ಹುಚ್ಚು ಹೆಚ್ಚಾಯಿತು

ಕೆ.ವಿ.ಶಶಿದರ.

ನಾವಿದ್ದ ಹಳ್ಳಿ ಇನ್ನೂರು ಇನ್ನೂರೈವತ್ತು ಮನೆಯದ್ದು. ಇಶ್ಟು ಮನೆಯಲ್ಲಿ ದಿನ ಪತ್ರಿಕೆ ದಿನಾಲೂ ಓದುವ ಗೀಳಿದ್ದಿದ್ದು ಇಪ್ಪತ್ತು ಮೂವತ್ತು ಮನೆಯವರಿಗೆ ಮಾತ್ರ. ದಿನಪತ್ರಿಕೆಗಳ ಹಂಚಿಕೆ ಕೆಲಸ ಮಾಡುತ್ತಿದ್ದದು ಹುಚ್ಚೂರಾವ್ ಎನ್ನುವ ಅತಿ ವಿದೇಯ ಮುಗ್ದ ವ್ಯಕ್ತಿ. ದಿನ ಬೆಳಗಾದರೆ ಸಿಟಿಯಿಂದ ಬರುವ ಮೊದಲ ಬಸ್ಸಿಗೆ ಕಾದು, ಅದರಲ್ಲಿ ಬರುವ ಪತ್ರಿಕೆಯನ್ನು ಪಡೆದು ಹಂಚುವುದು ಆತನ ಮೊದಲ ಕಾಯಕ. ಊರಿನವರಿಗೆಲ್ಲಾ ಚಿರಪರಿಚಿತನಾಗಿದ್ದ ಪೇಪರ್ ಹುಚ್ಚೂರಾವ್. ಹಾಗಾಗಿ ಎಲ್ಲರೂ ಅಪ್ಯಾಯಮಾನದಿಂದ ಹುಚ್ಚಣ್ಣ ಹುಚ್ಚಣ್ಣ ಅಂತಲೇ ಕರೆಯುತ್ತಿದ್ದರು.

ಸಾಮಾನ್ಯವಾಗಿ ಯಾವುದೇ ತಕರಾರು ಮಾಡದ ಹುಚ್ಚಣ್ಣ, ಒಮ್ಮೆ ನನ್ನ ಬಳಿ ಬಂದು “ಮಗುವಿನಿಂದ ಹಿಡಿದು ಮುದುಕರವರೆಗೂ, ಎಲ್ಲಾ ಹುಚ್ಚಣ್ಣ ಹುಚ್ಚಣ್ಣ ಅಂತಾರೆ, ನಂಗೆ ಬಹಳ ಬೇಸರ ಆಗುತ್ತೆ. ಇದಕ್ಕೇನಾದರೂ ಪರಿಹಾರ ಸೂಚಿಸಿ, ನಾನೇನು ಹುಚ್ಚಾನಾ?” ಎಂದು ಕೇಳಿದ.

“ಸರಿ ಇದಕ್ಕೊಂದು ಪರಿಹಾರ ಕಂಡು ಹಿಡಿಯುವ, ನಾಳೆ ಬಾ” ಎಂದು ಸಾಗಹಾಕಿದೆ. ಆಮೇಲೆ ನನಗೂ ಇದರ ಬಗ್ಗೆ ಗಮನ ಹರಿಯಲಿಲ್ಲ. ಅವನೂ ಸುಮ್ಮನಾದನಲ್ಲ ಎಂದು ನಾನೂ ಸುಮ್ಮನಾದೆ.

ಮುಂದೊಂದು ದಿನ ಪೇಟೆಯಲ್ಲಿ ಹುಚ್ಚಣ್ಣ ಸಿಕ್ಕ. ಅವ ಕೇಳಿದರೆ ಏನುತ್ತರ ಕೊಡಬೇಕು ಅಂತ ಯೋಚಿಸುತ್ತಾ ಇದ್ದೆ.

ನನ್ನ ಕಂಡೊಡನೆ ಬಳಿ ಬಂದ ಹುಚ್ಚಣ್ಣ “ನನ್ನ ಹೆಸರನ್ನ ಬದಲಾವಣೆ ಮಾಡ್ಕೊಂಡೆ” ಎಂದ. ನನ್ನ ಹೆಗಲ ಮೇಲಿದ್ದ ಬಾರ ಇಳಿದ ಕಾರಣ ನಾನೂ ಕುಶಿಯಾದೆ. ಮಾತು ಮುಂದುವರೆಸುವ ಸಲುವಾಗಿ “ಏನಂತ ಬದಲಾಯಿಸಿಕೊಂಡೆ ಹುಚ್ಚಣ್ಣ” ಎಂದೆ.

“ಇನ್ಮೇಲಿಂದ ನಾನು ಹುಚ್ಚಣ್ಣನೂ ಅಲ್ಲ ಹುಚ್ಚೂರಾವ್ ಸಹ ಅಲ್ಲ. ಬದಲಿಗೆ ಹೆಚ್. ರಾವ್ ” ಎಂದ.

“ಒಳ್ಳೆ ಕೆಲ್ಸ ಮಾಡ್ದೆ ಬಿಡು ಹುಚ್ಚಣ್ಣ. ಹೆಸರಲ್ಲೇನು ಹೆಚ್ಚಿಗೆ ಏನೂ ಬದಲಾವಣೆ ಮಾಡ್ಕಳ್ಳಿಲ್ವಲ್ಲಾ, ಹುಚ್ಚು ಹೆಚ್ ಆಯ್ತು ಅಶ್ಟೆ ಅಲ್ವಾ” ಎಂದೆ ನಗುತ್ತಾ.

ಆಡಿದ ತಪ್ಪಿಗೆ ಹಲ್ಲುಕಚ್ಚಿಕೊಂಡೆ. ಹುಚ್ಚೂರಾವ್ ಅಲಿಯಾಸ್ ಹೆಚ್. ರಾವ್ ಗೆ ಎಶ್ಟು ಅರ‍್ತವಾಯಿತೋ ತಿಳಿಯೆ.

( ಚಿತ್ರಸೆಲೆ : mandatory.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks