ಬೌಸ್ಟ್ರೋಪೆಡನ್ – ವಿಚಿತ್ರ ಬರವಣಿಗೆಯ ಬಗೆ

– ಕೆ.ವಿ.ಶಶಿದರ.

ಬೌಸ್ಟ್ರೋಪೆಡನ್ boustrophedon

ಬಾಶೆಗಳು ಯಾವುದೇ ಆಗಲಿ, ಅವುಗಳನ್ನು ಸರಿಯಾದ ರೀತಿಯಲ್ಲಿ ದಾಕಲಿಸದೇ ಹೋದಲ್ಲಿ ಕಾಲಕ್ರಮೇಣ ಅದು ನಶಿಸಿ ಹೋಗುವುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ ದಾಕಲಿಸಲು ಹುಟ್ಟಿಕೊಂಡಿದ್ದೇ ಬಾಶೆಯ ದ್ರುಶ್ಯ ಹಾಗೂ ಸ್ಪರ‍್ಶ ರೂಪ. ಇದು ಬಾಶೆಯನ್ನು ಪ್ರ್ರತಿನಿದಿಸುವ ಒಂದು ವಿದಾನವೂ ಹೌದು. ಬಾಯಿಂದ ಹೊರಹೊಮ್ಮುವ ಶಬ್ದವನ್ನು ಸಾಂಕೇತಿಕವಾಗಿ ಪ್ರತಿನಿದಿಸುವುದೇ ಬರವಣಿಗೆ.

ಶಬ್ದದ ಹಸ್ತಕ್ಶೇಪವಿಲ್ಲದೆ ನಿಕರ ಮಾಹಿತಿಯನ್ನು ಮರುಪಡೆಯಲು ಸಾದ್ಯವಾಗುವ ಹಾಗೂ ಉಚ್ಚಾರಣೆಯನ್ನು ಪ್ರತಿನಿದಿಸುವ ಶಾಶ್ವತ ಗುರುತೇ ಬರವಣಿಗೆ, ಬಾಶೆಯ ಲಿಪಿ. ದಿನ ಕಳೆದಂತೆ ಬರವಣಿಗೆಯಲ್ಲಿ ಸಾಕಶ್ಟು ಸುದಾರಣೆಗಳಾಗಿವೆ. ಲಿಪಿ ದ್ರುಶ್ಯ ಮಾದ್ಯಮವಾದರೆ, ಕಣ್ಣಿಲ್ಲದವರಿಗೆ ‘ಬ್ರೈಲ್ ಲಿಪಿ’ ಅನಾವರಣಗೊಂಡಿತು. ಅಂದರೆ ಸ್ಪರ‍್ಶದಿಂದ ಗುರುತಿಸಬಹುದಾದ ಬರವಣಿಗೆ. ಮಾತುಗಳನ್ನು ಬದಲಾಯಿಸಬಹುದು. ಆದರೆ ಬರವಣಿಗೆ ಶಾಶ್ವತ.

ಲಿಕಿತ ಬಾಶೆಯಲ್ಲಿ ಸಾಕಶ್ಟು ನಿಯಮಗಳಿವೆ. ಅಲ್ಪ ವಿರಾಮ, ಪೂರ‍್ಣವಿರಾಮ, ಅಡ್ಡ ಗೆರೆ, ಕೋಲನ್, ಸೆಮಿ ಕೋಲನ್, ಪ್ರಶ್ನಾರ‍್ತಕ ಚಿಹ್ನೆ ಆಶ್ಚರ‍್ಯ ಸೂಚಕ ಇವೇ ಮುಂತಾದ ಚಿಹ್ನೆಗಳ ಉಪಯೋಗ, ವಾಕ್ಯಗಳ ರಚನೆಯಲ್ಲಿ ಅನುಸರಿಸಬೇಕಾದ್ದು ಬಹಳ ಮುಕ್ಯ. ಇಲ್ಲವಾದಲ್ಲಿ ಹೇಳಬೇಕೆಂದಿರುವ ವಿಶಯ ಅಪಾರ‍್ತವಾಗುತ್ತೆ. ಬರೆಯುವ ಬಾಶೆಗೆ ಇತ್ತೀಚಿನ ಸೇರ‍್ಪಡೆಯಂದರೆ ಎಸ್‍ಎಂಎಸ್ ಬಾಶೆ. ಇದು ಆರಂಬವಾಗಿದ್ದು ಮೊಬೈಲುಗಳ ಅವಿಶ್ಕಾರದ ನಂತರದ ದಿನಗಳಲ್ಲಿ. ಇದರಲ್ಲಿ ಬಹುತೇಕ ಚಿಹ್ನೆಗಳಿಗೆ ಕೊಕ್ ಕೊಡಲಾಗಿದೆ.

‘ಐಕಿಕ’ ಹಾಗೂ ‘ಕಕಿಐ’ ಬಗೆ ಎಂದರೇನು?

ಬರವಣಿಗೆಯ ಬಾಶೆಯಲ್ಲಿ ಬಹಳಶ್ಟು ಲಿಪಿಗಳು ಪ್ರಾರಂಬವಾಗುವುದು ಹಾಳೆಯ ಎಡ ಬದಿಯಿಂದ. ಮುಂದುವರೆದು ಬಲಬದಿಯ ಕೊನೆಯಲ್ಲಿ ಮುಗಿದು ಮತ್ತೆ ಎರಡನೆ ಸಾಲು ಸಹ ಎಡದಿಂದಲೇ ಪ್ರಾರಂಬವಾಗುತ್ತದೆ. ಇದನ್ನು ಐಕಿಕ ಅನ್ನುತ್ತಾರೆ. ಅರೆಬಿಕ್, ಪರ‍್ಶಿಯನ್ ಮತ್ತು ಹೀಬ್ರೂ ಬಾಶೆಯನ್ನು ಐಕಿಕನ ತದ್ವಿರುದ್ದವಾಗಿ ಬರೆಯುತ್ತಾರೆ. ಇದನ್ನು ಕಕಿಐ ಎನ್ನುತ್ತಾರೆ. ಅಂದರೆ ಬಲ ಬದಿಯಿಂದ ಎಡಕ್ಕೆ.

ಈ ಬರವಣಿಗೆಯ ಬಾಶೆಯಲ್ಲಿ ಅತಿ ವಿಶಿಶ್ಟವಾದದು ಅಜೇರಿ ಬಾಶೆ. ಈ ಬಾಶೆಯನ್ನು ಲ್ಯಾಟಿನ್, ಸಿರಿಲಿಕ್ ಹಾಗೂ ಅರೆಬಿಕ್ ಲಿಪಿಗಳಲ್ಲಿ ಬರೆಯಬಹುದು. ಲ್ಯಾಟಿನ್ ಮತ್ತು ಸಿರಿಲಿಕ್ ಲಿಪಿಯಲ್ಲಿ ಬರೆಯುವಾಗ ಐಕಿಕ ರೀತಿಯಲ್ಲೂ, ಅರೆಬಿಕ್ ಲಿಪಿಯಲ್ಲಿ ಬರೆಯುವಾಗ ಕಕಿಐ ರೀತಿಯಲ್ಲೂ ಬರೆಯುವುದು ವಿಶೇಶ.

ಮೇಲಿನಿಂದ ಕೆಳಕ್ಕೆ ಬರೆಯುವುದು ಕೆಲವು ಬಾಶೆಗಳಲ್ಲಿ ಚಾಲ್ತಿಯಲ್ಲಿದೆ. ಜಪಾನೀಸ್, ಚೈನೀಸ್, ಕೊರಿಯನ್ ಬಾಶೆಗಳನ್ನು ಯಾವುದೇ ಬದಿಯಿಂದ/ದಿಕ್ಕಿನಿಂದ ಪ್ರಾರಂಬಿಸಿ ಬರೆಯಬಹುದು. ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ, ಲಂಬವಾಗಿ ಮೇಲಿನಿಂದ ಕೆಳಕ್ಕೆ ಹೀಗೆ. ಸಾಮಾನ್ಯ ಬರವಣಿಗೆ ಎಡದಿಂದ ಬಲಕ್ಕೆ ಮಾತ್ರ. ಕೆಲವು ಚೈನೀಸ್ ದಿನ ಪತ್ರಿಕೆಗಳು ಒಂದೇ ಪುಟದಲ್ಲಿ ಈ ಎಲ್ಲಾ ರೀತಿಯ ಬರವಣಿಗೆಯ ದಿಕ್ಕುಗಳನ್ನು ಬಳಸುವುದಿದೆ.

ಉಳುಮೆ ಮಾಡುವ ಹಾಗೆ ಬರೆಯುವ ಒಂದು ಬಗೆ!

ಇವೆಲ್ಲಕ್ಕೂ ಮಿಗಿಲಾದ ವಿಚಿತ್ರ ಬರವಣಿಗೆಯ ಶೈಲಿ ಮತ್ತೊಂದಿದೆ. ಅದೇ ಬೌಸ್ಟ್ರೋಪೆಡನ್. ಗ್ರೀಕ್‍ನಲ್ಲಿ ‘ಬೌಸ್’ ಎಂದರೆ ಎತ್ತು, ‘ಸ್ಟ್ರೋಪ್’ ಎಂದರೆ ತಿರುಗುವುದು ಎಂದರ‍್ತ. ಬಾರತ ರೈತಾಪಿ ಜನರ ದೇಶ. ಆತ ಉಳುಮೆ ಮಾಡುವಾಗ ಹೊಲ/ಗದ್ದೆಯ ಒಂದು ಮೂಲೆಯಿಂದ ಪ್ರಾರಂಬ ಮಾಡಿ ಮತ್ತೊಂದು ತುದಿಗೆ ತಲುಪಿ ನಂತರ ಎತ್ತನ್ನು ಅನಾಮತ್ತಾಗಿ ವಿರುದ್ದ ದಿಕ್ಕಿಗೆ ತಿರುಗಿಸಿ, ಮೊದಲು ಉತ್ತ ಗೆರೆಯ ಪಕ್ಕದಲ್ಲೆ ಉಳುಮೆ ಪ್ರಾಂಬಿಸಿ ಕೊನೆ ತಲುಪುವುದು ರೂಡಿ. ಉಳುಮೆಯ ರೀತಿಯ ಬರವಣಿಗೆಗೆ ಬೌಸ್ಟ್ರೋಪೆಡನ್ ಎನ್ನುತ್ತಾರೆ. ಐಕಿಕ ಮತ್ತು ಕಕಿಐ ಎರಡೂ ರೀತಿಯ ಬರವಣಿಗೆ ಶೈಲಿ ಬೌಸ್ಟ್ರೋಪೆಡನ್ ಬರವಣಿಗೆಯಲ್ಲಿ ಸೇರಿದೆ. ಮೊದಲನೆ ಸಾಲು ಐಕಿಕ ಆದರೆ ಎರಡನೆ ಸಾಲು ಕಕಿಐ. ಇದರಲ್ಲಿ ಅಕ್ಶರಗಳು ಸಹ ಹಿಮ್ಮುಕವಾಗಿರುವುದು ವಿಶೇಶ. ಇಂತಹ ಬರವಣಿಗೆ ಪ್ರಾಚೀನ ಗ್ರೀಕ್ ಶಾಸನಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಗ್ರೀಕ್ ಶಾಸನಗಳಲ್ಲಿ ಮೊದಲ ಸಾಲನ್ನು ಬಹಳ ಸುಲಬವಾಗಿ ಗ್ರಹಿಸಿದರೆ ಎರಡನೆ ಸಾಲು ಕೆಲವೊಮ್ಮೆ ಗ್ರಹಿಸಲು ಬಹಳವೇ ತ್ರಾಸಾಗುತ್ತದೆ. ಇದಕ್ಕೆ ಮೂಲ ಕಾರಣ, ಎರಡನೇ ಸಾಲಿನಲ್ಲಿನ ಲಿಪಿ. ಅದು ಲಿಪಿಯ ಕನ್ನಡಿಯ ಬಿಂಬದಂತೆ ಕಾಣುವುದು. ಕೆಲವೊಂದು ಶಾಸನಗಳಲ್ಲಿ ಎರಡನೇ ಸಾಲಿನಲ್ಲಿನ ಅಕ್ಶರಗಳು ಲಿಪಿಯ ಕನ್ನಡಿಯ ಬಿಂಬ ತಲೆಕೆಳಕಾದಂತೆ ಇರುವುದು ಮತ್ತೊಂದು ವೈಶಿಶ್ಟ್ಯ.

ಬರವಣಿಗೆಯ ಮೂಲಕ ಪ್ರಮುಕ ಆಚಾರ ವಿಚಾರಗಳನ್ನು ದಾಕಲು ಮಾಡಲು ಪ್ರಾರಂಬಿಸಿದ ಮೇಲೆ, ಬರೆಯುವ ರೀತಿ-ನೀತಿಯನ್ನು ವಾಸ್ತವವಾಗಿ ಎಡದಿಂದ ಬಲಕ್ಕೆ ಎಂಬುದನ್ನು ಸಾರ‍್ವತ್ರಿಕವಾಗಿ ವಿಶ್ವಾದ್ಯಂತ ಒಪ್ಪಿಕೊಂಡಿದ್ದೇವೆ. ಈಗಿನ ಬರವಣಿಗೆ ಮತ್ತು ಮುದ್ರಣಕ್ಕೆ ಬೌಸ್ಟ್ರೋಪೆಡನ್ ರೀತಿಯ ಬರವಣಿಗೆಯನ್ನು ಅಳವಡಿಸುವುದು ಬಹಳ ಕಶ್ಟದಾಯಕ ಅನಿಸುತ್ತದಲ್ಲವೆ? ಆದರೆ ಮೊದಲಿಂದಲೂ ಬೌಸ್ಟ್ರೋಪೆಡನ್ ಬರವಣಿಗೆ ರೀತಿ-ನೀತಿಯನ್ನು ಅನುಸರಿಸಿಕೊಂಡು ಬಂದಿದ್ದಲ್ಲಿ ಅದಕ್ಕೆ ತಕ್ಕಂತೆ ಮುದ್ರಣದಲ್ಲಿ ಆವಿಶ್ಕಾರಗಳು ರೂಪುಗೊಳ್ಳುತ್ತಿತ್ತು ಅನಿಸುತ್ತದೆ ಏನಂತೀರಿ?

(ಮಾಹಿತಿ ಸೆಲೆ: smpspeak.com)
(ಚಿತ್ರ ಸೆಲೆ: wiki)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: