಾಗುವುದು ; ಅಹುದೆ=ಈಡೇರುತ್ತದೆಯೇ/ನೆರವೇರುತ್ತದೆಯೇ/ಕಯ್ಗೂಡುತ್ತದೆಯೇ/ದೊರೆಯುತ್ತದೆಯೇ;

ಕಾರ್ಯದಲ್+ಅಲ್ಲದೆ; ಕಾರ್ಯ=ಕೆಲಸ/ಕ್ರಿಯೆ/ಆಚರಣೆ; ಕಾರ್ಯದಲ್=ಕೆಲಸದಲ್ಲಿ/ಕಾರ‍್ಯದಲ್ಲಿ/ಕ್ರಿಯೆಯಲ್ಲಿ; ಅಲ್ಲದೆ=ಹಾಗೆ ಮಾಡದೆ;

ನೆನೆದ ಮಾತ್ರದಲಿ ಅಹುದೆ ಕಾರ್ಯದಲಲ್ಲದೆ= ವ್ಯಕ್ತಿಯು ತನ್ನ ಮನದಲ್ಲಿ ಬಯಸಿದ/ಕಲ್ಪಿಸಿಕೊಂಡ ಕಾರಣದಿಂದಲೇ ಜೀವನದಲ್ಲಿ ಬಯಸಿದ್ದೆಲ್ಲವೂ ಕಯ್ಗೂಡುವುದಿಲ್ಲ/ದೊರೆಯುವುದಿಲ್ಲ. ಮನದಲ್ಲಿ ಮೂಡಿದ ಬಯಕೆಯು/ಆಸೆಯು ಈಡೇರಬೇಕಾದರೆ , ಅದಕ್ಕೆ ತಕ್ಕಂತೆ ಕೆಲಸ/ಕಾರ‍್ಯದಲ್ಲಿ ವ್ಯಕ್ತಿಯು ತನ್ನನ್ನು ತೊಡಗಿಸಿಕೊಂಡು ಬಯಸಿದ್ದನ್ನು ಪಡೆಯುವ ತನಕ ಎಡೆಬಿಡದೆ ಪ್ರಾಮಾಣಿಕವಾಗಿ ದುಡಿಯಬೇಕು;

ಕುರುಡ=ಕಣ್ಣುಗಳ ಮೂಲಕ ಏನನ್ನೂ ನೋಡಲಾಗದವನು/ಕಣ್ಣಿನ ದಿಟ್ಟಿ ಇಲ್ಲದವನು; ಕಾಣ್=ನೋಡು; ಕಾಣ=ನೋಡನು/ನೋಡುವುದಕ್ಕೆ ಆಗುವುದಿಲ್ಲ; ಪಥ=ದಾರಿ/ಮಾರ‍್ಗ/ಹಾದಿ;

ಹೆಳವ=ಕಾಲಿಲ್ಲದವನು/ಕಾಲುಗಳಲ್ಲಿ ನಡೆಯಲು ಬೇಕಾದ ಕಸುವು ಇಲ್ಲದವನು; ನಡೆ+ಅಲ್+ಅರಿಯ; ನಡೆ=ಚಲಿಸು/ಮುಂದೆ ಸಾಗು; ನಡೆಯಲ್=ನಡೆದುಕೊಂಡು ಹೋಗಲು/ಅಡಿಗಳನ್ನಿಟ್ಟು ಮುಂದೆ ಮುಂದೆ ಸಾಗಲು; ಅರಿಯ=ತಿಳಿಯನು/ಕಸುವು ಇಲ್ಲದವನು;

ಕುರುಡ ಕಾಣ ಪಥವ ಹೆಳವ ನಡೆಯಲರಿಯ=ತಾನು ಸಾಗಿಹೋಗಬೇಕಾಗಿರುವ ದಾರಿಯನ್ನು ಕುರುಡನು ಕಾಣಲಾರ. ಹೆಳವನು ದಾರಿಯಲ್ಲಿ ನಡೆಯಲಾರ. ಆದುದರಿಂದ ಕುರುಡನ ಹೆಗಲ ಮೇಲೆ ಹೆಳವನು ಕುಳಿತುಕೊಂಡು, ಸಾಗಬೇಕಾದ ಹಾದಿಯ ಜಾಡನ್ನು ಕುರುಡನಿಗೆ ಹೇಳುತ್ತ, ಇಬ್ಬರೂ ಒಬ್ಬರಿಗೊಬ್ಬರು ನೆರವಾದಾಗ ಮಾತ್ರ ತಲುಪಬೇಕಾದ ಎಡೆ/ಜಾಗ/ನೆಲೆಯನ್ನು ಇಬ್ಬರೂ ಮುಟ್ಟಲು ಆಗುತ್ತದೆ; ಕುರುಡ ಮತ್ತು ಹೆಳವನು ಜತೆಗೂಡಿ ಸಾಗಬೇಕಾದ ಈ ಪ್ರಸಂಗವನ್ನು ವಚನಕಾರನು ಅರಿವು ಮತ್ತು ಕ್ರಿಯೆ ಜತೆಗೂಡಿದಾಗ ಮಾತ್ರ ವ್ಯಕ್ತಿಯು ಜೀವನದಲ್ಲಿ ಮುನ್ನಡೆಯಲು ಆಗುತ್ತದೆಯೆಂಬುದನ್ನು ನಿರೂಪಿಸಲು/ಸೂಚಿಸಲು ಒಂದು ರೂಪಕವಾಗಿ ಬಳಸಿಕೊಂಡಿದ್ದಾನೆ.

ಒಂದು+ಇಲ್ಲದೆ+ಇರ್ದೊಡೆ+ಒಂದು+ಆಗದು; ಇರ್ದೊಡೆ=ಇದ್ದರೆ; ಇಲ್ಲದಿರ್ದೊಡೆ=ಇಲ್ಲದಿದ್ದರೆ; ಆಗು=ದೊರಕುವುದು/ಹೊಂದುವುದು/ಪಡೆಯುವುದು; ಆಗದು=ದೊರಕುವುದಿಲ್ಲ/ಹೊಂದುವುದಿಲ್ಲ/ಸಿಗುವುದಿಲ್ಲ; ಒಂದಿಲ್ಲದಿರ್ದೊಡೊಂದಾಗದು=ಎರಡರಲ್ಲಿ ಅಂದರೆ ಅರಿವು ಮತ್ತು ಕ್ರಿಯೆಗಳಲ್ಲಿ ಯಾವುದೇ ಒಂದು ಇಲ್ಲದಿದ್ದರೆ, ಜೀವನದಲ್ಲಿ ಒಳ್ಳೆಯದನ್ನು ಮಾಡಲಾಗುವುದಿಲ್ಲ/ಪಡೆಯಲಾಗುವುದಿಲ್ಲ;

ಜ್ಞಾನ+ಇಲ್ಲದೆ+ಇರ್ದ; ಇರ್ದ=ಇರುವ; ಜಡ=ಚಟುವಟಿಕೆಯಿಲ್ಲದ್ದು/ಉಸಿರಿಲ್ಲದ್ದು/ಚೇತನವಿಲ್ಲದ್ದು;

ಜ್ಞಾನವಿಲ್ಲದಿರ್ದ ಕ್ರೀ ಜಡನು=ಅರಿವನ್ನು/ತಿಳುವಳಿಕೆಯನ್ನು ಪಡೆಯದೆ ಮಾಡುವ ಕೆಲಸದಿಂದ ಯಾರಿಗೂ ಒಳಿತಾಗುವುದಿಲ್ಲ; ಕ್ರೀ+ಇಲ್ಲದ; ವಾಕ್=ನುಡಿ/ಮಾತು/ಸೊಲ್ಲು; ಜಾಲ=ಬಲೆ/ಹಕ್ಕಿಮೀನು ಮುಂತಾದುವನ್ನು ಹಿಡಿಯಲೆಂದು ನೂಲಿನಿಂದ ಹೆಣೆದಿರುವ ವಸ್ತು; ವಾಗ್ಜಾಲ=ಮಾತಿನ ಬಲೆ/ಮಾತಿನ ಮೋಡಿಯಿಂದ ಜನರನ್ನು ಮರುಳುಗೊಳಿಸುವುದು/ವಂಚಿಸುವುದು/ವಶಪಡಿಸಿಕೊಳ್ಳುವುದು; ಭ್ರಾಂತು=ತಪ್ಪು ತಿಳುವಳಿಕೆ/ಇಲ್ಲದ್ದನ್ನು ಇದೆಯೆಂದು-ಇರುವುದನ್ನು ಇಲ್ಲವೆಂದು ನಂಬಿರುವುದು;

ಕ್ರೀಯಿಲ್ಲದ ಜ್ಞಾನ ವಾಗ್ಜಾಲ ಭ್ರಾಂತು=ಮಾನವ ಸಮುದಾಯ ಉಳಿದು ಬೆಳೆದು ಬಾಳುವುದಕ್ಕೆ ಅಗತ್ಯವಾದ ಕೆಲಸವನ್ನು ಮಾಡದೆ, ಕಲಿತ ಪದಗಳನ್ನು/ನುಡಿಗಳನ್ನು ಸೊಗಸಾಗಿ ಆಡುವುದರಿಂದಲೇ ಒಳಿತನ್ನು ಮಾಡುತ್ತೇನೆ/ಪಡೆಯುತ್ತೇನೆ/ಹೊಂದುತ್ತೇನೆ ಎಂಬುದೊಂದು ತಪ್ಪು ತಿಳುವಳಿಕೆ. ಅಂದರೆ ಕೇವಲ ಮಾತುಗಾರಿಕೆ/ಮಾತಿನ ಚತುರತೆ/ಮಾತಿನ ಮೋಡಿಯಿಂದಲೇ ಜೀವನದಲ್ಲಿ ಏಳಿಗೆಯನ್ನು/ನೆಮ್ಮದಿಯನ್ನು ಪಡೆಯಲಾಗುವುದಿಲ್ಲ;

ಕಾರಣ=ನಿಮಿತ್ತ/ಉದ್ದೇಶ/ಸಲುವಾಗಿ; ಇದು ಕಾರಣ=ಈ ರೀತಿ ಅರಿವು ಮತ್ತು ಕ್ರಿಯೆಗಳೆರಡೂ ಜೀವನಕ್ಕೆ ತುಂಬಾ ಅಗತ್ಯವಾದುದರಿಂದ; ಸಿದ್ಧ ಸೋಮನಾಥಲಿಂಗ=ಶಿವ/ಈಶ್ವರ/ದೇವರ ಹೆಸರು/ಅಮುಗಿದೇವಯ್ಯನ ವಚನಗಳ ಅಂಕಿತನಾಮ; ಕೂಡು=ಸೇರು/ಜತೆಯಾಗು; ಶರಣಂಗೆ=ಶರಣನಿಗೆ; ಶರಣ=ಒಳ್ಳೆಯ ನಡೆನುಡಿಗಳಿಂದ ಶಿವನನ್ನು ಪೂಜಿಸುವವನು; ಸಿದ್ಧ ಸೋಮನಾಥಲಿಂಗವ ಕೂಡುವ ಶರಣಂಗೆ ಎರಡೂ ಬೇಕು=ದೇವರನ್ನು ಒಲಿಸಿಕೊಳ್ಳುವ ಶಿವಶರಣನು ತನ್ನ ಜೀವನದ ಉದ್ದಕ್ಕೂ ಒಳ್ಳೆಯ ಅರಿವನ್ನು ಹೊಂದುವ ಮತ್ತು ಒಳ್ಳೆಯ ದುಡಿಮೆಯನ್ನು ಮಾಡುವ ಎರಡು ಗುಣಗಳನ್ನು ಹೊಂದಿರಬೇಕು.)

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: