ಮನಸೂರೆ ಮಾಡುವ ಹ್ಯಾಮ್ಲೇಸ್ ಆಟಿಕೆಗಳು

ಜಯತೀರ‍್ತ ನಾಡಗವ್ಡ.

ಹ್ಯಾಮ್ಲೇಸ್, Hamleys

ಕೆಲಸದ ನಿಮಿತ್ತ ದೆಹಲಿಗೆ ತೆರಳಿದ್ದೆ. ಮರಳಿ ಬರುವ ಬಾನೋಡ ಅದೇ ದಿನ ರಾತ್ರಿ ನಿಗದಿಯಾಗಿತ್ತು. ಮನೆಗೆ ಮರಳಲೆಂದು ದೆಹಲಿ ಬಾನೋಡತಾಣಕ್ಕೆ ಬಂದಾಗ ಬಾನೋಡ ಹೊರಡಲು ಸಾಕಶ್ಟು ಸಮಯವಿತ್ತು. ಹೊತ್ತು ಕಳೆಯಲು ಬಾನೋಡತಾಣದಲ್ಲಿ ಅಲೆಯುತ್ತಿರುವಾಗ ಕಾಣಸಿಕ್ಕಿದ್ದು ಹ್ಯಾಮ್ಲೇಸ್ ಮಳಿಗೆ. ಅಂಗಡಿಯವ ತೋರ‍್ಪಡಿಸುತ್ತಿದ್ದ ಪುಟಾಣಿ ಬಾನೋಡವೊಂದು ನನ್ನ ಮೇಲೆ ಹಾರುತ್ತ ಬಂದು ನನ್ನ ಸೆಳೆದಿತ್ತು. ನನಗೆ ಈ ಬರಹ ಬರೆಯಲು ಹುಮ್ಮಸ್ಸು ನೀಡಿದ್ದೇ ಹ್ಯಾಮ್ಲೇಸ್‌ನ ಮಳಿಗೆಯೆನ್ನಬಹುದು.

ಹ್ಯಾಮ್ಲೇಸ್‌ನ ಅಂಗಡಿ ಒಳಹೊಕ್ಕಾಗ ವಿವಿದ ಆಟಿಕೆಗಳು/ಬೊಂಬೆಗಳಲ್ಲಿ ಮುಳುಗಿ ಹೋಗುವಶ್ಟು ಸೆಳೆಯಲ್ಪಟ್ಟಿದ್ದೆ. ನಾನಶ್ಟೇ ಅಲ್ಲ, ಅಲ್ಲಿದ್ದ ಮಕ್ಕಳಿಗಿಂತ ದೊಡ್ಡವರೇ ಆಟಿಕೆಗಳಲ್ಲಿ ಮುಳುಗಿದ್ದರು. ನೀರಿನ ಪುಟಾಣಿ ಹೊಂಡ, ಅದರಲ್ಲಿ ಈಜುವ ಕಪ್ಪೆ, ಹಾರುವ ಆಕ್ಟೋಪಸ್‌ನಂತ ಗೊಂಬೆಗಳ ಸೆಟ್ ಕೂಡ ಮಕ್ಕಳ ಗಮನ ಸೆಳೆಯುತ್ತಿತ್ತು. ಪುಟಾಣಿಗಳು ಒಮ್ಮೆ ಒಳಹೊಕ್ಕರೆ ಮನೆಗೆ ಮರಳುವುದೇ ಇಲ್ಲ – ಅಶ್ಟೊಂದು ಆಟಿಕೆಗಳ ಮನೆ ಈ ಹ್ಯಾಮ್ಲೇಸ್ ಮಳಿಗೆ.

ಹ್ಯಾಮ್ಲೇಸ್ – ಜಗತ್ತಿನ ಹಳೆಯ ಮತ್ತು ಬಲು ದೊಡ್ಡ ಆಟಿಕೆ ತಯಾರಿಸುವ ಕೂಟ

ಆಟಿಕೆಗಳ ಜಗತ್ತಿನಲ್ಲಿ ಹ್ಯಾಮ್ಲೇಸ್ ಕೂಟ ತುಂಬಾ ಹೆಸರು ಮಾಡಿದೆ. 1760 ರಲ್ಲಿ ಲಂಡನ್ ಊರಿನ ರೆಜೆಂಟ್ ಬೀದಿಯಲ್ಲಿ “ನೋಹಾಸ್ ಆರ‍್ಕ್” ಎಂಬ ಆಟಿಕೆ ಅಂಗಡಿ ಶುರುವಾಗಿತ್ತು, ಅದೇ ಹ್ಯಾಮ್ಲೇಸ್ ಅವರು ಶುರು ಮಾಡಿದ ಮೊದಲ ಆಟಿಕೆ ಅಂಗಡಿ. ವಿಲಿಯಮ್ ಹ್ಯಾಮ್ಲೇ ಅವರೇ ಇದನ್ನು ಹುಟ್ಟು ಹಾಕಿದ್ದು. ಜಗತ್ತಿನ ಹಳೆಯ ಮತ್ತು ಬಲು ದೊಡ್ಡ ಆಟಿಕೆ ಮಳಿಗೆಯೆಂದು ದಾಕಲೆ ಮಾಡಿದೆ ಹ್ಯಾಮ್ಲೇಸ್.

ದಿನೇ ದಿನೇ ಹೆಸರು ಮಾಡುತ್ತ ಸಾಗಿದ ಹ್ಯಾಮ್ಲೇಸ್ ಅಂಗಡಿ, ರಾಣಿ ಎಲಿಜಬೆತ್ ಪಟ್ಟಕ್ಕೇರಿದ 1837 ಇಸವಿಯಲ್ಲಿ ವಿಲಿಯಮ್ ಅವರ ಮೊಮ್ಮಕ್ಕಳ ಒಡೆತನಕ್ಕೆ ಸೇರುತ್ತ ಲಂಡನ್ ಊರಿನ ಗುರುತಾಗಿತ್ತು(Landmark). 1887ರ ಹೊತ್ತಿಗೆ ಹ್ಯಾಮ್ಲೇಸ್ ಮಳಿಗೆ ಐದು ಮಹಡಿಗಳ ದೊಡ್ಡ ಮಳಿಗೆ. 1920-31 ರ ಸಮಯ ಹ್ಯಾಮ್ಲೇಸ್ ಕುಸಿತದತ್ತ ಸಾಗಿತ್ತು. ಆದರೆ ಎದೆಗುಂದದೆ ಹ್ಯಾಮ್ಲೇಸ್, ಹಾನಿಯನ್ನು ಮೀರಿ ಬೆಳೆಯಿತು. ವಾಲ್ಟರ್ ಲೈನ್ಸ್ ಎಂಬುವರು ಹ್ಯಾಮ್ಲೇಸ್ ಮಳಿಗೆಯನ್ನು ಕೊಂಡುಕೊಂಡು,ಮತ್ತೆ ಲಾಬದ ಕೂಟವಾಗಿ ಮಾರ‍್ಪಡಿಸಿದರು.

ಜಗತ್ತಿನ ಹಲವೆಡೆ ಹ್ಯಾಮ್ಲೇಸ್ ನ ಮಳಿಗೆಗಳು

ಎರಡನೇಯ ಮಹಾಯುದ್ದಗಳಲ್ಲಿ ಹ್ಯಾಮ್ಲೇಸ್ ಮಳಿಗೆ 5 ಬಾರಿ ಬಾಂಬ್ ದಾಳಿಗೂ ತುತ್ತಾದರೂ, ಮಕ್ಕಳ ನೆಚ್ಚಿನ ಆಟಿಕೆ ಕೂಟವಾಗಿ ಬೆಳೆಯುತ್ತಲೇ ಸಾಗಿತು. ಬ್ರಿಟಿಶ್ ಅರಸು ಮನೆತನದಿಂದ ಹಲವಾರು ಬಾರಿ ಗೌರವಿಸಲ್ಪಟ್ಟ ಹ್ಯಾಮ್ಲೇಸ್, ಅರಸು ಮನೆತನದ ಮಕ್ಕಳಿಗೂ ತನ್ನ ಆಟಿಕೆಗಳನ್ನು ಒದಗಿಸಿದ ಹಿರಿಮೆ ಪಡೆದಿದೆ. ಇಂದು ಹ್ಯಾಮ್ಲೇಸ್ ಜಗತ್ತಿನ ಹಲವೆಡೆ ಮಳಿಗೆಗಳನ್ನು ತೆರೆದಿದೆ. ಮುಂಚೆ ಇಂಗ್ಲೆಂಡ್‌ಗಶ್ಟೇ ಸಿಮೀತವಾಗಿದ್ದ ಈ ಕೂಟ ಯುರೋಪ್, ಅರಬ್ ನಾಡುಗಳು, ಚೀನಾ, ಜಪಾನ್, ದಕ್ಶಿಣ ಆಪ್ರಿಕಾ, ಮೆಕ್ಸಿಕೋ, ಬಾರತ – ಹೀಗೆ ದೇಶ ವಿದೇಶಗಳಲ್ಲಿ 90ಕ್ಕೂ ಆಟಿಕೆ ಮಳಿಗೆಗಳನ್ನು ತೆರೆದಿದೆ.

ಲಂಡನ್ ಊರಿನ ಹೆಗ್ಗುರುತಾಗಿರುವ ಹ್ಯಾಮ್ಲೇಸ್ ಮಳಿಗೆ ಈಗ 7 ಅಂತಸ್ತಿನ ಕಟ್ಟಡ. ಬೊಂಬೆ/ಆಟಿಕೆಗಳನ್ನು ತಯಾರಿಸುತ್ತಲೇ ನೂರಾರು ಕೋಟಿ ವ್ಯಾಪಾರ ನಡೆಸುವ ಹ್ಯಾಮ್ಲೇಸ್ 2011ರ ಅಂಕಿಸಂಕೆಗಳ ಪ್ರಕಾರ 4.3ಕೋಟಿ ಪೌಂಡ್‌ಗಳಶ್ಟು ವಹಿವಾಟು ನಡೆಸಿತ್ತಂತೆ. 2003 ರಿಂದ ಇತ್ತೀಚಿನವರೆಗೆ ಐಸ್‌ಲ್ಯಾಂಡ್, ಪ್ರಾನ್ಸ್, ಚೀನಾ ದೇಶದ ಉದ್ಯಮಿಗಳಿಗೆ ಮಾರಾಟವಾಗುತ್ತ ಸಾಗಿದ ಹ್ಯಾಮ್ಲೇಸ್ 3 ವಾರಗಳ ಹಿಂದೆ 620 ಕೋಟಿಗೆ ಬಾರತದ ರಿಲಯನ್ಸ್ ರಿಟೇಲ್ಸ್‌‌ನ ಪಾಲಾಗಿದೆ.

ಬಗೆ ಬಗೆಯ ಆಟಿಕೆಗಳ ತಯಾರಿಕೆಯಲ್ಲಿ ನಿಪುಣರು

ಹ್ಯಾಮ್ಲೇಸ್ ಕೂಟದವರು ಬಗೆ ಬಗೆಯ ಆಟಿಕೆ ತಯಾರಿಸುವುದರಲ್ಲಿ ನುರಿತರು. ಕುದುರೆ, ಬೆಕ್ಕು, ಬಂಡಿ, ಸೂತ್ರದ ಬೊಂಬೆಗಳು, ಕರಡಿ, ಉಗಿ ಬಂಡಿ, ಹಕ್ಕಿಗಳು, ಪುಟಾಣಿ ಸೈನಿಕರು – ಹೀಗೆ ಹಲಬಗೆಯ ಚಿಕ್ಕ ಆಟಿಕೆಗಳಿಂದ ದೊಡ್ಡ ಆಟಿಕೆಗಳನ್ನು ಹ್ಯಾಮ್ಲೇಸ್ ತಯಾರಿಸುತ್ತಾ ಬಂದಿದೆ. ಮಕ್ಕಳ ವಯಸಿಗೆ ತಕ್ಕಂತೆ ಬಗೆಬಗೆಯ ಆಟಿಕೆ ಬೊಂಬೆಗಳು ಹ್ಯಾಮ್ಲೇಸ್ ಅಂಗಡಿಯಲ್ಲಿ ಸಜ್ಜುಗೊಂಡಿರುತ್ತವೆ. ಮಕ್ಕಳನ್ನು ಚುರುಕಾಗಿಸುವ ಒಗಟಿನ ಆಟಿಕೆಗಳು, ಚದುರಂಗದ ದಾಳಗಳು, ಜಿಗ್ಸಾ ಒಗಟುಗಳು, ದೊಡ್ಡ ಬಂಡಿಗಳು, ರೈಲುಗಳು, ತುಸು ಎತ್ತರದವರೆಗೆ ಹಾರಬಲ್ಲ ಬಾನೋಡ/ಹೆಲಿಕಾಪ್ಟರ್‌ ಆಟಿಕೆಗಳೂ ಕಾಣಸಿಗುತ್ತವೆ.

( ಮಾಹಿತಿ ಸೆಲೆ : wikipedia )
( ಚಿತ್ರ ಸೆಲೆ : rcity.co.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks