‘ಬ್ಲ್ಯಾಕ್ ಐವೊರಿ’ – ಇದು ಆನೆಗಳಿಂದ ಪಡೆವ ದುಬಾರಿ ಕಾಪಿ!

– ಕೆ.ವಿ.ಶಶಿದರ.

black ivory, coffee, ಕಾಪಿ, ಬ್ಲ್ಯಾಕ್ ಐವೊರಿ

ಕಾಪಿ ಮತ್ತು ಟೀ ಅನಾದಿಕಾಲದಿಂದಲೂ ಮುಂಚೂಣಿಯಲ್ಲಿರುವ ಕುಡಿಗೆಗಳು(drink). ಕಾಪಿ ಎಂತಹುದೇ ವಾತಾವರಣಕ್ಕೂ ಹೊಂದಿಕೊಳ್ಳಬಲ್ಲ ಕುಡಿಗೆ. ಚಳಿಗಾಲದ ಮುಂಜಾನೆ ಬಿಸಿಬಿಸಿ ಕಾಪಿಯನ್ನು ಸವಿದರೆ ಅದರಿಂದ ಸಿಗುವ ಆನಂದ ಬೇರಾವುದರಿಂದಲೂ ಇಲ್ಲ ಎನ್ನಬಹುದು. ಅದೇ ರೀತಿಯಲ್ಲಿ ಬೇಸಿಗೆಯ ಸುಡುವ ದಗೆಯಿಂದ ಪಾರಾಗಲು ಕೋಲ್ಡ್ ಕಾಪಿ ಅತ್ಯಂತ ಆಹ್ಲಾದಕರ ಕುಡಿಗೆ. ದೇಶದಿಂದ ದೇಶಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಕಾಪಿ ತಯಾರಿಸುವ ಬಗೆ ಬದಲಾಗಬಹುದು. ಅದಕ್ಕೆ ಸೇರಿಸುವ ಚಿಕೋರಿಯ ಪ್ರಮಾಣ ಬದಲಾಗಬಹುದು, ಅದರ ಬೆಲೆ ಕೂಡ ಬದಲಾಗಬಹುದು. ಆದರೆ ಕಾಪಿ ಹೆಚ್ಚು ಮಂದಿಯ ನೆಚ್ಚಿನ ಕುಡಿಗೆ ಎಂಬುದರಲ್ಲಿ ಎರಡನೇ ಮಾತಿಲ್ಲ.

ಆದರೆ ಇಲ್ಲೊಂದು ಕಾಪಿಯ ಬಗೆ ಇದೆ. ಈ ಕಾಪಿ ಬಹಳ ತುಟ್ಟಿ. ಎಶ್ಟು ದುಬಾರಿ? ಯಾಕೆ ಅಶ್ಟು ದುಬಾರಿ? ಯಾವುದೀ ದುಬಾರಿ ಕಾಪಿ? ಈ ಕಾಪಿಯ ವಿಶೇಶತೆ ಏನು? ಸಿಗುವುದಾದರೂ ಎಲ್ಲಿ? – ಒಂದಶ್ಟು ಕುತೂಹಲಕಾರಿ ಸಂಗತಿಗಳು ಈ ಬರಹದಲ್ಲಿ.

ಬ್ಲ್ಯಾಕ್ ಐವೊರಿ – ಇದು ಜಗತ್ತಿನ ಅತ್ಯಂತ ದುಬಾರಿ ಕಾಪಿ

ತೈಲಾಂಡಿನಲ್ಲಿ ತಯಾರಾಗುವ ಬ್ಯ್ಲಾಕ್ ಐವೊರಿ ಕಾಪಿಯ ಬೆಲೆ ಕೇಳಿದರೆ ನೀವು ದಂಗಾಗುತ್ತೀರಿ. ಇದರ ಬೆಲೆ ಒಂದು ಕಪ್‍ಗೆ ಸುಮಾರು 13 ಡಾಲರ್. ಅಂದರೆ ಇದು ಸಾಮಾನ್ಯ ಜನರಿಗೆ ಕೈಗೆಟುಕುವ ಕಾಪಿ ಅಲ್ಲ ಎಂದೆನಿಸದೇ ಇರದು. ಆದರೆ ಈ ಕಾಪಿ ಬೀಜದ ಮೂಲ ಹಾಗೂ ಅದನ್ನು ಸಂಸ್ಕರಿಸುವ ಬಗೆಯನ್ನು ತಿಳಿದಲ್ಲಿ ಯಾರಾದರೂ ಮೂಗಿನ ಮೇಲೆ ಬೆರಳಿಡುವುದರಲ್ಲಿ ಸಂದೇಹವೇ ಇಲ್ಲ.

ಆನೆಗಳಿಂದ ಪಡೆವ ಕಾಪಿ!
ಆನೆ ಲದ್ದಿ, ಕಾಪಿ ಬೀಜ, Elephant dung, coffee

ಈ ಕಾಪಿ ಸಂಸ್ಕರಣೆಯ ಬಗೆ ಬಹು ವಿಚಿತ್ರ. ಆನೆಗಳಿಗೆ ತಿನ್ನಲು ನೀಡುವ ಹಸಿರು ಹುಲ್ಲು, ಬಾಳೆಹಣ್ಣು ಮತ್ತು ಕಬ್ಬಿನೊಂದಿಗೆ ಕಾಪಿ ಬೀಜಗಳನ್ನು ಬೆರೆಸಿ ನೀಡುತ್ತಾರೆ. ಆನೆಗಳು ಸಾವಕಾಶವಾಗಿ ಇದನ್ನು ಮೆಲ್ಲುತ್ತವೆ. ಸುಮಾರು 15-30 ಗಂಟೆಗಳ ವರೆಗೆ ಆನೆಗಳ ಹೊಟ್ಟೆಯಲ್ಲಿರುವ ಕಾಪಿ ಬೀಜ ಲದ್ದಿಯೊಂದಿಗೆ ಹೊರಬರುತ್ತದೆ. ಹೀಗೆ ಪಡೆದ ಕಾಪಿ ಬೀಜಗಳನ್ನು ಆನೆ ಲದ್ದಿಯಿಂದ ಬೇರ‍್ಪಡಿಸಿ, ತೊಳೆದು, ಒಣಗಿಸಿ ಬೇರೆ ಕಾಪಿ ಬೀಜದಂತೆ ಸಂಸ್ಕರಿಸಲಾಗುತ್ತದೆ.

ಕಾಪಿ ಬೀಜಗಳು ಆನೆಗಳ ಹೊಟ್ಟೆಯಲ್ಲಿ ಹುದುಗುವಿಕೆಗೆ(fermentation) ಒಳಪಟ್ಟಾಗ ಹಸಿರು ಹುಲ್ಲಿನಲ್ಲಿರುವ ಸೆಲ್ಯುಲೋಸ್ ಜೀರ‍್ಣವಾಗುತ್ತದೆ. ಇದು ಕಾಪಿಯ ಕಹಿಯನ್ನು ಕಡಿಮೆ ಮಾಡುವುದಲ್ಲದೇ ವಿಶೇಶ ಸವಿಯನ್ನು ತಂದುಕೊಡುತ್ತದೆ.

ಕಾಪಿ ಪಡೆಯಲು ಆನೆಗಳೇ ಏಕೆ?

ಬೆಕ್ಕುಗಳಿಂದ ಪಡೆಯುವ ಕೊಪಿ-ಲುವಾಕ್ ಈಗಾಗಲೇ ಹಲವು ಕಡೆ ಹೆಸರುವಾಸಿಯಾಗಿದೆ. ಇದರ ಬೇಡಿಕೆ ಹೆಚ್ಚುತ್ತಿದ್ದಂತೆ ಬೇರೆ ಬೇರೆ ಪ್ರಾಣಿಗಳನ್ನು ಬಳಸಿಕೊಳ್ಳುವ ಆಲೋಚನೆ ಬಂತು. ಸಾಮಾನ್ಯವಾಗಿ ಆನೆಗಳು ಕಾಪಿ ಗಿಡ ಮತ್ತು ಎಲೆಗಳನ್ನು ತಿನ್ನುತ್ತವೆ. ಹೀಗಾಗಿ ಆನೆಗಳನ್ನು ಈ ಕೆಲಸಕ್ಕೆ ಬಳಸುವುದು ಒಳ್ಳೆಯದು ಎಂದು ತೀರ‍್ಮಾನಿಸಲಾಯಿತು ಎನ್ನುತ್ತಾರೆ ಈ ವಿಶೇಶ ಬಗೆಯ ಕಾಪಿ ತಯಾರಿಕೆ ಮತ್ತು ಅರಕೆಯಲ್ಲಿ ತೊಡಗಿಕೊಂಡಿರುವ ಕೆನಡಾದ ಬ್ಲೇಕ್ ಡಿಂಕಿನ್.

ಬ್ಲ್ಯಾಕ್ ಐವೊರಿ ಕಾಪಿ ಇಶ್ಟು ದುಬಾರಿ ಯಾಕೆ?

ಒಂದು ಕಿಲೋ ‘ಬ್ಲ್ಯಾಕ್ ಐವೊರಿ ಕಾಪಿ’ಯ ಬೆಲೆ ಸುಮಾರು 1,100 ಡಾಲರ್‌ಗಿಂತಲೂ ಹೆಚ್ಚು. ತೈಲ್ಯಾಂಡಿನಲ್ಲಿ ಐವೊರಿ ಕಾಪಿ ತಯಾರಿಕೆಗೆಂದೇ ಆನೆಗಳನ್ನು ಸಾಕಲಾಗುತ್ತದೆ. ಆನೆ ಸಾಕುವುದೆಂದರೆ ದುಬಾರಿ ವೆಚ್ಚದ ಕೆಲಸವೇ ದಿಟ. ಆನೆಗಳಿಗೆ ಪ್ರತಿದಿನ ನೀಡುವ ಕ್ವಿಂಟಾಲ್‍ಗಟ್ಟಲೆ ಹಸಿರು ಮೇವಿನ ಜೊತೆ ಸರಿಯಾದ ಪ್ರಮಾಣದಲ್ಲಿ ಕಾಪಿ ಬೀಜಗಳನ್ನು ಸೇರಿಸಿ ಉಣಿಸಬೇಕು. ಅದರ ಲದ್ದಿಯನ್ನು ಕಲೆಹಾಕುವ ಕಾರ‍್ಯ ಸಹ ಕಶ್ಟಕರವಾದದ್ದು. ಅದಕ್ಕಾಗಿ ಜನರನ್ನು ನೇಮಿಸಬೇಕು. ಕಲೆಹಾಕಿದ ಲದ್ದಿಯಿಂದ, ಕಾಪಿ ಬೀಜವನ್ನು ಬೇರ‍್ಪಡಿಸುವ ಕೆಲಸ ಸರಳವಾದುದಲ್ಲ. ಇವೆಲ್ಲದರ ವೆಚ್ಚ ಮಾರಾಟಕ್ಕೆ ತಯಾರಾಗಿರುವ ಕಾಪಿ ಬೀಜದ ಮೇಲೆ ಬೀಳುವ ಕಾರಣ, ಕಾಪಿಯ ಬೆಲೆ ಗಗನಕ್ಕೇರುವುದು ಸಹಜವೇ ಆಗಿದೆ.

ಕಳೆದ ಒಂಬತ್ತು ವರುಶಗಳಿಂದ ಈ ವಿಶೇಶ ಬಗೆಯ ಕಾಪಿಯ ಅರಕೆ ಮತ್ತು ತಯಾರಿಕೆಯ ಮೇಲೆ ಡಿಂಕಿನ್ ಸುಮಾರು 3 ಲಕ್ಶ ಡಾಲರ್‌ನಶ್ಟು ದುಡ್ಡನ್ನು ಕರ‍್ಚು ಮಾಡಿದ್ದಾರೆ.

ಕಾಪಿ ಸವಿದವರ ಅನಿಸಿಕೆ

ಆನೆಗಳಿಂದ ಪಡೆದ ಕಾಪಿ ಸೇವಿಸಿದವರು ಇದರ ಸವಿಯ ಬಗ್ಗೆ ನೀಡುವ ಪ್ರತಿಕ್ರಿಯೆ ಬೇರೆ ಬೇರೆ ತೆರನಾಗಿದೆ. ಅತ್ಯಂತ ನೈಸರ‍್ಗಿಕ ಪರಿಮಳವನ್ನು ಹೊಂದಿರುತ್ತದೆ ಎಂಬುದು ಈ ಕಾಪಿ ಸೇವಿಸಿದ ಕೆಲವರ ಅಂಬೋಣ. ಮತ್ತೆ ಹಲವರ ಅಬಿಪ್ರಾಯದಂತೆ, ಇಂತಹ ಕಾಪಿಗೆ ಮೇಲೆ ಸಕ್ಕರೆ ಹಾಕಿ ಸಿಹಿಗೊಳಿಸುವ ಅವಶ್ಯಕತೆ ಇಲ್ಲ. ಈ ಕುಡಿಗೆಯು ಮ್ರುದುವಾಗಿ ಕಾಪಿ ಮತ್ತು ಟೀಯ ಮಿಶ್ರಣದಂತೆ ಇರುತ್ತದೆ ಎನ್ನುವವರು ಕೆಲವರಾದರೆ, ಮತ್ತೆ ಕೆಲವರು ಇದು ಸುವಾಸಿತ ಹೂವಿನಂತೆ ಅತವಾ ಚಾಕೋಲೇಟ್‍ನಂತೆ ಪರಿಮಳ ಹೊಂದಿದೆ ಎಂದು ಬಣ್ಣಿಸುತ್ತಾರೆ. ಇದರ ರುಚಿ ಚೆರ್ರಿ ಹಣ್ಣು ಬೆರೆತ ಕೊಲೇಟ್ ಮಾಲ್ಟ್‌ನಂತಿದೆ ಎನ್ನುವವರು ಕೆಲವರು. ಸರಿಯಾದ ರುಚಿ ಸವಿದವರಿಗಶ್ಟೇ ಗೊತ್ತು!

(ಮಾಹಿತಿ ಮತ್ತು ಚಿತ್ರ ಸೆಲೆ: dailymail.co.uk, thenational.ae, npr.org, metro.co.uk)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: