ಬಸವಣ್ಣನವರನ್ನು ನೆನೆಯುತ್ತಾ

ಪ್ರಕಾಶ್ ಮಲೆಬೆಟ್ಟು.

ಬಸವಣ್ಣ,, Basavanna

ಬಸವಣ್ಣ 12 ನೇ ಶತಮಾನದಲ್ಲಿ ಬಾಳಿ ಬದುಕಿದ್ದ ಮಹಾಚೇತನ ಮತ್ತು ತತ್ವಗ್ನಾನಿ. ಇತ್ತೀಚೆಗಶ್ಟೇ ಬಸವಣ್ಣನವರ ಹುಟ್ಟುಹಬ್ಬವನ್ನು (ಬಸವ ಜಯಂತಿ) ಆಚರಿಸಲಾಯಿತು. ಆ ಮಹಾಪುರುಶನಿಗೆ ನಮಿಸುತ್ತಾ, ಅವರನ್ನು ನೆನೆಯುತ್ತಾ ನನಗೆ ತುಂಬಾ ಇಶ್ಟವಾದ ಅವರ ವಚನವೊಂದನ್ನು ನೆನಪಿಸಿಕೊಳ್ಳಲು ಇಶ್ಟಪಡುತ್ತೇನೆ. ಬಾಲ್ಯದಲ್ಲಿ ಶಾಲೆಯಲ್ಲಿ ಕಲಿತ ಈ ವಚನ ನನ್ನ ಮೇಲೆ ತುಂಬಾ ಪ್ರಬಾವ ಬೀರಿದೆ.

ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯ ಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ
ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.

ತುಂಬಾ ಅದ್ಬುತವಾದ, ನೇರವಾಗಿ ಹ್ರುದಯವನ್ನು ಮುಟ್ಟುವ ವಚನವಿದು. ದೇವರ ಕ್ರುಪೆ ಪಡೆಯಬೇಕಿದ್ದರೆ ನಾವೇನು ಮಾಡಬೇಕು ಎಂಬುದನ್ನು ತುಂಬಾ ಸರಳವಾಗಿ ಬಸವಣ್ಣನವರು ತಿಳಿಸಿದ್ದಾರೆ. ದೇವನೊಬ್ಬ ನಾಮ ಹಲವು. ಆದರೆ ದೇವರನ್ನು ಒಲಿಸಿಕೊಳ್ಳುವ ಪರಿ ಮಾತ್ರ ಒಂದೇ. ನಮ್ಮ ಅಂತರಂಗ ಪರಿಶುದ್ದವಾಗಬೇಕಾದ್ರೆ, ಹಾಗೆ ಬಹಿರಂಗ ಶುದ್ದಿ ಹೊಂದಬೇಕಾದ್ರೆ ಮೇಲೆ ಹೇಳಿದ ವಚನದಂತೆ ನಮ್ಮ ನಡೆ ನುಡಿ ಇರಬೇಕು.

“ಕಳ್ಳತನ ಮಾಡಬೇಡ, ಕೊಲೆ ಮಾಡಬೇಡ, ಸುಳ್ಳನ್ನು ಹೇಳಬೇಡ, ಯಾರ ಮೇಲೂ ಕೋಪ ಮಾಡಿಕೊಳ್ಳಬೇಡ, ಯಾರನ್ನು ಕೀಳಾಗಿ ಕಾಣಬೇಡ, ಬೇರೆಯವರನ್ನು ಹಂಗಿಸಬೇಡ, ನಿನ್ನ ನೀನು ಹೊಗಳಿಕೊಳ್ಳಬೇಡ. ಇದನ್ನು ನೀನು ಪಾಲಿಸಿದರೆ ನೀನೊಬ್ಬ ಪರಿಪೂರ‍್ಣ ಮನುಶ್ಯನಾಗುವೆ. ದೇವರ ಕ್ರುಪೆ ನಿನ್ನ ಮೇಲೆ ಸದಾಕಾಲ ಇರುತ್ತದೆ. ನಿನ್ನ ಒಳ್ಳೆಯತನವನ್ನು ದೇವರು ಮೆಚ್ಚಿ, ನಿನ್ನನ್ನು ಸದಾಕಾಲ ಕಾಪಾಡುತ್ತಾನೆ” ಎಂಬ ತಿರುಳನ್ನು ಹೊಂದಿರುವ ಈ ವಚನ ಎಶ್ಟೊಂದು ಅರ‍್ತಪೂರ‍್ಣ.

ವಾಸ್ತವದಲ್ಲಿ, ನಮಗೆ ಕಣ್ಣಿಗೆ ಕಾಣುವ ದೇವರು ಎಂದರೆ ನಮ್ಮ ತಂದೆ-ತಾಯಿ, ಗುರು ಹಿರಿಯರು, ಶಿಕ್ಶಕರು ಹಾಗು ಸ್ನೇಹಿತರು. ಬಾಲ್ಯದಿಂದಲೇ ನಾವು ಒಳ್ಳೆಯ ಗುಣ, ನಡತೆ ಹೊಂದಲು, ಒಳ್ಳೆಯ ಸ್ವಬಾವವನ್ನು ಮೈಗೂಡಿಸಿಕೊಳ್ಳಲು ನಮ್ಮ ತಂದೆ ತಾಯಿ ಹಾಗೂ ಶಿಕ್ಶಕರು ಕಾರಣರಾಗಿರುತ್ತಾರೆ. ಹಾಗೆ ಉತ್ತಮ ಗೆಳೆಯರ ಸಹವಾಸ ನಾವು ಒಳ್ಳೆಯ ವ್ಯಕ್ತಿಗಳಾಗುವಲ್ಲಿ ನೆರವಾಗಿರುತ್ತದೆ. ನಮ್ಮ ಬದುಕಿನಲ್ಲಿ ನಮ್ಮ ಏಳಿಗೆಗೆ ಕಾರಣರಾಗುವ, ನಮಗೆ ಮಾರ‍್ಗದರ‍್ಶನ ನೀಡುವ, ಒಳ್ಳೆಯ ವ್ಯಕ್ತಿತ್ವವನ್ನು ಹೊಂದಲಿಕ್ಕೆ ಕಾರಣರಾಗುವ ಎಲ್ಲರೂ ದೇವರುಗಳೇ ಎಂದು ನನ್ನ ಅನಿಸಿಕೆ. ನಮ್ಮ ಅಂತರಂಗ-ಬಹಿರಂಗ ಶುದ್ದಿಗೆ ಇವರೆಲ್ಲರ ಕೊಡುಗೆಯೂ ಇರುತ್ತದೆ ಎಂದರೆ ತಪ್ಪಾಗಲಾರದು.

ಮನುಜರು ಬಸವಣ್ಣನವರ ವಚನದ ಆಶಯದಂತೆ ಬದುಕಿದರೆ ಪ್ರಪಂಚ ಮತ್ತಶ್ಟು ಸುಂದರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ, ಅಲ್ಲವೇ? ನಾನು ಬಸವಣ್ಣರವರ ವಚನವನ್ನು ತಪ್ಪಾಗಿ ಅರ‍್ತೈಸಿದ್ರೆ ದಯವಿಟ್ಟು ಕ್ಶಮೆಯಿರಲಿ!

(ಚಿತ್ರಸೆಲೆ: lingayatreligion.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks