ಜಾಮ್ ಸ್ತಂಬಗೋಪುರ

– ಕೆ.ವಿ.ಶಶಿದರ.
ಜಾಮ್‌ ಸ್ತಂಬ
ಜಾಮ್ ಸ್ತಂಬಗೋಪುರ ಇರುವುದು ಪಶ್ಚಿಮ ಆಪ್ಗಾನಿಸ್ತಾನದ ಹೆರಾಟ್ ನಗರದಿಂದ ಪೂರ‍್ವಕ್ಕೆ ಸರಿ ಸುಮಾರು 215 ಕಿಲೋಮೀಟರ್ ದೂರದಲ್ಲಿ. ಹರಿ-ರುದ್ ನದಿಯ ಉದ್ದಕ್ಕೂ ಇರುವ ಒರಟಾದ ಕಣಿವೆಯಲ್ಲಿ, ಆಕಾಶದೆತ್ತರಕ್ಕೆ ತಲೆಯೆತ್ತಿ ನಿಂತಿರುವ ‘ಮಿನಾರೆಟ್ ಆಪ್ ಜಾಮ್’, ಜಾಮ್ ನದಿಯ ಸಂಗಮದಲ್ಲಿದೆ. 64 ಮೀಟರ್ ಎತ್ತರ ಹಾಗೂ 9 ಮೀಟರ್ ಸುತ್ತಳತೆ ಹೊಂದಿರುವ ಅಶ್ಟಬುಜಾಕ್ರುತಿಯ ತಳಹದಿಯ ಮೇಲಿನ ಈ ಗೋಪುರವನ್ನು ಸುಟ್ಟ ಇಟ್ಟಿಗೆಗಳಿಂದ ಕಟ್ಟಲಾಗಿದೆ. ಮೇಲೇರುತ್ತಿದ್ದಂತೆ ಸುತ್ತಳತೆಯಲ್ಲಿ ಕಡಿಮೆಯಿರುವ ನಾಲ್ಕು ಕೊಳವೆಯಾಕಾರದ ಗೋಪುರಗಳು ಒಂದರ ಮೇಲೊಂದಂತೆ ನಿಂತಿವೆ.. ಇಡೀ ಸ್ತಂಬ ಗೋಪುರವು ಜ್ಯಾಮಿತಿಯ ರೀತಿಯಲ್ಲಿ ವಜ್ರದ ಹರಳಿನ ಆಕಾರದಲ್ಲಿ ಅಲಂಕ್ರುತವಾಗಿದೆ.

ಸಮುದ್ರ ಮಟ್ಟದಿಂದ 1900 ಮೀಟರ್ ಎತ್ತರದಲ್ಲಿರುವ ಈ ಮಿನಾರೆಟ್ ಸಮೀಪ ಯಾವುದೇ ಪಟ್ಟಣಗಳಿಲ್ಲ. ಹಾಗಾಗಿ ಇಲ್ಲಿಗೆ ತಲಪುವುದು ಕಶ್ಟಕರ. ಗುರಿದ್ ರಾಜವಂಶದ ರಾಜ ಸುಲ್ತಾನ್ ಗಿಯಾಸ್-ಒದ್-ದಿನ್ (1153-1203) ಪಿರ್‍ಜುಕ್ ನಗರವನ್ನು 1194 ರಲ್ಲಿ ನಿರ‍್ಮಿಸಿದ ಎಂದು ನಂಬಲಾಗಿದೆ. ಈ ಪ್ರದೇಶವನ್ನು ಗುರಿದ್ ವಂಶದ ಬೇಸಿಗೆಯ ರಾಜದಾನಿಯಾಗಿದ್ದಿರಬಹದು ಎನ್ನುತ್ತದೆ ಇತಿಹಾಸ. ಇದರ ಸುತ್ತಲಿರುವ ಪಳೆಯುಳಿಕೆಯ ಅವಶೇಶಗಳನ್ನು ಗಮನಿಸಿದರೆ, 11 ಮತ್ತು 12ನೇ ಶತಮಾನದ ಹಿಬ್ರೂ ಶಾಸನಗಳನ್ನು ಹೊಂದಿರುವ ಅನೇಕ ಕಲ್ಲುಗಳನ್ನು ಕುಶ್ಕಕ್ ಬೆಟ್ಟದಲ್ಲಿ ಕಾಣಬಹುದು.

ಹರಿ-ರುದ್ ನದಿಯ ದಂಡೆಯ ಮೇಲೆ ಮತ್ತು ಸ್ತಂಬದ ಪೂರ‍್ವದಲ್ಲಿ ಗುರಿದ್ ವಸಾಹತುಗಳ ಕೋಟೆ ಮತ್ತು ಸಣ್ಣ ಗೋಪುರಗಳ ಕುರುಹುಗಳು ಕಂಡುಬರುತ್ತವೆ. ಅಸಾದಾರಣ ಕಲಾತ್ಮಕ, ಸ್ರುಜನಶೀಲ ಹಾಗೂ ರಚನಾತ್ಮಕ ಇಂಜಿನಿಯರಿಂಗ್ ಪಾಂಡಿತ್ಯವನ್ನು ಪ್ರತಿನಿದಿಸುವ, ಅತ್ಯಂತ ಅಚ್ಚುಕಟ್ಟಾಗಿ ಸಂರಕ್ಶಿಸಲ್ಪಟ್ಟ ಸ್ಮಾರಕಗಳಲ್ಲಿ ಮಿನಾರೆಟ್ ಜಾಮ್ ಒಂದು ಎನ್ನಲಾಗಿದೆ. ಕಲಾ ಇತಿಹಾಸದ ದ್ರುಶ್ಟಿಯಿಂದ ಗಮನಿಸಿದಲ್ಲಿ, ಇದರ ವಾಸ್ತುಶಿಲ್ಪ ಮತ್ತು ಅಲಂಕರಣವು ಮಹೋನ್ನತ ಕ್ರುತಿಯಾಗಿ ಕಂಡುಬರುತ್ತದೆ. ಆ ಪ್ರದೇಶದ ವಾಸ್ತುಶೈಲಿಯ ಮೇಲೆ ಇದು ಬೀರಿರುವ ಪ್ರಬಾವ ಅತಿ ಹೆಚ್ಚಿನದು.

ಬಾನೆತ್ತರಕ್ಕೆ ಮೇಲೇರಿರುವ ಈ ಸ್ತಂಬ, ಮದ್ಯ ಏಶ್ಯಾದ ಇಸ್ಲಾಮಿಕ್ ಅವದಿಯ ವಾಸ್ತು ಶಿಲ್ಪ ಮತ್ತು ಅಲಂಕರಣದ ಒಂದು ಅತ್ಯುತ್ತಮ ಉದಾಹರಣೆ. ಈ ಸ್ತಂಬ ಗೋಪುರ ದೆಹಲಿಯಲ್ಲಿರುವ ಕುತುಬ್ ಮಿನಾರ್‍ನಂತೆ ಕಂಗೊಳಿಸುತ್ತದೆ. 1202ರಲ್ಲಿ ಇದರ ನಿರ‍್ಮಾಣ ಪ್ರಾರಂಬವಾದರೂ ಇದು ಪೂರ‍್ಣಗೊಂಡಿದ್ದು 14ನೇ ಶತಮಾನದ ಆದಿಯಲ್ಲಿ. ಈ ರಚನೆಯ ನಿರ‍್ಮಾಣ ಪ್ರಾರಂಬದ ದಿನದಿಂದಲೂ ಆಕರ‍್ಶಕ ಗೋಪುರವಾಗಿದೆ. ಇದರ ವಿನ್ಯಾಸ ಎತ್ತರ ಹಾಗೂ ಬಣ್ಣ ಸಾರ‍್ವಜನಿಕರನ್ನು ತನ್ನತ್ತ ಸೆಳೆಯುತ್ತದೆ. ಗೋಪುರದ ಮೇಲ್ಬಾಗವನ್ನು ಇಟ್ಟಿಗೆಯಿಂದ ವಿಸ್ತಾರವಾಗಿ ರಚಿಸಲಾಗಿದೆ. ನೀಲಿ ಬಣ್ಣದ ಇಟ್ಟಿಗೆಗಳನ್ನು ಜೋಡಿಸಿ ಅದರ ಮೇಲೆ ಶಾಸನಗಳನ್ನು ಬರೆಯಲಾಗಿದೆ. ಇದು ಅಂದಿನ ವಾಸ್ತು ಶಿಲ್ಪ ಮತ್ತು ಅಲಂಕಾರದ ಗುಣಮಟ್ಟದ ಸೂಚಕವಾಗಿದೆ ಹಾಗೂ ಈ ಪ್ರದೇಶದ ವಾಸ್ತು ಶಿಲ್ಪ ಮತ್ತು ಕಲಾತ್ಮಕ ಸಂಪ್ರದಾಯದ ಮಹೋನ್ನತೆಯನ್ನು ಸಾರುತ್ತದೆ. ಈ ಸ್ತಂಬ ಇರುವ ಸ್ತಳ, ಗರ್ ಪ್ರಾಂತ್ಯದ ಹ್ರುದಯ ಬಾಗದಲ್ಲಿರುವ ಎತ್ತರದ ಪರ‍್ವತಗಳ ನಡುವಿನ ಆಳವಾದ ಕಣಿವೆಯಲ್ಲಿ. ಕಣಿವೆಯಿಂದಾಗಿ ಗೋಪುರದ ಮೆರುಗು ಇನ್ನೂ ಹೆಚ್ಚಾಗಿದೆ.

(ಮಾಹಿತಿ ಸೆಲೆ: unesco.org)

(ಚಿತ್ರ ಸೆಲೆ: wiki)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: