“ಸಾರ್…ಅಡ್ಮಿಶನ್!!”

ಮಾರುತಿವರ‍್ದನ್.

ಅಡ್ಮಿಶನ್, admission

ನಾನು 10ನೇ ತರಗತಿ ಪಾಸ್ ಆಗಿ ಪಿ ಯು ಸಿ ಗೆ ಅಡ್ಮಿಶನ್ ಮಾಡ್ಸೋಕೆ ಅಂತ ಗೌರಿಬಿದನೂರಿನ ಆಚಾರ‍್ಯ ಕಾಲೇಜಿಗೆ ಹೋಗಿದ್ದೆ, ನನ್ನ ಮಾವ ಶಿವಶಂಕರ ಜೊತೆಗೆ ಸಹಾಯ ಮಾಡಲಿಕ್ಕೆ ಬಂದಿದ್ದವನು, ಕ್ಲರ‍್ಕ್ ಬರೋದು ತಡವಾಗಿದ್ದಕ್ಕೆ ಹಿಂಗಿಂಗೆ ಮಾಡು ಅಂತ ಮಾಹಿತಿ ಕೊಟ್ಟು ಎಸ್ಕೇಪ್ ಆಗಿಬಿಟ್ಟ. ನನಗೋ ಅಶ್ಟಾಗಿ ಬುದ್ದಿ ಇರಲಿಲ್ಲ (ಈಗ ಬುದ್ದಿ ಇದೆ, ಆದರೆ ನಮ್ಮ ಕುಟುಂಬ ಸದಸ್ಯರು ಇದನ್ನು ಒಪ್ಪುವುದಿಲ್ಲ ). ನನಗೆ “ಅಡ್ಮಿಶನ್” ಎಂಬ ಒಂದು ಕೆಲಸ ತುಂಬಾ ದೊಡ್ಡದು, ಅದರಲ್ಲಿ ಏನೇನೋ ಇರುತ್ತದೆ, ತುಂಬಾ ದೊಡ್ಡ ಪ್ರೊಸೀಜರ್ ಇರುತ್ತದೆ, ಈ ಕೆಲಸ ಬಾರಿ ಕಾಂಪ್ಲಿಕೇಟೆಡ್ ಎಂಬ ಅನಿಸಿಕೆಗಳಿದ್ದವು. ಹೀಗಾಗಿ ನನಗೆ ತುಂಬಾ ಬಯ ಆಗಿ ಶಿವಶಂಕರನನ್ನು ಬಾಯಿ ಬಂದಂತೆ ಬೈದುಕೊಳ್ಳುತ್ತಾ ಕ್ಲರ‍್ಕ್ ವೆಂಕಟಸ್ವಾಮಿ ಹತ್ತಿರ ಒಬ್ಬನೇ ಹೋದೆ.

ಅವರು ನನ್ನನ್ನೊಮ್ಮೆ ನೋಡಿ “ಮಿಡ್ಲಸ್ಕೂಲ್ ಆ ಕಡೆ ಇದೆ ಹೋಗಪ್ಪ..!!” ಎಂದರು. ನನಗೆ ಮತ್ತಶ್ಟು ಬಯವಾಗಿ ‘ಪಿ…ಯು.. ಸ್..ಸಿ’ ಎಂದು ತೊದಲಿದೆ.

ಕ್ಲರ‍್ಕ್ ವೆಂಕಟಸ್ವಾಮಿ ಒಮ್ಮೆ ಕರೆಂಟ್ ಶಾಕ್ ಹೊಡೆಸಿಕೊಂಡವರಂತೆ ನನ್ನ ಕಡೆ ನೋಡಿ, ನನ್ನ ಕೈಯಲ್ಲಿದ್ದ ಮಾರ‍್ಕ್ ಕಾರ‍್ಡ್, ಟಿ.ಸಿ. ತೆಗೆದುಕೊಂಡು ನೋಡಿ ಅದು ನನ್ನದೋ ಅಲ್ಲವೋ ಅಂತ ಕನ್ಪರ‍್ಮೇಶನ್ ಗಾಗಿ ಸ್ಕೂಲಿನ ಹೆಸರು, ತಂದೆಯ ಹೆಸರು ಎರಡೆರಡು ಬಾರಿ ಕೇಳಿದರು. ನಾನು ಸರಿಯಾಗಿ ಉತ್ತರಿಸಿದ್ರಿಂದ ಸಮಾದಾನಗೊಂಡು ಎಲ್ಲಾ ಡಾಕ್ಯುಮೆಂಟ್ಸ್ ಮತ್ತು ಪಾಸ್‌ಪೋರ‍್ಟ್ ಸೈಜಿನ ಪೋಟೋ ತೆಗೆದುಕೊಂಡು, ಅಡ್ಮಿಶನ್ ಶುಲ್ಕ ಕಟ್ಟಿಸಿ ಕೊಂಡು ‘ಎ-ಸೆಕ್ಶನ್’  ಎಂದು ಹೇಳಿ ಹೊರಡಲು ಹೇಳಿದರು.

ಆ್ಯಕ್ಚುಯಲಿ, ಎರಡ್ಮೂರು ಪೋಟೊ ಇಸಕೊಂಡು ಟಿಸಿ, ಮಾರ‍್ಕಶೀಟ್ ಅನ್ನು ಎತ್ತಿ ಒಂದು ಸೈಡಿಗೆ ಇಟ್ಟುಕೊಂಡು ಅಡ್ಮಿಶನ್ ಮುಗೀತು ಹೋಗು ಎಂದರೆ ನಂಬಲು ನಾನು ತಯಾರಿರಲಿಲ್ಲ. ಬದಲಿಗೆ ನನಗೆ ಅಡ್ಮಿಶನ್ ಎಂಬುದು ಒಂದು ಅತಿ ಕ್ಲಿಶ್ಟಕರ ಮತ್ತು ದೊಡ್ಡ ಸಂಗತಿಯಾಗಿದ್ದು, ಈ ವೆಂಕಟಸ್ವಾಮಿ ಅದನ್ನು ಮಾಡಿಲ್ಲವೆಂಬುದು ನನಗೆ 100% ಕಾನ್ಪಿಡೆನ್ಸ್ ಇತ್ತು. ಹೀಗಾಗಿ ನಾನು ನಿಂತಿದ್ದ ಜಾಗದಿಂದ ಕದಲಲಿಲ್ಲ.

ವೆಂ. ಮತ್ತೇನು? ಎನ್ನುವಂತೆ ಮುಕ ನೋಡಿದರು. ನಾನು “ಸಾರ್ ಅಡ್ಮಿಶನ್…!!” ಎಂದು ರಾಗ ಎಳೆದೆ.

“ಮುಗೀತಲ್ಲಯ್ಯಾ ಹೋಗಯ್ಯಾ…!” ಎಂದು ಗದರಿಸಿದರು. ಅಶ್ಟಕ್ಕೂ ಅವರ ಗದರಿಕೆಗೆ ಹೆದರಿ ಅಲ್ಲಿಂದ ಹೋಗುವ ಪರಿಸ್ತಿತಿಯಲ್ಲಿ ನಾನು ಇರಲಿಲ್ಲ. ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದ ಶಿವಶಂಕರನನ್ನು ಮನೆಗೆ ವಾಪಸಾದ ಮೇಲೆ ಹೊಡೆದು ಚಚ್ಚಿಹಾಕಬೇಕು ಎಂಬ ಕೋಪದೊಡನೆ, ಇಲ್ಲಿನ ಪರಿಸ್ತಿತಿ ಕುರಿತು ಬಯವೂ ಆಗಿ ವೆಂ. ಯನ್ನು ಒಪ್ಪಿಸಿ ಅಡ್ಮಿಶನ್ ಅನ್ನು ಮುಗಿಸಿಕೊಂಡು ಹೋಗದಿದ್ದರೆ ನಾನು ಸಾಹಸ ಸಿಂಹ ವಿಶ್ಣುವರ‍್ದನ್ ಅವರ ಅಬಿಮಾನಿ ಅಲ್ಲ ಎಂದು ನಿರ‍್ದಾರ ಮಾಡಿಬಿಟ್ಟಿದ್ದೆ.

ವೆಂ. ಗೆ ತನ್ನ ಟೈಮ್ ಸರಿಯಿಲ್ಲದಿದ್ದರಿಂದಲೇ ಬೆಳಿಗ್ಗೆ ಬೆಳಿಗ್ಗೆಯೇ ಇವನು ಬಂದು ತಗಲಿ ಹಾಕಿಕೊಂಡಿದ್ದಾನೆಂಬುದು ಸ್ಪಶ್ಟವಾಗಿ ಅರ‍್ತವಾದಂತಿತ್ತು. ಹಾಗೂ ಈ ಸಮಯದಲ್ಲಿ ಅಡ್ಮಿಶನ್ ಅದೂ ಇದೂ ಅಂತ ರಾಶಿ ಕೆಲಸ ಬೀಳಿಸಿಕೊಂಡಿದ್ದ ವೆಂಕಟಸ್ವಾಮಿಗೆ ನನ್ನನ್ನು ಅಲ್ಲಿಂದ ಕದಲಿಸುವುದು ಕಶ್ಟ ಎಂದು ಅರಿವಾಗಲು ಮುಂದಿನ ಅರ‍್ದ ಗಂಟೆ ಸಮಯ ಹಿಡಿಯಿತು.

ಇದರಲ್ಲಿ ನನ್ನ ತಪ್ಪೇನೂ ಇರಲಿಲ್ಲ. ಆಗಿನ ನನ್ನ ಅನುಬವ, ಪ್ರಪಂಚ ಗ್ನಾನ, ಮೊಂಡುತನ ಮತ್ತು ನಾನು ವಿಶ್ಣುವರ‍್ದನ್ ಅಬಿಮಾನಿಯಾಗಿದ್ದುದೆಲ್ಲ ಸೇರಿ ನನ್ನನ್ನು ಆ ಮಟ್ಟಿಗೆ ತಯಾರು ಮಾಡಿದ್ದವು.

ವೆಂ. ಬೈದು..ಸಿಡುಕಿ…ಎಗರಾಡಿ…ಕೊನೆಗೆ ಹೊಡೆಯುವುದು ಒಂದನ್ನು ಬಾಕಿ ಉಳಿಸಿಕೊಂಡಿದ್ದರು. ಕೊನೆಗೆ ನನ್ನ ಎದುರಿಗೇ ಬಂದು ಅಡ್ಮಿಶನ್ ಮಾಡಿಸಿಕೊಂಡು ಹೋದ ನಾಲ್ಕೈದು ಸ್ಟೂಡೆಂಟ್ಸ್ ಅನ್ನು ಉದಾಹರಣೆಯಾಗಿ ತೋರಿಸಿ ‘ಅಡ್ಮಿಶನ್ ಅಂದರೆ ಇಶ್ಟೆ’ ಎಂದು ಕನ್ವಿನ್ಸ್ ಮಾಡುವಲ್ಲಿ ವೆಂ. ಯಶಸ್ವಿಯಾಗಿ ಬಿಟ್ಟರು.

ಅಲ್ಲಿಂದ ನಾನು ನೆಕ್ಸ್ಟ್ ಬಂದಿದ್ದು ಪ್ರಿನ್ಸಿಪಾಲ್ ಚೇಂಬರ್ ಮುಂಬಾಗಕ್ಕೆ. ಅವರಿಗೂ ಒಮ್ಮೆ ತೋರಿಸಿ ಕನ್ಪರ‍್ಮ್ ಮಾಡಿಕೊಳ್ಳೋಣ ಎಂದು. ಆಚಾರ‍್ಯ ಕಾಲೇಜಿನ ಪ್ರಿನ್ಸಿಪಾಲ್ ರ ಅದ್ರುಶ್ಟವೋ ಅತವಾ ಮುನ್ಸಿಪಲ್ ಕಾಲೇಜಿನ ಕ್ಲರ‍್ಕ್ ನ ಅದ್ರುಶ್ಟವೋ ಗೊತ್ತಿಲ್ಲ ಪ್ರಿನ್ಸಿಪಾಲರು ಆವತ್ತು ರಜೆಯಲ್ಲಿದ್ದರು (ಯಾಕೆಂದರೆ ಇವರಿಗೆ ತಲೆಕೆಟ್ಟು ನನ್ನ ಅಡ್ಮಿಶನ್ ಕ್ಯಾನ್ಸೆಲ್ ಮಾಡಿದ್ದರೆ, ನಂತರ ನಾನು ಅಲ್ಲಿಂದ ಮುನ್ಸಿಪಲ್ ಕಾಲೇಜಿನ ಕ್ಲರ‍್ಕನ್ನು ಹುಡುಕಿಕೊಂಡು ಹೋಗಬೇಕಾಗಿತ್ತು).

ಆವತ್ತು ಪ್ರಿನ್ಸಿಪಾಲರು ರಜೆಯಲ್ಲಿ ಇದ್ದುದರಿಂದ ನಾನು ಅಲ್ಲಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ಸುಮ್ಮನೆ ಹೊರಟು ಹೋದೆನೆಂದು ನೀವು ಬಾವಿಸುವುದಿಲ್ಲ ಎಂದು ನನಗೆ ಗೊತ್ತು. ನಿಮ್ಮ ಅನಿಸಿಕೆ ಸರಿ. ನಾನು ಅಲ್ಲಿಯೇ ಟಳಾಯಿಸಿದೆ.

ನನ್ನನ್ನು ನೋಡಿ ಅನುಮಾನಗೊಂಡ ಪ್ಯೂನ್ ಒಬ್ಬರು ಹತ್ತಿರ ಕರೆದು ಏನು ಸಮಾಚಾರ ಎಂದು ವಿಚಾರಿಸಿದರು. ನಾನು ‘ಅ…ಡ್ಮಿ…ಶನ್’ ಎಂದೆ. ಅವರು ನನ್ನ ಪೀಸ್ ಕಟ್ಟಿದ್ದ ರಶೀತಿಯನ್ನು ಚೆಕ್ ಮಾಡಿ “ವೆರಿ ಗುಡ್” ಎಂದು ಹೇಳಿದರು. ನಂತರ “ಅಡ್ಮಿಶನ್ ಆಗಿದೆ ಸೋಮವಾರದಿಂದ ಬಾ” ಎಂದು ಹೇಳಿದರು.

ನಾನು “ಎಲ್ಲಿಗೆ ಬರಬೇಕು” ಕೇಳಿದೆ.

ಇವನಿಗೆ ವೆರಿಗುಡ್ ಎಂದಿದ್ದು ತಪ್ಪಾಯಿತೆಂದು ಅವರಿಗೆ ಮನದಟ್ಟಾಯಿತು. ಅವರು ವೆಂಕಟಸ್ವಾಮಿ‌ಯಂತೆ ಮೆದು ಆಸಾಮಿಯಲ್ಲ..

“ಶಂಕರ್ ಟಾಕೀಸ್ ಗೆ ಬಾ” ಎಂದು ಹೇಳಿ, ತಮ್ಮ ಜೋಕಿಗೆ ತಾವೇ ಜೋರಾಗಿ ನಕ್ಕು “ಇನ್ನೆಲ್ಲಿಗೆ ಬರ‍್ತೀಯ… ಇದೇ ಕಾಲೇಜು..ಇಲ್ಲಿಗೆ ಬಾರೋ” ಎಂದು ಗದರಿ ಕಳಿಸಿದರು.

*******************************

ಈಗ ಇದನ್ನೆಲ್ಲಾ ನೆನೆಸಿಕೊಂಡರೆ ನಗು ಬರುತ್ತದೆ. ಆದರೆ ಆ ಸಮಯದಲ್ಲಿ ನನಗಿದ್ದ ಬಯ, ಆತಂಕ, ಅಡ್ಮಿಶನ್ ಆಗಿಲ್ಲವೇನೋ ಎಂಬ ದುಗುಡ ನನ್ನನ್ನು ಹೈರಾಣು ಮಾಡಿದ್ದವು. ಆ ಸಮಯದಲ್ಲಿ ಇವೆಲ್ಲವೂ ನನಗೆ ಕಂಡಿತವಾಗಿಯೂ ಹಾಸ್ಯವಾಗಿರಲಿಲ್ಲ. ಬದಲಿಗೆ ಕಶ್ಟಕರ ಪರಿಸ್ತಿತಿಯಾಗಿದ್ದಿತು.

ಇದನ್ನೆಲ್ಲಾ ಅನುಬವಿಸಿದ ನನಗೆ ಅನಿಸೋದು,

“ಕೆಲವು ಅನುಬವಗಳು ಸಿಹಿಯಲ್ಲ, ಅವು ಬಹಳ ಕಹಿ. ಆದರೆ ಈ ಅನುಬವಗಳ ಸವಿನೆನಪು ಬಲು ಸಿಹಿ” ಎಂದು 🙂

( ಚಿತ್ರಸೆಲೆ : stmaryscollege.in )

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. Kiran G says:

    ಕೆಲವು ಅನುಭವಗಳು ಹಾಗೆ.. ಅವಾಗ ಕಹಿ ಇವಾಗ ಸಿಹಿ

    • Maruthi, The Vishnuvardhan says:

      ಹೌದು ಸರ್, ಆ ಅನುಭವ ಅವಾಗ ಬಹಳ ಕಹಿ ಇತ್ತು, ಇವಾಗ ನಗು

  2. ಮಾರಿಸನ್ ಮನೋಹರ್ says:

    ? ಕಾಲೇಜ್ ಡೇಸ್ !

ಅನಿಸಿಕೆ ಬರೆಯಿರಿ: