PUBG – ಹಿನ್ನೆಲೆ ಮತ್ತು ಬೆಳೆದ ಪರಿ

– ಪ್ರಶಾಂತ. ಆರ್. ಮುಜಗೊಂಡ.

ಹಿಂದಿನ ಬರಹದಲ್ಲಿ PUBG ಆಟ ಮತ್ತು ಆಡುವ ಬಗೆ ತಿಳಿಸಲಾಗಿತ್ತು. PUBG ಕುರಿತ ಇನ್ನಶ್ಟು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

‘ಬ್ಯಾಟಲ್ ರಾಯಲ್’ ಚಲನಚಿತ್ರ – ಈ ಆಟದ ಹುಟ್ಟಿಗೆ ಸ್ಪೂರ‍್ತಿ

ಕೌಶನ್ ತಕಾಮಿ ಎಂಬ ಜಪಾನಿನ ಬರಹಗಾರರು 1999 ರಲ್ಲಿ ಬ್ಯಾಟಲ್ ರಾಯಲ್ ಹೆಸರಿನ ಕಾದಂಬರಿಯನ್ನು ಬರೆದಿದ್ದರು. ಜಪಾನಿನ ನಿರ‍್ದೇಶಕರಾದ ಕಿನ್ಜಿ ಪುಕಾಸಾಕು ಕಾದಂಬರಿಯನ್ನು ರೋಮಾಂಚನಕಾರಿಯಾದ ಚಿತ್ರವನ್ನಾಗಿ ಮಾಡಿ 2000 ರಲ್ಲಿ ಅದೇ ಹೆಸರಿನಲ್ಲಿ ಪರದೆಯ ಮೇಲೆ ತಂದರು. ಈ ಓಡುತಿಟ್ಟದಲ್ಲಿ(movie) ಜಪಾನ್ ಸರ‍್ಕಾರವು 42 ವಿದ್ಯಾರ‍್ತಿಗಳನ್ನು 3 ದಿನ ಒಂದೆಡೆ ಕೂಡಿಹಾಕಿ ಒಬ್ಬರಿಗೊಬ್ಬರು ಹೊಡೆದಾಡಿ ಕೊಲ್ಲುವಂತೆ ಮಾಡುತ್ತದೆ. ಅವರೆಲ್ಲರೂ ಎದುರಾಳಿ ವಿದ್ಯಾರ‍್ತಿಗಳನ್ನು ಕೊಂದು ತಮ್ಮ ಬದುಕನ್ನು ಉಳಿಸಿಕೊಳ್ಳಲು ಪರದಾಡುತ್ತಾ ಕೊನೆಯಲ್ಲಿ  ಒಬ್ಬನೇ ಒಬ್ಬ ವಿದ್ಯಾರ‍್ತಿ ಉಳಿಯುವಂತಾಗುವುದು ಆ ಸಿನೆಮಾದ ಕತೆ. ಈ ವಿಶಯವನ್ನೇ ಮೂಲವಾಗಿ ಇಟ್ಟುಕೊಂಡು PUBG ಆಟವನ್ನು ಹೊರತರಲಾಯಿತು.

ಮಾರುಕಟ್ಟೆಗೆ ಲಗ್ಗೆಯಿಟ್ಟ PUBG

ಐರ‍್ಲೆಂಡ್‌ನ ಬ್ರೆಂಡನ್ ಗ್ರೀನ್ PUBG ಆಟದ ಪ್ರಮುಕ ರೂವಾರಿ, ಅರ‍್ಮಾ 2 ಎಂಬ ಆಟವನ್ನು ಮರು ಮಾರ‍್ಪಡಿಸಿ ಅದನ್ನು DayZ: ಬ್ಯಾಟಲ್ ರಾಯಲ್ ಹೆಸರಿನಲ್ಲಿ ಬಿಡುಗಡೆ ಮಾಡಿದ್ದ. ದಕ್ಶಿಣ ಕೊರಿಯಾದ ಬ್ಲೂ ಹೋಲ್ ಕಂಪನಿಯು ಬ್ಯಾಟಲ್ ರಾಯಲ್ ನಲ್ಲಿ ಗ್ರೀನ್‌ ಬಳಸಿದ ಹೊಳಹುಗಳನ್ನು ಮೆಚ್ಚಿ ಅವನನ್ನು ತಮ್ಮ ಕಂಪನಿಯ ನಡೆಸಾಳುವನ್ನಾಗಿ ಆಯ್ಕೆಮಾಡಿತು.

2016 ರಲ್ಲಿ PUBG ಆಟದ ಕೆಲಸ ಶುರುಮಾಡಿದ ಬ್ಲೂ ಹೋಲ್ ಕಂಪನಿ 2017ರ ಮಾರ‍್ಚ್ 23 ರಂದು ಆಟವನ್ನು ಪೂರ‍್ತಿ ಮಾಡಿ ಮೈಕ್ರೋಸಾಪ್ಟ್ ವಿಂಡೋಸ್ ಮತ್ತು ಎಕ್ಸ್ ಬಾಕ್ಸ್ ಒನ್ (XBOX One) ಗಳಿಗೆ ಬಿಡುಗಡೆ ಮಾಡಿತು. ಬಿಡುಗಡೆಯಾದ ಕೇವಲ ಒಂದೂವರೆ ವರುಶದಲ್ಲಿ 50 ಮಿಲಿಯನ್‌ಗೂ ಮೀರಿ PUBG ಆಟದ ಪ್ರತಿಗಳು ಮಾರಾಟವಾದವು. ಸೆಪ್ಟೆಂಬರ್ 2018 ರಲ್ಲಿ ಪ್ಲೇ ಸ್ಟೇಶನ್ ಮತ್ತು ಆಂಡ್ರಾಯ್ಡ್ ಹಾಗು iOS ಗಳಿಗೆ ಬಿಡುಗಡೆಯಾದ PUBG ಆಟವು ಇದುವರೆಗೆ 100 ಮಿಲಿಯನ್ ಬಾರಿ ಡೌನ್ಲೋಡ್ ಆಗಿರುವುದು. ಈ ಆಟದ ಸೆಳೆತವನ್ನು ತೋರಿಸುತ್ತದೆ.

PUBG ಗೆ ಒಲಿದು ಬಂದ ಪ್ರಶಸ್ತಿಗಳು

2018 ನೇ ಸಾಲಿನ್ ಬೆಸ್ಟ್ ಮಲ್ಟಿಪ್ಲೇಯರ್ ಗೇಮ್, ದಿ ಗೇಮ್ ಆಪ್ ದಿ ಇಯರ್, 36ನೇ ಗೋಲ್ದನ್ ಜಾಯ್‌ಸ್ಟಿಕ್ ಬಿರುದು, ಮೊಬೈಲ್ ಗೇಮ್ ಆಪ್ ದಿ ಇಯರ್ ಮತ್ತು ಇನ್ನೂ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಅಮೆರಿಕಾದ ಹೆಸರಾಂತ ಮ್ಯಾಗಜೀನ್ ಎಂಟರ‍್ಟೈನ್‌ಮೆಂಟ್ ವೀಕ್ಲಿ (Entertainment Weekly) ಬಿಡುಗಡೆ ಮಾಡಿದ 2017ರ ಅತ್ಯುತ್ತಮ ಗೇಮ್‌ಗಳ ಪಟ್ಟಿಯಲ್ಲಿ 7ನೇ ಸ್ತಾನ ಪಡೆಯುವ ಮೂಲಕ PUBG ಎಲ್ಲರ ಗಮನ ಸೆಳೆಯಿತು.

ಬ್ಯಾನ್ ಆಗುವುದಾ PUBG?

PUBG ಗೇಮ್, ಕಾಲೇಜು ವಿದ್ಯಾರ‍್ತಿಗಳಿಗೆ ಮತ್ತು ಯುವಕರಿಗೆ ಒಂದು ಬಗೆಯ ಗೀಳಾಗಿ ಅಂಟಿಕೊಂಡಿರುವುದಂತೂ ದಿಟ. ಕೆಲವರಿಗಂತೂ ಇದು ಮಾನಸಿಕ ಆರೋಗ್ಯದ ಮೇಲೆ ಪ್ರಬಾವ ಬೀರಿರುವುದು ಎಚ್ಚರಿಕೆಯ ಕರೆಗಂಟೆ. ಹೀಗಾಗಿ PUBG ಗೇಮ್ ಬ್ಯಾನ್ ಆಗುತ್ತದೆ ಎಂಬ ಮಾತನ್ನು ಹಲವು ಸುದ್ದಿವಾಹಿನಿಗಳಲ್ಲಿ ಮತ್ತು ಮಿಂದಾಣಗಳಲ್ಲಿ ಆಗಾಗ ಕಾಣುತ್ತಿರುತ್ತೇವೆ. ಆದರೆ ಈ ಆಟವನ್ನು ಬ್ಯಾನ್ ಮಾಡುವ ಕುರಿತ ಊಹಾಪೋಹಗಳು ಸದ್ಯದ ಮಟ್ಟಿಗಂತೂ ಸುಳ್ಳು. ಗೀಳಾಗಿ ಅಂಟಿಕೊಂಡಿರುವ ಈ ಆಟವನ್ನು, ಮಂದಿ ಒಂದು ಮಿತಿಯೊಳಗೆ ಇಟ್ಟರೆ ಒಳ್ಳೆಯದು. ಅತಿಯಾದರೆ ಯಾವುದೂ ಒಳಿತಲ್ಲ ಎಂಬುದು ಈ ಆಟಕ್ಕೂ ಅನ್ವಯವೇ!

(ಚಿತ್ರ ಮತ್ತು ಮಾಹಿತಿ ಸೆಲೆ: wikipedia.org/PUBG, fragbite.comwikipedia.org/Battle_Royale)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: