ಪುಟ್ಟ ಕತೆ: ಮೊಬೈಲ್ ಪೋಟೋ

ಕೆ.ವಿ.ಶಶಿದರ.

ಮೊಬೈಲ್ ಪೋಟೋ, Mobile Photo

“ಉಸ್ಸಪ್ಪಾ …..” ಎಂದು ವ್ಯಾನಿಟಿ ಬ್ಯಾಗ್ ಅನ್ನು ಸೋಪಾದ ಮೇಲೆ ಎಸೆದ ಅಶ್ವಿನಿ, ಪ್ರೆಶ್ ಅಪ್ ಆಗಲು ನೇರ ಬಾತ್ ರೂಮಿಗೆ ಹೋದಳು. ಸೋಪಾದ ಮೇಲೆ ಬಿದ್ದ ವ್ಯಾನಿಟಿ ಬ್ಯಾಗ್ ನಿಂದ ಹೊರಗೆ ಇಣುಕುತ್ತಿದ್ದ ಅಮ್ಮನ ಹೊಸ ಸ್ಯಾಮ್ ಸಂಗ್ ಮೊಬೈಲ್ ನೋಡಿದ ಏಳು ವರ‍್ಶದ ಮಗ ರುತ್ವಿಕ್ ತನ್ನ ಪುಸ್ತಕಗಳನ್ನು ಪಕ್ಕಕ್ಕಿಟ್ಟು ಮೆಲ್ಲನೆ ಮೊಬೈಲ್ ಗೆ ಕೈ ಹಾಕಿದ. ಹಿಂದೆ ಮುಂದೆ ಎಲ್ಲಾ ತಿರುಗಿಸಿ ನೋಡಿದ. ಹೊಚ್ಚ ಹೊಸದು. ಅವನಿಗೆ ಕುಶಿಯಾಯಿತು. ಅಮ್ಮನ ಹಳೇ ಮೊಬೈಲ್ ನಾಳೆಯಿಂದ ತನಗೆ ಎಂದು.

ಅಶ್ವಿನಿ ಪ್ರೆಶ್ ಆಗಿ ಬಂದವಳಿಗೆ ಕಂಡಿದ್ದು ಮಗ ಹೊಸ ಮೊಬೈಲ್ ನಲ್ಲಿ ಆಡುತ್ತಿದ್ದ ದ್ರುಶ್ಯ. ಕೂಡಲೇ ಅವನಿಂದ ಮೊಬೈಲ್ ಕಸಿದುಕೊಂಡು, “ಮೊದಲು ಹೋಮ್ ವರ‍್ಕ್ ಮುಗಿಸಿ, ಓದಿ ಊಟ ಮಾಡು, ಅಮೇಲೆ ಮೊಬೈಲ್” ಅಲ್ಲಿಗೆ ಮಾತು ಮುಗಿಸದೆ “ಹೊಸಾ ಮೊಬೈಲ್ ಇದು, ತೊಗೊಂಡ್ರು ಸೆಟ್ಟಿಂಗ್ ಗಿಟ್ಟಿಂಗ್ ಮುಟ್ಟ ಬಾರ‍್ದು ಆಯ್ತಾ” ಎಂದು ತಾಕೀತು ಮಾಡಿ ಮೊಬೈಲ್ ನೊಂದಿಗೆ ಅಡುಗೆ ಮನೆ ಸೇರಿದಳು.

ರುತ್ವಿಕ್ ಗೆ ಹೊಸ ಮೊಬೈಲ್ ಜೊತೆ ಆಟವಾಡುವ ಉತ್ಕಟ ಆಸೆ. ಚಕಚಕನೆ ಎಲ್ಲಾ ಹೋಮ್ ವರ‍್ಕ್ ಮುಗಿಸಿ, ಮಗ್ಗಿ ಬರೆದು, ಓದಿ ಅಮ್ಮ ಕಲಸಿ ಕೊಟ್ಟ ಊಟ ಮಾಡಿ, ಅಮ್ಮನಿಗೆ ಪಪ್ಪಿ ಕೊಟ್ಟು ‘ಮೋಸ’ದಿಂದ ಹೊಸ ಮೊಬೈಲ್ ಪಡೆದು ಬೆಡ್ ರೂಂ ಗೆ ಓಡಿದ.

ಅಶ್ವಿನಿ ಊಟ ಮಾಡಿ, ಯಜಮಾನರಿಗೂ ಕೊಟ್ಟು, ಅಡುಗೆ ಮನೆ ಕೆಲಸ ಮುಗಿಸಿ ಬೆಡ್ ರೂಂಗೆ ಬರಲು ಒಂದು ಗಂಟೆಗೂ ಹೆಚ್ಚು ಕಾಲ ಹಿಡಿಯಿತು.

ರುತ್ವಿಕ್ ಬೆಡ್ ಮೇಲೆ ಅಂಗಾತ ಮಲಗಿ ಗಾಡ ನಿದ್ದೆಯಲ್ಲಿದ್ದ. ಬೆಡ್ ಮೇಲೆ ಚಾಚಿದ್ದ ಅವನ ಕೈ ಬಳಿ ಹೊಸ ಮೊಬೈಲ್ ಬಿದ್ದಿತ್ತು. ಅಶ್ವಿನಿ ಕೂಡಲೇ ಅದನ್ನು ತೆಗೆದು ಕೊಂಡು ಅನ್ ಮಾಡಿದಳು. ಲಾಕ್ ಸ್ಕ್ರೀನ್, ಹೋಮ್ ಸ್ಕ್ರೀನ್, ವಾಲ್ ಪೇಪರ್ ಎಲ್ಲವನ್ನೂ ಕ್ಶಣಾರ‍್ದದಲ್ಲಿ ಪರಿಶೀಲಿಸಿದಳು. ಯಾವುದೇ ಬದಲಾವಣೆ ಕಾಣಲಿಲ್ಲ. ನಿಟ್ಟುಸಿರು ಬಿಟ್ಟಳು.

ಮಗನಿಗೆ ಪೋಟೋ ತೆಗೆಯುವ ಚಟ. ಎಶ್ಟು ಪೋಟೋ, ಎಶ್ಟು ಸೆಲ್ಪಿ ಆಗಿದೇ ಎನ್ನುವ ಕೆಟ್ಟ ಕುತೂಹಲದಿಂದ ಗ್ಯಾಲರಿಯಲ್ಲಿ ಹಣಕಿದಳು. ಆವಳ ಊಹೆಗಿಂತ ಹೆಚ್ಚು ಸೆಲ್ಪಿಗಳು, ಪೋಟೋಗಳು ಅದರಲ್ಲಿತ್ತು. ಎಲ್ಲವನ್ನು ಒಂದೊಂದಾಗಿ ನೋಡುತ್ತಾ, ಒಳಗೊಳಗೇ ಸಂತೋಶ ಪಡುತ್ತಾ ಕೊನೆಯ ಪೋಟೋಗೆ ಬಂದಳು. ಅದನ್ನು ಕಂಡ ಕೂಡಲೇ ಕಿಟಾರನೆ ಕಿರುಚಿಕೊಂಡಳು. ಅಶ್ವಿನಿ ಕಿರುಚಿಕೊಂಡ ಶಬ್ದಕ್ಕೆ ಗಾಬರಿಯಾಗಿ ಒಳಗೋಡಿ ಬಂದ ಯಜಮಾನನಿಗೂ ಅವಳು ತನ್ನ ಹೊಸ ಮೊಬೈಲ್ ನಲ್ಲಿದ್ದ ಆ ಪೋಟೋ ತೋರಿಸಿದಳು. ಆತನೂ ಕೂಡ ಪೋಟೋ ನೋಡಿ ಕ್ಶಣ ಸ್ತಂಬೀಬೂತನಾದ.

ಅದರಲ್ಲಿ ಮಂಚದ ಮೇಲೆ ರುತ್ವಿಕ್ ಅಂಗಾತ ಮಲಗಿ ಗಾಡವಾಗಿ ನಿದ್ರಿಸುತ್ತಿದ್ದ. ಎರಡೂ ಕೈಗಳನ್ನು ಪೂರ‍್ತಿ ಆಚೀಚೆ ಹರಡಿದ್ದ. ಅವನ ಎಡಬದಿಯಲ್ಲಿ ದೊಡ್ಡ ಮನುಶ್ಯಾಕ್ರುತಿಯ ನೆರಳು ಆ ಪೋಟೋದಲ್ಲಿ ಸ್ಪಶ್ಟವಾಗಿ ದಾಕಲಾಗಿತ್ತು!

( ಚಿತ್ರ ಸೆಲೆ : dumielauxepices.net )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks