ಸಣ್ಣಕತೆ: ನಾಯರ್ ದೆವ್ವ

– ಅಶೋಕ ಪ. ಹೊನಕೇರಿ.

“ಏಯ್ ಎಲ್ಲಿ ಹಾಳಾಗಿ ಹೋದ್ಯೆ ಮಂಜಿ….” ಎಂದು ತಾಯಿ ಪದ್ಮಕ್ಕ ಮಗಳನ್ನು ಒಂದೇ ಸಮನೆ ಕೂಗ್ತಾ ಇದ್ದರು. ಕುಂಟೆ ಬಿಲ್ಲೆ ಆಡೋದರಲ್ಲೆ ಮಗ್ನಳಾದ ಮಗಳಿಗೆ ಅಮ್ಮನ ಕೂಗು ಕೇಳಿಸ್ತಿಲ್ಲ.

“ಎಲ್ಲಿದ್ದಾಳೆ ಅವಳು? ಮಾಡ್ತೀನಿ ಅವಳಿಗೆ, ಎಶ್ಟು ಕೂಗಿದ್ರೂ ಓ ಅಂತಿಲ್ಲ” ಎಂದು ಕೈಯಲ್ಲಿ ಪೊರಕೆ ಹಿಡಿದು ಬಂದ ಅಮ್ಮನ ಕಂಡು ಮಂಜಿ ದೂರ ಓಡಿ ಹೋದಳು.

“ಯಾಕಮ್ಮ ಹೊಡಿಯಕ್ಕೆ ಬರ‍್ತಿಯಾ” ಅಂತ ಮಗಳು ಕೇಳಿದ್ದಕ್ಕೆ ಅಮ್ಮ, “ಏಯ್ ಮಂಜಿ, ಎಶ್ಟೇ ಕೂಗೋದು? ಮನೆ ಗೋಡೆಗೆ ಕೆಮ್ಮಣ್ಣು ಬಳೀಬೇಕು. ಆ ನಾಯರ್ ಮನೆಯ ಹತ್ರದ ಕೆಳಗಂಡಿಗೆ ಹೋಗಿ, ಕೆಮ್ಮಣ್ಣು ಕೆತ್ತಿ ಒಂದು ಬುಟ್ಟಿ ತುಂಬಿಕೊಂಡು ಬಾ ಹೋಗು” ಎಂದಳು.

“ಅಮ್ಮ, ಆಗ್ಲೆ ಕತ್ತಲಾಗ್ತ ಬಂತು. ಆ ಕೆಳಗಂಡಿ ಹತ್ರ ಹೆದರಿಕೆ ಆಗುತ್ತೆ” ಎಂದ ಮಂಜಿಗೆ, ಅವರಮ್ಮ “ಏ… ಸಾಕು ಹೋಗೆ. ಹೆದರಿಕೆ ಅಂತೆ ಹೆದರಿಕೆ, ಸ್ವಾಮಿನೂ ಕರ‍್ಕೊಂಡು ಹೋಗು” ಎಂದು ಜೋರು ಮಾಡಿದಳು. ಆಗಲೇ ಮಬ್ಬುಗತ್ತಲು. ಬುಟ್ಟಿ, ಕುಡುಗೋಲು ಎತ್ತಿಕೊಂಡ ಮಂಜಿ, “ಏ ಸ್ವಾಮಿ, ಬಾರೋ” ಎಂದು ತಮ್ಮನನ್ನು ಎಳೆದುಕೊಂಡು ಹೋದ್ಲು.

ಮಂಜಿಗೆ ಒಳಗೊಳಗೇ ಅಂಜಿಕೆ. ನಾಯರ್ ಮನೆ ಹತ್ರ ಕತ್ತಲಾದ ಮೇಲೆ ಒಂಟಿಯಾಗಿ ಹೊಗೋಕೆ ಎಲ್ಲರೂ ಹೆದರುತ್ತಾರೆ. ಅಲ್ಲಿ ನಾಯರ್ ಹೆಂಡ್ತಿ ಮತ್ತು ಮಗಳು ಯಾವುದೋ ಕಾರಣಕ್ಕೆ ನೇಣು ಹಾಕ್ಕೊಂಡು ಸತ್ತ ಮೇಲೆ ನಾಯರ್ ಗೆ ಹೆಚ್ಚೂ ಕಡಿಮೆ ಹುಚ್ಚೇ ಹಿಡೀತಂತೆ. ಅವನೂ ಸ್ವಲ್ಪ ದಿನದ ನಂತರ ಮನೆ ಹತ್ರದ ದೊಡ್ಡ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಸತ್ತಿದ್ದ. ಆ ಮಾವಿನ ಮರದ ಟೊಂಗೆಗಳು ಒಂತರ ವಕ್ರ ವಕ್ರವಾಗಿದ್ದವು. ಮಸುಕು ಬೆಳಕಿನಲ್ಲಿ ಆ ಮರ ಹೆದರಿಕೆ ತರಿಸುವಂತೆಯೇ ಇತ್ತು. ನಾಯರ್ ಕುಟುಂಬ ಆತ್ಮಹತ್ಯೆ ಮಾಡಿಕೊಂಡ ಮೇಲೆ ಆ ಮನೆ ಹಾಳು ಬಿದ್ದಿದೆ. ಆ ಮನೆಯಲ್ಲಿ ತಾಯಿ-ಮಗಳ ಆತ್ಮಗಳು ಮುಕ್ತಿ ಸಿಗದೆ ರಾತ್ರಿಯೆಲ್ಲ ರೋದಿಸುತ್ತವೆಯಂತೆ. ಸತ್ತ ನಾಯರ್ ಕೂಡ ಆತ್ಮಕ್ಕೆ ಮುಕ್ತಿ ಸಿಗದೇ, ರಾತ್ರಿಯೆಲ್ಲ ಬಾಗಿಲು ಬಡಿದು ಅಳ್ತಾ ಇರ‍್ತಾನಂತೆ.

ಈ ಅಂತೆ ಕಂತೆ ಕತೆ ಮಂಜಿನೂ ಕೇಳಿದ್ದಳು. ಕೆಮ್ಮಣ್ಣು ತರಲು ಈ ನಾಯರ್ ಮನೆ, ಮಾವಿನ ಮರ ದಾಟಿ, ಕೆಮ್ಮಣ್ಣು ಗುಂಡಿಗೆ ಹೋಗಬೇಕು. ಆಗ್ಲೆ ರವ ರವ ಕತ್ಲು. ಆ ಮಾವಿನ ಮರ ಹತ್ರ ಆಗ್ತಿದ್ದಂಗೆ ಮಂಜಿ ತಮ್ಮನಿಗೆ “ಏಯ್, ಮರದ ಕಡೆ ನೋಡ್ಬೇಡ. ಅಲ್ಲಿ ನಾಯರ್ ಬೂತ ಆಗಿ ಇದಾನೆ” ಎಂದು ತಮ್ಮನಿಗೆ ಎಚ್ಚರಿಸುತ್ತಿದ್ದರೆ, ಇತ್ತ ಅವಳ ಎದೆ ಡವ ಡವ ಅಂತಿದೆ. ಸ್ವಾಮಿ, “ಅಕ್ಕ, ಈ ದೆವ್ವ ನೋಡೋಕೆ ಹೆಂಗಿರತ್ತಕ್ಕ” ಎಂದಿದ್ದಕ್ಕೆ, ಸುಮಾರು ಸರ‍್ತಿ ದೆವ್ವ ನೋಡ್ದವಳಂಗೆ “ಅದು ಬೆಳ್ಳಗೆ ಕಾಲು ಹಿಂದು ಮುಂದಾಗಿ, ಮುಕ ಎಲ್ಲಾ ಜಜ್ಜಿದಂಗೆ ಕೆಟ್ಟದಾಗಿರುತ್ತೆ, ದೆವ್ವದ ಎದುರಿಗೆ ನಾವ್ ಯಾರಾದ್ರೂ ಸಿಕ್ಕರೆ, ರಪ್.. ಅಂತ ಮುಕಕ್ಕೆ ಹೊಡ್ದು, ಕತ್ತು ಹಿಸುಕಿ ಸಾಯಿಸಿ, ಮೇಲೆ ಕೂತ್ಕೊಂಡು ರಕ್ತ ಕುಡಿಯುತ್ತೆ ಕಣೋ” ಅಂತ ಉಗುಳು ನುಂಗುತ್ತಲೆ ವಿವರಿಸಿದಳು.

ಇನ್ನೇನೋ ಆ ಮಾವಿನ ಮರ ಮತ್ತು ನಾಯರ್ ಮನೆ ಹತ್ರ ಬಂತು. ಕತ್ತಲು ಮುಸ್ಸಂಜೆಯನ್ನು ಆವರಿಸುತಿತ್ತು. ಆ ಮರದ ಹತ್ರ ಏನೋ ಸರ ಸರ ಸದ್ದಾಯ್ತು, ಗೂಬೆಯೊಂದು ಗುಟುರ್ ಗುಟುರ್ ಅಂತ ಕೂಗತೊಡಗಿತು. ಇದ್ದಕ್ಕಿದ್ದಂತೆ ತಣ್ಣನೆ ಗಾಳಿ ಜೋರಾಗಿ ಬೀಸತೊಡಗಿತು. ಮಂಜಿಯ ಕಣ್ಣಿಗೆ ಏನೋ ಬಿಳಿ ನಿಲುವಂಗಿ ತೊಟ್ಟ ಆಕಾರ ಆ ಮರದ ಬಳಿ ಸರಿದು ಹೋದಂತೆ ಕಂಡಿತು. ಮಂಜಿಯ ಜಂಗಾ ಬಲವೇ ಉಡುಗಿ ಹೋಯ್ತು. “ಲೇ ಸ್ವಾಮಿ, ಇದು ಆ ನಾಯರ್, ದೆವ್ವ ಆಗಿ ಓಡಾಡ್ತ ಇದಾನೆ. ಇಲ್ಲಿಂದ ವಾಪಸು ಮನೆಗೆ ಓಡಿ ಹೋಗಬೇಕು. ಇಲ್ಲಂದ್ರೆ ಈ ದೆವ್ವ ನಮ್ಮನ್ನ ಸಾಯಿಸಿ ಬಿಡುತ್ತೆ” ಎಂದಾಗ ಸ್ವಾಮಿ ದರೆಗೆ ಕುಸಿದು ಹೋದ. ಅವನ ಕೈ ಕಾಲು ತರ ತರ ನಡುಗತೊಡಗಿತು. ಅಶ್ಟರಲ್ಲೇ ಮತ್ತೊಮ್ಮೆ ತಣ್ಣನೆ ಗಾಳಿ ಸುಯ್ ಎಂದು ಮಂಜಿಯ ಮುಕದ ಮೇಲೆ ಹಾದು ಹೋದಂತಾಯ್ತು. “ಲೇ ಸ್ವಾಮಿ, ಇಲ್ಲಿಂದ ಜೋರಾಗಿ ಮನೆಗೆ ಓಡ್ಬೇಕು. ಇಲ್ಲಂದ್ರೆ ಈ ನಾಯರ್ ನ ಬೂತ ನಮ್ಮನ್ನ ಉಳಸಲ್ಲ, ಹಾಂ.. ಓಡು ಓಡು…” ಎಂದು ಕುಡುಗೋಲು, ಬುಟ್ಟಿ ಅಲ್ಲಿಯೇ ಬಿಸಾಡಿದವಳೇ ಮಂಜಿ ತಮ್ಮನ ಕೈ ಹಿಡಿದುಕೊಂಡು ಉಸಿರುಗಟ್ಟಿ ಓಡತೊಡಗಿದಳು. ಓಡುವ ರಬಸದಲ್ಲಿ ಸ್ವಾಮಿ ಕಲ್ಲಿಗೆ ಕಾಲು ತಾಗಿಸಿ ಎಡವಿ ಬಿದ್ದ. ಬಿದ್ದ ರಬಸಕ್ಕೆ ಹಣೆ ಒಡೆದು ರಕ್ತ ಸುರಿಯತೊಡಗಿತು. ಎರಡೂ ಮೊಣಕಾಲು ತರಚಿ ರಕ್ತ ಬರತೊಡಗಿತು. ಮಂಜಿ, “ಏಯ್ ಏಳೋ… ಓಡೋ” ಎಂದರೂ ಅವನಿಗೆ ನೋವಿನಿಂದ ಏಳಲಾಗಲಿಲ್ಲ.

ಹಿಂದಿನಿಂದ ಮಂಜಿನಂತೆ ಕೊರೆವ ಗಾಳಿ ಇವರನ್ನೆ ಹಿಂಬಾಲಿಸುತಿತ್ತು. ಆ ಮಸುಕು ಮಸುಕಾದ ಕತ್ತಲಲ್ಲಿ, ಹಿಂದೆ ಬೀಸಿ ಬರುತ್ತಿರುವ ತಣ್ಣನೆಯ ಗಾಳಿಯಲ್ಲಿ ಬೆಳ್ಳಗಿನ ಬಟ್ಟೆಯೊಂದು ತೇಲಿ ಬರುತ್ತಿದ್ದಂತೆ ಕಂಡು ಬರುತ್ತಿತ್ತು. ಮಂಜಿ ಸ್ವಾಮಿಯ ಕೈ ಹಿಡಿದು ಎತ್ತಲು ಪ್ರಯತ್ನಿಸುತ್ತಿದ್ದಾಳೆ.‌ ಆದರೆ ಸ್ವಾಮಿ ಹೆಣ ಬಾರವಾಗಿದ್ದು, ಅವಳ ಕೈಯಿಂದ ಅವನನ್ನು ಮಿಸುಕಾಡಿಸಲೂ ಆಗುತ್ತಿಲ್ಲ. ಇದ್ದಕ್ಕಿದ್ದಂತೆ ಹಿಸ್…ಹಿಸ್… ಎಂಬ ನರಳುವ ದ್ವನಿ ಮಂಜಿಯ ಕಿವಿಗೆ ಬಿತ್ತು. ನೋಡನೋಡುತ್ತಿದ್ದಂತೆ ಮಂಜಿಯ ಮುಕದ ಮೇಲೆ ಬಲವಾದ ಪ್ರಹಾರವಾಯ್ತು. ಈಕೆ ಮಾರು ದೂರ ಹೋಗಿ ಬಿದ್ದಳು. ಬಿದ್ದ ರಬಸಕ್ಕೆ ಅವಳ ತಲೆಗೆ ಬಲವಾದ ಪೆಟ್ಟು ಬಿದ್ದು ಮೂರ‍್ಚೆ ಹೋದಳು. ಸ್ವಾಮಿಯ ದೇಹ ಇದ್ದಕ್ಕಿಂದಂತೆ ಗಾಳಿಯಲ್ಲಿ ತೇಲಿ, ಹಾರಿಕೊಂಡು ಹೋಗಿ ನಾಯರ್ ಅವರ ಪಾಳು ಬಿದ್ದ ಮುರಕಲು ಚಾವಣಿಯ ಮೇಲೆ ದೊಪ್ಪೆಂದು ಬಿದ್ದಂತೆ ಸದ್ದು ಬಂತು. ಮುರಕಲು ಚಾವಣಿಯಿಂದ ಜಾರಿಕೊಂಡು ಸ್ವಾಮಿಯ ದೇಹ ಆ ಪಾಳು ಬಿದ್ದ ಮನೆಯ ಹಜಾರದಲ್ಲಿ ಬಿತ್ತು. ಸ್ವಾಮಿಗೆ ಯಾವ ಪರಿಗ್ನಾನವೂ ಇಲ್ಲ. ಆ ಮನೆಯ ಮೂಲೆಯಲ್ಲಿದ್ದ ತಾಯಿ ಮಗಳ ಆತ್ಮಗಳು ಎಚ್ಚೆತ್ತುಕೊಂಡವು. ನರಮನುಶ್ಯನ ರಕ್ತದ ವಾಸನೆ ಮೂಗಿಗೆ ಬಡಿಯತೊಡಗಿದಂತೆ ಆ ಎರಡು ಆತ್ಮಗಳು ಹುಚ್ಚೆದ್ದು ಕುಣಿಯುತ್ತ ಆಹ್ಹಾ…ಹ್ಹಾ… ಆಹ್ಹಾ…ಹ್ಹಾ ಎಂದು ವಿಕ್ರುತವಾಗಿ ನಗುತ್ತ, ಸ್ವಾಮಿಯ ದೇಹದ ಮೇಲೆ ಎರಗಲು‌ ತಯಾರಾದವು. ಇತ್ತ ಮೂರ‍್ಚೆ ಹೋಗಿದ್ದ ಮಂಜಿಗೆ ಇದ್ದಕ್ಕಿದ್ದಂತೆ ಎಚ್ಚರವಾಯ್ತು. ಸ್ವಾಮಿಯನ್ನು ಸುತ್ತಮುತ್ತ ಹುಡುಕಿದಳು. ಊಹೂಂ… ಸಿಗಲಿಲ್ಲ. ಮೈಯೆಲ್ಲ ಬಾರ, ದೇಹ ನಡುಗುತ್ತಿದೆ, ಗಂಟಲು ಒಣಗಿದಂತಾಗಿದೆ. ಆದರೂ ಸಾವರಿಸಿಕೊಂಡು ಎದ್ದು, ಓಡಲಾರದೆ ಮನೆಗೆ ಓಡಿ ಹೋಗಿ ತನಗಾದ ಅನುಬವ ಮತ್ತು ಸ್ವಾಮಿ ಕಾಣದೆ ಇರುವ ವಿಶಯ ತಿಳಿಸಿದಳು.

ಗಾಬರಿ ಬಿದ್ದ ಅಪ್ಪ-ಅಮ್ಮ “ಅಯ್ಯೋ, ಆ ನಾಯರ್ ಮನೇಲಿ ದೆವ್ವ ಇದಾವೆ…” ಎಂದವರೆ, ಏನಾದರೂ ಅನಾಹುತ ಆದರೆ ಎಂದು ಹೌಹಾರಿ, ಒಂದು ದೊಡ್ಡ ಕೋಲಿಗೆ ಗೋಣಿ ಚೀಲ ಸುತ್ತಿ, ಅದನ್ನು ಎಣ್ಣೆಯೊಳಗೆ ಅದ್ದಿ ದೊಂದಿ ಮಾಡಿಕೊಂಡು ಕತ್ತಲೆಯನ್ನು ಬೇದಿಸಿ ಪಾಳು ಬಿದ್ದ ನಾಯರ್ ಮನೆ ಬಳಿ ಹೋದರು. ಆ ದೊಂದಿಯ ಬೆಳಕಿನಲ್ಲಿ ಸುತ್ತ ಮುತ್ತ ಹುಡುಕಿದರೂ, ಅಲ್ಲೆಲ್ಲೂ ಸ್ವಾಮಿ‌ ಕಾಣಲಿಲ್ಲ. ಆ ನಾಯರ್ ದೆವ್ವವೇನಾದರೂ ಈ ಹಾಳು ಮನೆಗೆ ಎಳೆದುಕೊಂಡು ಹೋಯಿತೋ ಏನೋ ಎಂದು ಆ ದೊಂದಿಯ ಬೆಳಕಿನೊಂದಿಗೆ ಅಪ್ಪ, ಅಮ್ಮ ಮತ್ತು ಮಂಜಿ ಹೆದರಿ ಹೆದರಿ ಹುಡುಕಾಟ ನಡೆಸತೊಡಗಿದರು. ಮಂಜಿಗೆ ಆ ಕೋಣೆಯ ಮೂಲೆಯಲ್ಲಿ ಹಿಸ್ ಹಿಸ್ ಎಂದು ಶಬ್ದ ಬರುತ್ತಿದೆ. ಆ ಮಸುಕು ಕತ್ತಲಲ್ಲಿ ಸ್ವಾಮಿಯ ದೇಹದ ಮೇಲೆ ಎರಡು ಬೆಳ್ಳಗಿನ ಆಕಾರಗಳು ಎರಗಿ ರಕ್ತ ಹೀರುತ್ತಿವೆ. ಇದನ್ನು ನೋಡಿದ ಮಂಜಿ “ಅಮ್ಮ…. ಅಪ್ಪ… ಇಲ್ಲಿ‌ ಬನ್ನಿ. ದೆವ್ವಗಳು ಸ್ವಾಮಿಯ ಮೇಲೆರಗಿ ರಕ್ತ ಕುಡಿತಿದಾವೆ” ಎಂದು ಜೋರಾಗಿ ಅರಚತೊಡಗಿದಳು.

ಅವರಮ್ಮ ಟಪ್ ಎಂದು ಅವಳ ಬೆನ್ನ ಮೇಲೆ ಗುದ್ದಿ “ಏಯ್ ಸುಮ್ನೆ ಮಲಕೊಳ್ಳೆ ಮಂಜಿ. ಕನಸಲ್ಲಿ ದೆವ್ವ ಗಿವ್ವ ಕಂಡಿ ಏನು? ತಿರುಗಿ ಮಲ್ಕ ಸುಮ್ಮನೆ” ಎಂದು, ಬೆನ್ನಿಗೆ ಮತ್ತೊಂದು ಗುದ್ದಿದಳು. ಆಕೆ ಹಾಸಿಗೆ ಮೇಲೆ ನಡುಗುತ್ತಲೆ ಕಣ್ಣು ಬಿಟ್ಟು ನೋಡಿದಳು. ಸ್ವಾಮಿ‌ ಪಕ್ಕದಲ್ಲೆ ಮಲಗಿ ನಿದ್ದೆ ಮಾಡುತಿದ್ದ. ಮಂಜಿ ಒಮ್ಮೆ ತನ್ನನ್ನು ತಾನೆ ಚಿವುಟಿಕೊಂಡು ನೋಡಿದಳು. “ಓ ನಾನಿಲ್ಲಿವರೆಗೆ ಕಂಡಿದ್ದು ಕನಸು” ಎಂದು ಹೊರಳಿ ಮಲಗಿದಳು. ಆದರೆ ಅವಳ ಮನದಲ್ಲಿನ ಹೆದರಿಕೆ ಮಾತ್ರ ಕಡಿಮೆ ಆಗಿರಲಿಲ್ಲ.

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: