ಕವಿತೆ: ಅಕ್ಕನ ಕನಸು

– ಚಂದ್ರಗೌಡ ಕುಲಕರ‍್ಣಿ.

ಅಕ್ಕ ಮಹಾದೇವಿ, Akka Mahadevi

ಅಡಿಗಡಿಗೆ ಕಾಡುವ ಎಡಬಿಡದೆ ಬೇಡುವ
ಒಡಲ ಕೆಡಕಿನ ಹಂಗನ್ನು ತೊರೆದಿಟ್ಟ
ಗುಡಿಯ ತೋರಣವು ಈ ಕವಿತೆ

ಒಲ್ಲದಿದು ತನ್ನದನು ಸಲ್ಲದಿದು ಪರಗಿನ್ನು
ಅಲ್ಲದುದ ಹರಿದು ಬಲ್ಲಿದನು ತಾನಾದ
ಮಲ್ಲಯ್ನ ತೊಡುಗೆ ಈ ಕವಿತೆ

ಅನ್ಯದಲಿ ಅರಸದೆ ತನ್ನತಾನನೆ ಅರಿತು
ಚನ್ನ ಮಲ್ಲಯ್ಗ ಸಂದಾಯ ವಾದಂತ
ಮುನ್ನಿನ ಒಡವೆ ಈ ಕವಿತೆ

ಮಿಕ್ಕಗಂಡರನೊಯ್ದು ಇಕ್ಕಿ ಒಲೆಬೂದಿಯಲಿ
ತಕ್ಕ ಮಲ್ಲಯ್ಗ ತೆಕ್ಕೆಯನು ಬಿದ್ದಂತ
ಅಕ್ಕನ ಕನಸು ಈ ಕವಿತೆ

ಅರಿವಿನರಿವಲಿ ಬೆರೆತು ಅರಿವೆಯೇ ತಾನಾಗಿ
ವಿರತಿ ಸದ್ಬಕ್ತಿ ಸಂಗದಲಿ ಕಂಡಂತ
ಬೆರಗು ನಿಬ್ಬೆರಗು ಈ ಕವಿತೆ

ಬವಿಮನದ ಒಡಲಲ್ಲಿ ಶಿವಮನವ ನೆಲೆಗೊಳಿಸಿ
ಸವೆಯದೆ ಉಳಿದ ಚನ್ನಮಲ್ಲಿಕಾರ‍್ಜುನನ
ಅವಿಮುಕ್ತ ಕ್ಶೇತ್ರ ಈ ಕವಿತೆ

(ಚಿತ್ರ ಸೆಲೆ: travelthemes.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: