ಕಾರದ ಕೋಳಿ ನನ್ನನ್ನು ಮಣಿಸಿತ್ತು

– ಮಾರಿಸನ್ ಮನೋಹರ್.

ಚಿಕನ್, ಕೋಳಿ, ಕಾರ, spicy chicken

“ಪಟ್ಟಣದ ಹೊರಗಿರುವ ಪಂಜಾಬಿ ರೆಸ್ಟೋರೆಂಟಿಗೆ ಹೋಗೋಣ” ಎಂದು ಅಲ್ಲಿ ರೆಗುಲರ್ ಪಾರ‍್ಟಿ ಮಾಡುವ ಕೆಲವರು ಒತ್ತಿ ಹೇಳಿದರು. ಬೇಡ ಬೇಡ ಸರ‍್ವಿಸ್ ಸ್ಟ್ಯಾಂಡ್ ಬಳಿ ಇರುವ ನಿಸರ‍್ಗ ವೆಜ್ ಹೋಟೆಲಿಗೆ ಹೋಗೋಣ ಅಂತ ಕೆಲವರು ಹಟ ಹಿಡಿದರು. “ಮನೇಲಿ ಮಾಡೋದನ್ನೇ ಸ್ವಲ್ಪ ಚೆನ್ನಾಗಿ ಮಾಡುತ್ತಾರೆ ನಿಸರ‍್ಗ ಹೋಟೆಲಿನಲ್ಲಿ. ಅದನ್ನು ತಿನ್ನೋಕೇ ಅಲ್ಲಿಗೆ ಹೋಗ್ಬೇಕಾ? ಸಿಟಿ ಹೊರಗೆ ಅಂಬೀಯನ್ಸ್ ಚೆನ್ನಾಗಿರುವ ನಾರ‍್ತ ಇಂಡಿಯನ್ ರೆಸ್ಟೋರೆಂಟ್ ಗೆ ಹೋಗೋಣ” ಅಂತ ಒಂದು ಗುಂಪು ಮತ್ತೆ ಒತ್ತಿ ಹೇಳಿತು. ಇದೆಲ್ಲಾ ಆದದ್ದು ಗೆಳೆಯನ ಹುಟ್ಟುಹಬ್ಬದ ಪಾರ‍್ಟಿ ಮಾಡುವುದಕ್ಕೆ ಹೋಟೇಲ್ ಹುಡುಕುವುದರಲ್ಲಿ. ಇಲ್ಲಿ ಹಾಗೆಯೇ, ಪ್ರೋಗ್ರಾಮ್ ಮಾಡುವುದರಿಂದ ಹಿಡಿದು ಅದು ಪಿನಿಶ್ ಆಗುವವರೆಗೆ ಕೇವಲ ಜಗಳ, ವಾದ, ಕೂಗಾಡುವುದು.

“ಪಂಜಾಬಿ ಹೋಟೇಲಿಗೆ ಹೋಗುವುದಾದರೆ ನಾವು ಬರುವುದಿಲ್ಲ” ಅಂತ ಇಬ್ಬರು ಅಂದರು. “ವೆಜ್ ಹೋಟೇಲಿಗೆ ಹುಲ್ಲು ತಿನ್ನಲು ನಾವ್ ಬರೋದಿಲ್ಲ” ಅಂತ ಮೂವರು ಅಂದರು. ನಾನು ಎಲ್ಲಿಗೂ ಹೋಗಲು ರೆಡಿಯಾಗಿದ್ದೆ. ಆದರೆ ಇಂತಹ ಬಿಗುವಿನ ಹೊತ್ತಿನಲ್ಲಿ ಸುಮ್ಮನೆ ಇರುವುದು ಒಳ್ಳೆದಲ್ಲ ಅಂತ “ಟಾಸ್ ಮಾಡೋಣ, ಹೆಡ್ ಬಿದ್ದರೆ ವೆಜ್; ಟೇಲ್ ಬಿದ್ದರೆ ಪಂಜಾಬಿ ಹೊಟೆಲ್” ಅಂದೆ. ಎಲ್ಲರೂ ಕೆಲ ಸೆಕೆಂಡುಗಳು ಸುಮ್ಮನಾದರು. ನನ್ನ ಮೆತಡ್ ವರ‍್ಕ್ ಆಗುವ ಲಕ್ಶಣಗಳು ಕಾಣಿಸಿದವು. ಎಲ್ಲರೂ “ಆಯ್ತು” ಅಂತ ಅಂದರು. ಎಶ್ಟು ಚೆನ್ನಾಗಿ ಬಿಗುವಿನ ವಾತಾವರಣ ತಿಳಿಗೊಳಿಸಿದೆ ಅಂತ ನನ್ನನ್ನು ನಾನು ಮನಸಿನಲ್ಲಿ ಹೊಗಳಿಕೊಂಡೆ! ಒಬ್ಬ ಗೆಳೆಯ ತನ್ನ ವಾಲೆಟ್ನಿಂದ ಹತ್ತು ರೂಪಾಯಿ ಕಾಯಿನ್ ತೆಗೆದ. ಮೊದ ಮೊದಲು ಹತ್ತು ರೂಪಾಯಿ ಕಾಯಿನ್ ಬಿಡುಗಡೆಯಾಗಿದ್ದ ಕಾಲದಲ್ಲಿ, ಹಾಲು ಮಾರುವವಳ ಹತ್ತಿರ ಕಾಡಿ ಬೇಡಿ ತೊಗೊಂಡಿದ್ದ ಕಾಯಿನ್ ಅದು. ಗೆಳೆಯ ಕಾಯಿನ್ ಟಾಸ್ ಮಾಡಿದ ಟೇಲ್ ಬಿತ್ತು. ವೆಜ್ ಅಂದವರಿಗೆ ನಿರಾಸೆಯಾಯ್ತು “ಇನ್ನೊಂದು ಸಲ ಟಾಸ್ ಮಾಡು” ಅಂದರು. ಎಲ್ಲರೂ “ಏ ಅದು ಅನ್ಯಾ ಅನ್ಯಾ ( ಮೋಸ ಮೋಸ ), ಒಂದು ಸಲ ಟಾಸ್ ಆದರೆ ಮುಗೀತು” ಅಂತ ಕೂಗಾಡತೊಡಗಿದರು. ನನಗೆ ಚಿಕ್ಕವನಿದ್ದಾಗ ಆಡುತ್ತಿದ್ದ ಕ್ರಿಕೆಟ್ ಮ್ಯಾಚ್ ನೆನಪಿಗೆ ಬಂತು. ಪಂಜಾಬಿ ಹೋಟೇಲ್ ಅನ್ನುತ್ತಿದ್ದವರು ಹೋ… ಅಂತ ಕಿರುಚಿ ತಮ್ಮ ಸಂತಸ ಹೊರಹಾಕಿದರು.

ಹೋಟೇಲ್ ಸೆಲೆಕ್ಟ್ ಆಯ್ತು. ಆದರೆ ಅಲ್ಲಿಗೆ ಹೋಗುವುದು ಹೇಗೆ ಅಂತ ಟಾಸ್ ಮಾಡಿದ ಗೆಳೆಯ ಕೇಳಿದ. ಬೈಕ್ ಮೇಲೆ ಹೋಗುವುದು ಅಶ್ಟು ಸರಿಯಲ್ಲ. ಆ ಹೋಟೇಲಿನವರಗೆ ಕೇಕ್ ಒಯ್ಯುವುದು ಹೇಗೆ? ನಿಕಿಲ್ ಬೈಕ್ ಮೇಲಿಂದ ಬಿದ್ದು ಕಾಲಿಗೆ ತರಚಿಕೊಂಡಿದ್ದ. ಅವನು ಬೈಕ್ ಓಡಿಸಲಾರ ಅವನ ಬೈಕ್ ಸರ‍್ವಿಸ್ಗೆ ಹೋಗಿದೆ. ಮತ್ತೆ ಎಲ್ಲರೂ ಕೂಗಾಡುತ್ತಾ ಯೋಚಿಸುತ್ತಾ ಬಾಡಿಗೆ ಕಾರು ಮಾಡುವ ಡಿಸಿಶನ್ ತೆಗೆದುಕೊಂಡೆವು. ನಿಸರ‍್ಗ ಹೋಟೇಲಿಗೆ ಹೋಗಬೇಕೆಂದ ಗುಂಪಿನವರು ಮತ್ತೆ ತಕರಾರು ತೆಗೆದರು. “ವರ‍್ಶಕ್ಕೆ ಒಂದೇ ಬಾರಿ ಬರುವುದು ಹುಟ್ಟುಹಬ್ಬ. ದಿನಾ ದಿನಾ ಬರುತ್ತೇನು?” ಅಂತ ಇಮೋಶನಲ್ ಬ್ಲ್ಯಾಕ್ ಮೇಲ್ ಮಾಡಿ ಅವರ ಬಾಯಿ ಮುಚ್ಚಿಸಿದೆವು. ನಮ್ಮ ಹಾಸ್ಟೆಲ್ ರೂಂ ಗೌಜು ಗದ್ದಲಗಳಿಂದ ತುಂಬಿ ಹೋಗಿ ಹಾಸ್ಟೆಲಿನ ಕೇರ್ ಟೇಕರ್ ಬಂದು ಹಾಗೇ ಸುಮ್ಮನೆ ನೋಡಿಕೊಂಡು ಹೋದ. ಒಬ್ಬ ಗೆಳೆಯ ಪೋನ್ ಮಾಡಿ ಕಾರ್ ತೆಗೆದುಕೊಂಡು ಬರಲು ಹೇಳಿದ. ಎಲ್ಲ ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಅಂತ ಕಾಣುತ್ತೆ. ಬರ‍್ತ್ ಡೇ ಬಾಯ್ ಗೆಳೆಯ ಮಾತ್ರ ತನ್ನ ಪೋನ್ ನಲ್ಲಿ ವಾಟ್ಸಾಪ್ ನೋಡುತ್ತಾ ಮುಸಿ ಮುಸಿ ನಗುತ್ತಾ ಇದ್ದ. ನಮಗೆ ಗೊತ್ತಾಯಿತು ಪೋನಿನ ಆಕಡೆ ಯಾರಿದ್ದಾರೆ ಅಂತ. ನಮ್ಮ ಮನಸ್ಸನ್ನು ಹೇಗೋ ಸಂತೈಸಿ ಕೊಂಡೆವು.

ಐದು ನಿಮಿಶದಲ್ಲಿ ಕಾರ್ ಬಂತು. ನಾವು ದಡದಡನೆ ಇಳಿದು ಹೊರಗೆ ಬಂದೆವು. ಕಾರು ಟಾಟಾ ಇಂಡಿಕಾ ! ಇಂತಹ ಬ್ಯಾಚುಲರ್ ಪಾರ‍್ಟಿಗಳಿಗೇ ಇದೇ ಅಗ್ಗದ ಕಾರು ದೊರಕುತ್ತದೆ. ಎಲ್ಲರೂ ಅದರೊಳಗೆ ತುಂಬಿಕೊಂಡೆವು. ನಾವು ಹೋಗುತ್ತಿದ್ದ ಹೋಟೇಲ್ ಹೆದ್ದಾರಿ ಪಕ್ಕ ಇತ್ತು. ಅಲ್ಲಿ ಎಲ್ಲಿಯೂ ಕೇಕ್-ಪೇಸ್ಟ್ರೀ ಸಿಗದು, ಅದಕ್ಕೆ ಹಾಸ್ಟೆಲ್ ನಿಂದ ಸ್ವಲ್ಪ ದೂರಕ್ಕೆ ಇರುವ ಬೇಕರಿಯಲ್ಲಿ ಚಾಕಲೇಟ್ ಕೇಕ್ ಮತ್ತು ಸ್ನೋ ತೆಗೆದುಕೊಂಡೆವು. ಯಾಕೆಂದರೆ ಪೇಸ್ಟ್ರಿ ನಮ್ಮಲ್ಲಿ ಯಾರಿಗೂ ಇಶ್ಟ ಇಲ್ಲ. ನಿಕಿಲ್‌ಗೆ ಪಾರ‍್ಟಿ ಸ್ನೋ ಹಾರಿಸುವುದು ಅಂದರೆ ಪ್ರಾಣ. ಅರ‍್ದ ಗಂಟೆ ಆದ ಮೇಲೆ ಆ ಪಂಜಾಬಿ ಹೋಟೆಲ್ ತಲುಪಿದೆವಯ. ಹೋಟೇಲ್ ಒಳಗೆ ಹೊಕ್ಕು ಚೆನ್ನಾಗಿ ಕ್ಲೀನಾಗಿರುವ ಟೇಬಲ್ ಲಗುಬಗೆಯಿಂದ ಹಿಡಿದೆವು. ಬರ‍್ತಡೇ ಹುಡುಗನ ಮುಸಿ ಮುಸಿ ನಗು ಮುಂದುವರೆದೇ ಇತ್ತು, ನಮ್ಮ ಮನಸ್ಸನ್ನು ಮತ್ತೊಮ್ಮೆ ಸಂತೈಸಿಕೊಂಡೆವು.

ಟೇಬಲ್ ಬಳಿಗೆ ವೇಟರ್ ಬಂದು ನಮ್ಮನ್ನು ನೋಡಿದ. ನಾವು ಅತ್ತ ಇತ್ತ ನೋಡಿದೆವು ಅಲ್ಲೊಂದು ಕುಟುಂಬ ಚಿಕನ್‌ 65 ತಿನ್ನುತ್ತಾ ಇತ್ತು. ನಾನು ಸ್ಟಾರ‍್ಟರನಲ್ಲಿ ಅದನ್ನೇ ತರಿಸೋಣ ಅಂದೆ. ಇಬ್ಬರು ಚಿಲ್ಲೀ ಚಿಕನ್ ಅಂದರು, ಇನ್ನಿಬ್ಬರು ಚಿಕನ್ ಲಾಲಿಪಾಪ್ ಅಂದರು. ಬರ‍್ತಡೇ ಬಾಯ್ ನ ಮಾತು ಕೇಳೋಣ ಅಂತ ಮೂರೂ ಸ್ಟಾರ‍್ಟರ್ ಆರ‍್ಡರ್ ಮಾಡಿದೆವು. ಹದಿನೈದು ನಿಮಿಶಗಳಲ್ಲಿ ಚಿಲ್ಲೀ ಚಿಕನ್, ಚಿಕನ್ 65 ಮತ್ತು ಚಿಕನ್ ಲಾಲಿಪಾಪ್ ಎಲ್ಲ ಒಂದೊಂದು ಪ್ಲೇಟ್ ಟೇಬಲ್ ಬಂದು ಕೂತವು. ಸುವಾಸನೆ ಗಮಗಮಿಸುತ್ತಿತ್ತು. ಮತ್ತೇನು ತರಲಿ ಸರ್ ಅಂತ ವೇಟರ್ ಕೇಳಿದ. ಅದಕ್ಕೆ ಮತ್ತೆ ಕರೆದು ಹೇಳುತ್ತೇವೆ ಅಂತ ಸಾಗಿಸಿದೆವು. ತಿನ್ನುವಾಗ ತುಂಬಾ ಚೆನ್ನಾಗಿತ್ತು ಮೊದಮೊದಲು, ಬರುಬರುತ್ತಾ ಕಾರ ನನಗೆ ತಾಳದಾಯಿತು. ಎಲ್ಲ ಗೆಳೆಯರು ಬೇಟೆಯಾಡಿದಂತೆ ತಿನ್ನುತ್ತಿದ್ದರು. ಕಾರ ಕೇವಲ ನನಗೆ ಅನ್ನಿಸುತ್ತಿದೆ, ಇವರಿಗೆ ಅದರ ಪರಿವೆಯೇ ಇಲ್ಲ ಅಂದುಕೊಂಡೆ. ಮೊದಲಿನಿಂದಲೂ ಚಿಕನ್ 65 ತಿನ್ನುತ್ತಿದ್ದೇನೆ. ಆದರೆ ಇದು ತುಂಬ ತುಂಬ ಕಾರ ಅನ್ನಿಸಿತು, ಬಾಯಿಗೆ ಬೆಂಕಿ ಬಿದ್ದ ಹಾಗೆ ಆಗಿತ್ತು. ಹಾ… ಹೂ… ಅನ್ನುತ್ತಾ ತಿನ್ನುತ್ತಾ ಇದ್ದೆ, ವೇಟರ್ ಬಂದು ನಗುತ್ತಾ ನನ್ನ ಪ್ಲೇಟಿಗೆ ಚಿಲ್ಲಿ ಚಿಕನ್ ಮತ್ತು ಚಿಕನ್ ಲಾಲಿಪಾಪ್ ಬಡಿಸಿ ಹೋದ ಮತ್ತೆ ನಗುತ್ತಾ, ನಾನೂ ಹಲ್ಲು ಕಿರಿದೆ. ಸ್ವಲ್ಪ ಕಾರ ಅಶ್ಟೇನೂ ಅಲ್ಲ ತಾಳಿಕೊಳ್ಳಬಹುದು ಅಂತ ಮನಸ್ಸಿಗೆ ದೈರ‍್ಯ ತುಂಬುತ್ತಾ ಅವೆಲ್ಲವನ್ನೂ ಈರುಳ್ಳಿ ಚಿಕ್ಕ ತುಣುಕು ಸಹ ಬಿಡದಂತೆ ತಿಂದು ಮುಗಿಸಿದೆ. ಬಾಯಲ್ಲಿ ಬಿದ್ದಿದ್ದ ಕಾರದ ಬೆಂಕಿ ಈಗ ಗಂಟಲಿಗೂ ಹರಡಿ ಹೊಟ್ಟೆಯ ಕಡೆಗೆ ಸಾಗುತ್ತಿತ್ತು. ನಾನು ಮನಸ್ಸಿಗೆ “ಆಲ್ ಈಸ್ ವೆಲ್, ಆಲ್ ಈಸ್ ವೆಲ್” ಅಂತ ಹೇಳುತ್ತಾ ಇದ್ದೆ.

ನನ್ನ ಮೈತುಂಬಾ ಕಾರದ ಬೆಂಕಿ ಹತ್ತಿಕೊಂಡಿದ್ದರೂ, ನನ್ನ ಗೆಳೆಯರು ಅದು ಯಾವ ಶಾಂತಿ ಸಮಾದಾನ ಸಂತಸದಿಂದ ಅದನ್ನೆಲ್ಲಾ ನಗುತ್ತಾ ತಿನ್ನುತ್ತಿದ್ದರೋ ನನಗಂತೂ ತಿಳಿಯಲಿಲ್ಲ. ಇದಾದ ಮೇಲೆ ಬಟರ್ ನಾನ್, ಆಲೂ ಪರೋಟಾ, ಜೀರಾ ರೈಸ್, ಎಗ್ ಪ್ರೈಡ್ ರೈಸ್, ಎಗ್ ಮಹಾರಾಜ ವೇಟರ್ ತಂದು ಟೇಬಲ್ ಮೇಲೆ ಇಟ್ಟು ನಗುತ್ತಾ ಹೋದ. ನಾನು ಸ್ವಲ್ಪ ಕಾರ ಕಡಿಮೆಯಾಗುತ್ತೆ ಅಂತ ಬಟರ್ ನಾನ್, ಎಗ್ ಮಹಾರಾಜ ತಿಂದೆ. ಬೆಂಕಿಗೆ ತುಪ್ಪ ಸುರಿದಂತೆ ಆಯ್ತು. ತುಟಿ ಬಾಯಿಂದ ಶುರುವಾದ ಕಾರದ ಬ್ಯಾಂಡ್ ಮೆರವಣಿಗೆ ಈಗ ಹೊಟ್ಟೆಗೆ ತಲುಪಿ ಅಲ್ಲಿ ಡೊಳ್ಳು ಕುಣಿತ ಅದಾಗಲೇ ಆರಂಬವಾಗಿತ್ತು. ಉಪ್ಪಿಟ್ಟಿನಲ್ಲಿ ಮೆಣಸಿನಕಾಯಿ ಬಂದರೆ ಪಕ್ಕಕ್ಕೆ ತೆಗೆದು ಇಡುವವನು ನಾನು, ಈಗ ಇಲ್ಲಿ ಮೈಯಲ್ಲಿ ದೆವ್ವ ಹೊಕ್ಕವರಂತೆ ತಿನ್ನುತ್ತಾ ಹೋಗಿದ್ದೆ. ಹಾಗೂ ಹೀಗೂ ಒಂದೂವರೆ ಬಟರ್ ನಾನ್ ತಿಂದು ಮುಗಿಸಿದೆ ಸ್ವಲ್ಪ ಎಗ್ ಪ್ರೈಡ್ ರೈಸ್ ತಿಂದೆ. ಅದರಿಂದ ಯಾವ ಶಾಂತಿಯೂ ದೊರಕಲಿಲ್ಲ. ವೇಟರ್ ಆಮೇಲೆ ಕೂಲ್ ಡ್ರಿಂಕ್ಸ್ ತಂದಿಟ್ಟು ಹೋದ. ಆಹಾ ಅಂತ ಹೇಳುತ್ತಾ ಗಟಗಟನೆ ಕುಡಿದೆ ಸ್ವಲ್ಪ ಹಾಯೆನಿಸಿತು. ಊಟ ಮಾಡುವುದು ಎಲ್ಲ ಮುಗಿದು ಬಿಲ್ ಚುಕ್ತಾ ಮಾಡಿ ಹೊರಗೆ ಬಂದೆವು. ನಾನು ಹೊಟ್ಟೆ ಹಿಡಿದುಕೊಂಡೇ ಕಾರಿನ ಒಳಗೆ ಕುಳಿತುಕೊಂಡೆ. ಕಾರದ ಕೋಳಿ ತನ್ನ ಪ್ರತಾಪ ತೋರಿಸುತ್ತಾ ಇತ್ತು.

ಹಾಸ್ಟೆಲ್ ರೂಮಿಗೆ ಬಂದವನೇ ಮಲಗಿಕೊಂಡೆ. ಮುಂಜಾನೆ ನಸುಕಿನಲ್ಲಿ ಐದು ಗಂಟೆಗೆ ಎಚ್ಚರವಾಯ್ತು. ಎದ್ದವನೇ ಸೀದಾ ವಾಶ್ ರೂಂಗೆ ಹೋದೆ ಅಲ್ಲಿಂದ ಏಳು ಗಂಟೆಯವರಗೆ ಪದೇ ಪದೇ ಹೋಗಲೇ ಬೇಕಾಯ್ತು. ನಾಲ್ಕು ಐದು ಸಲ ಹೋಗಿರಬೇಕು‌. ನನ್ನ ಬೆಡ್ ಮೇಲೆ ಮಲಗಲು ನೋಡಿದೆ, ನಿದ್ದೆ ಬರಲಿಲ್ಲ ಮೈಯೆಲ್ಲಾ ದಣಿದು ಹೋಗಿತ್ತು,. ತಲೆಸುತ್ತು ಬರುತ್ತಾ ಇತ್ತು. ನಿಕಿಲ್ ನನ್ನು ಎಬ್ಬಿಸಿ “ಬೇಗ ಮೆಡಿಕಲ್ಗೆ ಹೋಗಿ ಗ್ಲೂಕೋನ್ ಡಿ ಮತ್ತೆ ಮತ್ತು ಹೊಟ್ಟೆನೋವು ಕಡಿಮೆ ಮಾಡೋ ಮಾತ್ರೆ ತೆಗೆದುಕೊಂಡು ಬೇಗ ಬಾ” ಅಂತ ಹೇಳಿ ಕಳಿಸಿ, ಬೆಡ್ ಮೇಲೆ ಮಲಗಿಕೊಂಡೆ. ಕಣ್ಣು ತಲೆ ಎಲ್ಲ ಬಯಂಕರ ನೋಯುತ್ತಿದ್ದವು. ಹತ್ತು ನಿಮಿಶ ಆಗಿರಬೇಕು ಪೋನ್ ಬಂತು. ಪೋನ್ ಕಿವಿಗೆ ಹಚ್ಚಿಕೊಂಡು ಹಲೋ ಅಂದೆ ಆ ಕಡೆಯಿಂದ ನಿಕಿಲ್ “ಲೋ, ಮಾತ್ರೆ ಸಿಕ್ತು, ಗ್ಲುಕೋನ್ ಡಿ ರೆಗ್ಯುಲರ್ ಪ್ಲೆವರ್ ತರಲೋ, ಆರೆಂಜ್ ಪ್ಲೇವರ್ ತರಲೋ ?!” ಅಂತ ಕೇಳಿದ. ಅಯ್ಯೋ ದುರ‍್ವಿದಿಯೇ! ಅಂತ ಕಿರುಚಿಕೊಳ್ಳಲೂ ಕಸುವಿಲ್ಲದ ನಾನು ಯಾವುದಾದರೊಂದು ತಾ ಅಂತ ಹೇಳಿದರೆ, ಮತ್ತೆ ಕೇಳುತ್ತಾನೆ. ಇಲ್ಲದಿದ್ದರೆ ಬಿಟ್ಟು ಹಾಗೇ ಬರುತ್ತಾನೆ ಅಂತ ಊಹಿಸಿ “ಆರೆಂಜ್” ಅಂತ ಇಶ್ಟೇ ಹೇಳಿದೆ. ಹತ್ತು ನಿಮಿಶದಲ್ಲಿ ಬಂದ.

ಗ್ಲಾಸಿಗೆ ಗ್ಲುಕೋನ್ ಡಿ ಹಾಕಿ ನೀರು ಹಾಕಿ ಗಟಗಟನೆ ಕುಡಿದೆ ಆಮೇಲೆ ಮೂರು ಗುಳಿಗೆ ಹಾಕಿಕೊಂಡೆ, ಚಿಕನ್ 65, ಚಿಲ್ಲಿ ಚಿಕನ್ ಮತ್ತು ಚಿಕನ್ ಲಾಲಿಪಾಪ್ ಹೆಸರಿನಲ್ಲಿ! ಆ ತಕ್ಶಣ ಏನೂ ಅನ್ನಿಸಲಿಲ್ಲ, ಆದರೆ ಸ್ವಲ್ಪ ಆರಾಮೆನಿಸಿತು. ಅರ‍್ದ ಗಂಟೆ ಮಲಗಿರಬೇಕು, ಆಮೇಲೆ ಎಚ್ಚರ ವಾಯ್ತು. ಎದ್ದು ಸ್ವಲ್ಪ ಹೊರಗಡೆ ಹೋಗೋಣ ಅಂತ ಬೆಡ್ ನಿಂದ ಸ್ವಲ್ಪ ದೂರ ನಡೆದೆ. ಕಣ್ಣು ಮುಂದೆ ಏನೂ ಕಾಣುತ್ತಿರಲಿಲ್ಲ, ತಲೆಸುತ್ತಿ ಬಂದು ಬಿದ್ದುಬಿಟ್ಟೆ. ನನ್ನ ಪಕ್ಕದ ಬೆಡ್ ಮೇಲೆ ಗೇಟ್ ಎಕ್ಸಾಮ್ ತಯಾರಿ ಮಾಡಿಕೊಳ್ಳುತ್ತಿದ್ದ ರೂಮೇಟ್ ಹಾಗೂ ನಿಕಿಲ್ ಇಬ್ಬರೂ ಬಂದು ಎತ್ತಿದರು. ನಾನು ಅರೆ ಪ್ರಗ್ನೆಯಲ್ಲಿ “ಆರೆಂಜ್ ಪ್ಲೇವರ್, ಆರೆಂಜ್ ಪ್ಲೇವರ್” ಅನ್ನುತ್ತಿದ್ದೆ ! ಬೆಡ್ ಮೇಲೆ ನಾನು ಕೂತುಕೊಂಡಾಗ ನಿಕಿಲ್ ಗ್ಲಾಸಿನಲ್ಲಿ ಮೂರು ಚಮಚ ಗ್ಲೂಕೋನ್ ಡಿ ಹಾಕಿ ಕುಡಿಯಲು ಕೊಟ್ಟ. ನಾನು ಸ್ವಲ್ಪ ಸ್ವಲ್ಪ ಕುಡಿಯುತ್ತಾ ಹೋದೆ ಕಣ್ಣುಗಳು ಮತ್ತೆ ಎಲ್ಲವನ್ನೂ ಸರಿಯಾಗಿ ನೋಡತೊಡಗಿದವು. ಇಬ್ಬರೂ ರೂಂಮೇಟ್ ನನ್ನನ್ನೇ ನೋಡುತ್ತಿದ್ದರು. ಇವರಿಬ್ಬರೂ ನನ್ನನ್ನು ಕರೆದುಕೊಂಡು ಹಾಸ್ಟೆಲ್ನ ಸ್ವಲ್ಪ ದೂರದಲ್ಲಿದ್ದ ಪ್ರೈವೇಟ್ ಕ್ಲಿನಿಕ್ಗೆ ಕರೆದುಕೊಂಡು ಹೋದರು. ಅಲ್ಲಿನ ಡಾಕ್ಟರ‍್ಗೆ ಹೀಗೆ ಹೀಗೆ ಅಂತ ಎಲ್ಲ ಕತೆ ಹೇಳಿದೆ. ಮೊದಲು ನನಗೆ ಗ್ಲುಕೋಸ್ ಹಚ್ಚಿದರು ಅದಾದ ಮೇಲೆ ಇಂಜೆಕ್ಶನ್ ಕೊಟ್ಟರು. ಬರುವಾಗ ಜ್ವರದ ಗುಳಿಗೆ ವಿಟಮಿನ್ ಬರೆದುಕೊಟ್ಟರು. ನಿಕಿಲ್ “ಸ್ವಲ್ಪ ಚಿಲ್ಲಿ ಚಿಕನ್ ಮತ್ತೆ ಚಿಕನ್ 65 ತಿಂದರೆ ಎಲ್ಲ ಸರಿಯಾಗುತ್ತೆ ಚಿಂತೆ ಮಾಡ್ಬೇಡ” ಅಂದ. ನಾನು ಅವನನ್ನು ದುರುಗುಟ್ಟಿ ನೋಡಿದೆ.

(ಚಿತ್ರ ಸೆಲೆ: pixabay)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಅರ್ಶದ್ says:

    ಖಾರದ ಆಹಾರ ಸೇವಿಸಿದ ಬಳಿಕ ಮೊಸರು ಮಜ್ಜಿಗೆ ಸೇವಿಸಿದರೆ ಏನೂ ಆಗುವುದಿಲ್ಲ. ಸಾಫ಼್ಟ್ ಡ್ರಿಂಕ್ ಕುಡಿದದ್ದಕ್ಕೇ ಮರುದಿನ ತಲೆಸುತ್ತು.

ಅನಿಸಿಕೆ ಬರೆಯಿರಿ:

%d bloggers like this: