ಹಿಟ್ಟಿನ ಪಲ್ಯ (ಹಿಟ್ ಪಲ್ಯ, ನೆಂಕಿಟ್ಟು)

ಮಾರಿಸನ್ ಮನೋಹರ್.

ಹಿಟ್ಟಿನ ಪಲ್ಯ, ಹಿಟ್ ಪಲ್ಯ, ನೆಂಕಿಟ್ಟು

ಹಿಟ್ಟಿನ ಪಲ್ಯ : ಇದಕ್ಕೆ ‘ನೆಂಕಿಟ್ಟು’ ಅನ್ನುವ ತುಂಬಾ ಹಳೆಯ ಹೆಸರು ಇದೆ, ನೆಂಕಿ ಅನ್ನುವ ಕಾಳಿನ ಹಿಟ್ಟನ್ನು ಬಳಸುತ್ತಿದ್ದರು, ಈಗ ಅದರ ಜಾಗದಲ್ಲಿ ಕಡಲೆಹಿಟ್ಟು ಬಳಸುತ್ತಾರೆ

ಏನೇನು ಬೇಕು:

ಕಡಲೆಹಿಟ್ಟು – 3 ಟೀ ಚಮಚ
ಕಾರ – 1 ಟೀ ಚಮಚ
ಶುಂಟಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಚಮಚ
ಅರಿಶಿಣ – ಅರ‍್ದ ಟೀ ಚಮಚ
ಕೊತ್ತಂಬರಿ – ಅರ‍್ದ ಕಟ್ಟು
ಎಣ್ಣೆ – 100 ಗ್ರಾಂ
ಸಾಸಿವೆ – ಅರ‍್ದ ಟೀ ಚಮಚಕ್ಕಿಂತ ಕಡಿಮೆ
ಜೀರಿಗೆ – ಅರ‍್ದ ಟೀಚಮಚಕ್ಕಿಂತ ಕಡಿಮೆ
ಕರಿಬೇವು
ಉಳ್ಳಾಗಡ್ಡಿ(ಈರುಳ್ಳಿ)
ಉಪ್ಪು ರುಚಿಗೆ ತಕ್ಕಶ್ಟು
ಹುಣಸೆಹಣ್ಣು

ಮಾಡುವ ಬಗೆ:

ಅರ‍್ದ ಗಂಟೆ ಮೊದಲೇ ಹುಣಸೆಹಣ್ಣು ನೆನೆಸಿಟ್ಟುಕೊಂಡು, ಬಳಿಕ ಅದರ ಹುಳಿ ತೆಗೆದು ಇಡಬೇಕು. ಬಾಣಲೆ/ಚರಿಗೆ/ಬೋಗುಣಿಯನ್ನು ಗ್ಯಾಸ್ ಒಲೆಯ ಮೇಲೆ ಏರಿಸಿ ಕಾಯಲು ಬಿಡಿ. ಕಾದ ಮೇಲೆ ಒಂದು ಸಾರಿನ ಚಮಚದಶ್ಟು ಎಣ್ಣೆ ಹಾಕಬೇಕು (ಈ ಹಿಟ್ಟುಪಲ್ಯಕ್ಕೆ ಹೆಚ್ಚು ಎಣ್ಣೆ ಹಾಕಿದರೆ ರುಚಿ ಚೆನ್ನಾಗಿರುತ್ತದೆ). ಅದರಲ್ಲಿ ಸಾಸಿವೆ ಜೀರಿಗೆ ಹಾಕಿ ಸಿಡಿಸಿ. ಚಟಪಟ ಸದ್ದು ನಿಂತ ತಕ್ಶಣ ಕೊಯ್ದಿಟ್ಟುಕೊಂಡ ಈರುಳ್ಳಿ ಹಾಕಿ, ಬಂಗಾರ-ಕಂದು ಬಣ್ಣ ಬರುವವರೆಗೆ ಬೇಯಿಸಬೇಕು.

ಈಗ ಅದಕ್ಕೆ ಶುಂಟಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ಸಲ್ಪ ಹೊತ್ತು ಬೇಯಿಸಿದರೆ ಒಗ್ಗರಣೆ ಗಮ ಎರಡುಪಟ್ಟು ಹೆಚ್ಚಾಗುತ್ತದೆ!. ಈಗ ಗ್ಯಾಸಿನ ಉರಿಯನ್ನು ಅರ‍್ದಕ್ಕೆ ತಗ್ಗಿಸಿ ಕಾರ-ಅರಿಶಿಣ ಹಾಕಿ ಲಗುಬಗೆಯಿಂದ ಹುಟ್ಟು ಆಡಿಸಬೇಕು (ಇಲ್ಲದಿದ್ದರೆ ಸೀದುಹೋಗುತ್ತದೆ). ಒಂದು ವೇಳೆ ಹೀಗೆ ಒಗ್ಗರಣೆಯಲ್ಲಿ ಕಾರ-ಅರಿಶಿಣ ಹಾಕಿ ಬಗಾರ್ ಕೊಡುವುದು ಗೊತ್ತಿಲ್ಲ ಅಂದರೆ ಬಾಣಲೆಯನ್ನು ಒಲೆಯಿಂದ ಕೆಳಗೆ ಇಳಿಸಿಕೊಂಡು ಕಾರ-ಅರಿಶಿಣವನ್ನು ಹಾಕಿ ಆಮೇಲೆ ಮತ್ತೆ ಒಲೆಯ ಮೇಲೆ ಇಡಿ. ಕಾರ-ಅರಿಶಿಣ ಹಾಕಿದ ಮೇಲೆ ತಡಮಾಡದೇ ಹುಳಿರಸ ಒಗ್ಗರಣೆಗೆ ಹೊಯ್ಯಬೇಕು. ಈಗ ರುಚಿಗೆ ತಕ್ಕಶ್ಟು ಉಪ್ಪು ಹಾಕಿ. ಈಗ ಅರ‍್ದ ಕೆಲಸ ಮುಗಿದ ಹಾಗೆ.

ಒಂದು ಬಟ್ಟಲು ಇಲ್ಲವೇ ಮತ್ತೊಂದು ಪಾತ್ರೆಯಲ್ಲಿ ಅರ‍್ದ ಗ್ಲಾಸು ನೀರು ಹಾಕಿಕೊಂಡು ಅದಕ್ಕೆ ಕಡಲೆಹಿಟ್ಟು ಹಾಕಿ ಕಲಸಬೇಕು. ಗಮನಿಸಿ, ಕಡಲೆ ಹಿಟ್ಟಿನ ಪ್ರಮಾಣದ ಮೇಲೆಯೇ ಹಿಟ್ಟಿನ ಪಲ್ಯ ಗಟ್ಟಿ/ತೆಳು ಆಗುತ್ತದೆ, ಬಡಗಣ ಕರ‍್ನಾಟಕದ ಕೆಲವು ಕಡೆ ಇದನ್ನು ತೆಳುವಾಗಿ ಮಾಡುತ್ತಾರೆ. ಕಲಬುರಗಿ,ಯಾದಗಿರಿ,ಕೊಪ್ಪಳದ ಕಡೆ ಗಟ್ಟಿಯಾಗಿಯೂ ಕಾರವಾಗಿಯೂ ಮಾಡುತ್ತಾರೆ.

ಇಶ್ಟರಲ್ಲಿಯೇ ಹುಳಿರಸಕ್ಕೆ ಉಕ್ಕು ಬಂದಿರುತ್ತದೆ (ಅನ್ನ ಮಾಡುವಾಗ ಬರುವ ಕುದಿಗೆ ‘ಎಸರು’ ಅನ್ನುತ್ತಾರೆ, ಸಾರಿಗೆ/ಹಾಲಿಗೆ/ಪಾಯಸಕ್ಕೆ/ಹುಗ್ಗಿಗೆ ಬರುವ ಕುದಿಯನ್ನು ‘ಉಕ್ಕು’ ಅನ್ನುತ್ತಾರೆ). ಆಗ, ಹಿಟ್ಟಿನ ಪಲ್ಯ ತೆಳುವಾಗಿರಬೇಕೆಂದರೆ ಒಂದೂವರೆ ಗ್ಲಾಸು ನೀರು, ಗಟ್ಟಿಯಾಗಿರಬೇಕೆಂದರೆ ಒಂದು ಗ್ಲಾಸು ನೀರು ಹಾಕಬೇಕು. ನೀರು ಹಾಕಿದ ಮೇಲೆ ಕುದಿ ಬರುತ್ತದೆ. ಆಗ ಕಲಸಿಟ್ಟುಕೊಂಡ ಕಡಲೆಹಿಟ್ಟು ಅದಕ್ಕೆ ಹಾಕಿ ಗಂಟಾಗದಂತೆ ತಿರುವಿ, ಕೊತ್ತಂಬರಿ ಕರಿಬೇವು ಸೇರಿಸಿ, ಗ್ಯಾಸಿನ ಉರಿ ಸಿಮ್ ಗೆ ತಂದಿಟ್ಟು ಐದು ನಿಮಿಶ ಕುದಿಸಿದರೆ ಹಿಟ್ಟಿನ ಪಲ್ಯ ರೆಡಿ!

ಇದು ಬಿಸಿ ರೊಟ್ಟಿ, ಬಿಸಿ ಪೂರಿ, ಬಿಸಿ ಚಪಾತಿ, ಬಿಸಿ ಅನ್ನದ ಜೊತೆ ಒಳ್ಳೆ ಜೋಡಿ!

( ಸೂಚನೆ: ಪಲ್ಯೆಯು ಗಟ್ಟಿಯಾಗುತ್ತ ಇದೆ ಅಂತ ಅನ್ನಿಸಿದರೆ ಸ್ವಲ್ಪ ನೀರು ಹಾಕಿ ಕುದಿಸಿ, ತೆಳುವಾಗುತ್ತ ಇದೆ ಅಂತ ಅನ್ನಿಸಿದರೆ ಸ್ವಲ್ಪ ಹಿಟ್ಟು ಹಾಕಿ ಕುದಿಸಿ, ಹೆದರಬೇಡಿ 🙂 )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: