ಹಸಿರಿನ ಮಡಿಲಲ್ಲಿರುವ ಸುಂದರ ತಾಣಗಳು!

– ಅಶೋಕ ಪ. ಹೊನಕೇರಿ.

ಬದ್ರಾ ನದಿ Bhadra River

ನಾನು ಹುಟ್ಟಿ ಬೆಳೆದು ದೊಡ್ಡವನಾಗಿ ವಿದ್ಯಾಬ್ಯಾಸ ಮುಗಿಸಿ 23 ವರ‍್ಶಗಳ ಕಾಲ ಉದ್ಯೋಗ ಮಾಡಿದ ಊರು ‘ಅದೇ… ಮಲೆಗಳ ನಾಡು, ಹಸಿರಿನ ಬೀಡು, ಪಶ್ಚಿಮ ಗಟ್ಟಗಳ ಸಾಲು, ಹೆಸರಾಂತ ದೇವಾಲಯಗಳ ತವರೂರು ಚಿಕ್ಕಮಗಳೂರು ಜಿಲ್ಲೆ.

ಚಿಕ್ಕಮಗಳೂರು ಎಂದ ಕೂಡಲೆ ಎಲ್ಲರ ನೆನಪಿಗೆ ಬರುವುದು ಗಮ ಗಮ ಕಾಪಿಯ ತೋಟಗಳ ಸಾಲು ಸಾಲು. ಜೊತೆಗೆ ಸುಂದರ ಟೀ ಎಸ್ಟೇಟ್. ಕಾಪಿ ಟೀ ತೋಟಗಳ ನಡುವಿನ ಸುಂದರ ಬವ್ಯ ಬಂಗಲೆಗಳು. ತೋಟದ ತುಂಬ ಕೂಲಿ ಕಾರ‍್ಮಿಕರು. ಅಲ್ಲಲ್ಲಿ ಅವರ ವಸತಿ ಕೇಂದ್ರಗಳು. ಕಿರಿದಾದ ಅಂಕುಡೊಂಕಾದ ಕರಿ ಟಾರಿನ ರಸ್ತೆಗಳು. ಎಲ್ಲಿ ನೋಡಿದರಲ್ಲಿ ಕಣ್ಮನ ತಣಿಸೊ ಹಸಿರಿನ ಮರಗಿಡಗಳು‌, ಸುಂದರ ಹಕ್ಕಿ ಪಕ್ಕಿಗಳು. ಅಲ್ಲಲ್ಲಿ ಸಣ್ಣ ಸಣ್ಣ ನೀರಿನ ಜರಿಗಳು ತೊರೆಗಳು. ಅಬ್ಬಬ್ಬಾ… ಮಲೆನಾಡಿನ ವೈಬವ ನೋಡಬೇಕೆಂದರೆ ನೀವು ಚಿಕ್ಕಮಗಳೂರಿಗೆ ಬೇಟಿ ಕೊಡಲೆ ಬೇಕು.

ಶ್ರೀ ರೇಣುಕಾಚಾರ‍್ಯರು ಸ್ತಾಪಿಸಿದ ಬಾಳೆಹೊನ್ನೂರಿನ ರಂಬಾಪುರಿ ಪೀಟ!

ನಾನು ಹುಟ್ಟಿ ಬೆಳೆದ ಊರು ಬಾಳೆಹೊನ್ನೂರು ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ 52 ಕಿಲೋ ಮೀಟರ್ ದೂರದಲ್ಲಿದೆ. ‘ಬಾಳೆಹೊನ್ನೂರು’ ಹೆಸರಿಗೆ ತಕ್ಕ ಹಾಗೆ ಇದು ಬಾಳನ್ನು ಹೊನ್ನಾಗಿಸುವಂತಹದ್ದು. ಈ ಊರು ಬೋರ‍್ಗರೆದು ಹರಿವ ಬದ್ರಾ ನದಿಯ ತಟದಲ್ಲಿದೆ. ಈ ಊರಿನಲ್ಲಿ ವೀರ ಶೈವರ ಶ್ರದ್ದಾ ಕೇಂದ್ರವಾದ ಪಂಚಪೀಟಗಳಲ್ಲಿ ಪ್ರಮುಕ ಪೀಟವಾದ ರಂಬಾಪುರಿ ಪೀಟವಿದೆ. ಇದನ್ನು ವೀರಶೈವ ಗುರು ರೇಣುಕಾಚಾರ‍್ಯರು ಸ್ತಾಪಿಸಿದ್ದಾರೆ. ಇಲ್ಲಿ ಹೋಳಿಹುಣ್ಣಿಮೆಗೂ ನಾಲ್ಕು ದಿನ ಮುಂಚೆ, ಜಾತ್ರೆ ಬಹಳ ವಿಜ್ರುಂಬಣೆಯಿಂದ ನೆರವೇರುತ್ತದೆ. ಉತ್ತರ ಕರ‍್ನಾಟಕ ಬಾಗದ ಬಕ್ತರು ಜಾತ್ರೆಯ ಸಮಯದಲ್ಲಿ ಹೆಚ್ಚಿನ ಸಂಕ್ಯೆಯಲ್ಲಿ ಬೇಟಿ ಕೊಡುತ್ತಾರೆ.

ಕಣ್ಮನ ಸೆಳೆಯುವ ಕಾಂಡ್ಯ!

ಕಾಂಡ್ಯ Kandya

ಬಾಳೆಹೊನ್ನೂರಿನಿಂದ 8 ಕಿಲೋಮೀಟರ್ ದೂರದಲ್ಲಿ ‘ಕಾಂಡ್ಯ’ ಎಂಬ ಗ್ರಾಮದಲ್ಲಿ ಪುರಾತನವಾದ ಮಾರ‍್ಕಾಂಡೇಯ ದೇವಾಲಯವಿದೆ. ಇಲ್ಲಿ ಹಳೆಯ ಕಾಲದ ಶಿವಲಿಂಗಕ್ಕೆ ಪೂಜೆ ಸಲ್ಲುತ್ತದೆ. ಈ ದೇವಾಲಯದ ಹಿಂದೆ ಬದ್ರೆ ಬೋರ‍್ಗರೆದು ಹರಿಯುತ್ತಾಳೆ. ಈ ಬದ್ರೆಯಲ್ಲಿ ಈಜುವುದು ದುರ‍್ಲಬ ಏಕೆಂದರೆ ಅಲ್ಲಲ್ಲಿ ಸುಳಿಗಳು ಇದ್ದು. ಈಜಲು ಹೋದವರು ಪ್ರಾಣ ಸಂಕಟಕ್ಕೆ ಸಿಲುಕುವ ಬಯವಿದೆ. ಇಲ್ಲಿಂದ ಒಂದೆರಡು ಕಿಲೋಮೀಟರ್ ಅಂತರದಲ್ಲಿ ಕುದುರೆ ಅಬ್ಬಿ ಪಾಲ್ಸ್ ಇದೆ. ಈ ಜಾಗ ಬದ್ರೆಯ ಹರಿವಿನ ನಡುಗಡ್ಡೆಯಂತಿದ್ದು ಅಲ್ಲಲ್ಲಿ ಬಂಡೆಗಲ್ಲುಗಳ ದೊಡ್ಡ ದೊಡ್ಡ ಆಳವಿರುವ ಕುಳಿಗಳಿವೆ. ಆ ಕುಳಿಗಳಲ್ಲಿ ನೀರು ತುಂಬಿರುತ್ತದೆ. ಮೈಮರೆತು ಓಡಾಡಿದರೆ ಆ ಕುಳಿಯಲ್ಲಿ ಬೀಳುವ ಅಪಾಯವಿದೆ. ಅಲ್ಲಲ್ಲಿ ಬಂಡೆಗಲ್ಲಿನ ಬಾತ್ ಟಬ್ ಸೈಸರ‍್ಗಿಕವಾಗಿ ನಿರ‍್ಮಾಣಗೊಂಡಿದ್ದು ಸಣ್ಣ ನೀರಿನ ಹರಿವು ಇರುತ್ತದೆ ಆ ಬಾತ್ ಟಬ್ ನಲ್ಲಿ‌ ದೇಹ ಮುಳುಗಿಸಿ ಕಾಲು ಚಾಚಿ ಕುಳಿತುಕೊಳ್ಳಬಹುದು.

ನೀರು ಕೆಳಕ್ಕೆ ದುಮುಕುವ‌ ಆಳ ಬಹಳವಿಲ್ಲದಿದ್ದರು ಅತೀ ರೌದ್ರತೆಯಿಂದ ವಿಸ್ತಾರಕ್ಕೆ ದುಮುಕುತ್ತದೆ. ಆ ದುಮುಕುವ ಒತ್ತಡಕ್ಕೆ ಬಂಡೆಗಳು ಚಿತ್ರವಿಚಿತ್ರ ಆಕಾರದಲ್ಲಿ ಕೊರಕಲುಗಳಾಗಿ ದುಮುಕುವ ನೀರು ಟರ‍್ಬೈನ್ ನಲ್ಲಿ ಗಿರಕಿ ಹೊಡೆದು ಹೊರಗುರುಳುವಂತೆ ದುಮ್ಮಿಕ್ಕುತ್ತವೆ. ಈ ಸಣ್ಣ ಪಾಲ್ಸ್ ನೇರವಾಗಿ ನೋಡಲು ಹರಸಾಹಸ ಪಡಬೇಕಾಗಿರುವುದರಿಂದ ಒಂದು ಬದಿಯ ನೋಟ ಮಾತ್ರ ಸಿಗುತ್ತಿತ್ತು. ಇದೀಗ ಕುದುರೆ ಅಬ್ಬಿ ಜಾಗವು ಮೀಸಲು ಅರಣ್ಯ ಆಗಿರುವುದರಿಂದ ಪ್ರವಾಸಿಗರಿಗೆ ನೋಡಲು ಬಿಡುವುದಿಲ್ಲ. ಆದರೆ ಕಾಂಡ್ಯ ದೇವಸ್ತಾನದ ಸುತ್ತಲಿನ ರಮಣೀಯ ಜಾಗವನ್ನು ನೋಡಲು ಯಾವುದೇ ತೊಡಕಿಲ್ಲ. ಈ ಸ್ತಳದಲ್ಲಿ ಗಲೀಜು ಮಾಡುವವರ ಮೇಲೆ ಕಸ ಬಿಸಾಡುವವರ ಮೇಲೆ ಕಣ್ಗಾವಲಿಟ್ಟಿರುತ್ತಾರೆ. ಸ್ವಚ್ಚತೆ ಬಗ್ಗೆ ನಿಗಾ ವಹಿಸುವುದು ಅಗತ್ಯ. ಸಂಪೂರ‍್ಣ ನಿಸರ‍್ಗದಲ್ಲಿ ಮಜವಾಗಿ ಕಳೆಯಲು ನಮ್ಮೂರಿನ ಈ ತಾಣಗಳು ಅತ್ಯುತ್ತಮ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: