‘ಸೂಪರ ಹೇರ ಕಟಿಂಗ ಶಾಪ’

– ಮಾರಿಸನ್ ಮನೋಹರ್.

‘ಸೂಪರ ಹೇರ ಕಟಿಂಗ ಶಾಪ’ ಎಂಬ ಬೋರ‍್ಡ್ ಇದ್ದ ಹೇರ್ ಸಲೂನ್ ಗೆ ಅಪ್ಪ ನನ್ನನ್ನು ಕರೆದು ಕೊಂಡು ಹೋಗಿದ್ದರು. ಮನೆಯಲ್ಲಿ ಬಾಗಿಲು ಕಿಟಕಿಗಳಿಗೆ ಹಚ್ಚಿದ ಮೇಲೆ ಉಳಿಯುತ್ತದಲ್ಲಾ ಆ ಪೇಂಟಿನಿಂದ ಬೋರ‍್ಡ್ ಬರೆದಿದ್ದರು. ಬಹುಶಹ ಹೇರ್ ಕಟಿಂಗ್ ಮಾಡುವವನೇ ಆ “ಶಾಪ” ಬರೆದಿರಬೇಕು! ಯಾಕೆಂದರೆ ಅಕ್ಶರಗಳು ಅಡ್ಡಾದಿಡ್ಡಿಯಾಗಿದ್ದವು. ಮದುವೆಗೆ “ಶುಬ ವಿವಾಹ” ಅಂತ ಬರೆಯುವವರು ಬರೆದಿದ್ದರೆ ಇನ್ನೂ ಚೆನ್ನಾಗಿ ಬಂದಿರುತ್ತಿತ್ತು. ನಮ್ಮ ಕೂದಲುಗಳು ಚೆನ್ನಾಗಿ ಬೆಳೆದು ಕಿವಿಯ ಬಳಿಯಿಂದ ಒಳಗೆ ಹೋದಾಗ, ಅಮ್ಮ ಇವರಿಗೆ ಕಟಿಂಗ್ ಮಾಡಿಸಲು ಕರೆದೊಯ್ಯಿರಿ ಅಂತ ಹೇಳುತ್ತಿದ್ದಳು. ಆಗ ಪಪ್ಪ ಗೋಣಾಡಿಸಿ “ಸಂಡೇ ಮುಂಜಾನೆ ಕರೆದುಕೊಂಡು ಹೋಗ್ತೇನೆ” ಅಂತ ಹೇಳುತ್ತಿದ್ದರು. ಆದರೆ ನಾವು ಹೋದದ್ದು ಶನಿವಾರ ಸಂಜೆ. ಯಾಕೆಂದರೆ ಬಾನುವಾರ ಮುಂಜಾನೆ ಹೋದರೆ ತುಂಬಾ ಜನಜಂಗುಳಿ ಇರುತ್ತೆ ಅಂತ ಅಪ್ಪನಿಗೆ ಹೊಳೆದಿತ್ತು.

ಪಪ್ಪನನ್ನು ಚೆನ್ನಾಗಿ ಗುರುತು ಹಿಡಿಯುತ್ತಿದ್ದ ಕಟಿಂಗ್ ಮಾಡುವವನು ನಮ್ಮನ್ನು ಕಂಡು “ಕೂತುಕೊಳ್ಳಿ” ಅಂದ. ಎಲ್ಲಿ ಕೂರಬೇಕು? ಇದ್ದ ಒಂದು ಕಟ್ಟಿಗೆಯ ಬೆಂಚಿನ ಮೇಲೆ ಆಗಲೇ ಕೆಲವರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಕೂತಿದ್ದರು. ಅವರನ್ನೇ ಸ್ವಲ್ಪ ಆಕಡೆ ಸರಕೊಳ್ಳಿ ಅಂತ ಹೇಳಿ ಕುಳಿತುಕೊಂಡೆವು. “ಸೂಪರ ಹೇರಕಟಿಂಗ ಶಾಪ” ಟಿನ್ ಹಾಳೆಗಳಿಂದ ಮಾಡಲ್ಪಟ್ಟಿತ್ತು. ಅದರ ಮುಂಬಾಗದಲ್ಲಿ ಗಾಜಿನ ಬಾಗಿಲುಗಳು ಇದ್ದವು. ಅದರ ಮೇಲೆ ಒಬ್ಬ ಮನುಶ್ಯ ಕಟಿಂಗ್ ಮಾಡಿಸಿಕೊಳ್ಳುತ್ತಾ ಇರುವ ಚಿತ್ರವಿತ್ತು. ಅದನ್ನು ಪೇಂಟ್ ಮೂಲಕ ಬಿಡಿಸಿದ್ದರಿಂದ ಅಲ್ಲಲ್ಲಿ ಉದುರಿಹೋಗಿ ಕಟಿಂಗ್ ಮಾಡುವವನು ಮಾಡಿಸಿಕೊಳ್ಳುವವನ ಕಣ್ಣು ಕಿತ್ತು ಹಾಕುತ್ತಿರುವ ಹಾಗೆ ಆಗಿತ್ತು! ಅಂಗಡಿ ಟಿನ್ ಶೀಟುಗಳದ್ದೇ ಆಗಿದ್ದರೂ ಹೊರಗೆ ಹಾಗೂ ಒಳಗೆ ಚೊಕ್ಕಟವಾಗಿತ್ತು. ಅಪ್ಪ ಮತ್ತೊಬ್ಬರಿಂದ ನ್ಯೂಸ್ ಪೇಪರ್ ನ ಒಂದು ಹಾಳೆ ತೆಗೆದುಕೊಂಡು ಓದತೊಡಗಿದರು. ನನಗೆ ಆಗಲೇ ಗೊತ್ತಾಗಿದ್ದು ಹೋಟೇಲುಗಳಲ್ಲಿ ಅಂಗಡಿಗಳಲ್ಲಿ ನ್ಯೂಸ್ ಪೇಪರ್ ಇದ್ದರೆ ಅದರಿಂದ ಕೆಲವು ಹಾಳೆಗಳನ್ನು ತೆಗೆದುಕೊಂಡು ಮತ್ತೊಬ್ಬರು ಓದಬಹುದು ಅಂತ!

ನನ್ನ ಪಾಳಿ ಬಂತು. ನಾನು ಹೋಗಿ ದೊಡ್ಡ ಕನ್ನಡಿಯ ಮುಂದೆ ಇದ್ದ ಎತ್ತರದ ಕುರ‍್ಚಿಯ ಮೇಲೆ ಏರಿ ಕುಳಿತುಕೊಂಡೆ. ಕಟಿಂಗ್ ಮಾಡುವವನು ಬಳಿಗೆ ಬಂದು ಕುರ‍್ಚಿಯ ಮೇಲೆ ಒಂದು ಅಡ್ಡ ಹಲಗೆ ಇಟ್ಟ ನನ್ನನ್ನು ಅದರ ಮೇಲೆ ಕೂರಲು ಹೇಳಿದ, ನಾನು ಮತ್ತೆ ಅದರ ಮೇಲೆ ಕೂತೆ. ಹೀಗೆ ಚಿಕ್ಕಮಕ್ಕಳಿಗೆ ಕಟಿಂಗ್ ಅಂಗಡಿಗಳಲ್ಲಿ ಇಂದಿಗೂ ಮಾಡುತ್ತಾರೆ. ಹೊರಗೆ ಕೂತಿದ್ದ ಅಪ್ಪ “ಸಣ್ಣಗೆ ಕಟ್ ಮಾಡ್ರಿ” ಅಂತ ತರಕಾರಿ ಕತ್ತರಿಸುವವರಿಗೆ ಹೇಳಿದಂತೆ ಹೇಳಿದ. ಕಟಿಂಗ್ ಅಂಗಡಿಯ ಟಿನ್ ಗೋಡೆಗಳಿಗೆಲ್ಲಾ ಕ್ಯಾಲೆಂಡರ್ ದೇವರ ಪೋಟೋ ಮತ್ತು ಬಗೆಬಗೆಯ ಹೇರ್ ಕಟ್ ಗಳಿದ್ದ ಚಾರ‍್ಟ್ ಗಳಿದ್ದವು. ನಾನು ಮೊದಲು ನೋಡಿದ್ದಾಗ, ಈ ಪೋಟೊಗಳಲ್ಲಿ ಜನ ತಿರುಗಿ ಯಾಕೆ ನಿಂತು ಪೋಟೋ ತೆಗೆಸಿಕೊಂಡಿದ್ದಾರೆ? ಅಂತ ಅಪ್ಪನಿಗೆ ಕೇಳಿದ್ದೆ. ಆಗ ಕಟಿಂಗ್ ಮಾಡುವವನು “ಅದು ಕೂದಲು ಕಟ್ ಮಾಡುವ ಸ್ಟೈಲ್ ಇರುವ ಚಾರ‍್ಟ್. ಅದರಲ್ಲಿ ತೋರಿಸಿದರೆ ಹಾಗೇ ಕೂದಲು ಕಟ್ ಮಾಡುತ್ತೇನೆ” ಅಂದ. ಅದಕ್ಕೆ ನಾನು “ಹಾಗಾದರೆ ಆ ತರಹ ಕೂದಲು ಕಟ್ ಮಾಡಿಸು” ಅಂತ ಹಿಪ್ಪಿ ಕಟಿಂಗ್ ಇದ್ದ ಪೋಟೋ ತೋರಿಸಿದೆ. ಹೇರ ಕಟ್ ಮಾಡುವವ ನಕ್ಕು “ಉದ್ದ ಕೂದಲು ಕಟ್ ಮಾಡಬಹುದು ಆದರೆ ಚಿಕ್ಕ ಕೂದಲು ಉದ್ದ ಮಾಡುವುದಕ್ಕೆ ಆಗದು” ಅಂದ. ನಾನು ಹೇಗೆ ಬೇಕೋ ಹಾಗೇ ಮಾಡುತ್ತೇನೆ ಅಂದದ್ದು ನಂಬಿದ್ದೆ!

ಕುರ‍್ಚಿ ಮೇಲೆ ಕೂತಿದ್ದೆ. ನನ್ನ ಕೊರಳ ಸುತ್ತ ಬಿಳಿ ಬಟ್ಟೆ ಸುತ್ತಿದ, ಅಲ್ಲಿ ಕೂದಲು ಬೀಳುವ ಬಟ್ಟೆ ಅದು. ತಮ್ಸ್ ಅಪ್ ಬಾಟಲಿಂದ ನೀರು ಚಿಮ್ಮುಕದಿಂದ ತಲೆಗೆ ನೀರು ಚರ‍್ರ್… ಚರ‍್ರ್… ಅಂತ ಸದ್ದು ಮಾಡುತ್ತಾ ಸ್ಪ್ರೇ ಮಾಡಿದ. ತಲೆ ತಣ್ಣಗೆ ಆಯಿತು. ಇಂದೂ ಕೂಡ ನನಗೆ ಹೇರ್ ಕಟ್ ಮಾಡಿಸುವಾಗ ಇದೇ ಅನುಬವ ತುಂಬ ಕುಶಿ ಕೊಡುತ್ತೆ! ಕೆಲವೊಮ್ಮೆ ಮತ್ತೊಂದು ಬಾರಿಗೆ ಕೇಳಿ ನೀರು ಸ್ಪ್ರೇ ಮಾಡಿಸಿಕೊಂಡಿದ್ದೇನೆ. ತಲೆಯೆಲ್ಲಾ ತನ್ನ ಕೈಯಿಂದ ಪರಪರ ಅಂತ ಕೂದಲು ಜಾಡಿಸಿದ. ಹೇರ್ ಕಟ್ ಮಾಡುವುದಕ್ಕಿಂತ ಮೊದಲು “ಚಕ್ ಚಕ್ ಕಚ್ ಕಚ್ ” ಅಂತ ಕತ್ತರಿಯಿಂದ ಸದ್ದು ಹೊರಡಿಸಿ ಮತ್ತೊಂದು ಕೈಯಿಂದ ಬಾಚಣಿಕೆ ತಗೆದುಕೊಂಡು, ಕೂದಲುಗಳನ್ನು ಬಾಚಿ ಕತ್ತರಿಸಲು ಇನ್ನೇನು ಕೈಹಚ್ಚಬೇಕು ಅನ್ನುವಶ್ಟರಲ್ಲಿ ಹೊರಗಡೆಯಿಂದ ಒಬ್ಬ ಬಂದು “ಪ್ರಕಾಶ್ ಗೆ ಟಕ್ಕರ್ (ಆಕ್ಸಿಡೆಂಟ್) ಆಗಿದೆ, ಸರಕಾರಿ ದೊಡ್ಡ ಆಸ್ಪತ್ರೆಗೆ ಹಾಕಿದ್ದಾರೆ” ಅಂತ ಹೇರ ಕಟ್ ಮಾಡುವವನಿಗೆ ಹೇಳಿದ. ಹೇರ ಕಟ್ ಶುರುವಾಗುವುದಕ್ಕಿಂತ ಮುಂಚೆಯೇ ನಿಂತುಬಿಟ್ಟಿತು. ಅವನ ಹೇರ್‌ ಕಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇನ್ನೊಬ್ಬನನ್ನು ಕರೆದು, ಅವನಿಗೆ ಕತ್ತರಿ ಬಾಚಣಿಗೆ ಕೊಟ್ಟು, ಸುದ್ದಿ ತಂದವನ ಜೊತೆ ಹೊರಗೆ ಹೋದ. ಈ ಮತ್ತೊಬ್ಬ ಹೇರ ಕಟ್ ಮಾಡುವವನು ಹರೆಯದಲ್ಲಿ ಚಿಕ್ಕವನಂತೆ ಕಾಣಿಸಿದ.

ನನ್ನ ತಲೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ.  ನನ್ನ ಕೂದಲುಗಳಲ್ಲಿ ಬಾಚಣಿಕೆ ಎಳೆದಾಗ ಗೊತ್ತಾಯಿತು, ಇವನು ಹೇರ ಕಟ್ ಇನ್ನೂ ಚೆನ್ನಾಗಿ ಕಲಿತಿಲ್ಲವೆಂದು. ನನ್ನ ಕೂದಲುಗಳನ್ನು ಕಟ್ ಮಾಡಲು ಶುರುಮಾಡಿದ, ಹತ್ತು ನಿಮಿಶವಾಯಿತು. ನನ್ನ ತಲೆಯನ್ನು ರುಬ್ಬುಗಲ್ಲು ಅಂತ ತಪ್ಪು ತಿಳಿದು ತಿರುಗಿಸಿದ ಹಲವು ಸಲ, ತುಂಬಾ ನಿದಾನಕ್ಕೆ ಕಟ್ ಮಾಡುತ್ತಿದ್ದ. ನನ್ನ ಕತ್ತು ನೋಯತೊಡಗಿತು. ಒಂದು ಸಲ ನನ್ನ ಬಲಪಕ್ಕಕ್ಕೆ ಬಂದು ಕಟ್ ಮಾಡಿದ, ಮತ್ತೊಂದು ಸಲ ಎಡ ಪಕ್ಕಕ್ಕೆ ಹೋಗಿ ಕಟ್ ಮಾಡಿದ. ನನ್ನ ಕತ್ತು ಬಗ್ಗಿಸಿ ಹಿಂದಿನ ಕೂದಲುಗಳನ್ನು ಐದು ನಿಮಿಶ ಕಟ್ ಮಾಡಿದ, ಮತ್ತೊಂದು ಬಾರಿ ನೀರು ಚಿಮುಕಿಸಿದ. ನಾನು ಕತ್ತನ್ನು ಎತ್ತಿ ಕನ್ನಡಿಯಲ್ಲಿ ನೋಡಿಕೊಂಡೆ ಬಲಪಕ್ಕದ ಕೂದಲು ಎಡ ಪಕ್ಕದ ಕೂದಲು ಬೇರೆ ಬೇರೆ ವಿನ್ಯಾಸ ಹೊಂದಿದ್ದವು! ಅರ‍್ದ ಗಂಟೆ ಆಗಲು ಬಂತು ಪಪ್ಪ ಹೊರಗೆ ಯಾರದೋ ಜೊತೆ ಕೂತುಕೊಂಡು ಹರಟೆ ಹೊಡೆಯುತ್ತಿದ್ದರು. ಅಂತೂ ಇಂತೂ ನನ್ನ ಕೂದಲು ಹಾಗೂ ತಲೆಯನ್ನು ಬಿಡುಗಡೆ ಮಾಡಿದ. ಬಿಳಿ ಬಟ್ಟೆಯನ್ನು ತೆಗೆದುಹಾಕಿ, ಕತ್ತಿನ ಸುತ್ತ ಮುತ್ತ ಬಿದ್ದಿದ್ದ ಕೂದಲುಗಳನ್ನು ಬ್ರಶ್ ನಿಂದ ಹೊಡೆದು ಹಾಕಿ ಕ್ಲೀನ್ ಮಾಡಿದ. ಕೊರಳ ಸುತ್ತೆಲ್ಲಾ ಪೌಡರ್ ಸ್ವಲ್ಪ ಜಾಸ್ತಿನೇ ಹಾಕಿದ್ದ.

ನಾನು ಕುರ‍್ಚಿಯಿಂದ ಕೆಳಗೆ ಇಳಿದು ಪಪ್ಪನ ಬಳಿಗೆ ಹೋದೆ. ಅವರು ನನ್ನ ಕಡೆ ನೋಡಲೂ ಇಲ್ಲ. ಸೀದಾ ಒಳಗೆ ಹೋಗಿ ಅವನಿಗೆ ಹಣ ಕೊಟ್ಟು ನನ್ನನ್ನು ಬೈಕ್ ಮೇಲೆ ಕೂರಿಸಿಕೊಂಡು ಮನೆಗೆ ಬಂದರು. ಅಮ್ಮ ಸ್ನಾನಕ್ಕೆ ನೀರು ರೆಡಿ ಮಾಡಿ ಇಟ್ಟಿದ್ದಳು. ನನ್ನನ್ನು ನೋಡಿದ ಅಣ್ಣ ತಂಗಿ ನಗಾಡ ತೊಡಗಿದರು. ನನಗೆ ಈಗ ಪೆಚ್ಚಾಯಿತು. ಅಮ್ಮ ಬಳಿಗೆ ಬಂದು ನನ್ನ ಮುಕವನ್ನು ಕೈಯಲ್ಲಿ ಹಿಡಿದುಕೊಂಡು ಎಡ ಬಲ ಚೆನ್ನಾಗಿ ನೋಡಿದಳು.ಅಪ್ಪನನ್ನು ಕರೆದು “ನೋಡಿ ನೀವು ಮಾಡಿದ ದೊಡ್ಡ ಕೆಲಸ” ಅಂದಳು, ಪಪ್ಪ ನನ್ನ ಕಡೆಗೆ ನೋಡಿ ಮುಕ ಗಂಟಿಕ್ಕಿದರು “ನಾವೇ ಮನೆಯಲ್ಲಿ ಕಟ್ ಮಾಡಿದರೆ ಸರಿಯಾಗುತ್ತಾ ?!” ಅಂದರು. ಅದಕ್ಕೆ ಅಮ್ಮ “ದಿನಾ ಇದೇ ಕೆಲಸ ಮಾಡುವ ಅವನಿಗೇ ಮಾಡಲು ಬರಲಿಲ್ಲ ಅಂದರೆ ನಿಮಗೆ ಮಾಡಲು ಬರುತ್ಯೇ? ಅವನ ಬಳಿ ಹೋಗಿ ಸರಿಮಾಡಿಸಿ ಕೊಂಡು ಬನ್ನಿ” ಅಂದಳು. ಮತ್ತೆ ಬೈಕನ್ನೇರಿ “ಸೂಪರ ಹೇರ ಕಟಿಂಗ ಶಾಪ” ಗೆ ಹೋದೆವು. ಅದರ ಬಾಗಿಲು ಮುಚ್ಚಿತ್ತು! ಪಕ್ಕದಲ್ಲಿ ಇದ್ದ ಮಿರ‍್ಚಿ ಹೋಟೆಲಿನವನಿಗೆ ಕೇಳಿದೆವು ಅವನು “ಐದು ನಿಮಿಶ ಮೊದಲೇ ಬಾಗಿಲು ಹಾಕ್ಕೊಂಡು ಎಲ್ಲಿಗೋ ಹೋದ” ಅಂದ. ನಾವು ಬೆಪ್ಪಾದೆವು, ನಾನು ಸೋಮವಾರ ಸ್ಕೂಲಿಗೆ ಹೇಗೆ ಹೋಗುವುದು ಎಂಬ ಚಿಂತೆ ಕಾಡತೊಡಗಿತು. ಪಪ್ಪ ನಾನು ಮತ್ತೊಂದು ಹೇರ ಕಟಿಂಗ ಶಾಪವನ್ನು ಹುಡುಕಿಕೊಂಡು ಹೋದೆವು ಒಂದು ಹೇರಕಟಿಂಗ್ ಅಂಗಡಿ ಬಾಗಿಲು ಹಾಕುತ್ತಾ ಇದ್ದರು ಅವರನ್ನು ನಿಲ್ಲಿಸಿ ಒಳಗೆ ಹೋಗಿ ಆದದ್ದು ತಿಳಿಸಿ ನನ್ನ ಕೂದಲನ್ನು ಎರಡೂ ಕಡೆಯಿಂದ ಸಮನಾಗಿ ಕಟ್ ಮಾಡಿಸಿದೆವು.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: