ಬಸವಣ್ಣನ ವಚನಗಳ ಓದು – 14 ನೆಯ ಕಂತು

ಸಿ.ಪಿ.ನಾಗರಾಜ.

ಬಸವಣ್ಣ,, Basavanna

ಹಾವಾಡಿಗನು ಮೂಕೊರತಿಯು
ತನ್ನ ಕೈಯಲ್ಲಿ ಹಾವು
ಮಗನ ಮದುವೆಗೆ

ಶಕುನವ ನೋಡಹೋಹಾಗ
ಇದಿರಲೊಬ್ಬ ಮೂಕೊರತಿಯ ಹಾವಾಡಿಗನ ಕಂಡು
ಶಕುನ ಹೊಲ್ಲೆಂಬ ಚದುರನ ನೋಡಾ

ತನ್ನ ಸತಿ ಮೂಕೊರತಿ
ತನ್ನ ಕೈಯಲ್ಲಿ ಹಾವು
ತಾನು ಮೂಕೊರೆಯ

ತನ್ನ ಭಿನ್ನವನರಿಯದೆ ಅನ್ಯರನೆಂಬ
ಕುನ್ನಿಯನೇನೆಂಬೆ ಕೂಡಲಸಂಗಮದೇವಾ.

ಈ ವಚನವನ್ನು ಎರಡು ನೆಲೆಗಳಲ್ಲಿ ವಿವರಿಸಿಕೊಳ್ಳಬಹುದು.

1) ತನ್ನಲ್ಲಿರುವ ಅರೆಕೊರೆಗಳನ್ನು ತಾನು ಅರಿತುಕೊಳ್ಳದೆ/ಗಮನಿಸದೆ, ಇತರರ ಅರೆಕೊರೆಗಳನ್ನು ಎತ್ತಿ ಆಡುವ ವ್ಯಕ್ತಿಯ ಇಬ್ಬಂದಿತನವನ್ನು ಈ ವಚನದಲ್ಲಿ ಹೇಳಲಾಗಿದೆ. ‘ಇಬ್ಬಂದಿತನ’ ಎಂದರೆ ತನಗೆ ಒಂದು ನೀತಿ, ಬೇರೆಯವರಿಗೆ ಮತ್ತೊಂದು ನೀತಿ ಎಂಬ ನಿಲುವನ್ನು ಹೊಂದಿರುವುದು.

2) ತಲೆತಲಾಂತರಗಳಿಂದಲೂ ಜನ ಸಮುದಾಯದ ಮನದಲ್ಲಿ ನೆಲೆಗೊಂಡಿರುವ ಶಕುನಗಳನ್ನು ನಂಬಿಕೊಂಡು ಬಾಳುತ್ತಿರುವ ವ್ಯಕ್ತಿಯ ತಿಳಿಗೇಡಿತನದ ವರ‍್ತನೆಯನ್ನು ಈ ವಚನದಲ್ಲಿ ಹೇಳಲಾಗಿದೆ.

( ಹಾವು+ಆಡಿಗ; ಹಾವು=ಉರಗ/ಸರ‍್ಪ/ನೆಲದ ಮೇಲೆ ಹರಿದಾಡುವ ಒಂದು ಬಗೆಯ ಜಂತು ; ಆಡಿಗ=ಆಡಿಸುವವನು; ಹಾವಾಡಿಗ=ಜನಗಳ ಮುಂದೆ ಹಾವು ಆಡಿಸುವುದನ್ನು ಒಂದು ಕಸುಬನ್ನಾಗಿ ಮಾಡಿಕೊಂಡಿರುವವನು; ಮೂಗು+ಕೊರತಿ; ಮೂಗು=ಉಸಿರಾಡಲು ಮತ್ತು ವಾಸನೆಯನ್ನು ಗ್ರಹಿಸುವ ಒಂದು ಅಂಗ/ಅಯ್ದು ಇಂದ್ರಿಯಗಳಲ್ಲಿ ಒಂದು; ಕೊರೆ=ಅಯ್ಬು/ಕುಂದು/ಲೋಪ; ಕೊರತಿ=ಅಯ್ಬುಳ್ಳವಳು/ಕುಂದುಳ್ಳವಳು; ಮೂಕೊರತಿ=ಮೂಗಿನ ಆಕಾರ ಸರಿಯಿಲ್ಲದಿರುವ ಹೆಂಗಸು/ಅಪ್ಪಚ್ಚಿಯಾದಂತಿರುವ ಮೂಗಿನವಳು; ತನ್ನ=ಹಾವಾಡಿಗನ; ಮಗ=ಪುತ್ರ/ತನುಜ; ಮದುವೆ=ವಿವಾಹ/ಲಗ್ನ;

ಶಕುನ=ಯಾವುದೇ ಒಂದು ಕೆಲಸವು ಆಗುತ್ತದೆ/ಆಗುವುದಿಲ್ಲ ಎಂಬ ಸುಳಿವನ್ನು/ಸೂಚನೆಯನ್ನು ನೀಡುವುದು. ವ್ಯಕ್ತಿಯು ಒಂದು ಕೆಲಸಕ್ಕೆ ಹೊರಟಾಗ ಅವನ ಎದುರಿನಲ್ಲಿ ಕೆಲವು ಬಗೆಯ ವಸ್ತು/ಜೀವಿ/ವ್ಯಕ್ತಿಗಳು ಕಾಣಿಸಿಕೊಂಡರೆ , ತಾನು ಹೋಗುತ್ತಿರುವ ಕೆಲಸ ಚೆನ್ನಾಗಿ ನೆರವೇರುತ್ತದೆ ಇಲ್ಲವೇ ನೆರವೇರುವುದಿಲ್ಲ ಎಂಬ ನಂಬಿಕೆಯು ತಲೆತಲಾಂತರಗಳಿಂದಲೂ ಜನಮನದಲ್ಲಿದೆ. ಇಂತಹ ನಂಬಿಕೆಗೆ ಒಳಗಾದ ವ್ಯಕ್ತಿಗಳು ಕೆಟ್ಟದ್ದೆಂದು ನಂಬಿರುವ ಶಕುನ ಕಂಡುಬಂದರೆ/ಶಕುನವಾದರೆ ತಾವು ಕಯ್ಗೊಂಡಿರುವ ಕೆಲಸವನ್ನು ಅಂದಿನ ಮಟ್ಟಿಗೆ ಕಯ್ ಬಿಟ್ಟು, ಕೆಲಸವನ್ನು ಮತ್ತೊಂದು ದಿನಕ್ಕೆ ಮುಂದೂಡುತ್ತಾರೆ. ಕೆಲವರು ಆ ಕೆಲಸವನ್ನು ಮತ್ತೆ ಮಾಡಲು ಹೋಗುವುದಿಲ್ಲ. ಇದು ಕೇವಲ ಜನಮನದ ನಂಬಿಕೆಯೇ ಹೊರತು, ವಾಸ್ತವದ/ದಿಟದ/ನಿಜದ ಸಂಗತಿಯಲ್ಲ; ನೋಡ ಹೋಹಾಗ=ನೋಡಲು ಹೋಗುವಾಗ;

ಮಗನ ಮದುವೆಗೆ ಶಕುನವ ನೋಡ ಹೋಹಾಗ=ಮಗನ ಮದುವೆಯನ್ನು ಮಾಡಲು ಒಳ್ಳೆಯ ಕಾಲ ಮತ್ತು ದಿನವನ್ನು ಗೊತ್ತುಪಡಿಸಲೆಂದು ಪಂಚಾಂಗವನ್ನು ನೋಡಿ ಹೇಳುವ ಪುರೋಹಿತರ/ಜೋಯಿಸರ/ಅಯ್ಯನವರ ಬಳಿಗೆ ಹೋಗುತ್ತಿದ್ದಾಗ;

ಇದರಲಿ+ಒಬ್ಬ; ಇದಿರ್=ಎದುರಾಗಿ/ಮುಂದುಗಡೆ; ಇದಿರಲಿ=ಎದುರಿನಲ್ಲಿ/ಮುಂದುಗಡೆಯಲ್ಲಿ; ಕಂಡು=ನೋಡಿ/ಗಮನಿಸಿ; ಹೊಲ್+ಎಂಬ; ಹೊಲ್=ಕೆಟ್ಟದ್ದು/ಒಳ್ಳೆಯದಲ್ಲದ್ದು ; ಎಂಬ=ಎನ್ನುವ/ಎಂದು ಹೇಳುವ; ಶಕುನ ಹೊಲ್ಲೆಂಬ=ಕೆಟ್ಟ ಶಕುನ/ಅಪಶಕುನವಾಯಿತು ಎಂದು ಹೇಳುವ; ಚದುರ=ತಿಳುವಳಿಕೆಯುಳ್ಳವನು/ಜಾಣ; ನೋಡು=ಕಾಣು/ಗಮನಿಸು; ನೋಡಾ=ನೋಡುವಂತಹವನಾಗು;

ಶಕುನ ಹೊಲ್ಲೆಂಬ ಚದುರನ ನೋಡಾ=ಕೆಟ್ಟ ಶಕುನವಾಯಿತೆಂದು ಹೇಳುತ್ತಿರುವ ಚದುರನನ್ನು ನೋಡು. ಈ ಸನ್ನಿವೇಶದಲ್ಲಿ ‘ಚದುರ’ ಎಂಬ ಪದವು ‘ತಿಳಿಗೇಡಿ/ಅರಿವಿಲ್ಲದವನು’ ಎಂಬ ತಿರುಳಿನಲ್ಲಿ ಬಳಕೆಯಾಗಿದೆ.

ಏಕೆಂದರೆ ಯಾವುದೇ ಒಂದು ವಸ್ತು/ಜೀವಿ/ವ್ಯಕ್ತಿಯು ಎದುರಾಗಿ ಬರುವುದಕ್ಕೂ ಮುಂದೆ ನಡೆಯಲಿರುವ ಕೆಲಸಕ್ಕೂ ಯಾವುದೇ ಬಗೆಯ ನಂಟು ಇರುವುದಿಲ್ಲ. ಕಾರ‍್ಯ ಕಾರಣಗಳ ನಂಟನ್ನು ಅರಿಯದೆ, ಹಿಂದಿನಿಂದಲೂ ಕೇಳಿಕೊಂಡು ಬಂದಿರುವ ಮಾತುಗಳಲ್ಲಿರುವ ಸರಿ/ತಪ್ಪನ್ನು ಇಲ್ಲವೇ ನಿಜ/ಸುಳ್ಳನ್ನು ಒರೆಹಚ್ಚಿ ನೋಡದೆ/ತಿಳಿಯದೆ ಇರುವುದರಿಂದ ಜನರು ಈ ರೀತಿ ತಿಳಿಗೇಡಿತನದಿಂದ ನಡೆದುಕೊಳ್ಳುತ್ತಿದ್ದಾರೆ.

ಈ ಪ್ರಸಂಗದಲ್ಲಿ ಎದುರಿಗೆ ಬಂದ ಹಾವಾಡಿಗ ಮತ್ತು ಮೂಕೊರತಿಯನ್ನು ಅಪಶಕುನದ ಸಂಕೇತಗಳೆಂದು ನಂಬಲಾಗಿದೆ. ಹಾವಾಡಿಗನು ಹಾವನ್ನಾಡಿಸುವ ಕಸುಬಿನ ಮೂಲಕ ತನ್ನ ಜೀವನವನ್ನು ರೂಪಿಸಿಕೊಂಡಿರುವ ವ್ಯಕ್ತಿ. ಆತನ ಕಯ್ಯಲ್ಲಿರುವ ಹಾವನ್ನು ನಾಗದೇವತೆಯೆಂದು ಜನಸಮುದಾಯವು ಪೂಜಿಸುತ್ತದೆ. ಮೂಕೊರತಿಯ ಮೂಗಿನ ಆಕಾರವು ಆಕೆಯು ಹುಟ್ಟಿನಿಂದಲೇ ಬಂದಿರಬಹುದು ಇಲ್ಲವೇ ಆಕೆಯ ಜೀವನದಲ್ಲಿ ನಡೆದ ಅವಗಡದಿಂದ ಮೂಗಿಗೆ ದೊಡ್ಡ ಪೆಟ್ಟು ಬಿದ್ದು ಅಪ್ಪಚ್ಚಿಯಾಗಿರಬಹುದು. ವಾಸ್ತವದ ಸಂಗತಿಗಳು ಹೀಗಿರುವಾಗ , ಹಾವಾಡಿಗ ಮತ್ತು ಮೂಕೊರತಿಯನ್ನು ಅಪಶಕುನವೆಂದು ಜನಸಮುದಾಯವು ನಂಬಿರುವುದಕ್ಕೆ ಕಾರಣವನ್ನು ತಿಳಿಯಬೇಕಾದರೆ ನಮ್ಮ ಸಮಾಜದ ರಚನೆಯನ್ನು ನೋಡಬೇಕಾಗುತ್ತದೆ.

ನಮ್ಮ ಸಮಾಜವು ಮೇಲು/ಕೀಳಿನ ಮೆಟ್ಟಿಲುಗಳಿಂದ ಕೂಡಿರುವ ಜಾತಿ ತಾರತಮ್ಯದಿಂದ ಕೂಡಿದೆ. ಈ ಜಾತಿ ತಾರತಮ್ಯವು ಪ್ರತಿಯೊಬ್ಬ ವ್ಯಕ್ತಿಯ ಮನದಲ್ಲಿಯೂ ‘ನಾನು ಇನ್ನೊಬ್ಬನಿಗಿಂತ ಮೇಲು ಎಂಬ ಇಲ್ಲವೇ ಕೀಳು’ ಎಂಬ ಮೇಲರಿಮೆ/ಕೀಳರಿಮೆಯ ಒಳಮಿಡಿತವನ್ನು ಯಾವಾಗಲೂ ಮೂಡಿಸುತ್ತಿರುತ್ತದೆ. ಇದೇ ರೀತಿಯಲ್ಲಿ ಕಸುಬುಗಳಲ್ಲಿಯೂ ಕೆಲವನ್ನು ಒಳ್ಳೆಯದು/ಉತ್ತಮವೆಂದು, ಮತ್ತೆ ಕೆಲವನ್ನು ಕೆಟ್ಟದ್ದು/ಹೊಲಸು ಎಂಬ ನಿಲುವನ್ನು ಹೊಂದಲಾಗಿದೆ. ಜನಸಮುದಾಯವು ಹಾವಾಡಿಗನ ಜಾತಿಯನ್ನು ಮತ್ತು ಕಸುಬನ್ನು ಕೀಳು ಎಂದು ಪರಿಗಣಿಸಿರುವುದರಿಂದ ಅವನು ಅಪಶಕುನದ ಸಂಕೇತವಾಗಿದ್ದಾನೆ.

ವ್ಯಕ್ತಿಯ ದೇಹದ ಆಕಾರದಲ್ಲಿ ಕಂಡುಬರುವ ಅರೆಕೊರೆಗಳಿಗೆ ಹಿಂದಿನ ಜನ್ಮದ ಪಾಪಪುಣ್ಯಗಳು ಕಾರಣವೆಂಬ ನಂಬಿಕೆಯು ಜನಮನದಲ್ಲಿದೆ. ಆದ್ದರಿಂದ ಮೂಕೊರತಿಯು ಅಪಶಕುನದ ಸಂಕೇತವಾಗಿದ್ದಾಳೆ. ಸಮಾಜದಲ್ಲಿನ ಈ ಬಗೆಯ ನಂಬಿಕೆಗಳ ನೆಲೆಯಲ್ಲಿ ಬೆಳೆದುಬಂದಿರುವ ಹಾವಾಡಿಗನ ವರ‍್ತನೆಯು ತನ್ನ ಬಗ್ಗೆ ತಾನು ಹೊಂದಿರುವ ಕೀಳರಿಮೆ ಮಾತ್ರವಲ್ಲದೆ, ತಿಳಿಗೇಡಿತನದಿಂದ ಕೂಡಿದೆ. ಜಾತಿಯ ಮೇಲು/ಕೀಳು, ಪುನರ್ ಜನ್ಮ ಮತ್ತು ಕರ‍್ಮಸಿದ್ದಾಂತಗಳು ಜನಮನದಲ್ಲಿ ಇಂತಹ ನೂರಾರು ಬಗೆಯ ಕೀಳರಿಮೆಯನ್ನು ನೆಲೆಗೊಳಿಸಿರುವುದನ್ನು ಈ ಬಗೆಯ ಪ್ರಸಂಗದಲ್ಲಿ ಕಾಣಬಹುದು;

ಸತಿ=ಹೆಂಡತಿ/ಮಡದಿ/ಪತ್ನಿ; ತನ್ನ ಸತಿ ಮೂಕೊರತಿ=ತನ್ನ ಹೆಂಡತಿಯೂ ಮೂಕೊರೆಯಳಾಗಿದ್ದಾಳೆ; ತಾನು ಮೂಕೊರೆಯ=ತಾನು ಕೂಡ ಅಯ್ಬಾಗಿರುವ ಮೂಗುಳ್ಳವನು; ಭಿನ್ನ+ಅನ್+ಅರಿಯದೆ; ತನ್ನ=ಹಾವಾಡಿಗನಾದ ಮತ್ತು ಮೂಕೊರೆಯನಾದ ವ್ಯಕ್ತಿ; ಭಿನ್ನ=ಕುಂದು/ಕೊರತೆ/ಲೋಪ; ಅನ್=ಅನ್ನು; ಅರಿ=ತಿಳಿ; ಅರಿಯದೆ=ತಿಳಿಯದೆ/ಗಮನಿಸಿದೆ;

ತನ್ನ ಭಿನ್ನವನರಿಯದೆ=ತನ್ನಲ್ಲಿರುವ ಕುಂದುಕೊರತೆಗಳನ್ನು ಗಮನಿಸದೆ/ಅರಿತುಕೊಳ್ಳಲಾಗದೆ/ತನ್ನ ನಿಜರೂಪದ ಇರುವಿಕೆಯನ್ನು ತಿಳಿಯದೆ; ಅನ್ಯರನ್+ಎಂಬ; ಅನ್ಯ=ಬೇರೆಯ/ಮತ್ತೊಬ್ಬ; ಅನ್ಯರನ್=ಇತರರನ್ನು/ಬೇರೆಯವರನ್ನು; ಕುನ್ನಿ+ಅನ್+ಏನ್+ಎಂಬೆ; ಕುನ್ನಿ=ನಾಯಿ/ನಾಯಿ ಮರಿ. ಕುನ್ನಿ ಎಂಬ ಪದ ಒಂದು ಬಯ್ಗುಳವಾಗಿ ಬಳಕೆಯಾಗಿದೆ. ಇತರ ವ್ಯಕ್ತಿಯ ನಡೆನುಡಿಯಲ್ಲಿನ ಕೆಟ್ಟದ್ದನ್ನು ನಿಂದಿಸುವಾಗ , ಆತನನ್ನು ನಾಯಿಗೆ ಹೋಲಿಸಿ ಬಯ್ಯುತ್ತಾರೆ;

ಅನ್ಯರನೆಂಬ ಕುನ್ನಿಯನ್=ಇತರರನ್ನು ಕೀಳಾಗಿ ಕಾಣುವ ನೀಚವ್ಯಕ್ತಿಯನ್ನು/ಇತರರಲ್ಲಿರುವ ಅರೆಕೊರೆಗಳನ್ನು ಎತ್ತಿ ನಿಂದಿಸುವ ಕೆಟ್ಟವ್ಯಕ್ತಿಯನ್ನು;

ಏನ್=ಯಾವ ರೀತಿಯಲ್ಲಿ ; ಎಂಬೆ=ಹೇಳುವೆ; ಏನೆಂಬೆ=ಏನೆಂದು ತಾನೆ ಹೇಳಲಿ/ಇಂತಹ ತಿಳಿಗೇಡಿತನದ ವರ‍್ತನೆಯನ್ನು ಹೇಳಲು ಪದಗಳೇ ಇಲ್ಲ; ಕೂಡಲಸಂಗಮದೇವಾ=ಈಶ್ವರ/ಶಿವ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ.

ತನ್ನ ಭಿನ್ನವನರಿಯದೆ ಅನ್ಯರನೆಂಬ ಕುನ್ನಿಯನೇನೆಂಬೆ ಕೂಡಲಸಂಗಮದೇವಾ=ಹಾವಾಡಿಗನು ತನ್ನಂತೆ ಮತ್ತು ತನ್ನ ಹೆಂಡತಿಯಂತೆಯೇ ಇರುವ ಮತ್ತೊಂದು ಜೋಡಿಯನ್ನು ಕಂಡು ಅಪಶಕುನವಾಯಿತೆಂಬ ಆತಂಕಕ್ಕೆ ಒಳಪಟ್ಟಿದ್ದಾನೆ. ಇದು ಆತನ ತಿಳಿಗೇಡಿತನವನ್ನು ಸೂಚಿಸುವುದು ಮಾತ್ರವಲ್ಲ , ಒಂದು ಸಮಾಜದ ನಡಾವಳಿಯು ಇಲ್ಲವೇ ಜನಸಮುದಾಯದ ನಂಬಿಕೆಯು ಹೇಗೆ ಕೋಟಿಗಟ್ಟಲೆ ಜನಮನದಲ್ಲಿ ಕೀಳರಿಮೆಯನ್ನು ನಾಟುವಂತೆ ಮಾಡಿ, ವ್ಯಕ್ತಿಗಳ ಬದುಕನ್ನು ಹಲವಾರು ಬಗೆಯ ಸಂಕಟಕ್ಕೆ ಗುರಿಮಾಡುತ್ತವೆ ಎಂಬುದನ್ನು ತಿಳಿಸುತ್ತದೆ. ಈ ಪ್ರಸಂಗದಲ್ಲಿ ಹಾವಾಡಿಗನ ನಂಬಿಕೆಯಿಂದಾಗಿ ನಡೆಯಬೇಕಾಗಿದ್ದ ಮಗನ ಮದುವೆಯ ಮುರಿದುಬಿದ್ದಿತು.

ಶಿವಶರಣಶರಣೆಯರು ಎಲ್ಲಾ ಬಗೆಯ ಶಕುನಗಳನ್ನು ತಿರಸ್ಕರಿಸಿದ್ದರು ಮತ್ತು ಜೀವನದ ಆಗುಹೋಗುಗಳಿಗೆ/ಒಳಿತು ಕೆಡುಕುಗಳಿಗೆ ವ್ಯಕ್ತಿಗಳ ನಡೆನುಡಿಗಳೇ ಕಾರಣ ಎಂಬ ನಿಲುವನ್ನು ಹೊಂದಿದ್ದರು ಎಂಬುದನ್ನು ಈ ವಚನ ತಿಳಿಸುತ್ತದೆ.)

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: