ಮಡಿವಾಳ ಮಾಚಿದೇವನ ವಚನದ ಓದು

– ಸಿ.ಪಿ.ನಾಗರಾಜ.

ಮಡಿವಾಳ ಮಾಚಿದೇವ, Madivala Machideva

——————————————————

ಹೆಸರು: ಮಡಿವಾಳ ಮಾಚಿದೇವ

ಕಾಲ: ಕ್ರಿ.ಶ.1131

ಊರು: ಹುಟ್ಟಿದ್ದು ದೇವರ ಹಿಪ್ಪರಗಿ, ಬಿಜಾಪುರ(ಜಿಲ್ಲೆ). ಅನಂತರ ಬಸವಣ್ಣನವರು ಇದ್ದ ಕಲ್ಯಾಣನಗರಕ್ಕೆ ಬಂದು ನೆಲಸುತ್ತಾರೆ.

ಕಸುಬು: ಬಟ್ಟೆಗಳ ಕೊಳೆಯನ್ನು ತೆಗೆದು ಮಡಿಮಾಡುವುದು/ಬಟ್ಟೆ ಒಗೆಯುವುದು.

ದೊರೆತಿರುವ ವಚನಗಳು: 339

ವಚನಗಳ ಅಂಕಿತನಾಮ: ಕಲಿದೇವರದೇವ / ಕಲಿದೇವಯ್ಯ.

——————————————————

ಆಶಾಪಾಶವ ಬಿಟ್ಟಡೇನಯ್ಯಾ
ರೋಷಪಾಶವ ಬಿಡದನ್ನಕ್ಕರ
ರೋಷಪಾಶವ ಬಿಟ್ಟಡೇನಯ್ಯಾ
ಮಾಯಾಪಾಶವ ಬಿಡದನ್ನಕ್ಕರ
ಇಂತೀ ತ್ರಿವಿಧಪಾಶವ ಹರಿದು
ನಿಜನಿಂದ ಲಿಂಗೈಕ್ಯರ ತೋರಾ ಕಲಿದೇವರದೇವಾ.

ವ್ಯಕ್ತಿಯು ತನ್ನ ಮನದಲ್ಲಿ ಮೂಡುವ ಆಸೆ/ಕೋಪ/ಮೋಹದ ಒಳಮಿಡಿತಗಳೆಲ್ಲವನ್ನೂ ಒಟ್ಟಾಗಿ ಹತೋಟಿಯಲ್ಲಿಟ್ಟುಕೊಂಡಾಗ ಮಾತ್ರ ಜೀವನದಲ್ಲಿ ಒಳ್ಳೆಯ ನಡೆನುಡಿಗಳನ್ನು ರೂಪಿಸಿಕೊಳ್ಳಲು ಆಗುತ್ತದೆ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

( ಆಶಾ=ಆಸೆ/ಬಯಕೆ/ಇಚ್ಚಿಸಿದ್ದನ್ನು ಪಡೆಯಬೇಕೆಂಬ ಹಂಬಲ; ಪಾಶ=ಹಗ್ಗ/ಬಲೆ/ಜಾಲ/ನೇಣಿನ ಕುಣಿಕೆ/ಪ್ರಾಣಿಗಳನ್ನು ಮತ್ತು ಹಕ್ಕಿಗಳನ್ನು ಹಿಡಿಯಲು ನೂಲಿನಿಂದ ಹೆಣೆದು ಮಾಡಿರುವ ವಸ್ತು; ಆಶಾಪಾಶ=ಆಶೆಯೆಂಬ ಬಲೆ. ವ್ಯಕ್ತಿಯ ಮನದಲ್ಲಿ ಮೂಡುವ ಆಸೆಗಳಲ್ಲಿ ‘ಒಳ್ಳೆಯ ಆಸೆ’ ಮತ್ತು ‘ಕೆಟ್ಟ ಆಸೆ’ ಗಳೆಂಬ ಎರಡು ಬಗೆಗಳಿವೆ.

‘ಒಳ್ಳೆಯ ಆಸೆ’ ಎಂಬುದು ವ್ಯಕ್ತಿಗೆ ಒಲವು ನಲಿವನ್ನು ತಂದುಕೊಡುವುದರ ಜತೆಗೆ ಇತರರಿಗೂ ಒಳಿತನ್ನು ಉಂಟುಮಾಡುವಂತೆ ಇರುತ್ತದೆ.

‘ಕೆಟ್ಟ ಆಸೆ’ ಎಂಬುದು ವ್ಯಕ್ತಿಯ ಮನದ ಹಂಬಲವನ್ನು ಈಡೇರಿಸಿದರೂ, ಅದರಿಂದ ಇತರರಿಗೆ ಕೇಡು/ಹಾನಿ/ನೋವು ತಟ್ಟುತ್ತದೆ.ಆದ್ದರಿಂದ ವ್ಯಕ್ತಿಯು ಕೆಟ್ಟ ಆಸೆಯ ಬಲೆಗೆ ಬೀಳಬಾರದು;

ಬಿಟ್ಟಡೆ+ಏನ್+ಅಯ್ಯಾ; ಬಿಡು=ತೊರೆ/ತ್ಯಜಿಸು/ಕಳಚು; ಬಿಟ್ಟಡೆ=ಬಿಟ್ಟರೆ/ತೊರೆದರೆ/ತ್ಯಜಿಸದರೆ; ಏನ್=ಯಾವುದು; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ; ಏನಯ್ಯಾ=ಪ್ರಯೋಜನವೇನು/ಪರಿಣಾಮವೇನು;

ರೋಷ=ಕೋಪ/ಸಿಟ್ಟು/ಮುನಿಸು/ಆಕ್ರೋಶ; ಬಿಡದ+ಅನ್ನಕ್ಕರ; ಬಿಡದ=ತೊರೆಯದ/ತ್ಯಜಿಸದ/ದೂರ ಮಾಡದ; ಅನ್ನಕ್ಕರ=ವರೆಗೆ/ ಆ ತನಕ/ ಅಲ್ಲಿಯವರೆಗೆ/ಅಲ್ಲಿಯ ತನಕ;

ಆಶಾಪಾಶವ ಬಿಟ್ಟಡೇನಯ್ಯಾ ರೋಷಪಾಶವ ಬಿಡದನ್ನಕ್ಕರ=ವ್ಯಕ್ತಿಯು ಕೆಟ್ಟ ಆಸೆಗಳನ್ನು/ಕಾಮನೆಗಳನ್ನು ಬಿಡುವುದರ ಜತೆಗೆ, ಮನದಲ್ಲಿ ಕೆರಳುವ ಕೋಪತಾಪದ ನಡೆನುಡಿಗಳನ್ನು ಹತ್ತಿಕ್ಕಿಕೊಂಡು/ಹತೋಟಿಯಲ್ಲಿಟ್ಟುಕೊಂಡು ಬಾಳಬೇಕು. ಕೆಟ್ಟ ಆಸೆಗಳ ಜತೆಗೆ ಕೆಟ್ಟ ಕೋಪವನ್ನು ಬಿಡದಿದ್ದರೆ ಜೀವನದಲ್ಲಿ ಒಳಿತನ್ನು ಪಡೆಯಲಾಗುವುದಿಲ್ಲ:

ಮಾಯಾ=ಮಾಯೆ/ವ್ಯಕ್ತಿಯ ಮಯ್-ಮನದಲ್ಲಿ ಬಯಕೆ/ಆಸೆ/ಹಂಬಲವನ್ನು ಕೆರಳಿಸಿ ತನ್ನತ್ತ ಸೆಳೆಯುವ ವಸ್ತು/ಜೀವಿ/ವ್ಯಕ್ತಿಗಳು; ಮಾಯಾಪಾಶ=ವ್ಯಕ್ತಿಯು ತಾನು ಪಡೆಯಲು ಹಂಬಲಿಸುತ್ತಿರುವ ವಸ್ತು/ಜೀವಿ/ವ್ಯಕ್ತಿಯನ್ನು ತನ್ನದನ್ನಾಗಿಸಿಕೊಳ್ಳಲು ಹೆಣಗುತ್ತಿರುವುದು/ಸೆಣಸುತ್ತಿರುವುದು;

ರೋಷಪಾಶವ ಬಿಟ್ಟಡೇನಯ್ಯಾ ಮಾಯಾಪಾಶವ ಬಿಡದನ್ನಕ್ಕರ=ವ್ಯಕ್ತಿಯು ತನ್ನನ್ನು ತೀವ್ರವಾಗಿ ಕಾಡುತ್ತಿರುವ/ಸೆಳೆಯುತ್ತಿರುವ ವಸ್ತು/ಜೀವಿ/ವ್ಯಕ್ತಿಗಳನ್ನು ಮನಸ್ಸಿನಿಂದ ಹೊರಹಾಕದೆ, ಕೇವಲ ಕೋಪವನ್ನು ತ್ಯಜಿಸಿದ ಮಾತ್ರದಿಂದಲೇ ಒಳಿತಿನ ನಡೆನುಡಿಗಳನ್ನು ರೂಪಿಸಿಕೊಳ್ಳಲು ಆಗುವುದಿಲ್ಲ;

ಇಂತು+ಈ; ಇಂತು=ಈ ರೀತಿ/ಬಗೆ; ತ್ರಿ=ಮೂರು; ವಿಧ=ಬಗೆ/ರೀತಿ; ಈ ತ್ರಿವಿಧ ಪಾಶ=1) ಕೆಟ್ಟ ಆಸೆ. 2) ಕೋಪದ ನಡೆನುಡಿ.3) ವಸ್ತು/ಜೀವಿ/ವ್ಯಕ್ತಿಗಳ ಬಗೆಗಿನ ಮೋಹ/ಸೆಳೆತ; ಹರಿ=ಕೀಳು/ಕತ್ತರಿಸು; ನಿಜ=ದಿಟ/ವಾಸ್ತವ/ಸತ್ಯ; ನಿಜನಿಂದ=ದಿಟದ/ಸತ್ಯದ ನಡೆನುಡಿಗಳಿಂದ ಬಾಳುತ್ತಿರುವುದು; ಲಿಂಗ=ಶಿವ/ದೇವರು; ಐಕ್ಯ=ಒಂದಾಗು/ಒಟ್ಟಾಗು/ಕೂಡಿಕೊಳ್ಳುವುದು; ಲಿಂಗ್ಯೆಕ್ಯರು=ಒಳ್ಳೆಯ ನಡೆನುಡಿಗಳಿಂದ ಶಿವನನ್ನು ಒಲಿದವರು/ಪೂಜಿಸುತ್ತಿರುವವರು; ತೋರು=ಕಾಣುವಂತೆ ಮಾಡು; ಕಲಿದೇವರದೇವಾ=ಶಿವ/ಈಶ್ವರ/ಮಡಿವಾಳ ಮಾಚಿದೇವನ ವಚನಗಳ ಅಂಕಿತನಾಮ;

ಇಂತೀ ತ್ರಿವಿಧಪಾಶವ ಹರಿದು ನಿಜನಿಂದ ಲಿಂಗ್ಯೆಕ್ಯರ ತೋರಾ=ತಮ್ಮ ನಿಜ ಜೀವನದಲ್ಲಿ ಕೆಟ್ಟ ಆಸೆಗಳನ್ನು ತೊರೆದು/ಕೋಪತಾಪಗಳನ್ನು ಹತೋಟಿಯಲ್ಲಿಟ್ಟುಕೊಂಡು/ಮನದಲ್ಲಿ ಮೂಡುವ ಮೋಹದ ಒಳಮಿಡಿತಗಳನ್ನು ತೊರೆದು ಬಾಳುತ್ತಿರುವ ಗುಣವಂತರನ್ನು ನನಗೆ ತೋರಿಸು ಎಂದು ವಚನಕಾರನು ದೇವರಲ್ಲಿ ಮೊರೆಯಿಡುತ್ತಿದ್ದಾನೆ.)

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: