ಕವಿತೆ: ಸೇರಲಾಗದ ಗಮ್ಯ

– ಅಶೋಕ ಪ. ಹೊನಕೇರಿ.

goal, road, split roads, ಕವಲು, ಗಮ್ಯ, ಗುರಿ, ದಾರಿ

ಮುಗಿಯದೀ ಗಮ್ಯ
ಬದುಕು ಮುಗಿಯುವವರೆಗೂ
ಅದಮ್ಯ ಉತ್ಸಾಹದಿ ನಡೆದರೂ
ಓಡಿದರೂ ಜಿಗಿದರೂ ತಲುಪಲಾಗಲಿಲ್ಲ
ಬದುಕಿನ ಗುರಿಯ ಗಮ್ಯ

ಇದು ನನ್ನ ತಪ್ಪಲ್ಲ ತಿಳಿ
ಹಸಿರುಟ್ಟ ರಮ್ಯ
ನಾ ಹೋಗುತಿದ್ದ ಗಮ್ಯಕ್ಕೆ
ಕವಲುಗಳೇ ಹೆಚ್ಚು
ಯಾವ ದಾರಿ ತುಳಿದರೂ
ಮತ್ತದರದೇ ಕವಲು

ಸೇರುತ್ತಿಲ್ಲ ನಾನು ಬದುಕಿನ
ಹಿರಿದಾದ ಗಮ್ಯ
ಬರಿ ಗೋಜಲು ಗೊಂದಲದಲ್ಲೇ
ಬಂದು ನಿಲ್ಲುತ್ತಿದೆ
ಕವಲು ಕವಲಾದ ಗಮ್ಯ‌

ಏನು ಮಾಡಲಿ
ಅದಮ್ಯ ಉತ್ಸಾಹವಿದೆ
ಓಡುವ ಚಲವಿದೆ
ಎಡೆಬಿಡದ ಸಾಸಿರ ಪ್ರಯತ್ನವಿದೆ
ಸೇರಲಾಗುತ್ತಿಲ್ಲ ಬದುಕಿನೆತ್ತರದ
ಹಿರಿದಾದ ಗಮ್ಯ

ಮತ್ತೆ ಮತ್ತೆ ನಾನದೇ
ಕವಲುಗಳಲಿ ನಿಲ್ಲುತ್ತಿದ್ದೇನೆ
ಮೌನವಾಗಿ ಪವಡಿಸಿದ
ಹೆದ್ದಾರಿ ಅಣಕಿಸುತಿದೆ
ನೀ ಕವಲು ದಾರಿಯ
ಬಿಟ್ಟು ಸೇರಲಾರೆ ನನ್ನ

ಓ ಹಸಿರುಟ್ಟ ರಮಣೀಯ ರಮ್ಯ
ನನ್ನ ಬದುಕಿನ ಆಸೆಯ ಹೆದ್ದಾರಿ
ಸೇರಲು ನಾ ಮಾಡುವ
ಪ್ರಯತ್ನಕೆ ನೀನೇ ಸಾಕ್ಶಿ

ಆದರೂ ಹೆದ್ದಾರಿಯ ಗಮ್ಯವ
ಸೇರಲು ಬಿಡುತಿಲ್ಲ
ಈ ಕವಲುದಾರಿ
ಹಾಗಾದರೆ ನಾ ಹೇಗೆ ಸೇರಲಿ
ನನ್ನ ಬದುಕಿನ ಗುರಿಯೆಂಬ
ಹೆದ್ದಾರಿಯ ಗಮ್ಯ

ನಾ ಹೇಗೆ ಸೇರಲಿ
ನನ್ನ ಬದುಕಿನ ಗುರಿಯೆಂಬ
ಹೆದ್ದಾರಿಯ ಗಮ್ಯ

(ಚಿತ್ರ ಸೆಲೆ: pixabay.com)

2 ಅನಿಸಿಕೆಗಳು

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: