ಸಾದನೆಗೆ ವಯಸ್ಸು ಅಡ್ಡಿಯಲ್ಲ

–  ಪ್ರಕಾಶ್ ಮಲೆಬೆಟ್ಟು.

ಗ್ಲಾಡಿಸ್ ಬರಿಲ್, Gladys Burrill

ಮೊನ್ನೆ ನನ್ನ ಆತ್ಮೀಯ ಸ್ನೇಹಿತನೊಬ್ಬ ಹೇಳ್ತಾ ಇದ್ದ, ‘ಇಲ್ಲ ಕಣೋ ವಯಸಾಯಿತು ನಲ್ವತ್ತು, ಈ ವಯಸಿನಲ್ಲಿ ಜೀವನದಲ್ಲಿ ಯಾವುದೇ ಹೊಸ ನಿರ‍್ದಾರ ಕೈಗೊಳ್ಳುವುದು ತುಂಬಾ ಕಶ್ಟ’ ಅಂತ! ನಾನು ಹೇಳ್ದೆ ‘ವಯಸಾಗಿರುವುದು ದೇಹಕ್ಕೆ ನಮ್ಮ ಮನಸಿಗೆ ಅಲ್ಲ, ವಯಸ್ಸು 40 ಅಶ್ಟೇ. ಆರೋಗ್ಯವನ್ನು ಕಟ್ಟು ನಿಟ್ಟಾಗಿ ಉಳಿಸಿಕೊಂಡ್ರೆ, ಹಾಗೆ ಯಾವುದೇ ಆಕಸ್ಮಿಕಗಳಿಗೆ ಬಲಿಯಾಗದಿದ್ರೆ ಇನ್ನೂ ಹೆಚ್ಚು ಕಡಿಮೆ 40 ವರ‍್ಶದ ಜೀವನ ಬಾಕಿ ಇದೆ. ಅಂದ್ರೆ ನಾವು ಕ್ರಮಿಸಿದ್ದು ಕೇವಲ ಅರ‍್ದ ದಾರಿ ಮಾತ್ರ ಅಂತ. ಹೋಗ್ಲಿ, 80 ವರ‍್ಶ ಬೇಡ, 60 ಅಂತ ಲೆಕ್ಕ ಹಾಕಿದ್ರು ಇನ್ನು 7306 ದಿನ ಬಾಕಿ ಇದೆ ಕಣಪ್ಪ ಜೀವನದಲ್ಲಿ. ಹಾಗಾಗಿ ಯಾವುದೇ ಹೊಸ ಆರಂಬಕ್ಕೆ ವಯಸ್ಸು ಕಂಡಿತ ಅಡ್ಡಿ ಆಗಬಾರದು’ ಅಂತ.

ನಮ್ಮ ಸಾಮರ‍್ತ್ಯದ ಮೇಲೆ ನಮಗೆ ನಂಬಿಕೆ ಇರಬೇಕು

‘ಕೆಲಸ ಪರವಾಗಿಲ್ಲ ಆದರೆ ಜೀವನ ನೀರಸವಾಗಿಬಿಟ್ಟಿದೆ. ಈಗ ನಾನು ಮಾಡುತ್ತಿರುವ ಕೆಲಸಕ್ಕಿಂತ ಒಳ್ಳೆ ಕೆಲಸ ನನಗೆ ಸಿಗುತ್ತದೆ ಅತವಾ ಸ್ವಂತದ್ದೇ ಏನಾದರು ಮಾಡಿದರೆ ನಾನು ಸಂತೋಶದಿಂದ ಇರಬಲ್ಲೆ, ಆದ್ರೆ ಕುಟುಂಬದ ಜವಾಬ್ದಾರಿ ಇದೆ. ಅಪಾಯಕ್ಕೆ (Risk) ನನ್ನನ್ನು ನಾನೆ ಒಡ್ಡಿಕೊಳ್ಳಲು ಸಾದ್ಯವಿಲ್ಲ’ವೆಂದು ಯೋಚಿಸುತ್ತಿದ್ದೀರಾ! ಕುಟುಂಬದ ಜವಾಬ್ದಾರಿ ಕಂಡಿತವಾಗಿಯೂ ನಮ್ಮ ಜವಾಬ್ದಾರಿಯೇ. ಆದರೆ ನಮ್ಮಲ್ಲಿ ನಮ್ಮ ಸಾಮರ‍್ತ್ಯದ ಬಗ್ಗೆ ನಂಬಿಕೆ ಇದ್ದಲ್ಲಿ, ಸಾದಿಸಬಲ್ಲೆ ಎಂದು ಬರವಸೆ, ಆತ್ಮವಿಶ್ವಾಸ ಇದ್ದರೆ ಸವಾಲನ್ನು ಮೆಟ್ಟಿ ನಿಲ್ಲಬಹುದು. ಹೇಗೆ ಕನಸುಗಳಿಗೆ ಕೊನೆ ಇಲ್ಲವೋ ಹಾಗೆ ಅವಕಾಶಗಳಿಗೂ ಕೂಡ! ಪ್ರಪಂಚ ವಿಶಾಲವಾಗಿದೆ, ಅವಕಾಶಗಳಿಗೂ ಕೂಡ ಯಾವುದೇ ಬರ ಇಲ್ಲ. ಬೇಕಾಗಿರುವುದು ನಮ್ಮ ಸಾಮರ‍್ತ್ಯದ ಮೇಲೆ ನಮ್ಮ ನಂಬಿಕೆ. ಅಶ್ಟೇ!

ವಯಸ್ಸು ಕೇವಲ ಒಂದು ಅಂಕಿ ಮಾತ್ರ

ಸಾದನೆಗೆ ವಯಸ್ಸಿಲ್ಲ. ವಯಸ್ಸಿನ ನೆಪ ಹೇಳಿ ನಮ್ಮ ಕನಸನ್ನು ಬಚ್ಚಿಟ್ಟುಕೊಳ್ಳುವುದು ತರವಲ್ಲ! ಬೇಕಾಗಿರುವುದು ಆರೋಗ್ಯಪೂರ‍್ಣ ಜೀವನ ಮತ್ತು ನಮ್ಮ ಪ್ರಯತ್ನ! ಬೇರೆಲ್ಲ ವಿದಿಲಿಕಿತ ಅಶ್ಟೇ. ಇಂಗ್ಲಿಶ್ ನಲ್ಲಿ ಒಂದು ಮಾತಿದೆ “never too late to achieve your dreams” ಅಂತ.

ಗ್ಲಾಡಿಸ್ ಬರಿಲ್ (Gladys Burrill) ಎಂಬಾಕೆ ಒಬ್ಬ ಅದ್ಬುತ ಮಹಿಳೆ. ವಿಮಾನ ಚಾಲನೆ, ಬೆಟ್ಟ ಹತ್ತುವುದು, ಕುದುರೆ ಸವಾರಿ – ಹೀಗೆ ನಾನಾ ಪ್ರತಿಬೆಗಳ ಆಗರ. ಇವರು ತಮ್ಮ 80 ನೇ ವಯಸಿನಲ್ಲಿ ಮ್ಯಾರತಾನ್ ಓಟದಲ್ಲಿ ಬಾಗವಹಿಸಲು ಪ್ರಾರಂಬಿಸಿದರು. ಪ್ರಸಿದ್ದಿಗೆ ಬಂದದ್ದು ಹೊನೊಲುಲು ಮ್ಯಾರತಾನ್ ಅನ್ನು ಪೂರ‍್ಣಗೊಳಿಸಿ ಗುರಿ ಮುಟ್ಟಿದಾಗ! ಇದರಲ್ಲಿ ಏನು ಆಶ್ಚರ‍್ಯ ಅಂದ್ರಾ, ಆಗ ಅವರ ಪ್ರಾಯ 92 ಅಶ್ಟೇ! ಈ ಓಟವನ್ನು ಪೂರ‍್ಣಗೊಳಿಸಲು ಅವರು ತೆಗೆದುಕೊಂಡ ಸಮಯ 9 ಗಂಟೆ 53 ನಿಮಿಶ. ಅವರ ಈ ಅಸಾಮಾನ್ಯ ಸಾದನೆ ‘ಗಿನ್ನಿಸ್ ಬುಕ್ ಆಪ್ ವರ‍್ಲ್ಡ್ ರೆಕಾರ‍್ಡ್’ ನಲ್ಲಿ ದಾಕಲಾಗಿದೆ. ನಿಜಕ್ಕೂ ಜೀವನದಲ್ಲಿ ಗುಣಾತ್ಮಕ ಚಿಂತನೆ ಇದ್ದರೆ ಯಾವುದೂ ಅಸಾದ್ಯವಲ್ಲವೆಂಬುದಕ್ಕೆ ಇವರೇ ಸಾಕ್ಶಿ.

ಹಾರ‍್ಲ್ಯಾಂಡ್ ಸ್ಯಾಂಡರ‍್ಸ್ (Harland Sanders) – ಈ ಹೆಸರು ಕೇಳಿರ‍್ತೀರಿ. ಬಹಳಶ್ಟು ಕಡೆ ಕೆಲಸ ಕೆಳೆದುಕೊಂಡು ನಿಶ್ಪ್ರಯೋಜಕ ಎಂದೆನಿಸಿಕೊಂಡಿದ್ದ ವ್ಯಕ್ತಿ, ತನ್ನ 65 ನೇ ವಯಸಿನಲ್ಲಿ ಆರಂಬಿಸಿದ್ದು ‘ಕೆಂಟುಕಿ ಪ್ರೈಡ್ ಚಿಕನ್’ (KFC). ಕೆ.ಎಪ್.ಸಿ ಹೆಸರು ಕೇಳದವರು ತುಂಬಾ ಕಡಿಮೆ.

ಕಳೆದುಹೋದ ಕಾಲದ ಬಗ್ಗೆ ಯೋಚಿಸಿ ಪಲವಿಲ್ಲ

ಹಾಗಾಗಿ ವಯಸ್ಸು ನಮ್ಮ ಸಾದನೆಗೆ, ಕನಸಿಗೆ ಯಾವತ್ತೂ ಅಡ್ಡಿಯಾಗಬಾರದು. ಆದರೆ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕರ‍್ತವ್ಯ. ಮಿಂಚಿ ಹೋದ ಕಾಲದ ಬಗ್ಗೆ ಯೋಚಿಸಿ ಸಮಯ ಹಾಳು ಮಾಡಿಕೊಳ್ಳುವುದಕ್ಕಿಂತಲೂ ನಮ್ಮ ಕನಸನ್ನು ನನಸು ಮಾಡಿಕೂಳುವತ್ತ ದಿಟ್ಟ ಹೆಜ್ಜೆ ಇಟ್ಟರೆ ಬದುಕಿಗೊಂದು ಅರ‍್ತ ಬರುತ್ತದೆ.

( ಚಿತ್ರ ಸೆಲೆ: midweek )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks