ನನ್ನ ಮೊದಲ ವಿಮಾನಯಾನದ ಅನುಬವ

– ಕೆ.ವಿ.ಶಶಿದರ.

ವಿಮಾನ ಪ್ರಯಾಣ

ನನ್ನ ಮೊದಲ ವಿಮಾನಯಾನ ಬೆಂಗಳೂರಿನಿಂದ ದೆಹಲಿಗೆ. ಬೆಳಿಗ್ಗೆ 6.30 ವಿಮಾನ ಹೊರಡುವ ಸಮಯ. ನಿಯಮದಂತೆ 5.30ಕ್ಕೆಲ್ಲಾ ವಿಮಾನ ನಿಲ್ದಾಣದಲ್ಲಿ ಹಾಜರಿರಬೇಕಿತ್ತು. ವಿಮಾನ ಪ್ರಯಾಣದ ಬಗ್ಗೆ ಕೇಳಿದ್ದ ಸಿಹಿ-ಕಹಿ ವಿಚಾರಗಳೆಲ್ಲಾ ಮನದಲ್ಲೇ ಗುಯ್‍ಂಗುಡುತ್ತಿತ್ತು. ಕೊರೆತದ ಮಂಚೂಣಿಯಲ್ಲಿದ್ದುದು ಗಗನ ಸಕಿಯರ ವನಪು ವಯ್ಯಾರದ ವರ‍್ಣನೆ. ಹಾಗಾಗಿ ಪ್ರಯಾಣದ ಹಿಂದಿನ ರಾತ್ರಿ ನಿದ್ದೆ ದೂರವೇ ಉಳಿದಿತ್ತು. ವಿಮಾನ ನಿಲ್ದಾಣದಲ್ಲಿ ಬೋರ‍್ಡಿಂಗ್ ಪಾಸ್ ಪಡೆಯುವ ಹೊತ್ತಿಗೆ ಆರು ಗಂಟೆ. E126 ಸೀಟಿನ ಸಂಕ್ಯೆ. ಇದರ ಬಗ್ಗೆ ಯಾರ ಬಳಿಯಾದರೂ ವಿಚಾರಿಸುವ ಅಂದರೆ ಬಿಗುಮಾನ ಅಡ್ಡ. ಅನೋನ್ಸ್‌ಮೆಂಟ್‍ಗಾಗಿ ಕಾದೆ. ಹೊಟ್ಟೆಯಲ್ಲಿ ಚಿಟ್ಟೆಗಳು. 6.00 ಗಂಟೆಯಾದರೂ ಯಾವ ತಯಾರಿಯೂ ಇಲ್ಲದ ಕಾರಣ ಇದೇನಾ ವಿಮಾನ ಎನ್ನುವ ಶಂಕೆ ಮೂಡಿತು. ವಿಮಾನ ಹತ್ತಲು ಪರವಾನಗಿ ಸಿಕ್ಕಿದ್ದು 6.20ಕ್ಕೆ.

ವಿಮಾನದ ಹಿಂಬಾಗದ ಮೆಟ್ಟಿಲು ಹತ್ತಿರವಿತ್ತು. ನೇರ ಅಲ್ಲಿಗೆ ಹೋದೆ. ಪ್ರಯಾಣಿಕರನ್ನು ಸ್ವಾಗತಿಸುತ್ತಿದ್ದ ಗಗನ ಸಕಿ, ಕೈಲಿದ್ದ ಬೋರ‍್ಡಿಂಗ್ ಪಾಸ್ ಗಮನಿಸಿ ‘ದಟ್ ಎಂಟ್ರಿ ಸರ‍್’ ಎನ್ನುತ್ತಾ ಕಣ್ಸನ್ನೆಯಲ್ಲೇ ಅತ್ತ ತೋರಿಸಿದಳು. ಪಿಚ್ಚೆನಿಸಿತು. ‘ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬ ಸೋಗು ಹಾಕಿ ‘ಓಹ್… ಐ ಆಮ್ ಸಾರಿ’ ಎನ್ನುತ್ತಾ ಅತ್ತ ಹೆಜ್ಜೆಹಾಕಿದೆ. ಸೀಟ್ ನಂಬರ್ ಹುಡುಕುವಲ್ಲಿ ನಿಶ್ಣಾತನಾಗಿದ್ದ ಕಾರಣ ವಿಮಾನದಲ್ಲ್ಲಿ ಗಲಿಬಿಲಿಯಾಗಲಿಲ್ಲ. ಅದ್ರುಶ್ಟ ಒಲಿದಿತ್ತು. ಸೀಟು ಕಿಟಕಿಯ ಪಕ್ಕದ್ದೇ. ಪ್ರಯಾಣದ ಉದ್ದಕ್ಕೂ ಕಿಟಕಿಯಲ್ಲಿ ಹಣಕಿ ನೋಡುಬಹುದು ಎಂಬ ಆಲೋಚನೆ ಕುಶಿ ಕೊಟ್ಟಿತು. ವಿಮಾನದ ಹೊರಡುವಿಕೆಗೆ ತುದಿಗಾಲಲ್ಲಿ ಕಾದೆ.

ಅಲಿಕಿತ ಸರ‍್ಕಾರಿ ಕಾಯ್ದೆಯಂತೆ ವಿಮಾನ ಹೊರಟಿದ್ದು ಇಪ್ಪತ್ತು ನಿಮಿಶ ತಡವಾಗಿ. ಮೇಲೇರುವಾಗಿನ ದ್ರುಶ್ಯವನ್ನು ಸಂಪೂರ‍್ಣ ಆಸ್ವಾದಿಸಿದೆ. ಹತ್ತು ಹದಿನೈದು ನಿಮಿಶ ಮಾತ್ರ ಈ ಆನಂದ. ನನ್ನಾಸೆಗೆ ತಣ್ಣೀರೆರೆಚಿದ್ದು ಮೋಡಗಳು. ಹೊರಗೆ ಇಣುಕಿದರೆ ಮೋಡದ ಪರದೆ ಅಡ್ಡವಾಗಿತ್ತು. ಒಂದರ‍್ದ ಗಂಟೆ ಪ್ರಯಾಣದ ನಂತರ, ಪ್ರಕ್ರುತಿ ಕರೆಗೆ ಓಗೊಡಲು ವಾಶ್ ರೂಮ್‍ಗೆ ಹೊರಟೆ. ಬಂದ ಕಾರ‍್ಯದಲ್ಲಿ ನಿರತನಾಗಿದ್ದಂತೆ, ವಿಮಾನ ಬಯಂಕರವಾಗಿ ಕುಲುಕಾಡಿದಂತಾಯಿತು. ಬೀಳುವಂತಾಯಿತು. ಗೋಡೆಗೆ ಆತು ನಿಂತೆ. ಬಯ ಆವರಿಸಿತು. ವಿಮಾನ ನಿಯಂತ್ರಣ ಕಳಕೊಂಡ ರಬಸವಾಗಿ ಕುಲುಕಾಡುತ್ತಿದೆ. ಬಹುಶಹ ಇದೇ ಜೀವನದ ಕೊನೆ ಗಳಿಗೆ, ಸ್ವಚ್ಚಂದವಾಗಿ ಹಾರುತ್ತಿದ್ದ ವಿಮಾನ ಇನ್ನೇನು ಕೆಲವೇ ಕ್ಶಣಗಳಲ್ಲಿ ನೆಲಕ್ಕಪ್ಪಳಿಸುತ್ತದೆ ಅನಿಸಿದಾಗ ಹೆದರಿಕೆಯಾಯ್ತು. ಕೆಟ್ಟ ಆಲೋಚನೆಗಳು ಮನಸ್ಸಿನಲ್ಲಿ ಹರಿದಾಡಲು ಆರಂಬಿಸಿತು. ದರೆಗುರುಳಿ, ಬೆಂಕಿಯ ಜ್ವಾಲೆ ಬುಗಿಲೆದ್ದು, ವಿಮಾನ ಸಿಡಿದು, ಚಿದ್ರಚಿದ್ರವಾಗಿ, ಸುಟ್ಟು ಬಸ್ಮವಾಗುವ ದ್ರುಶ್ಯ ಊಹಿಸಿಕೊಂಡಾಗ ಬವಿಶ್ಯ ಶೂನ್ಯವಾಗಿತ್ತು. ಮನಸ್ಸು ಅಯೋಮಯವಾಗಿತ್ತು. ಬಯಬೀತನಾದ್ದರಿಂದ ಬಂದ ಕೆಲಸ ಪೂರ‍್ಣವಾಗುವ ಮುನ್ನವೇ ಹೊರಬಿದ್ದೆ.

ಏನಾಶ್ಚರ‍್ಯ!!! ಎಲ್ಲಾ ಸಹಪ್ರಯಾಣಿಕರೂ ನಿಶ್ಚಿಂತೆಯಿಂದ ಆರಾಮವಾಗಿ ಕಣ್ಣು ಮುಚ್ಚಿ ಯೋಗ ನಿದ್ರೆಯಲ್ಲಿದ್ದಾರೆ. ವಿಮಾನದ ಬಯಂಕರ ಕುಲುಕಾಡುವಿಕೆ ಅನುಬವ ಇವರಾರಿಗೂ ಆಗೇ ಇಲ್ಲ ಎನ್ನುವಂತೆ!!! ಅತವಾ ಬೇರೇನಾದರೂ … ಅನುಮಾನ ಕಾಡಹತ್ತಿತ್ತು.  ನಂತರ ತಿಳಿದಿದ್ದು ವೈಮಾನಿಕ ಪ್ರಯಾಣದಲ್ಲಿ ಕುಲುಕಾಡುವಿಕೆಗೆ ಟರ‍್ಬ್ಯುಲೆನ್ಸ್ ಎನ್ನುತ್ತಾರೆ, ಇದು ಸಾಮಾನ್ಯ. ಇನ್ನೂ ಬಯಂಕರ ರಬಸದ ಕುಲುಕಾಡುವಿಕೆ ಇರುತ್ತೆ ಎನ್ನುವ ವಿಚಾರ. ಪ್ರತಿಬಾರಿ ವಿಮಾನ ಪ್ರಯಾಣದಲ್ಲೂ ಟರ‍್ಬ್ಯುಲೆನ್ಸ್ ಕಾಡಿದೆ. ನೆಲಕಚ್ಚುವ ಬಯ ಇಲ್ಲವಾದರೂ ವಾಶ್ ರೂಂಗೆ ಹೋಗುವ ದೈರ‍್ಯ ಮಾತ್ರ ಇನ್ನೂ ಬಂದಿಲ್ಲ್ಲ!!! ಮೊದಲ ಪ್ರಯಾಣದ ಬಯದ ಬ್ರಮೆ ಇನ್ನೂ ಮರೆಯಾಗಿಲ್ಲ.

(ಚಿತ್ರ ಸೆಲೆ: pexel)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: