ಬಸವಣ್ಣನ ವಚನಗಳ ಓದು – 8ನೆಯ ಕಂತು

–  ಸಿ.ಪಿ.ನಾಗರಾಜ.

ಬಸವಣ್ಣ,, Basavanna

ನೀರ ಕಂಡಲ್ಲಿ ಮುಳುಗುವರಯ್ಯಾ
ಮರನ ಕಂಡಲ್ಲಿ ಸುತ್ತುವರಯ್ಯಾ
ಬತ್ತುವ ಜಲವ
ಒಣಗುವ ಮರನ
ಮಚ್ಚಿದವರು
ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ.

ತಮ್ಮ ಬದುಕನ್ನು ಉತ್ತಮವಾದ ರೀತಿಯಲ್ಲಿ ಕಟ್ಟಿಕೊಂಡು/ರೂಪಿಸಿಕೊಂಡು ಮುನ್ನಡೆಸಲು ಒಳ್ಳೆಯ ನಡೆನುಡಿಗಳು ಅಗತ್ಯವೆಂಬುದನ್ನು ಅರಿಯದ/ತಿಳಿಯದ/ಮನಗಾಣದ ಜನರು ದೇವರನ್ನು ಬಹುಬಗೆಯ ಆಚರಣೆಗಳ ಮೂಲಕ ಪೂಜಿಸುತ್ತಿರುವುದನ್ನು ಈ ವಚನದಲ್ಲಿ ಟೀಕಿಸಲಾಗಿದೆ.

( ನೀರು=ಜಲ/ಉದಕ; ಕಾಣ್=ನೋಡು/ಗೋಚರಿಸು/ಕಣ್ಣಿಗೆ ಬೀಳು; ಕಂಡು+ಅಲ್ಲಿ; ಅಲ್ಲಿ=ಆ ಎಡೆ/ಜಾಗ; ಕಂಡಲ್ಲಿ=ಕಂಡ ಕಡೆಯಲ್ಲಿ/ಜಾಗದಲ್ಲಿ/ನೆಲೆಯಲ್ಲಿ; ಮುಳುಗುವರ್+ಅಯ್ಯಾ; ಮುಳುಗು=ನೀರಿನೊಳಗೆ ಮಯ್ಯನ್ನು ಅದ್ದುವುದು/ಮೀಯುವುದು/ಸ್ನಾನ ಮಾಡುವುದು; ಮುಳುಗುವರು=ಮೀಯುತ್ತಾರೆ/ಸ್ನಾನ ಮಾಡುತ್ತಾರೆ/ಮಯ್ ತೊಳೆದುಕೊಳ್ಳುತ್ತಾರೆ; ಅಯ್ಯಾ=ಇತರರನ್ನು ಒಲವು ನಲಿವುಗಳಿಂದ ಮಾತನಾಡಿಸುವಾಗ ಬಳಸುವ ಪದ;

ನೀರ ಕಂಡಲ್ಲಿ ಮುಳುಗುವರಯ್ಯಾ= ದೇಗುಲ ಇಲ್ಲವೇ ಪವಿತ್ರವಾದುದೆಂದು ಹೆಸರನ್ನು ಪಡೆದಿರುವ ನೆಲೆ/ಜಾಗ/ಊರಿನಲ್ಲಿರುವ ಕೆರೆ/ಕೊಳ/ತೊರೆ/ನದಿಗಳಲ್ಲಿ ಮೀಯುವರು/ಸ್ನಾನ ಮಾಡುವರು; ಇಂತಹ ನೀರಿನ ತಾಣಗಳಲ್ಲಿ ಮುಳುಗೇಳುವುದರಿಂದ ಜೀವನದಲ್ಲಿನ ನೋವು/ಸಂಕಟ/ಆಪತ್ತು/ರೋಗರುಜಿನಗಳು ನಿವಾರಣೆಗೊಂಡು, ಬಯಸಿದ ಬಯಕೆ/ಕಾಮನೆ/ಆಸೆಗಳೆಲ್ಲವೂ ಈಡೇರುವುವು ಮತ್ತು ವ್ಯಕ್ತಿಯು ತಿಳಿದು ಇಲ್ಲವೇ ತಿಳಿಯದೇ ಮಾಡಿದ ಕೆಟ್ಟ ಕೆಲಸಗಳಿಂದ ಬದುಕಿಗೆ ಅಂಟಿಕೊಂಡಿರುವ ಕೆಟ್ಟತನದ/ಪಾಪದ ಕೊಳೆಯು ತೊಳೆದುಹೋಗಿ ಒಳಿತು ಉಂಟಾಗುತ್ತದೆ/ಪುಣ್ಯ ದೊರೆಯುತ್ತದೆ ಎಂಬ ನಂಬಿಕೆಯು ತಲತಲಾಂತರಗಳಿಂದಲೂ ಜನಮನದಲ್ಲಿ ನೆಲೆಯೂರಿದೆ;

ಮರ=ತರು/ಹಚ್ಚಹಸಿರಿನ ರೆಂಬೆಕೊಂಬೆಗಳಿಂದ ಕೂಡಿರುವ ದೊಡ್ಡ ಗಿಡ; ಸುತ್ತುವರ್+ಅಯ್ಯಾ: ಸುತ್ತು=ಬಳಸು/ತಿರುಗು/ಅಲೆದಾಡು; ಸುತ್ತುವರು=ಬಳಸುತ್ತಾರೆ/ತಿರುಗುತ್ತಾರೆ;

ಮರನ ಕಂಡಲ್ಲಿ ಸುತ್ತುವರಯ್ಯಾ=ಮರದ ಬುಡದ ಸುತ್ತಲೂ ಹೆಜ್ಜೆಗಳನ್ನಿಡುತ್ತ ಮೂರು/ಏಳು/ಒಂಬತ್ತು/ಹನ್ನೊಂದು ಬಾರಿ ತಿರುಗುವರು; ಕೆಲವು ಬಗೆಯ ಮರಗಿಡಗಳಲ್ಲಿ ದೇವತೆಗಳು ನೆಲೆಸಿದ್ದಾರೆ ಎಂಬ ನಂಬಿಕೆಯು ಜನಮನದಲ್ಲಿದೆ. ದೇವರ ಕರುಣೆಗೆ/ಅನುಗ್ರಹಕ್ಕೆ ಪಾತ್ರರಾಗಿ ತಮ್ಮ ಬದುಕಿನಲ್ಲಿ ಒಳಿತನ್ನು ಹೊಂದುವ ಬಯಕೆಯಿಂದ ದೇವರ ಹೆಸರನ್ನು ಉಚ್ಚರಿಸುತ್ತಾ ಮರವನ್ನು ಸುತ್ತುವ ಆಚರಣೆಯು ಜನಸಮುದಾಯದಲ್ಲಿ ಕಂಡುಬರುತ್ತದೆ. ಕನ್ನಡ ಜನಸಮುದಾಯದಲ್ಲಿ ಅರಳಿ ಮರ/ಬಿಲ್ವ ಪತ್ರೆಯ ಮರ/ಬೇವಿನ ಮರ/ಎಕ್ಕದ ಗಿಡದ ಬಳಿಯಲ್ಲಿ ಈ ಬಗೆಯ ಆಚರಣೆಯು ಕಂಡು ಬರುತ್ತದೆ.

ಇನ್ನು ಕೆಲವರು ತಮ್ಮ ಜೀವನದ ಆಸೆ/ಬಯಕೆ/ಹಂಬಲಗಳನ್ನು ಈಡೇರಿಸುವಂತೆ ದೇವರ ಹೆಸರಿನಲ್ಲಿ ಹರಕೆಯನ್ನು ಕಟ್ಟಿಕೊಂಡು/ಮಾಡಿಕೊಂಡು, ಅದರ ಸಂಕೇತವಾಗಿ ನಾನಾ ಬಗೆಯ ವಸ್ತುಗಳನ್ನು ಬಟ್ಟೆಯ ತುಂಡಿನಲ್ಲಿ ಕಟ್ಟಿ ಮರಗಿಡಗಳ ಕೊಂಬೆರೆಂಬೆಗಳಿಗೆ ಬಿಗಿಯುತ್ತಾರೆ. ತಮ್ಮ ಕೋರಿಕೆಯು ಈಡೇರಿದರೆ, ದೇವರಿಗೆ ತಾವು ತಂದೊಪ್ಪಿಸುವುದಾಗಿ ಹೆಸರಿಸಿದ್ದ ಕಾಣಿಕೆಯನ್ನು ನೀಡುತ್ತಾರೆ. ಈ ಆಚರಣೆಗಳೆಲ್ಲವೂ ಜನಸಮುದಾಯದ ನಂಬಿಕೆ ಮತ್ತು ಸಂಪ್ರದಾಯಕ್ಕೆ ಒಳಪಟ್ಟಿವೆ;

ಬತ್ತು=ಒಣಗು/ಆರು/ಬರಿದಾಗು/ಇಲ್ಲವಾಗು; ಜಲ=ನೀರು/ಉದಕ; ಒಣಗು=ನೀರಿನ ಅಂಶ/ಜೀವರಸ ಇಲ್ಲದಂತಾಗುವುದು; ಬತ್ತುವ ಜಲ=ಬೇಸಿಗೆಯ ತಾಪದಲ್ಲಿ ನೀರು ಹಿಂಗಿಹೋಗಿ ಕೆರೆಕಟ್ಟೆಗಳು ಬರಿದಾಗುವುದು/ನೀರಿನ ಒರತೆಯು ಕಡಿಮೆಯಾಗಿ ನದಿ ತೊರೆಗಳಲ್ಲಿ ಹರಿಯುತ್ತಿದ್ದ ನೀರು ನಿಂತುಹೋಗುವುದು; ಒಣಗುವ ಮರ=ನೀರಿನ ಆಸರೆಯಿಲ್ಲದೆ ಇಲ್ಲವೇ ವಯಸ್ಸಾದ ಕಾರಣದಿಂದ ಬೇರುಗಳ ಕಸುವು ಕುಗ್ಗಿ ಜೀವರಸವನ್ನು ಕಳೆದುಕೊಂಡು ಮರ ಬೆಂಡಾಗುವುದು/ಒಣಗುವುದು;

ಮಚ್ಚು=ಮೆಚ್ಚು/ಒಲಿ/ಒಪ್ಪು/ಬಯಸು; ಮಚ್ಚಿದವರು=ಒಲಿದವರು/ಬಯಸುವವರು/ನಂಬಿದವರು; ನಿಮ್ಮನ್+ಎತ್ತ; ನಿಮ್ಮನ್=ಶಿವನನ್ನು/ಈಶ್ವರನನ್ನು; ಎತ್ತ=ಯಾವ ಕಡೆ/ಯಾವ ದಿಕ್ಕು/ಯಾವ ರೀತಿ/ಯಾವ ಬಗೆ; ಬಲ್=ತಿಳಿ/ಅರಿ; ಬಲ್ಲರು=ತಿಳಿದಿರುವರು/ಅರಿತಿರುವರು; ಕೂಡಲಸಂಗಮದೇವಾ=ಶಿವ/ಈಶ್ವರ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ;

ವಚನಕಾರ ಬಸವಣ್ಣನನ್ನು ಒಳಗೊಂಡಂತೆ ಶಿವಶರಣ-ಶರಣೆಯರೆಲ್ಲರ ಪಾಲಿಗೆ ದೇವರು ಎಂಬುವ ಶಕ್ತಿ/ವ್ಯಕ್ತಿಯು ಮರ/ಕಲ್ಲು/ಮಣ್ಣು/ಲೋಹದಿಂದ ರೂಪುಗೊಂಡಿದ್ದಾಗಿರಲಿಲ್ಲ. ದೇವರನ್ನು ಅವರು ವ್ಯಕ್ತಿಯ ಒಳ್ಳೆಯ ನಡೆನುಡಿಗಳಲ್ಲಿ ಕಾಣುತ್ತಿದ್ದರು. ‘ಒಳ್ಳೆಯ ನಡೆನುಡಿಗಳು’ ಎಂದರೆ ವ್ಯಕ್ತಿಯು ತನ್ನ ಜೀವನದಲ್ಲಿ ಆನಂದ/ನೆಮ್ಮದಿ/ಒಳಿತನ್ನು ಬಯಸುವಂತೆಯೇ ಸಹಮಾನವರ ಮತ್ತು ಸಮಾಜದ ಒಳಿತಿಗೆ ಪೂರಕವಾಗುವ/ನೆರವಾಗುವ ರೀತಿಯ ನಡೆನುಡಿಗಳನ್ನು ಹೊಂದಿರುವುದು.

ಜನಸಮುದಾಯವೆಲ್ಲವೂ ‘ಅನ್ನ/ಬಟ್ಟೆ/ವಸತಿ/ವಿದ್ಯೆ/ಉದ್ಯೋಗ/ಆರೋಗ್ಯ’ ಹೊಂದಿ, ಎಲ್ಲರೂ ಒಡಗೂಡಿ ಬಾಳಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯು ಇತರರನ್ನು ವಂಚಿಸದ/ಇತರರಿಗೆ ಕೇಡನ್ನೆಣಿಸದ ನಡೆನುಡಿಗಳನ್ನು ಹೊಂದಿರಬೇಕು. ಆಗ ಒಂದು ಒಳ್ಳೆಯ ಸಮಾಜ ರೂಪುಗೊಂಡು ಪ್ರತಿಯೊಬ್ಬ ವ್ಯಕ್ತಿಯ ಜೀವನ ಒಲವು ನಲಿವು ನೆಮ್ಮದಿಯಿಂದ ಕೂಡಿರುತ್ತದೆ. ಕೂಡಲಸಂಗಮದೇವನನ್ನು ತಿಳಿಯುವುದು/ಅರಿಯುವುದು ಎಂದರೆ ಸಾಮಾಜಿಕ ವ್ಯಕ್ತಿಯಾಗಿ ಒಳ್ಳೆಯ ರೀತಿಯಲ್ಲಿ ಬಾಳುವುದನ್ನು ಕಲಿಯುವುದು;

ಬತ್ತುವ ಜಲವ ಒಣಗುವ ಮರನ ಮಚ್ಚಿದವರು ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ=ಹಿಂಗಿಹೋಗುವ ನೀರನ್ನು , ಒಣಗಿಹೋಗುವ ಮರವನ್ನು ದೇವರೆಂದು ನಂಬಿರುವ ಜನರು ಒಳ್ಳೆಯ ನಡೆನುಡಿಯ ಸಂಕೇತವಾಗಿರುವ ನಿನ್ನನ್ನು ಹೇಗೆ ತಾನೆ ತಿಳಿಯಬಲ್ಲರು? ಒಳ್ಳೆಯ ನಡೆನುಡಿಗಳೇ ದೇವರು ಎಂದು ಅರಿತಾಗ ಮಾತ್ರ ಜನರು ಬಹು ಹಿಂದಿನಿಂದಲೂ ಸಂಪ್ರದಾಯವಾಗಿ ಬಂದಿರುವ ಆಚರಣೆಗಳನ್ನು ತೊರೆದು, ತಮ್ಮ ಬದುಕನ್ನು ಒಳ್ಳೆಯ ನಡೆನುಡಿಗಳಿಂದ ಉತ್ತಮವಾಗಿ ರೂಪಿಸಕೊಳ್ಳಬಲ್ಲರು ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಗೊಂಡಿವೆ. )

ದೇವಲೋಕ ಮರ್ತ್ಯಲೋಕವೆಂಬುದು
ಬೇರಿಲ್ಲ ಕಾಣಿರೋ
ಸತ್ಯವ ನುಡಿವುದೆ ದೇವಲೋಕ
ಮಿಥ್ಯವ ನುಡಿವುದೇ ಮರ್ತ್ಯಲೋಕ
ಆಚಾರವೆ ಸ್ವರ್ಗ
ಅನಾಚಾರವೆ ನರಕ
ಕೂಡಲಸಂಗಮದೇವಾ
ನೀವೆ ಪ್ರಮಾಣು.

ಅರಿವು, ಒಲವು, ನಲಿವುಗಳಿಂದ ಕೂಡಿದ ನೆಮ್ಮದಿಯ ಜೀವನಕ್ಕೆ ಇಲ್ಲವೇ ಕೋಪ ತಾಪ ಹತಾಶೆಗಳಿಂದ ಹದಗೆಟ್ಟ ಸಂಕಟದ ಜೀವನಕ್ಕೆ ವ್ಯಕ್ತಿಗಳ ನಡೆನುಡಿಗಳೇ ಕಾರಣ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

( ದೇವ=ದೇವತೆ/ದೇವರು/ಸುರ; ಲೋಕ=ಜಗತ್ತು/ಪ್ರಪಂಚ; ದೇವಲೋಕ=ಜನಮನದ ಕಲ್ಪನೆಯಲ್ಲಿ ರೂಪುಗೊಂಡಿರುವ ಒಂದು ಲೋಕ/ದೇವತೆಗಳು ನೆಲೆಸಿರುವ ಲೋಕ/ಜನಸಮುದಾಯದ ಮನದಲ್ಲಿ ತಾವು ವಾಸಮಾಡುತ್ತಿರುವ ಇಹಲೋಕದ ಮೇಲುಗಡೆಯಲ್ಲಿ ದೇವತೆಗಳು ನೆಲೆಸಿರುವ ದೇವಲೋಕ ಮತ್ತು ಕೆಳಗಡೆಯಲ್ಲಿ ನಾಗಸರ‍್ಪಗಳು ನೆಲೆಸಿರುವ ಪಾತಾಳಲೋಕವಿದೆ ಮತ್ತು ದೇವತೆಗಳು ಸಾವುನೋವುಗಳಿಲ್ಲದೆ ದೇವಲೋಕದಲ್ಲಿ ನೆಮ್ಮದಿಯಿಂದಿದ್ದಾರೆ ಎಂಬ ಕಲ್ಪನೆಯಿದೆ;

ಮರ್ತ್ಯಲೋಕ+ಎಂಬುದು; ಮರ್ತ್ಯ=ಮಾನವ/ಮನುಜ/ನರ; ಮರ್ತ್ಯಲೋಕ=ಮಾನವರು ನೆಲೆಸಿರುವ ಲೋಕ/ಮಾನವರು ಹುಟ್ಟಿ ಬೆಳೆದು ಬಾಳಿ ಸಾಯುತ್ತಿರುವ ಲೋಕ; ಎಂಬುದು=ಎನ್ನುವುದು; ಬೇರೆ+ಇಲ್ಲ; ಬೇರೆ=ಮತ್ತೊಂದು ರೀತಿಯಲ್ಲಿರುವುದು/ಬಗೆಯಲ್ಲಿರುವುದು; ಬೇರಿಲ್ಲ=ಮತ್ತೊಂದಿಲ್ಲ/ಇನ್ನೊಂದಿಲ್ಲ; ಕಾಣ್=ತಿಳಿ/ಅರಿ; ಕಾಣಿರೋ=ತಿಳಿದುಕೊಳ್ಳಿರಿ/ಅರಿತುಕೊಳ್ಳಿರಿ/ಮನಗಾಣಿರಿ;

ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ=ದೇವಲೋಕ ಮತ್ತು ಮರ‍್ತ್ಯಲೋಕವೆಂಬ ಎರಡು ಬೇರೆಬೇರೆಯಾಗಿರುವ ಲೋಕಗಳು ವಾಸ್ತವದಲ್ಲಿ ಇಲ್ಲ. ದೇವಲೋಕವೆಂಬುದು ಮಾನವರ ಮನದ ಕಲ್ಪನೆಯ ಲೋಕ. ಇರುವುದು ಒಂದೇ ಲೋಕ. ಅದು ಮರ್ತ್ಯಲೋಕ ಎಂಬುದನ್ನು ಮೊದಲು ಮನಗಾಣಿರಿ;

ಸತ್ಯ=ದಿಟ/ನಿಜ/ವಾಸ್ತವ/ಇರುವುದನ್ನು ಅದು ಇರುವಂತೆಯೇ ಕಾಣುವುದು/ತಿಳಿಯುವುದು; ಸತ್ಯವ=ಸತ್ಯವನ್ನು; ನುಡಿ=ಹೇಳು/ಮಾತನಾಡು/ಉಚ್ಚರಿಸು; ನುಡಿವುದೆ=ಮಾತನಾಡುವುದೆ/ಹೇಳುವುದೆ; ಮಿಥ್ಯ=ಹುಸಿ/ಸುಳ್ಳು/ಇರುವುದನ್ನು ಇಲ್ಲವೆಂದು-ಇಲ್ಲದ್ದನ್ನು ಇದೆಯೆಂದು ತಿಳಿಯುವುದು; ಮಿಥ್ಯೆಯ=ಮಿಥ್ಯೆಯನ್ನು;

ಸತ್ಯವ ನುಡಿವುದೆ ದೇವಲೋಕ=ಒಳಿತನ್ನುಂಟು ಮಾಡುವ ಉದ್ದೇಶದಿಂದ ವ್ಯಕ್ತಿಗಳು ಸತ್ಯವನ್ನು ನುಡಿಯುವುದರಿಂದ ಸಮಾಜದಲ್ಲಿ ಎಲ್ಲ ವ್ಯಕ್ತಿಗಳಿಗೂ ಅಗತ್ಯವಾದ ಅನ್ನ/ಬಟ್ಟೆ/ವಸತಿ/ವಿದ್ಯೆ/ಉದ್ಯೋಗ/ಆರೋಗ್ಯ ದೊರಕುವಂತಾಗಿ, ನೆಮ್ಮದಿಯ ಬದುಕು ನೆಲೆಗೊಳ್ಳುತ್ತದೆ. ‘ದೇವಲೋಕ’ ಎಂಬ ಪದವನ್ನು ಒಲವು ನಲಿವು ನೆಮ್ಮದಿಯಿಂದ ತುಂಬಿದ ಬದುಕಿಗೆ ಒಂದು ರೂಪಕವಾಗಿ ಬಳಸಲಾಗಿದೆ;

ಮಿಥ್ಯವ ನುಡಿವುದೆ ಮರ್ತ್ಯಲೋಕ=ಕೇಡನ್ನು ಬಗೆಯಲೆಂದು ವ್ಯಕ್ತಿಗಳು ಸುಳ್ಳನ್ನು/ಹುಸಿಯನ್ನಾಡಲು ತೊಡಗಿದಾಗ, ಜನಸಮುದಾಯದಲ್ಲಿ ವಂಚನೆ/ಕೊಲೆ/ಸುಲಿಗೆಗಳು ಹೆಚ್ಚಾಗಿ ಜನರ ಬದುಕು ಹಸಿವು/ಬಡತನ/ಅಪಮಾನದಿಂದ ಕೂಡಿ ಸಂಕಟಕ್ಕೆ ಗುರಿಯಾಗಿ ನರಳುತ್ತದೆ. ‘ಮರ‍್ತ್ಯಲೋಕ’ ಎಂಬ ಪದವನ್ನು ವಂಚನೆ/ಕ್ರೂರತನ/ಸಾವು/ನೋವುಗಳಿಗೆ ಒಂದು ರೂಪಕವಾಗಿ ಬಳಸಲಾಗಿದೆ;

ಆಚಾರ=ಒಳ್ಳೆಯ ನಡೆನುಡಿಗಳಿಂದ ಕೂಡಿದ ವರ‍್ತನೆ/ಒಳ್ಳೆಯ ನಡತೆ; ಅನಾಚಾರ=ಕೆಟ್ಟ ನಡೆನುಡಿಗಳಿಂದ ಕೂಡಿದ ವರ‍್ತನೆ/ಕೆಟ್ಟ ನಡತೆ;

ಸ್ವರ್ಗ–ನರಕ=ಮಾನವನ ಕಲ್ಪನೆಯಲ್ಲಿ ರೂಪುಗೊಂಡಿರುವ ಎರಡು ನೆಲೆಗಳು. ಸ್ವರ‍್ಗವು ನಲಿವಿನ ತಾಣ ಮತ್ತು ನರಕವು ನೋವಿನ ತಾಣವೆಂಬ ಕಲ್ಪನೆಯು ಜನಮನದಲ್ಲಿದೆ.

ಸ್ವರ‍್ಗವೆನ್ನುವುದು ಇಹಲೋಕದಲ್ಲಿ/ಈ ಲೋಕದಲ್ಲಿ ಜನರಿಗೆ ಒಳಿತನ್ನು ಮಾಡಿದ ವ್ಯಕ್ತಿಯು ಸತ್ತ ನಂತರ ಹೋಗಿ ನೆಲಸುವ ಜಾಗ. ಸ್ವರ‍್ಗಕ್ಕೆ ಹೋದ ವ್ಯಕ್ತಿಗಳಿಗೆ ಎಲ್ಲ ಬಗೆಯ ಆನಂದ ಮತ್ತು ನೆಮ್ಮದಿ ನಿರಂತರವಾಗಿ ದೊರೆಯುತ್ತದೆ ಎಂಬ ಕಲ್ಪನೆಯು ಜನಮನದಲ್ಲಿದೆ. ನರಕವೆನ್ನುವುದು ಈ ಲೋಕದಲ್ಲಿ ಜನರಿಗೆ ಕೇಡನ್ನು ಬಗೆದು ಸಾವನ್ನಪ್ಪಿದ ವ್ಯಕ್ತಿಯು , ಅನಂತರ ತಾನು ಮಾಡಿದ ಕೆಟ್ಟ ಕೆಲಸಗಳಿಗೆ ತಕ್ಕಂತೆ ನಾನಾ ಬಗೆಯ ದಂಡನೆಗಳಿಗೆ ಗುರಿಯಾಗಿ ನರಳುವ ಜಾಗ.

ಸ್ವರ‍್ಗ ಎಂಬ ಪದವನ್ನು ‘ಆನಂದ/ನೆಮ್ಮದಿ/ಒಲವು/ನಲಿವು’ ಗಳಿಗೆ ಒಂದು ರೂಪಕವಾಗಿ ಬಳಸಲಾಗಿದೆ; ‘ನರಕ’ ಎಂಬ ಪದವನ್ನು ‘ಸಂಕಟ/ನೋವು/ಯಾತನೆ/ಕೋಪತಾಪ’ ಗಳಿಗೆ ಒಂದು ರೂಪಕವಾಗಿ ಬಳಸಲಾಗಿದೆ;

ಆಚಾರವೆ ಸ್ವರ್ಗ=ಯಾವ ವ್ಯಕ್ತಿ/ವ್ಯಕ್ತಿಗಳು ಒಳ್ಳೆಯ ನಡೆನುಡಿಗಳಿಂದ ಬಾಳ್ವೆಯನ್ನು ನಡೆಸುತ್ತಾರೆಯೋ, ಅವರ ಜೀವನವು ಒಲವು, ನಲಿವು, ನೆಮ್ಮದಿಯಿಂದ ಕೂಡಿರುತ್ತದೆ; ಅನಾಚಾರವೆ ನರಕ=ಯಾವ ವ್ಯಕ್ತಿ/ವ್ಯಕ್ತಿಗಳು ಕೆಟ್ಟ ನಡೆನುಡಿಗಳಿಂದ ಬಾಳ್ವೆಯನ್ನು ನಡೆಸುತ್ತಾರೆಯೋ, ಅವರ ಜೀವನವು ಸಾವು/ನೋವು/ಸಂಕಟ/ಒತ್ತಡ/ಅಪಮಾನಗಳ ಬೇಗುದಿಯಲ್ಲಿ ಬೇಯುತ್ತದೆ;

ಕುಟುಂಬದ ನೆಲೆಯಲ್ಲಿ/ದುಡಿಮೆಯ ನೆಲೆಯಲ್ಲಿ/ಸಾರ‍್ವಜನಿಕ ನೆಲೆಯಲ್ಲಿ ಸಂಕಟ/ಅಪಮಾನ/ದುಗುಡ/ಸಾವು/ನೋವಿನ ಸನ್ನಿವೇಶಗಳು ಉಂಟಾದಾಗ/ಪ್ರಸಂಗಗಳು ನಡೆದಾಗ ವ್ಯಕ್ತಿಯು ಕೆಲವೊಮ್ಮೆ ತನಗೆ ತಾನೇ ಇಲ್ಲವೇ ಇತರರೊಡನೆ ಮಾತನಾಡುವಾಗ ‘ನನ್ನ ಜೀವನವೇ ನರಕವಾಗಿದೆ — ನಮ್ಮ ಮನೆಯೇ ನರಕವಾಗಿದೆ — ನಾನು ಕೆಲಸ ಮಾಡುವ ಜಾಗವೇ ನರಕವಾಗಿದೆ — ನಮ್ಮೂರೇ ನರಕವಾಗಿದೆ’ ಎಂದು ಹೇಳುವುದನ್ನು ನಾವೆಲ್ಲರೂ ಕೇಳುತ್ತಿರುತ್ತೇವೆ. ಮಾನವ ಲೋಕದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಆಗುಹೋಗುಗಳು ಇತರ ವ್ಯಕ್ತಿಗಳ ನಡೆನುಡಿಯನ್ನು ಅವಲಂಬಿಸಿರುವುದರಿಂದ ಒಬ್ಬ ವ್ಯಕ್ತಿಯ ಕೆಟ್ಟ ನಡೆನುಡಿಯು ಅವನನ್ನು ಹಾಳುಮಾಡುವುದರ ಜತೆಜತೆಗೆ , ಅವನನ್ನು ಅವಲಂಬಿಸಿರುವ ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿಗಳನ್ನು ಬಲಿತೆಗೆದುಕೊಳ್ಳುತ್ತದೆ/ಸಮಾಜಕ್ಕೂ ಕೇಡನ್ನುಂಟುಮಾಡುತ್ತದೆ.

ಆದುದರಿಂದ ಜನರ ಬದುಕನ್ನು ಸ್ವರ‍್ಗದಂತೆ ಆನಂದಮಯವಾಗಿ ಅಂದಚಂದದಿಂದ ರೂಪಿಸುವ ಇಲ್ಲವೇ ನರಕದಂತೆ ಸಂಕಟಮಯವಾಗಿ ಹಾಳುಗೆಡಹುವ ಕ್ರಿಯೆಯು ವ್ಯಕ್ತಿಗಳ ಒಳಿತು/ಕೆಡುಕಿನ ನಡೆನುಡಿಯನ್ನು ಅವಲಂಬಿಸಿದೆ ಎಂಬ ವಿಚಾರವನ್ನು ‘ಆಚಾರವೆ ಸ್ವರ್ಗ ಅನಾಚಾರವೇ ನರಕ’ ಎಂಬ ನುಡಿಗಳು ಸೂಚಿಸುತ್ತಿವೆ. ಒಬ್ಬ ವ್ಯಕ್ತಿಯ ಜೀವನದಲ್ಲಿನ ಏಳುಬೀಳುಗಳಿಂದ ತೊಡಗಿ ಒಂದು ಕುಟುಂಬ/ಒಂದು ಸಮಾಜ/ಒಂದು ದೇಶ/ಒಟ್ಟಾರೆಯಾಗಿ ಮಾನವ ಜಗತ್ತಿನ ಆಗುಹೋಗುಗಳಿಗೆ ಈ ನುಡಿಗಳು ಅನ್ವಯವಾಗುತ್ತವೆ;

ಕೂಡಲಸಂಗಮದೇವಾ=ಶಿವ/ದೇವರು/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ; ನೀವೆ=ದೇವರಾದ ನೀವು; ಪ್ರಮಾಣು=ಒರೆಹಚ್ಚಿ ನೋಡುವುದು/ಸರಿ ತಪ್ಪುಗಳನ್ನು ಅಳೆದು ನೋಡುವುದು/ಕಾರ‍್ಯ ಕಾರಣಗಳನ್ನು ತಿಳಿಯುವುದು;

ಕೂಡಲಸಂಗಮದೇವಾ ನೀವೆ ಪ್ರಮಾಣು=ವ್ಯಕ್ತಿಗಳ ಒಳಿತು ಕೆಡುಕಿನ ನಡೆನುಡಿಗಳನ್ನು ಸದಾಕಾಲ ಕೂಡಲಸಂಗಮನು ಒರೆಹಚ್ಚಿ ನೋಡುತ್ತಿರುತ್ತಾನೆ ಎಂಬ ನಂಬಿಕೆಯಿಂದ ಕೂಡಿದ್ದ ಶಿವಶರಣಶರಣೆಯರು ಜೀವನದ ಉದ್ದಕ್ಕೂ ಒಳಿತಿನ ನಡೆನುಡಿಗಳಿಂದ ಬಾಳಬೇಕೆಂಬ ಎಚ್ಚರವನ್ನು ಹೊಂದಿದ್ದರು. )

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: