ಬಸವಣ್ಣನ ವಚನಗಳ ಓದು – 9ನೆಯ ಕಂತು

–  ಸಿ.ಪಿ.ನಾಗರಾಜ.

ಬಸವಣ್ಣ,, Basavanna

ನೋಡುವರುಳ್ಳಡೆ
ಮಾಡುವೆ ದೇಹಾರವ
ಎನಗೊಂದು ನಿಜವಿಲ್ಲ
ಎನಗೊಂದು ನಿಷ್ಪತ್ತಿಯಿಲ್ಲ
ಲಿಂಗವ ತೋರಿ
ಉದರವ ಹೊರೆವ ಭಂಗಗಾರ ನಾನು
ಕೂಡಲಸಂಗಮದೇವಾ.

ತನ್ನ ದಿನನಿತ್ಯದ ವ್ಯವಹಾರಗಳಲ್ಲಿ ಒಳ್ಳೆಯ ನಡೆನುಡಿಗಳನ್ನು ಹೊಂದಿರದ ವ್ಯಕ್ತಿಯು ಮಾಡುವ ದೇವರ ಪೂಜೆಯು ಇತರರನ್ನು ಓಲಯಿಸಿ ಒಲಿಸಿಕೊಂಡು ಹೊಟ್ಟೆಯನ್ನು ಹೊರೆದುಕೊಳ್ಳುವ ವಂಚನೆಯ/ಬೂಟಾಟಿಕೆಯ/ತೋರಿಕೆಯ ಕಸುಬು/ಕೆಲಸವಾಗಿರುತ್ತದೆ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

(ನೋಡು+ಅರ್+ಉಳ್ಳಡೆ; ನೋಡು=ಕಾಣು/ಗಮನಿಸು; ಉಳ್ಳ್=ಇರು; ಉಳ್ಳಡೆ=ಇದ್ದರೆ; ನೋಡುವರುಳ್ಳಡೆ=ನೋಡುವವರು ಇದ್ದಾಗ; ಮಾಡು=ಆಚರಿಸು/ನೆರವೇರಿಸು/ನಡೆದುಕೊಳ್ಳು; ಮಾಡುವೆ=ಮಾಡುತ್ತೇನೆ; ದೇಹಾರ=ಪೂಜೆ/ಅರ‍್ಚನೆ/ದೇವರಿಗೆ ಎಡೆಯನ್ನು ನೀಡುವ ಆಚರಣೆ; ದೇಹಾರವ=ದೇವರ ಪೂಜೆಯನ್ನು;

ನೋಡುವರುಳ್ಳಡೆ ಮಾಡುವೆ ದೇಹಾರವ=ಇತರರು ನನ್ನನ್ನು ಗಮನಿಸುತ್ತಿದ್ದಾರೆ ಎಂಬುದನ್ನು ತಿಳಿದಾಗ, ದೇವರಲ್ಲಿ ಅಪಾರವಾದ ಒಲವು ನಲಿವು ನಂಬಿಕೆಗಳನ್ನು ಇಟ್ಟಿರುವ ವ್ಯಕ್ತಿಯಂತೆ ಪೂಜೆಯಲ್ಲಿ ತೊಡಗುತ್ತೇನೆ. ಏಕೆಂದರೆ ನೋಡುವವರ ಮೆಚ್ಚುಗೆ/ಒಲವು/ಕರುಣೆಗೆ ಪಾತ್ರನಾಗಿ, ಅವರಿಂದ ನನಗೆ ಅಗತ್ಯವಾದುದನ್ನು/ಬೇಕಾದುದನ್ನು ಪಡೆಯಬೇಕೆಂಬ ಉದ್ದೇಶ ನನ್ನದಾಗಿರುತ್ತದೆ;

ಎನಗೆ+ಒಂದು; ಎನಗೆ=ನನಗೆ; ನಿಜ+ಇಲ್ಲ; ನಿಜ=ದಿಟ/ಸತ್ಯ/ವಾಸ್ತವ; ಎನಗೊಂದು ನಿಜವಿಲ್ಲ=ದಿನನಿತ್ಯದ ಜೀವನದ ವ್ಯವಹಾರಗಳಲ್ಲಿ ಸತ್ಯದ/ದಿಟದ ನಡೆನುಡಿಗಳಿಂದ ನಾನು ಬಾಳುತ್ತಿಲ್ಲ; ನಿಷ್ಪತ್ತಿ+ಇಲ್ಲ; ನಿಷ್ಪತ್ತಿ=ನಿರ‍್ಣಯ/ತೀರ‍್ಮಾನ/ನಿಲುವು; ಎನಗೊಂದು ನಿಷ್ಪತ್ತಿಯಿಲ್ಲ=ಬದುಕಿನಲ್ಲಿ ಯಾವುದು ಒಳಿತು-ಯಾವುದು ಕೆಡುಕು ಎಂಬುದನ್ನು ಅರಿತುಕೊಂಡು, ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನು ಅನುಸರಿಸಬೇಕೆಂಬ ಗಟ್ಟಿಯಾದ ನಿಲುವನ್ನು ನಾನು ಹೊಂದಿಲ್ಲ;

ಲಿಂಗ=ಶಿವನ ಸಂಕೇತವಾದ ವಿಗ್ರಹ/ಈಶ್ವರ/ದೇವರು; ತೋರು=ಇತರರು ಕಾಣುವಂತೆ ಮಾಡು/ಇತರರ ಕಣ್ಣಿಗೆ ಬೀಳುವಂತೆ ಮಾಡು; ಉದರ=ಹೊಟ್ಟೆ/ಒಡಲು; ಹೊರೆ=ಕಾಪಾಡು/ಸಲಹು;

ಲಿಂಗವ ತೋರಿ ಉದರವ ಹೊರೆವುದು=ದೇವರನ್ನು ಮುಂದೆ ಮಾಡಿಕೊಂಡು/ದೇವರ ಹೆಸರಿನಲ್ಲಿ/ದೇವರ ಪೂಜೆಯ ನೆಪದಲ್ಲಿ ಹೊಟ್ಟೆಯ ಪಾಡನ್ನು ನೀಗಿಸಿಕೊಳ್ಳುವುದು/ಹಣವನ್ನು ಸಂಪಾದನೆ ಮಾಡುವುದು;

ಭಂಗ=ಕಪಟ/ಮೋಸ/ವಂಚನೆ; ಭಂಗಗಾರ=ಕಪಟಿ/ಮೋಸಗಾರ/ವಂಚಕ; ಕೂಡಲಸಂಗಮದೇವ=ಶಿವ/ಈಶ್ವರ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ;

ಲಿಂಗವ ತೋರಿ ಉದರವ ಹೊರೆವ ಭಂಗಗಾರ ನಾನು ಕೂಡಲಸಂಗಮದೇವಾ=ಶಿವಶರಣಶರಣೆಯರ ಪಾಲಿಗೆ ಲಿಂಗ/ಶಿವ/ದೇವರು ಎಂಬುದು ಒಳ್ಳೆಯ ನಡೆನುಡಿಗಳಿಗೆ ಒಂದು ಸಂಕೇತವಾಗಿತ್ತು. ವ್ಯಕ್ತಿಯು ಆಡುವ ಒಳ್ಳೆಯ ಮಾತು ಮತ್ತು ಮಾಡುವ ಒಳ್ಳೆಯ ಕಾಯಕವೇ ಲಿಂಗದ ಪೂಜೆಯಾಗಿತ್ತು. ಆದರೆ ಜನಸಮುದಾಯದಲ್ಲಿ ಬಹುತೇಕ ಮಂದಿ ತಂತಮ್ಮ ಆಸೆ/ಬಯಕೆ/ಹಂಬಲಗಳ ಈಡೇರಿಕೆಗಾಗಿ ದೇವರನ್ನು ಪೂಜಿಸುತ್ತಿದ್ದಾರೆಯೇ ಹೊರತು ಒಳ್ಳೆಯ ನಡೆನುಡಿಗಳ ಆಚರಣೆಯೇ ದೇವರು ಎಂಬ ಅರಿವನ್ನು ಹೊಂದಿಲ್ಲ ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಗೊಂಡಿವೆ.)

ದಯವಿಲ್ಲದ ಧರ್ಮವದೇವುದಯ್ಯಾ
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.

ಮಾನವನ ಜೀವನದಲ್ಲಿ ದರ‍್ಮವೆಂಬುದು ವ್ಯಕ್ತಿಯ ಅರಿವು, ಹೊಣೆಗಾರಿಕೆ ಮತ್ತು ಒಲವಿನಿಂದ ಕೂಡಿದ ಕರುಣೆಯ ನಡೆನುಡಿಯನ್ನು ಅಡಿಪಾಯವನ್ನಾಗಿ/ತಳಹದಿಯನ್ನಾಗಿ ಹೊಂದಿರಬೇಕೆಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

( ದಯ+ಇಲ್ಲದ; ದಯ=ದಯೆ/ಕರುಣೆ/ಕನಿಕರ/ಮರುಕ/ಅನುಕಂಪ/ಇತರರ ನೋವು-ಸಂಕಟವನ್ನು ಕಂಡು ಮರುಗಿ, ಅದನ್ನು ನಿವಾರಿಸಲು ನೆರವು ನೀಡುವುದು; ಇಲ್ಲ=ಯಾವುದೇ ಒಂದು ವಸ್ತು/ಜೀವಿ/ಸಂಗತಿಯು ಕಾಣದಿರುವುದು; ಧರ್ಮ+ಅದು+ಏವುದು+ಅಯ್ಯಾ; ಧರ್ಮ=ನಿಯಮ/ಆಚಾರ/ಸಂಪ್ರದಾಯ/ಕಟ್ಟುಪಾಡು/ಕಟ್ಟಳೆ; ಏವುದು=ಯಾವುದು/ಏನು ಪ್ರಯೋಜನ; ಅಯ್ಯಾ=ಇತರರೊಡನೆ ಒಲವು ನಲಿವಿನಿಂದ ಮಾತನಾಡುವಾಗ ಬಳಸುವ ಪದ;

ದಯವಿಲ್ಲದ ಧರ್ಮವದೇವುದಯ್ಯಾ=ಕರುಣೆ/ಕನಿಕರ/ಅನುಕಂಪದ ನಡೆನುಡಿಗಳನ್ನು ವ್ಯಕ್ತಿಯು ತನ್ನ ನಿತ್ಯ ಜೀವನದ ವ್ಯವಹಾರದಲ್ಲಿ ಅಳವಡಿಸಿಕೊಂಡು ಬಾಳದಿದ್ದರೆ/ದರ‍್ಮದ ಹೆಸರಿನಲ್ಲಿ ಇತರ ದರ‍್ಮದವರನ್ನು ಕಡೆಗಣಿಸಿದರೆ/ಕ್ರೂರವಾಗಿ ಹಿಂಸಿಸಿದರೆ/ಸಾವು ನೋವುಗಳಿಗೆ ಗುರಿಮಾಡಿದರೆ ಅಂತಹ ದರ‍್ಮದಿಂದ ಏನು ತಾನೇ ಪ್ರಯೋಜನ/ಯಾವ ಬಗೆಯಲ್ಲಿ ಒಳ್ಳೆಯದಾಗುತ್ತದೆ;

ಬೇಕು=ಅಗತ್ಯ/ಅವಶ್ಯ ; ಸರ್ವ+ಪ್ರಾಣಿ+ಗಳ್+ಎಲ್ಲರ್+ಅಲ್ಲಿ; ಸರ್ವ=ಎಲ್ಲ/ಸಕಲ/ಸಮಸ್ತ; ಪ್ರಾಣಿ=ಜೀವಿ/ಜೀವವುಳ್ಳ ಕ್ರಿಮಿಕೀಟಗಳು/ಜಂತುಗಳು/ಮಾನವರು; ಎಲ್ಲ=ಸಕಲ/ಸಮಸ್ತ/ಯಾವುದನ್ನು ಬಿಡದಂತೆ/ಸರ‍್ವವನ್ನು ಒಳಗೊಂಡು; ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ=ಜಗತ್ತಿನಲ್ಲಿರುವ ಎಲ್ಲಾ ಜೀವರಾಶಿಗಳನ್ನು ಕರುಣೆಯಿಂದ ಕಾಣಬೇಕು/ಯಾವೊಂದು ಜೀವಿಯನ್ನು ನೋಯಿಸಬಾರದು/ಕೊಲ್ಲಬಾರದು; ಮೂಲ+ಅಯ್ಯಾ; ಮೂಲ=ಹುಟ್ಟುವ ಜಾಗ/ಉಗಮದ ನೆಲೆ/ಆಕರ;

ದಯವೇ ಧರ್ಮದ ಮೂಲ=ಕರುಣೆಯ ನಡೆನುಡಿಯು ದರ‍್ಮದ ಅಡಿಪಾಯವಾಗಬೇಕು. ಕರುಣೆಯ ನಡೆನುಡಿ ಎಂದರೆ ಇತರರೊಡನೆ ಸಹನೆಯಿಂದ/ತಾಳ್ಮೆಯಿಂದ ನಡೆದುಕೊಳ್ಳುವುದು/ಸಹಮಾನವನ ನೋವು, ಸಂಕಟ, ಹಸಿವು, ಅಪಮಾನ, ಬಡತನವನ್ನು ಕಂಡಾಗ, ಅದಕ್ಕಾಗಿ ಮರುಗಿ ಅದನ್ನು ನಿವಾರಿಸುವುದಕ್ಕಾಗಿ ತನ್ನ ಕಯ್ಯಲ್ಲಾದ ನೆರವನ್ನು ನೀಡುವುದು.

ಕೂಡಲಸಂಗಯ್ಯನ್+ಅಂತು+ಅಲ್ಲದೆ+ಒಲ್ಲನ್+ಅಯ್ಯಾ; ಕೂಡಲಸಂಗಯ್ಯ=ಶಿವ/ಈಶ್ವರ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ; ಅಂತು=ಆ ರೀತಿಯಲ್ಲಿ/ಆ ಬಗೆಯಲ್ಲಿ; ಅಂತಲ್ಲದೆ=ಆ ರೀತಿಯಲ್ಲಿ ಇರದಿದ್ದರೆ; ಒಲ್=ಮೆಚ್ಚು/ಒಪ್ಪು/ಬಯಸು/ಸಮ್ಮತಿಸು; ಒಲ್ಲನ್=ಮೆಚ್ಚುವುದಿಲ್ಲ/ನಿರಾಕರಿಸುತ್ತಾನೆ ;

ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ=ದೇವರ ಮೆಚ್ಚುಗೆಗೆ ಪಾತ್ರನಾಗಬೇಕಾದರೆ ಮಾನವೀಯ ಗುಣಗಳಲ್ಲಿ ಬಹು ದೊಡ್ಡದು ಎನಿಸಿರುವ ಕರುಣೆಯ ನಡೆನುಡಿಗಳು ವ್ಯಕ್ತಿಯಲ್ಲಿ ಇರಬೇಕು ಎಂಬುದನ್ನು ಈ ನುಡಿಗಳು ಸೂಚಿಸುತ್ತಿವೆ.

ಜನರು ತಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಏನಾದರೂ ತಂಟೆ ತಕರಾರುಗಳು ಉಂಟಾದಾಗ ‘ಒಸಿ ದರ‍್ಮ ಕರ‍್ಮ ನೋಡಿ ಮಾತಾಡಪ್ಪ’ ಎನ್ನುತ್ತಾರೆ. ಆಗ ದರ‍್ಮ ಎಂಬ ಪದ ‘ಸರಿ/ನ್ಯಾಯ/ದಿಟ/ನೀತಿ’ ಮತ್ತು ಕರ‍್ಮ ಎಂಬ ಪದ ‘ತಪ್ಪು/ಅನ್ಯಾಯ/ಸುಳ್ಳು/ಅನೀತಿ’ ಎಂಬ ತಿರುಳಿನಲ್ಲಿ ಬಳಕೆಗೊಳ್ಳುತ್ತವೆ.

ಆದರೆ ಜಗತ್ತಿನಲ್ಲಿರುವ ಮಾನವ ಸಮುದಾಯಗಳಲ್ಲಿ ಬೇರೆ ಬೇರೆ ಬಗೆಯ ಹೆಸರಿನ ದರ‍್ಮಗಳು ಆಚರಣೆಯಲ್ಲಿವೆ. ಇವು ಜನರು ಕಟ್ಟಿಕೊಂಡಿರುವ ಸಾಮಾಜಿಕ ಒಕ್ಕೂಟಗಳಾಗಿವೆ. ಪ್ರತಿಯೊಂದು ದರ‍್ಮವೂ ತನ್ನದೇ ಆದ ಸಂಪ್ರದಾಯ/ಆಚರಣೆ/ಕಟ್ಟುಪಾಡುಗಳನ್ನು ಹೊಂದಿರುತ್ತದೆ. ಒಂದು ದರ‍್ಮದ ಸಮುದಾಯದಲ್ಲಿ ಹುಟ್ಟಿ ಬೆಳೆದ ಇಲ್ಲವೇ ಆ ದರ‍್ಮಕ್ಕೆ ಹೊಸದಾಗಿ ಸೇರಿದ ವ್ಯಕ್ತಿಯು ಯಾವ ದೇವರನ್ನು ಪೂಜಿಸಬೇಕು/ಪೂಜಿಸಬಾರದು; ದೇವರನ್ನು ಪೂಜಿಸುವ ಆಚರಣೆಗಳು ಯಾವ ರೀತಿಯಲ್ಲಿರಬೇಕು/ಇರಬಾರದು; ದೇಗುಲದೊಳಕ್ಕೆ ಯಾರು ಹೋಗಬೇಕು/ಹೋಗಬಾರದು; ಯಾವ ಬಗೆಯ ಉಣಿಸು ತಿನಸುಗಳನ್ನು ತಿನ್ನಬೇಕು/ತಿನ್ನಬಾರದು; ಯಾರೊಡನೆ ಕುಳಿತು ಉಣ್ಣಬೇಕು/ಉಣ್ಣಬಾರದು; ಯಾರೊಡನೆ ಮದುವೆಯಾಗಬೇಕು/ಮದುವೆಯಾಗಬಾರದು; ಯಾವ ಬಗೆಯ ಉಡುಗೆಗಳನ್ನು ತೊಡಬೇಕು/ತೊಡಬಾರದು; ಯಾವ ವ್ಯಕ್ತಿಯನ್ನು ಮುಟ್ಟಿಸಿಕೊಳ್ಳಬಹುದು/ಮುಟ್ಟಿಸಿಕೊಳ್ಳಬಾರದು; ಸತ್ತಾಗ ವ್ಯಕ್ತಿಯ ದೇಹವನ್ನು ಯಾವ ಮಸಣದಲ್ಲಿ ಸುಡಬೇಕು/ಸುಡಬಾರದು, ಹೂಳಬೇಕು/ಹೂಳಬಾರದು ಎಂಬೆಲ್ಲಾ ಕಟ್ಟುಪಾಡುಗಳಿರುತ್ತವೆ.

ಆಯಾ ದರ‍್ಮಕ್ಕೆ ಸೇರಿದ ವ್ಯಕ್ತಿಗಳು ತಂತಮ್ಮ ದರ‍್ಮದಲ್ಲಿರುವ ಸಂಪ್ರದಾಯಗಳನ್ನು ತಮ್ಮ ದಿನನಿತ್ಯದ ಬದುಕಿನ ಆಗುಹೋಗುಗಳಲ್ಲಿ/ವ್ಯವಹಾರಗಳಲ್ಲಿ ಕಡ್ಡಾಯವಾಗಿ ಪಾಲಿಸುತ್ತಿರಬೇಕೆಂಬ ಕಟ್ಟಳೆಯಿರುತ್ತದೆ. ತಮ್ಮ ದರ‍್ಮದ ಸಂಪ್ರದಾಯ/ಆಚರಣೆ/ನಿಯಮಗಳ ಎಲ್ಲೆಯನ್ನು ಮೀರಬಾರದೆಂಬ ಕಟ್ಟುಪಾಡುಗಳಿರುತ್ತವೆ. ದರ‍್ಮದ ಎಲ್ಲೆಯನ್ನು ದಾಟಿ ನಡೆದವರನ್ನು ಸಮುದಾಯದಿಂದ ಹೊರಹಾಕುವ/ದಂಡನೆಯನ್ನು ನೀಡುವ ಕಸುವನ್ನು ಆಯಾಯ ದರ‍್ಮದ ನೇತಾರರು ಹೊಂದಿರುತ್ತಾರೆ.

ಈ ರೀತಿ ದರ‍್ಮದ ನೆಲೆಯಲ್ಲಿ ಹುಟ್ಟಿ ಬೆಳೆದು, ಅದರಲ್ಲಿನ ಆಚಾರ ವಿಚಾರಗಳಿಗೆ ತಕ್ಕಂತೆ ಸಾಮಾಜಿಕ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವ ವ್ಯಕ್ತಿಗಳು ಸಮಾಜದಲ್ಲಿ ತಮ್ಮ ನೆರೆಹೊರೆಯಲ್ಲಿ ಬಾಳುತ್ತಿರುವ ಇತರ ದರ‍್ಮಗಳ ಜನರ ಬಗ್ಗೆ ಅಸಹನೆ/ಅಪನಂಬಿಕೆ/ಅಸೂಯೆ/ಹಗೆತನದ ಒಳಮಿಡಿತಗಳನ್ನು ಹೊಂದಿರುತ್ತಾರೆ. ಇದಕ್ಕೆ ಕಾರಣವೇನೆಂದರೆ ಇತರ ದರ‍್ಮದವರು ಹೊಂದಿರುವ ಆಸ್ತಿಪಾಸ್ತಿ/ಸಂಪತ್ತು/ರಾಜಕೀಯ ಗದ್ದುಗೆ/ಸಾಮಾಜಿಕ ಅಂತಸ್ತು. ಪ್ರತಿಯೊಂದು ದರ‍್ಮದಲ್ಲಿಯೂ ಜಾತಿ/ಉಪಜಾತಿಗಳು/ಬಡವ ಬಲ್ಲಿದರೆಂಬ ವರ‍್ಗಗಳು ಇರುತ್ತವೆ. ಇವು ಒಂದಕ್ಕಿಂತ ಮತ್ತೊಂದು ಮೇಲು ಇಲ್ಲವೇ ಕೀಳು ಎಂಬ ಸಾಮಾಜಿಕ ಅಂತಸ್ತಿನ ಮೆಟ್ಟಿಲುಗಳಿಂದ ಕೂಡಿರುತ್ತವೆ. ಒಂದು ದರ‍್ಮಕ್ಕೆ ಸೇರಿದ ಜನಸಮುದಾಯದಲ್ಲಿಯೇ ಮೇಲು ಜಾತಿ/ಮೇಲು ವರ‍್ಗಕ್ಕೆ ಸೇರಿದ ಜನರು ಕೆಳಜಾತಿ/ಕೆಳ ವರ‍್ಗಕ್ಕೆ ಸೇರಿದ ಜನರ ಮೇಲೆ ಕ್ರೂರತನದಿಂದ ದಬ್ಬಾಳಿಕೆಯನ್ನು ನಡೆಸುವುದಲ್ಲದೆ, ಅವರನ್ನು ಕೀಳಾಗಿ ಕಾಣುತ್ತಾರೆ.

ಈ ರೀತಿ ಸಾಮಾಜಿಕ ಒಕ್ಕೂಟವಾಗಿ ರಚನೆಗೊಂಡಿರುವ ‘ದರ‍್ಮ’ ಎನ್ನುವುದು ಜನಸಮುದಾಯಗಳನ್ನು ಬೇರೆ ಬೇರೆ ಗುಂಪುಗಳನ್ನಾಗಿ ವಿಂಗಡಿಸುವ, ಪರಸ್ಪರ ಒಂದರ ಎದುರಾಗಿ ಮತ್ತೊಂದನ್ನು ನಿಲ್ಲಿಸುವ/ಎತ್ತಿಕಟ್ಟುವ ಮತ್ತು ಇತರ ದರ‍್ಮದವರನ್ನು ಯಾವ ಹಿಂಜರಿಕೆಯೂ ಇಲ್ಲದೆ/ಆಡಳಿತದ ಕಾನೂನು ಕಟ್ಟಲೆಗಳನ್ನು ಲೆಕ್ಕಿಸದೆ ದರ‍್ಮದ ಹೆಸರಿನಲ್ಲಿ ಕೊಲೆ ಸುಲಿಗೆ ಮಾಡಲು ಬಳಸಿಕೊಳ್ಳುವ ಹರಿತವಾದ ಹತಾರವಾಗಿದೆ.

ಈ ಹಿನ್ನೆಲೆಯಿಂದ ನೋಡಿದಾಗ ಜಗತ್ತಿನ ಜನಸಮುದಾಯಗಳಲ್ಲಿ/ದೇಶಗಳಲ್ಲಿ/ರಾಜ್ಯಗಳಲ್ಲಿ ಆಚರಣೆಯಲ್ಲಿರುವ ಬಹುಬಗೆಯ ದರ‍್ಮಗಳು ಜನರು ಪರಸ್ಪರ ಒಲವು ನಲಿವು ನೆಮ್ಮದಿಯಿಂದ ಜತೆಗೂಡಿ ಬಾಳುವುದಕ್ಕೆ ನೂರಾರು ಬಗೆಯ ಅಡೆತಡೆಗಳನ್ನು ಒಡ್ಡಿವೆ. ರಾಜ ಮಹಾರಾಜರು ಆಳುತ್ತಿದ್ದ ಕಾಲದಲ್ಲಿ ರಾಜ್ಯಗಳ ವಿಸ್ತರಣೆಗಾಗಿ ನಡೆದ ಕದನಗಳಲ್ಲಿ ಹರಿದ ಮಾನವ ರಕ್ತಕ್ಕಿಂತಲೂ ದರ‍್ಮದ ಹೆಸರಿನಲ್ಲಿ ನಡೆದ ಕೊಲೆ ಸುಲಿಗೆಯಲ್ಲಿ ಹರಿದ ನೆತ್ತರಿನ ಪ್ರಮಾಣವೇ ಹೆಚ್ಚು ಎಂಬುದು ಜಗತ್ತಿನ ಚರಿತ್ರೆಯ ಉದ್ದಕ್ಕೂ ಕಂಡುಬರುತ್ತದೆ. ಆದ್ದರಿಂದ ದರ‍್ಮವೆಂಬುದು ಬಹಿರಂಗದಲ್ಲಿ ಮಾನವ ಸಮುದಾಯಗಳ ಜೀವನದ ಆಚರಣೆ/ಸಂಪ್ರದಾಯ/ಕಟ್ಟುಪಾಡುಗಳ ಪಾಲನೆಯಂತೆ ಕಂಡುಬಂದರೆ, ಅಂತರಂಗದಲ್ಲಿ ಮಾನವ ಸಮುದಾಯಗಳನ್ನು ನೂರಾರು ಬಗೆಯ ಸಾವು/ನೋವುಗಳಿಗೆ ಗುರಿಮಾಡುವ ಸಂಗತಿಗಳನ್ನು ಒಳಗೊಂಡಿದೆ.ಈ ಹಿನ್ನೆಲೆಯಲ್ಲಿ ದರ‍್ಮದ ಆಚರಣೆಯಲ್ಲಿ ಕರುಣೆಯ ನಡೆನುಡಿಗಳು ತುಂಬಾ ದೊಡ್ಡ ಪಾತ್ರವನ್ನು ವಹಿಸಬೇಕೆಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.)

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: