ಮಕ್ಕಳ ಕವಿತೆ: ಮರಿ ಹಕ್ಕಿಯ ಹಾಡು

–  ಅಶೋಕ ಪ. ಹೊನಕೇರಿ.

ಗುಬ್ಬಿ ಗೂಡು, ಹಕ್ಕಿ, ತಾಯಿ, ಮರಿಗಳು

ಚುಮು ಚುಮು ಬೆಳಗಿಗೆ
ನಮ್ಮ ಹಸಿವಿನ ಹೊಟ್ಟೆಗೆ
ಅಮ್ಮ ನಮ್ಮನ್ನು ಮುದ್ದು
ಮಾಡಿ ಆಹಾರದ ಗುಟುಕು
ತರುತ್ತೇನೆಂದು ಹೋದವಳು
ಇನ್ನೂ ಬರಲಿಲ್ಲ

ನಮ್ಮ ಹಸಿವಿನ ಉರಿ
ಮುಗಿಲ ಮುಟ್ಟಿದೆಯಲ್ಲ
‘ಅಮ್ಮ’ ಎಲ್ಲಿದ್ದೀಯಮ್ಮ?
ನೀ ಬಂದು ನಮ್ಮ ಹಸಿವು
ಯಾವಾಗ ಹಿಂಗಿಸುತ್ತೀಯಮ್ಮ?
‘ಅಮ್ಮ’ ನೀ ಬೇಗ ಬಾರಮ್ಮ

ನಮ್ಮ ಹಸಿವನು ಹಿಂಗಿಸಲು
ಆಹಾರದರುಸುವಿಕೆಯಲಿ
ದುಶ್ಟರ ಕಾಕ ದ್ರುಶ್ಟಿಗೆ ಬಿದ್ದು
ನೀನೇ ಅವರ
ಹಸಿವಿನ ಆಹಾರವಾದೆಯೇನಮ್ಮ?

ನಮಗೆ ಹಾರುವಶ್ಟು ಶಕ್ತಿಯಿಲ್ಲ
ನಮ್ಮ ಆಹಾರ ನಮಗೆ
ಗಳಿಸಿಕೊಳ್ಳಲು ಆಗುವುದಿಲ್ಲ
ನಿನ್ನ ಪ್ರೀತಿಯ ಆಹಾರದ
ಗುಟುಕಿಲ್ಲದೆ ನಾವು
ಬದುಕಲಾರೆವಮ್ಮ
ಬಹು ಬೇಗನೆ ಬಾರಮ್ಮ
ಗುಟುಕು ನೀಡಿ ನಮ್ಮ
ಹಸಿವ ಹಿಂಗಿಸಮ್ಮ

ಆಗಸಕೆ ಮೊಗವೆತ್ತಿ
ಆ ಬಗವಂತನಲಿ
ಮೊರೆಯಿಡುತಿದ್ದೇವೆ
ನಮ್ಮೀ ಹಸಿವಿನ ಕೂಗಲ್ಲೂ
‘ಅಮ್ಮ’ನ ಬೆಚ್ಚನೆಯ ಪ್ರೀತಿಯ
ಮಡಿಲ ದೂರ ಮಾಡಬೇಡ

ದೇವರೇ, ನಮ್ಮ ಜೀವದ
ಅಸ್ತಿತ್ವದ ಹಸಿವಿನ ನೋವಿನಲ್ಲೂ
ನಾವು ಆಶಾ ಬಾವನೆ ಹೊತ್ತಿದ್ದೇವೆ
ಅಮ್ಮ ನೀನು ಬಂದೇ ಬರುತ್ತೀಯ
ನಮಗಾಗಿ ಗುಟುಕು ತಂದೆ ತರುತ್ತೀಯ

ನಿನ್ನ ಬರುವಿಕೆಯ ದಾರಿ
ಕಾಯುತ್ತ ಆಗಸಕೆ
ಮೊಗವೆತ್ತಿ ಬಗವಂತನಲಿ
ಮೊರೆಯಿಡುತ್ತಿದ್ದೇವಮ್ಮ
ನೀನು ಕ್ಶೇಮವಾಗಿ ಬಾ ಅಮ್ಮ
ನೀ ತಂದ ಗುಟುಕು
ನಮಗೆ ಪ್ರೀತಿಯಿಂದ ಉಣಿಸಮ್ಮ

ಜಗದಾಸರೆಯ ಬೂಮಿ
ಆಗಸಗಳ ಸಾಕ್ಶಿಯಾಗಿ
ನಾವು ಹೇಳುತಿದ್ದೇವೆ
ಹಸಿವೆಂದರೇನು ಎಂಬುದು
ನಮಗೆ ಗೊತ್ತಿದೆ
ಓ ಈ ಬುವಿಯ ಸಕಲ
ಜೀವ ರಾಶಿಗಳೇ
ಹಸಿದವನ ಕಂಡರೆ
ನಿಮ್ಮಲಿದ್ದಿದ್ದನ್ನು ಹಂಚಿ ತಿನ್ನಿ
ಆ ಕ್ಶಣದ ಹಸಿವ ನೀಗಿಸಿ.

ಉಳ್ಳವರೇ, ಇಲ್ಲದವರ
ಕಂಡು ಅಸಹ್ಯ ಪಡದಿರಿ
ಅಹಂಕಾರದಿ ಅನ್ನವನು
ಅಪವ್ಯಯ ಮಾಡದಿರಿ
ನಿಮ್ಮ ಕೈಲಾದಶ್ಟು ಇಲ್ಲದವರ
ಹಸಿವ ನೀಗಿಸಿ, ಪ್ರೀತಿ ಕೊಟ್ಟು
ಜಗದ ಸಿರಿಯಾಗಿರಿ
ಒಡಲುರಿಯ ತಣಿಸುವ ದಣಿಯಾಗಿರಿ

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: