ಪೆರೋ ದ್ವೀಪದ ಈಡಿ ಪುಟ್ಬಾಲ್ ಕ್ರೀಡಾಂಗಣ

– ಕೆ.ವಿ.ಶಶಿದರ.

Faroe ಫೆರೋ

ಉತ್ತರ ಅಟ್ಲಾಂಟಿಕ್ ಸಾಗರದಲ್ಲಿನ ಹದಿನೆಂಟು ದ್ವೀಪಗಳ ಸಮೂಹವೇ ಪೆರೋ ದ್ವೀಪಗಳು, ಇವು ಐಸ್ ಲ್ಯಾಂಡ್ ಮತ್ತು ನಾರ‍್ವೆ ದ್ವೀಪಗಳ ನಡುವೆ ಇವೆ. ಈ ದ್ವೀಪಗಳಲ್ಲಿನ ಅತಿ ದೊಡ್ಡ ಕ್ರೀಡಾ ಚಟುವಟಿಕೆ ಎಂದರೆ ಅದು ಪುಟ್ ಬಾಲ್. ಹದಿನೆಂಟು ದ್ವೀಪಗಳ ಒಟ್ಟು ಜನಸಂಕ್ಯೆ 50,000 ಮಾತ್ರ. ಈ ಜನಸಂಕ್ಯೆಯಲ್ಲಿ ಶೇಕಡಾ 14ರಶ್ಟು ಅಂದರೆ 7000 ನೋಂದಾಯಿತ ಪುಟ್ ಬಾಲ್ ಆಟಗಾರರಿದ್ದಾರೆ. ಅಂದರೆ ಬಹುಪಾಲು ಯುವಕರಿಗೆ ಇದು ಅರೆಕಾಲಿಕ ವ್ರುತ್ತಿ.

ಪೆರೋ ದ್ವೀಪದಲ್ಲಿನ ಪುಟ್ ಬಾಲ್ ಪ್ರೀಮಿಯರ್ ಲೀಗ್‍ನಲ್ಲಿ ಒಟ್ಟಾರೆ ಹತ್ತು ತಂಡಗಳು ಮುಕಾಮುಕಿಯಾಗುತ್ತವೆ. ಬಾರತದ ಹಾಕಿ ಆಟದಂತೆ, ಇದು ಅಲ್ಲಿನ ರಾಶ್ಟ್ರೀಯ ಕ್ರೀಡೆ. ಅಲ್ಲಿನ ಜನರ ಜೀವನದ ಒಂದು ಅವಿಬಾಜ್ಯ ಅಂಗವೂ ಹೌದು. ಪ್ರಸ್ತುತ ಯುಇಎಪ್‍ಏ( ಯುರೋಪಿಯನ್ ಪುಟ್ಬಾಲ್ ಅಸೋಸಿಯೇಶನ್ಸ್) ಲೀಗ್‍ನ ಗುಣಾಂಕದಲ್ಲಿ ಪೆರೋ ದ್ವೀಪಗಳು 51ನೇ ಸ್ತಾನದಲ್ಲಿವೆ. ಹಾಗಾಗಿ ಇದಕ್ಕೆ ಯುಇಎಪ್‍ಏ ನ ಪೂರ‍್ಣ ಸದಸ್ಯತ್ವ ನೀಡಲಾಗಿದೆ. ಪೆರೋ ದ್ವೀಪ ಸಮೂಹದ ರಾಶ್ಟ್ರೀಯ ಪುಟ್ಬಾಲ್ ತಂಡವು ಯೂರೋಪಿಯನ್ ಪುಟ್ಬಾಲ್ ಚಾಂಪಿಯನ್‍ಶಿಪ್‍ನ ಅರ‍್ಹತಾ ಸ್ಪರ‍್ದೆಯಲ್ಲಿ ಬಾಗವಹಿಸುತ್ತದೆ. ಒಟ್ಟಾರೆ ಜನಸಂಕ್ಯೆ ಅರ‍್ದ ಲಕ್ಶದಶ್ಟಿರುವ ಈ ದ್ವೀಪಸಮೂಹ ಯೂರೋದ ಅರ‍್ಹತಾ ಸುತ್ತಿಗೆ ಅರ‍್ಹವಾಗಿರುವುದು ನಿಜಕ್ಕೂ ಮೆಚ್ಚುವಂತಹುದು.

ಗ್ರೀಸ್ ದೇಶವನ್ನು ಪುಟ್ಬಾಲ್‍ನಲ್ಲಿ ಸೋಲಿಸಿದ್ದ ಪೆರೋ ತಂಡ!

ಯೂರೋಪಿಯನ್ ಪುಟ್ಬಾಲ್ ಅಸೋಸಿಯೇಶನ್‍ನ ಪೂರ‍್ಣ ಸದಸ್ಯತ್ವದ ಜೊತೆಗೆ ಪೆರೋ ದ್ವೀಪವು ಪಿಪಾದ ಪೂರ‍್ಣ ಸದಸ್ಯತ್ವವನ್ನು ಸಹ ಹೊಂದಿದೆ. ರಾಶ್ಟ್ರೀಯ ತಂಡವು ಪಿಪಾ ವಿಶ್ವಕಪ್ ಪಂದ್ಯಾವಳಿಯ ಅರ‍್ಹತಾ ಸುತ್ತಿನಲ್ಲೂ ಕೂಡ ಸ್ವರ‍್ದಿಸುತ್ತದೆ. ಯೂರೋ 1992ರ ಅರ‍್ಹತಾ ಸುತ್ತಿನಲ್ಲಿ ಆಸ್ಟ್ರೇಲಿಯಾವನ್ನು 1-0 ಅಂತರದಲ್ಲಿ ಸೋಲಿಸಿ ಮೊದಲ ಸ್ಪರ‍್ದಾತ್ಮಕ ಪಂದ್ಯ ಗೆದ್ದಿದ್ದು ಅದರ ಮಹತ್ತರ ಸಾದನೆ. 2014ರಲ್ಲಿ ಗ್ರೀಸ್ ದೇಶದ ಮೇಲೆ 1-0 ಅಂತರದಲ್ಲಿ ಗೆದ್ದಿದ್ದು ‘ಗ್ರೀಸ್‍ಗೆ ಇದು ಅತ್ಯಂತ ಆಗಾತಕಾರಿ ಸೋಲು’ ಎಂದು ಬಣ್ಣಿಸಲಾಗಿದೆ. ಪಿಪಾ ರ‍್ಯಾಂಕಿಂಗ್‍ನಲ್ಲಿ ಇವೆರಡಕ್ಕೂ 169 ಸ್ತಾನಗಳ ವ್ಯತ್ಯಾಸ ಇತ್ತು. ಮತ್ತೆ 2015ರಲ್ಲಿ ಗ್ರೀಸ್ ಪುಟ್ಬಾಲ್ ತಂಡವನ್ನು 2-1 ಅಂತರದಿಂದ ಸೋಲಿಸಿ ಪಿಪಾ ಶ್ರೇಯಾಂಕದಲ್ಲಿ ಬಹಳಶ್ಟು ಮೇಲೇರಿತು.

ಪುಟ್ಬಾಲ್‍ನಲ್ಲಿ ಇಶ್ಟೆಲ್ಲಾ ಪ್ರಗತಿ ಸಾದಿಸಿದ ಮೇಲೆ, ಅದನ್ನೇ ಆರಾದಿಸುವ ಜನರಿರುವ ದ್ವೀಪದಲ್ಲಿ, ಅದಕ್ಕಾಗಿಯೇ ಒಂದು ಸುಂದರ ಕ್ರೀಡಾಂಗಣದ ಅವಶ್ಯಕತೆ ಇದೆಯಲ್ಲವೆ?

ಪೆರೋ ದ್ವೀಪ ಸಮೂಹದಲ್ಲಿರುವ ಇಸ್ಟುರಾಯ್ ದ್ವೀಪದ ವಾಯುವ್ಯ ತುದಿಯಲ್ಲಿರುವ ಈಡಿ ಪಟ್ಟಣದಲ್ಲಿ ಅತ್ಯಂತ ನಯನ ಮನೋಹರವಾದ ಪುಟ್ಬಾಲ್ ಕ್ರೀಡಾಂಗಣ ಇದೆ. ಈ ಕ್ರೀಡಾಂಗಣ ಹಬ್ಬಿರುವುದು ಅಟ್ಲಾಂಟಿಕ್ ಮಹಾಸಾಗರದದಿಂದ ಕೆಲವೇ ಮೀಟರ್‍ಗಳಶ್ಟು ದೂರದಲ್ಲಿ. ಎರಡು ಬದಿಯಲ್ಲಿ ಸಾಗರ ಮತ್ತು ಸಾಗರದ ಹಿನ್ನೀರಿದ್ದರೆ ಮತ್ತೆರಡು ಬದಿಯಲ್ಲಿ ಬೂಮಿಯಿದೆ. ಹಾಗಾಗಿ ಪುಟ್ಬಾಲ್ ಪಂದ್ಯಗಳನ್ನು ನೋಡಲು ಬರುವ ಅಬಿಮಾನಿಗಳಿಗೆ ಕ್ರೀಡಾಂಗಣದ ಎರಡು ಬದಿಯಲ್ಲಿ ಮಾತ್ರ ನಿಂತು ನೋಡಲು ಅವಕಾಶವಿದೆ.

ಆಟದ ರೋಚಕ ಸಮಯದಲ್ಲಿ ಆಟಗಾರರು ಕೊಂಚ ಬಿರುಸಾಗಿ ಪುಟ್ಬಾಲ್ ಒದ್ದರೆ ಅದು ನೇರ ಅಟ್ಲಾಂಟಿಕ್ ಸಾಗರ ತಲುಪುವುದು ಕಚಿತ. ಇದು ಉತ್ಪ್ರೇಕ್ಶೆಯಲ್ಲ. ಸತ್ಯ ಸಂಗತಿ. ಸಾಗರಕ್ಕೆ ಅಶ್ಟು ಸನಿಹದಲ್ಲಿದೆ ಈ ಕ್ರೀಡಾಂಗಣ. ಪೆರೋ ದ್ವೀಪ ಸಮೂಹದ ಅರೆ-ವ್ರುತ್ತಿಪರ ಪುಟ್ಬಾಲ್ ತಂಡಗಳ ಪಂದ್ಯಗಳನ್ನು ಈ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತದೆ. ಪಂದ್ಯಗಳು ನಡೆಯುವ ಸಮಯದಲ್ಲಿ ಬಹುತೇಕ ಎಲ್ಲರೂ ಕ್ರೀಡಾಂಗಣದಲ್ಲಿ ನೆರೆದು ತಮ್ಮ ತಮ್ಮ ಇಶ್ಟದ ತಂಡಗಳನ್ನು ಹುರಿದುಂಬಿಸುತ್ತಾರೆ. ಸಾಂಪ್ರದಾಯಿಕ ನ್ರುತ್ಯಕ್ಕೂ ಅಲ್ಲಿ ಅವಕಾಶವುಂಟು. ಇಶ್ಟೆಲ್ಲಾ ಇರುವ ಈ ಪಟ್ಟಣದ ಇತ್ತೀಚಿನ ಜನಸಂಕ್ಯೆ ಕೇವಲ 669 ಮಾತ್ರ!

(ಮಾಹಿತಿ ಮತ್ತು ಚಿತ್ರ ಸೆಲೆ: lonelyplanet.com fringgle.com guidetofaroeislands.fo )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಮಾರಿಸನ್ ಮನೋಹರ್ says:

    ಆಟದಂಗಳ ತುಂಬ ಅದ್ಬುತವಾಗಿದೆ.

ಅನಿಸಿಕೆ ಬರೆಯಿರಿ: