ಅಮ್ಮ ಹಾಗೂ ಪ್ಲಾಸ್ಟಿಕ್ ಸಾಮಾನು ಮಾರುವವಳು

– ಮಾರಿಸನ್ ಮನೋಹರ್.

plastic items, ಪ್ಲಾಸ್ಟಿಕ್ ಸಾಮಾನುಗಳು

ಬಿರು ಬೇಸಿಗೆಯಲ್ಲಿ ಇಬ್ಬರು ನಡೆದುಕೊಂಡು ಪ್ಲಾಸ್ಟಿಕ್‌ ಪಾತ್ರೆ ಬುಟ್ಟಿಗಳನ್ನು ಮಾರುತ್ತಾ ಹೋಗುತ್ತಿದ್ದರು. ತಾಯಿ-ಮಗಳು ಇರಬಹುದು. ಮನೆ ಮುಂದೆ ಬಂದಾಗ “ಪ್ಲಾಸ್ಟಿಕ್ ಬುಟ್ಟಿ ಸಾಮಾನ್…” ಎಂದು ಕೂಗುತ್ತಾ ಬರುತ್ತಿದ್ದರು. ಇಬ್ಬರ ತಲೆಯ ಮೇಲೂ ತುಂಬಾ ಪಾತ್ರೆ-ಡಬ್ಬಿಗಳು ಇದ್ದವು. ಮುಸುರೆ ತಿಕ್ಕುವ ಪಾತ್ರೆಗಳನ್ನು ಇಡುವುದಕ್ಕೆಂದು ಮನೆಯಿಂದ ಹೊರಗೆ ಬಂದ ನನ್ನ ಅಮ್ಮನ ಕಣ್ಣು ಇವರಿಬ್ಬರ ತಲೆ ಮೇಲೆ ಇದ್ದ ಪಾತ್ರೆಗಳ ಡಬ್ಬಿಗಳ ಮೇಲೆ ಬಿತ್ತು! ಅಮ್ಮ ಅವರಿಬ್ಬರನ್ನು ಕರೆದಳು. ಅವರು ಒಳಗೆ ಬಂದು, ತಲೆ ಮೇಲೆ ಇದ್ದ ಬುಟ್ಟಿಯನ್ನು ಕೆಳಗೆ ಇಳಿಸಿ ಕೂತರು.

ಈ ಮನೆ ಮನೆ ತಿರುಗುತ್ತಾ ಪಾತ್ರೆ-ಪಗಡ-ಬುಟ್ಟಿ ಮಾರುವವರ ಮಾರ‍್ಕೆಟಿಂಗ್ ಜಾಣ್ಮೆ ಕಂಡರೆ ನನಗೆ ಸೋಜಿಗವೆನಿಸುತ್ತದೆ. ಲಕ್ಶಾಂತರ ರೂಪಾಯಿ ಸುರಿದು ನಮಗೆ ಗೊತ್ತಿದ್ದವರು ದೊಡ್ಡದಾದ ಪರ‍್ನಿಚರ್ ಅಂಗಡಿಯೊಂದನ್ನು ತೆರೆದಿದ್ದಾರೆ. ಯಾವಾಗ ನೋಡಿದರೂ ಗಿರಾಕಿಗಳಿಲ್ಲದೇ ಬಣಗುಡುತ್ತಾ ಇರುತ್ತೆ. ಆದರೆ ಶಾಲೆಗೆ ಎಂದೂ ಹೋಗದ ಮನೆ ಮನೆ ತಿರುಗುವ ಈ ಮಾರುಗರು, ಅದು ಹೇಗೆ ಮನೆಯಲ್ಲಿನ ಹೆಂಗಸರಿಗೆ ಬೇಕಾಗುವಂತಹ ಸಾಮಾನುಗಳನ್ನಶ್ಟೇ ತಗೊಂಡು ಬರುತ್ತಾರೆ? ವ್ಯರ‍್ತವೆನಿಸುವ ಒಂದೂ ಹೆಚ್ಚಿನ ವಸ್ತು ತಂದಿದ್ದು ನಾನು ಕಂಡಿಲ್ಲ!

ಅಮ್ಮನಿಗೆ ಬೇಕಾಗಿದ್ದದ್ದು ಮನೆ ಕೆಲಸದವಳಿಗೆ ಪಾತ್ರೆ ಬೆಳಗುವಾಗ (ತಿಕ್ಕುವಾಗ) ಕೂರಲು ಒಂದು ಪ್ಲಾಸ್ಟಿಕ್ ಮಣೆ, ಅಶ್ಟೇ. ಮನೆ ಕೆಲಸದವಳು ಒಂದು ವಾರದ ಹಿಂದೆ ನೀರು ತುಂಬಿಕೊಂಡು ಪಾತ್ರೆ ಬೆಳಗುವ ಪ್ಲಾಸ್ಟಿಕ್ ದೊಡ್ಡ ಬುಟ್ಟಿಯನ್ನು ಬೈಯ್ಯುತ್ತಿದ್ದಳು, ಅದನ್ನು ಅಮ್ಮ ಕೇಳಿಸಿಕೊಂಡಿರಬೇಕು! ಅಮ್ಮ ಕೂರುವ ಮಣೆ ತೋರಿಸು ಅಂದಳು. ಅವರಿಬ್ಬರು ತಮ್ಮಲ್ಲಿದ್ದ ಬುಟ್ಟಿಯ ಮೇಲಿನ ನೈಲಾನ್ ಜಾಲಿಯನ್ನು ತೆರೆದು ನೀಲಿ, ಹಚ್ಚನೆಯ, ಬೂದು, ಕರಿ, ಅರಿಶಿಣ ಬಣ್ಣದ ಪ್ಲಾಸ್ಟಿಕ್ ಮಣೆಗಳನ್ನು ಮುಂದೆ ಇಟ್ಟರು. ಅವರು ತಂದಿದ್ದ ಬುಟ್ಟಿಗಳನ್ನು ನೋಡಿದರೆ ನಮಗೆ ಒಂದಲ್ಲ ಒಂದು ರೀತಿಯಲ್ಲಿ ಜರೂರು ಬೇಕಾಗಿದ್ದ ವಸ್ತುಗಳೇ ಆಗಿದ್ದವು. ಒಂದೂ “ಇದು ನಮಗೆ ಬೇಕಾಗಿಲ್ಲ” ಅಂತ ಅನ್ನಿಸಲಿಲ್ಲ. ಚಾ ಸೋಸುವ ಸೋಸಣಿ, ಹಿಟ್ಟಿನ ಜರಡಿ, ಸಾಂಬಾರ್ ನೀಡಲು ಬಳಸುವ ಹುಟ್ಟುಗಳು, ಪ್ಲಾಸ್ಟಿಕ್ ಮೊರಗಳು, ಬುಟ್ಟಿಗಳು, ಪ್ಲಾಸ್ಟಿಕ್ ಚೌಕಟ್ಟಿದ್ದ ಕನ್ನಡಿಗಳು, ಪ್ಲಾಸ್ಟಿಕ್ ಡಬ್ಬಿಗಳು, ಪ್ಲಾಸ್ಟಿಕ್ ಬಾಚಣಿಕೆಗಳು(ಬಡಗಣ ಕರ‍್ನಾಟಕದಲ್ಲಿ ಹೆಣಿಗೆ ಅಂತ ಕರೆಯುತ್ತಾರೆ) ಹೀಗೆ ಎಲ್ಲವೂ ನಮಗೆ ಬೇಕಾದುವುಗಳೇ ಆಗಿದ್ದುವು.

ಮೊದಲು ಬಿದಿರಿನ ಬುಟ್ಟಿ, ಮೊರಗಳನ್ನು ಮಾರುತ್ತಿದ್ದವರು ಈಗ ಪ್ಲಾಸ್ಟಿಕ್ ಬಂದ ಮೇಲೆ ಬರೀ ಪ್ಲಾಸ್ಟಿಕ್‌‌ನಿಂದ ಮಾಡಿದ ಮೊರ, ಬುಟ್ಟಿಗಳನ್ನೇ ಮಾರುತ್ತಿದ್ದಾರೆ. ಅಮ್ಮ ಅವಳಿಗೆ ಅವರೇಕೆ ಬಿದಿರಿನ ಮೊರಗಳನ್ನು ಮಾರುತ್ತಾ ಇಲ್ಲ ಅಂತ ಕೇಳಿದಳು. ಅದಕ್ಕೆ ಅವರು “ಬಿದಿರಿನ ಬುಟ್ಟಿಗಳಲ್ಲಿ ಪಡತಾಲ್(ಲಾಬ) ಇಲ್ಲ, ಅವುಗಳನ್ನು ಮಾಡುವವರು ಕಡಿಮೆ ಆಗಿದ್ದಾರೆ. ಮತ್ತೆ ಬಿದಿರಿನ ಮೊರ ಮಾಡುವವರು ಅದಕ್ಕೆ ಮೆಂತ್ಯ ಹಚ್ಚುವುದಿಲ್ಲ, ನಾವೇ ಹಚ್ಚಬೇಕು. ಅದಕ್ಕೆಲ್ಲ ಟೈಂ ಇಲ್ಲ. ರೊಕ್ಕ ಹೆಚ್ಚಿಗೆ ಆಗುತ್ತೆ. ಬಾಗಿಲುಗಳಿಗೆ ಬಳಿಯುವ ಪೇಂಟ್ ಹಚ್ಚದಿದ್ದರೆ ಬಿದಿರಿನ ಮೊರ ಒಂದು ವರುಶ ಅಶ್ಟೇ ಇರುತ್ತೆ” ಅಂದಳು. “ಮೊದಲು ಬಿದಿರಿನ ವ್ಯಾಪಾರದಲ್ಲಿ ಅಶ್ಟು ಲಾಬ ಇರಲಿಲ್ಲ ಆದರೆ ಈ ಪ್ಲಾಸ್ಟಿಕ್ ವ್ಯಾಪಾರದಲ್ಲಿ ಲಾಬ ಹೆಚ್ಚಾಗಿದೆ. ಸುಲಬವಾಗಿ ಬೇಕೆಂದಾಗ ಎಶ್ಟು ಬೇಕೋ ಅಶ್ಟು ಲೋಡ್ ಸಿಗುತ್ತೆ, ಬಿದಿರು ಹಾಗಲ್ಲ ಅದಕ್ಕೆ ತುಂಬಾ ಕಾಯಬೇಕಾಗುತ್ತಿತ್ತು” ಅಂತ ಪ್ಲಾಸ್ಟಿಕ್ ಹೇಗೆ ಅವರ ಬದುಕನ್ನು ಹಗುರ ಮಾಡಿಬಿಟ್ಟಿದೆ ಅಂತ ಹೇಳಿದಳು. ಮೊದಲೊಂದು ಸಲ ಬಿದಿರಿನ ಬುಟ್ಟಿ ಹಾಗೂ ಮೊರ ಮಾರುವವರು ಬಂದಿದ್ದರು. ಆಗ ನೋಡಿದ್ದೆ ಮೊರಗಳಿಗೆ ಮೆಂತ್ಯದ ಪೇಸ್ಟ್ ಹಚ್ಚಿದ್ದು. ಆದರೆ ನಿಜವಾಗಿ ಅದು ಸ್ವಲ್ಪ ಮೆಂತ್ಯ ಮತ್ತು ಕುದಿಸಿದ ನ್ಯೂಸ್ ಪೇಪರ್, ಮೈದಾ ಹಿಟ್ಟಿನ ಪೇಸ್ಟ್ ಆಗಿತ್ತು. ಬಿದಿರಿನ ಮೊರದಲ್ಲಿನ ತೂತುಗಳನ್ನು ಮುಚ್ಚುತ್ತದೆ ಈ ಪೇಸ್ಟ್.

ಒಂದು ಕೂಡುಮಣೆ ಬೇಕಾಗಿತ್ತು, ಅಮ್ಮ ಎರಡು ಕೊಂಡಳು. ಮೊರ ಇನ್ನೂ ಬೇಕಾಗಿರಲಿಲ್ಲ ಅದನ್ನೂ ತಗೊಂಡಳು. ಮನೆಯಲ್ಲಿ ಮೊದಲೇ ಪ್ಲಾಸ್ಟಿಕ್ ಬುಟ್ಟಿಗಳು ಇದ್ದವು, ಆದರೂ ಇನ್ನೆರಡು ದೊಡ್ಡ ದೊಡ್ಡ ಪ್ಲಾಸ್ಟಿಕ್ ಬುಟ್ಟಿಗಳು ತಗೊಂಡಳು. ಪ್ಲಾಸ್ಟಿಕ್ ಸಾಮಾನಿಗೂ ‘ಟಪ್ಪರ್ ವೇರ್‘ ಅನ್ನೋ ಬ್ರಾಂಡ್ ಇದೆ. ಇಲ್ಲಿ ಬೀದಿಯಲ್ಲಿ ಸಾಮಾನು ಮಾರುತ್ತಾ ಬರುವವರ ಬಳಿಯೂ ಇದೇ ಟಪ್ಪರ್ ವೇರ್! ನಾಲ್ಕು ಒಂದೇ ಸೈಜಿನ ಬೇರೆ ಬೇರೆ ಬಣ್ಣದ ಡಬ್ಬಿಗಳನ್ನು ತೆಗೆದುಕೊಂಡಳು. ಪ್ಲಾಸ್ಟಿಕ್ ಪಾತ್ರೆ ಮಾರುತ್ತಿದ್ದವಳ ಮಗಳ ಬುಟ್ಟಿಯಲ್ಲಿ ಬಣ್ಣ ಬಣ್ಣದ ಪ್ಲಾಸ್ಟಿಕ್ ಚಾಪೆಗಳಿದ್ದವು. ಅವುಗಳಲ್ಲಿ ಮೂರು ಸೆಲೆಕ್ಟ್ ಆದವು, ಆದರೇ ಒಂದು ಹಳೇದಾಗಿ ಕಂಡಿದ್ದರಿಂದ ರಿಜೆಕ್ಟ್ ಆಯ್ತು.

ಅಮ್ಮ ಕರೀದಿ ಮಾಡುತ್ತಿದ್ದಾಗ ಪ್ಲಾಸ್ಟಿಕ್ ಸಾಮಾನು ಮಾರುತ್ತಿದ್ದ ಅವರಿಬ್ಬರ ಮುಕ ಅರಳುತ್ತಾ ಸಂತಸ ಕಾಣಿಸುತ್ತಿತ್ತು. ಕೊಳ್ಳುವಿಕೆ ಈಗ ಹಣದ ಮಾತಿಗೆ ಬಂತು. ಆಗಸದೆತ್ತರದ ಬೆಲೆಗಳನ್ನು ಹೇಳುತ್ತಿದ್ದ ಅವರಿಬ್ಬರಿಗೆ ಅಮ್ಮ ಪಾತಾಳಕ್ಕೆ ಇಳಿದ ಬೆಲೆಗಳನ್ನು ಹೇಳಿ ದಂಗು ಬಡಿಸತೊಡಗಿದಳು. ಅವರು ಹೇಳಿದ ಬೆಲೆಯ ಮೂವತ್ತು ಪರ‍್ಸೆಂಟ್ ಬೆಲೆಯನ್ನು ಅಮ್ಮ ಕೇಳಿದಳು! ಅವರು ಆಗುವುದಿಲ್ಲವೆಂದರು, ಆಗ ಅಮ್ಮ “ಹಾಗಾದರೆ ಇವನ್ನೆಲ್ಲ ತಗೊಂಡು ಹೋಗಿ” ಅಂದಳು ತುಂಬಿದ ಆತ್ಮವಿಶ್ವಾಸದಿಂದ. ಒಬ್ಬರ ಮುಕವನ್ನು ಒಬ್ಬರು ನೋಡಿಕೊಂಡ ಅವರು ಮುವ್ವತ್ತು ಪರ‍್ಸೆಂಟ್‌ಗೆ ಕುಸಿದ ಬೆಲೆಗಳನ್ನು ನಲವತ್ತಕ್ಕೆ ಏರಿಸಿ ಅಂದರು. ಅಮ್ಮ ಹಾಗೆ ಆಗುವುದಕ್ಕೆ ಸಾದ್ಯವೇ ಇಲ್ಲವೆಂದು, ಅವರು ಹೇಳಿದ ಬೆಲೆಯ ಮೂವತ್ತೈದು ಪರ‍್ಸೆಂಟ್‌ನಲ್ಲಿ ವ್ಯವಹಾರ ಕುದುರಿಸಿದಳು.

ಎಲ್ಲ ಸಾಮಾನುಗಳನ್ನು ಕಾದಾಟದಲ್ಲಿ ಗೆದ್ದ ಲೂಟಿಯಂತೆ ಬಾಚಿಕೊಂಡು, ಒಂದು ಕಡೆ ಇಟ್ಟು ಅಮ್ಮ ಒಳಗೆ ಬಂದಳು. ಹಣ ತೆಗೆದುಕೊಂಡು ಹೊರಗೆ ಹೋಗಿ, “ಇಶ್ಟು ಗಿರಾಕಿ ಮಾಡಿದ್ದೇನೆ, ಒಂದು ಜರಡಿ ಪ್ರೀ ಕೊಡು” ಅಂದಳು. ಆಯ್ತು ಅಂತ ಒಪ್ಪಿದ ಅವಳು ಜರಡಿ ಪ್ರೀಯಾಗಿ ಕೊಟ್ಟಳು. ಅಮ್ಮನ ಮೊಗದಲ್ಲಿ ಹರ‍್ಶವರ‍್ದನನ್ನು ಸೋಲಿಸಿದ ಪುಲಿಕೇಶಿಯ ಕಳೆ ಕಾಣಿಸಿತು! ಅಮ್ಮ ಒಳಗೆ ಬರುತ್ತಿದ್ದಾಗ ಅವರು, “ಮುಂಜಾನೆಯಿಂದ ಏನೂ ತಿಂದಿಲ್ಲ, ಮನೆ ಬಿಟ್ಟಂದಿನಿಂದ ಹೀಗೆ ಮನೆಮನೆ ತಿರುಗ್ತಾ ಇದ್ದೇವೆ, ಏನಾದರೂ ತಿನ್ನಲಿಕ್ಕೆ ಇದ್ದರೆ ಕೊಡಿ” ಅಂದರು. ಅಮ್ಮ ನಾಲ್ಕು ರೊಟ್ಟಿ ಅದರ ಜೊತೆ ನೆಂಚಿಕೊಳ್ಳಲಿಕ್ಕೆ ಉಪ್ಪಿನಕಾಯಿ ಕೊಟ್ಟಳು. ಅವರ ಬಾಟಲಿಯನ್ನು ನೀರಿನಿಂದ ತುಂಬಿದಳು, ಒಳಗೆ ಹೋಗಿ ಅಲಮಾರಿಯಿಂದ ತನ್ನ ಹಳೆಯ ಸೀರೆ ಒಂದು ತಂದು ಕೊಟ್ಟಳು. ತಮ್ಮ ಪ್ಲಾಸ್ಟಿಕ್ ಸಾಮಾನುಗಳನ್ನು ಎತ್ತಿಕೊಂಡು ಹೆಂಗಸು ಎದ್ದಳು, ಅವಳ ಮಗಳು ತನ್ನ ಚಾಪೆಗಳಿದ್ದ ಬುಟ್ಟಿ ಎತ್ತಿಕೊಂಡು, ಅಮ್ಮ ಕೊಟ್ಟ ಊಟ ಮತ್ತು ಸೀರೆ ಕೈಯಲ್ಲಿ ತೆಗೆದುಕೊಂಡು ಮನೆ ಮುಂದೆ ಇರುವ ಮರಗಳ ಬಳಿ ಹೋದರು. ಅಲ್ಲಿ ಅವುಗಳ ನೆರಳಲ್ಲಿ ತಮ್ಮ ಬುಟ್ಟಿಗಳನ್ನು ಇಳಿಸಿದರು. ತಮ್ಮ ಜೊತೆ ತಂದಿದ್ದ ಸಿಮೆಂಟಿನ ಕೈಚೀಲದಲ್ಲಿ ಸೀರೆ ಹಾಕಿಕೊಂಡರು. ಕೈತೊಳೆದುಕೊಂಡು ನೀರು ಕುಡಿದು, ಊಟ ಮಾಡುವುದಕ್ಕೆ ಶುರುಮಾಡಿದರು.

(ಚಿತ್ರ ಸೆಲೆ: moonchat.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: