ಸಣ್ಣಕತೆ: ಮಳೆಗಾಲ

– ಅಶೋಕ ಪ. ಹೊನಕೇರಿ.

“ಅಪ್ಪ, ನಿನಗೆ ಎಶ್ಟು ಸರ‍್ತಿ ಹೇಳ್ಲಿ? ಈ ದೇವರ ಕಾಡು ಹಾಡಿ ಬಿಟ್ಟು ಬಾಳ್ಲು ಪೇಟೆಲಿ ಮನೆ ಮಾಡಾಣ ಅಂತ. ದಿನಾ ಶಾಲೆಗೆ ಹೋಗೋಕೆ ನಂಗೆ ಎಶ್ಟು ಕಶ್ಟ ಗೊತ್ತ? ಐದಾರು ಮೈಲಿ ನಡಿಬೇಕು, ಆ ಜೋಗತಿ ಹಳ್ಳದ ಸಂಕ(ಸೇತುವೆ) ದಾಟಬೇಕು. ನಂಗೆ ಸಂಕದ ಮದ್ಯ ಹೋದ ಕೂಡ್ಲೆ ಹೆದರಿಕೆ ಶುರುವಾಗುತ್ತೆ. ಆ ಸಂಕ ಮೇಲೆ ಕೆಳಗೆ ತೂಗಾಡುತ್ತೆ, ಎಲ್ಲಿಯಾದ್ರು ಕಾಲ ಜಾರಿ ಬಿದ್ರೆ ನಿನ್ನ ಮಗ ಇರಲ್ಲ. ಇದೊಂದು ಹಳೇ ಸೈಕಲ್ಲು… ದೊಡ್ಡ ಉಸಿರು ಬಿಟ್ಟುಕೊಂಡು ಈ ಗುಡ್ಡೆಯಲ್ಲಿ ಸೈಕಲ್ಲು ಹೊಡಿತಿ ಆ ಸೈಕಲ್ಲಿಗೆ ರಾಜಿ ಅಂತ ಅಮ್ಮನ ಹೆಸರು ಬೇರೆ ಇಟ್ಟಿದ್ದಿ. ಹಂಗಾದ್ರೆ ಅಮ್ಮನ ಮೇಲೆ ಹತ್ತಿ ಅಮ್ಮನನ್ನೆ ತುಳಿದ ಹಾಗಲ್ವ…!? ನೀನು ಒಂದು ಮೋಟ್ರು ಸೈಕಲ್ ತಗೋ. ಅಮ್ಮ, ನಾನು, ನೀನು, ಚಿಕ್ಕಿ ಎಲ್ಲ ಒಟ್ಟಿಗೆ ಮಜವಾಗಿ ಬಾಳ್ಲು ಪೇಟೆ ಸಂತೆಗೆ ಹೋಗಿ ಸಂತೆ ಮಾಡ್ಕೊಂಡು, ಟೆಂಟಲ್ಲಿ ಪಿಚ್ಚರ್ ನೋಡ್ಕೊಂಡು, ಶಾಂತಿ ಹೋಟ್ಲಲ್ಲಿ ದೋಸೆ ತಿನ್ಕಂಡು, ಮತ್ತೆ ಮೇಲೆ ಐಸ್ಕ್ರೀಮು ತಿನ್ಕೊಂಡು ವಾಪಾಸು ಬರಬಹುದು. ಆದ್ರೆ ಸಂಕದ ಹತ್ರ ಮಾತ್ರ ಸ್ವಲ್ಪ ಹುಶಾರಾಗಿ ಮೋಟ್ರು ಸೈಕಲ್ ಓಡಿಸ್ಬೇಕು ಆಯ್ತ. ಇಲ್ಲ ಅಂದ್ರೆ ಜಾರಿ ಬಿದ್ದು ಎಲ್ರೂ ಸಿದಾ ನೀರಿಗೆ…” ಹೀಗೆ ವೀರೇಶನ ಮಾತು ಮಾತ್ರ ರೈಲಿನಂತೆ ನಿಲ್ಲದೆ ಓಡುತ್ತಲೆ ಇತ್ತು.

ಅಪ್ಪ ದರ‍್ಮ ಮಾತ್ರ “ಏ ಸುಮ್ಮನಿರೋ ವೀರ, ಕಾಲ ಅಂತ ಬರ‍್ಲಿ ಆಗಾ ಬೈಕು ತಗೊಳುವ, ಕಾರೂ ತಗೊಳುವ… ಈ ಸೈಕಲ್ ನಿನ್ನ ಅಜ್ಜ ಕೊಂಡಿದ್ದು; ಈಗ ಮೂರನೆ ತಲೆಮಾರಿಗೆ ಸೇವೆ ಮಾಡ್ತ ಇದೆ. ಇದು ನಮ್ಮ ಕಣ್ಣು ಇದ್ದ ಹಾಗೆ, ಈ ಸೈಕಲ್ಲು ಇಲ್ದಿದ್ರೆ ನೀನು ಬಾಳ್ಲು ಪೇಟೆಗೆ ಹೋಗಿ ಕಲಿಯುದು ಆಗ್ತಿರಲಿಲ್ಲ. ನಿತ್ಯ ಹಾಡಿಯಿಂದ ಸಂಕದವರೆಗೆ ನಿನ್ನ ಅಜ್ಜ ಕರೆ ತರ‍್ತಾನ? ಇದೇ ಸೈಕಲ್ಲು ನಾಲ್ಕು ಮೈಲಿ ನಿನ್ನ ಹೊತ್ತು ತರ‍್ತದೆ ನೆನಪಿರ‍್ಲಿ. ನೀನು ಓದಿ ದೊಡ್ಡವನಾಗಿ ಸಂಪಾದನೆ ಮಾಡಿ ಮೋಟರು ಸೈಕಲ್ಲು ತಗಂಡು ನಮ್ಮನ್ನು ಓಡಾಡಿಸುವಿಯಂತೆ ಈಗ ಬಾಯಿ ಮುಚ್ಕೊಂಡು ನಡಿಯೋ ನಿನ್ನ ಸಂಕದವರೆಗೆ ಬಿಟ್ಟು ಬರ‍್ತೀನಿ. ವಿನಾಯಕ ಬಸ್ಸು ಬರೋ ಹೊತ್ತಾಯ್ತು‌”. ಹೀಗೆ ಅಪ್ಪ ಮಕ್ಕಳ ನಡುವೆ ಮಾತು ನಿತ್ಯ ಜಗಳದ ರೀತಿಯಲ್ಲೆ ನಡೆಯುತಿತ್ತು. ಆದರೆ ಇಬ್ಬರಲ್ಲೂ ಪ್ರೀತಿಗೇನು ಕಡಿಮೆಯಿಲ್ಲ. ಮತ್ತೆ ಆ ಸೈಕಲ್ ಮೇಲೂ…!

ವೀರೇಶ ಬೆಳೆದು ಹೈಸ್ಕೂಲ್ ಗೆ ಹೋಗುವ ಪ್ರೌಡನಾದ. ನಿತ್ಯ ತಾನೆ ಸೈಕಲ್ ತುಳಿದುಕೊಂಡು ಸಂಕದವರೆಗೆ ಬಂದು ಅಲ್ಲೆ ಕುಳ್ಳೀರಜ್ಜನ ಗುಡಿಸಲ ಮುಂದೆ ಸೈಕಲ್ ನಿಲ್ಲಿಸಿ ಸಂಕ ದಾಟಿ ವಿನಾಯಕ ಬಸ್ಸು ಹಿಡಿದು ಬಾಳ್ಲು ಪೇಟೆಯ ಹೈಸ್ಕೂಲ್‌ಗೆ ಕಲಿಯಲು ಹೋಗುತಿದ್ದ. ಆ ಸೈಕಲ್ಲು ಚಕ್ರಕ್ಕೆ ಒಮ್ಮೊಮ್ಮೆ ಮುಳ್ಳು ತಾಗಿ ಪಂಕ್ಚರ್ ಆದಾಗ ಇಲ್ಲದ ಸಿಟ್ಟು ಬರುತಿತ್ತು. ಆ ಬೈರೇ ಗೌಡನ ಮಗ ನೋಡು, ಮಾವಿನ ಕಾಡು ಹಾಡಿಯಿಂದ ಜುಮ್ಮಂತ ಮೋಟಾರ್ ಬೈಕಿನಲ್ಲೆ ಶಾಲೆಗೆ ಬಂದು ಗಮ್ಮತ್ತು ತೋರಸ್ತಾನೆ. ನಮ್ಮ ಅಪ್ಪ ಯಾವಾಗ ಬೈಕು ಕೊಳ್ತಾನೋ…? ಒಮ್ಮೊಮ್ಮೆ ವೀರೆಶನಿಗೆ ಬೇಸರವೂ ಆಗುತಿತ್ತು.

ದೋ ಎಂದು ಸುರಿಯೋ ಮಳೆ.. ಜೊತೆಗೆ ಬಿಡದೆ ಸುಯ್ಯನೆ ಬೀಸೋ ಗಾಳಿ ಬೇರೆ.. ಹಳ್ಳ ಕೊಳ್ಳ ಎಲ್ಲ ತುಂಬಿ ಹರಿಯುತ್ತಿವೆ. ಅಂದು ವೀರೇಶನಿಗೆ ಶಾಲೆಗೆ ಹೊರಡಲು ತಡವಾಗಿದೆ. ಎಲ್ಲಿ ಇವತ್ತು ಬಸ್ಸು ತಪ್ಪುತ್ತೋ ಎಂಬ ಆತಂಕದಲ್ಲಿ ಜರ‍್ಕಿನ್ ಹಾಕಿಕೊಂಡು ತಲೆಗೆ ಪ್ಲಾಸ್ಟಿಕ್ ಟೊಪ್ಪಿ ಕಟ್ಟಿಕೊಂಡು ಸೈಕಲ್ ಏರಿ, “ಅಮ್ಮ, ಅಪ್ಪ… ಶಾಲೆಗೆ ಹೋಗಿ ಬರ‍್ತೀನಿ” ಎಂದು ಕೂಗಿ ಹೇಳಿದವನೆ, ಏದುಸಿರು ಬಿಟ್ಟುಕೊಂಡು ಪೆಡಲ್ ತುಯಳಿಯುತ್ತ ಸಾಗಿದ. ಅವರ ಹಾಡಿಯಿಂದ ಸಂಕದ ಕಡೆ ಹೋಗುವ ಹಾದಿಯ ಪಕ್ಕದ ಒಡ್ಡು ರಾತ್ರಿಯ ಮಳೆಗೆ ಜರಿದು ರಸ್ತೆಗೆ ಬಿದ್ದಿತ್ತು. ಆ ರಸ್ತೆ ಮತ್ತು ಜರಿದ ಮಣ್ಣಿನ ಗುಡ್ಡೆಯ ನಡುವಿನ ಕಿರಿದಾದ ಜಾಗದಲ್ಲಿ ಪ್ರಯಾಸ ಪಟ್ಟು ನಡೆಯಬೇಕಿತ್ತು. ವೀರೇಶ ಸೈಕಲ್ಲಿಂದ ಇಳಿದು ಪ್ರಯಾಸ ಪಟ್ಟುಕೊಂಡು ಆ ಜರಿದ ಮಣ್ಣಿನ ಗುಡ್ಡೆ ದಾಟುವಶ್ಟರಲ್ಲಿ ವಿನಾಯಕ ಬಸ್ಸು ಸಂಕದ ಆಚೆ ಬಾಗದ ರಸ್ತೆಯಲ್ಲಿ ಹಾರನ್ನು ಹೊಡೆಯುತಿತ್ತು. ಎಶ್ಟೇ ಅವಸರ ಮಾಡಿ ಓಡಿದರೂ ಸಂಕದ ಈಚೆ ಬದಿ ಇರುವಾಗಲೆ ಬಸ್ಸು ಪಾಸಾಗಿ ಬಿಟ್ಟಿತ್ತು. “ಚೇ… ದರಿದ್ರ ಮಳೆ ಇವತ್ತು ನನಗೆ ಬಸ್ಸು ಕೈ ಕೊಡುವ ಹಾಗೆ ಮಾಡಿತು” ಎಂದು ಬೈದುಕೊಂಡ.

ಮಳೆ ಒಂದೇ ಸಮನೆ ಹುಯ್ಯತ್ತಿದೆ. ಗಾಳಿ ಬರ‍್ರನೆ ಬೀಸುತ್ತಿದೆ. “ವಾಪಾಸು ಮನೆಗೆ ಹೋಗ್ಲ? ಇಲ್ಲ ಸೈಕಲ್ಲಿನಲ್ಲೆ ಸಂಕ ದಾಟಿ ಶಾಲೆಗೆ ಹೋಗ್ಲ?” ಹೊಯ್ದಾಟದಲ್ಲಿ ನಿಂತ ವೀರೇಶ. ಇಲ್ಲ ಇವತ್ತು ಸೈಕಲ್ಲಿನಲ್ಲಿ ಸಂಕ ದಾಟಿಯೇ ಬಿಡ್ತೀನಿ. ಶಾಲೆಗೂ ಲೇಟಾಗಿದೆ ಎಂದು ಸೈಕಲ್ಲು ಸಂಕ ದಾಟಿಸಲು ಮುಂದಾದ. ಅಲ್ಲೆಲ್ಲೋ ದೂರದಲ್ಲಿ ಕುಳ್ಳೀರಜ್ಜ ಇವನ ಸಾಹಸ ನೋಡಿ “ಏಯ್ ವೀರ ನಿನಗೇನು ಹುಚ್ಚ? ಹಳ್ಳ ತುಂಬಿ ಹರೀತಾ ಇದೆ, ಗಾಳಿ ಬಿಟ್ಟು ಬಿಡದೆ ಬೀಸ್ತಾ ಇದೆ. ಸಂಕದ ಹಲಗೆ ಪಾಚಿ ಕಟ್ಟಿ ಜಾರ‍್ತ ಇದೆ. ಹಲಗೆಗಳು ಅಲ್ಲಲ್ಲಿ ಕುಂಬಾಗಿ ಮುರ‍್ದಿದೆ. ವಾಪಾಸು ಮನೆಗೆ ಹೋಗೊ ಮಾರಾಯ” ಎಂದರು. ಅಜ್ಜನ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ವೀರೇಶ ಸಂಕದ ಮೇಲೆ ಸೈಕಲ್ಲು ತುಳಿಯುತ್ತ ಮುಂದೆ ಸಾಗಿಯೇ ಬಿಟ್ಟ. ಸಂಕದ ನಟ್ಟ ನಡುವೆ ಬಂದಾಗ ಬರ‍್ರನೆ ಗಾಳಿಗೆ ಸಂಕ ಜೋರಾಗಿ ತೂಗಾಡುತ್ತಿದೆ, ಹಲಗೆಗಳು ಅಲ್ಲಲ್ಲಿ ಮುರಿದು ಉಕ್ಕಿ ಹರಿಯುವ ಹಳ್ಳ ಕಾಲ ಕೆಳಗೆ ಕಾಣುತ್ತಿದೆ, ತಲೆ ಗಿರ‍್ರನೆ ತಿರುಗುತ್ತಿದೆ. ಬಹಳ ಬ್ಯಾಲೆನ್ಸಿನ ಮೇಲೆ ಸೈಕಲ್ ಹೊಡೆಯುತ್ತ ಬಂದ ವೀರೇಶ ಸಂಕದ ನಟ್ಟ ನಡುವೆ ಬಂದಾಗ ಸೈಕಲ್ಲು ಮುಂದಕ್ಕೆ ಹೊಡೆಯಲಾಗದೆ ಇಳಿದ. ಪಾಚಿ ಕಟ್ಟಿದ ಹಲಗೆಯ ಜಾರಿಕೆ, ಮಳೆ ಬಿಸಿಲಿನ ಹೊಡೆತಕ್ಕೆ ಅಲ್ಲಲ್ಲಿ ಕುಂಬಾಗಿ ಮುರಿದಿದ್ದ ಹಲಗೆಗಳು ಬೇರೆ… ಹಲಗೆಗಳ ಜಾರಿಕೆಗೆ ಕಾಲುಗಳು ಬ್ಯಾಲೆನ್ಸ್ ತಪ್ಪಿ ಸೈಕಲ್ ಸಮೇತ ಜಾರಿ ಬಿದ್ದ, ಮೊದಲೆ ಕುಂಬಾಗಿದ್ದ ಹಲಗೆಗಳು ಬಿದ್ದ ರಬಸಕ್ಕೆ ಹಲಗೆಗಳು ಮುರಿದವು. ವೀರೇಶ ಕ್ಶಣ ಮಾತ್ರದಲ್ಲಿ ಸೈಕಲ್ ಸಮೇತ ನೀರು ಪಾಲಾಗಿದ್ದ. ಇದರ ಜೊತೆಗೆ ಬೈಕಿನಲ್ಲಿ ಓಡಾಡುವ ವೀರೇಶನ ಕನಸೂ ನುಚ್ಚು ನೂರಾಗಿತ್ತು.

ಮಾರನೆಯ ದಿನ ಒಂದೆರಡು ಮೈಲಿ ಅಂತರದಲ್ಲಿ ವೀರೇಶನ ಹೆಣ ಜರ‍್ಕಿನ್ ಸಮೇತ ತೇಲುತಿತ್ತು. ಸೈಕಲ್ ಮುರಿದ ಸ್ತಿತಿಯಲ್ಲಿ ನೀರಿನಲ್ಲಿ ಕಂಟಿಯೊಳಗೆ ಸಿಲುಕಿತ್ತು.

ಅವನ ಅಮ್ಮ ಅಪ್ಪನಿಗೆ ಇಂದಿಗೂ ಮೂಲೆಯಲ್ಲಿ ಮುರಿದು ಬಿದ್ದ ಸೈಕಲ್ಲು ಮತ್ತು ನೇತಾಡುವ ಜರ‍್ಕಿನ್ ಕಂಡು ದುಕ್ಕ ಉಮ್ಮಳಿಸಿ ಬರುತ್ತದೆ. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ತನ್ನ ದುರ‍್ವಿದಿಗೆ ನಿತ್ಯ ಅಪ್ಪ ಕೊರಗುತ್ತಲೇ ಕಾಲ ನೂಕುತ್ತಿದ್ದಾನೆ. ಅಮ್ಮನ ಅಳು ನಿಂತೆ ಇಲ್ಲ. ತಂಗಿ ಚಿಕ್ಕಿ ಕಿನ್ನಳಾಗೇ ಅವನ ದ್ಯಾನದಲ್ಲಿದ್ದಾಳೆ.

(ಚಿತ್ರ ಸೆಲೆ: publictv.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: