“ನಿನಗೆ ಚಟ್ನಿಸ್ ಆಗುತ್ತದೆ ಕಣೋ”

– ಮಾರಿಸನ್ ಮನೋಹರ್.

school children, ಶಾಲೆ ಮಕ್ಕಳು

ಅಂದು ಆಗಸ್ಟ್ 15 ರ ಹಿಂದಿನ ದಿನ, ಸ್ಕೂಲಿನಲ್ಲಿ ಸ್ವಾತಂತ್ರ್ಯ ದಿನದ ಎಲ್ಲ ತಯಾರಿಗಳು ಜೋರಿನಿಂದ ನಡೆಯುತ್ತಿದ್ದವು. ನಾನು ಸ್ಕೂಲಿಗೆ ನೀಲಿ ಬಣ್ಣದ ಪ್ಯಾರಾಗಾನ್ ಚಪ್ಪಲಿ ಹಾಕಿಕೊಂಡು ಹೋಗಿದ್ದೆ. ಅವತ್ತು ಯೂನಿಪಾರ‍್ಮ ಹಾಕ್ಕೊಂಡು ಬರುವುದಕ್ಕೆ ವಿನಾಯಿತಿ ಇತ್ತು. ಕ್ರಿಕೆಟ್ ಆಡಿ ಗೆಳೆಯನೊಬ್ಬನ ಸೈಕಲ್ ಹಿಂದೆ ಕೂತು ಬರುತ್ತಿದ್ದಾಗ, ಹಿಂದಿನ ಗಾಲಿಯಲ್ಲಿ ಸಿಕ್ಕಿ ನನ್ನ ಒಂದು ಸ್ಯಾಂಡಲ್ ಕಡಿದುಹೋಗಿತ್ತು. ಅದಕ್ಕೇ ಅವತ್ತು ಮನೆಯಲ್ಲಿ ಹಾಕಿಕೊಳ್ಳುತ್ತಿದ್ದ ಚಪ್ಪಲಿ ಹಾಕಿಕೊಂಡು ಹೋಗಿದ್ದೆ.

ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಪ್ರಬಂದ, ಡ್ರಾಯಿಂಗ್, ಬಾಶಣ, ದೇಶಬಕ್ತಿ ಹಾಡು – ಇವೆಲ್ಲ ಸ್ಪರ‍್ದೆಗಳು ಮುಗಿದಿದ್ದವು. ಎಲ್ಲ ಗೆದ್ದ ತಂಡಗಳ ಮತ್ತು ಸ್ಪರ‍್ದೆಗಳಲ್ಲಿ ಗೆದ್ದವರ ಹೆಸರುಗಳನ್ನು ಟೀಚರ್‌ಗಳು ಬರೆದುಕೊಂಡರು. ನಾನು ಇದ್ದ ಕಬಡ್ಡಿ ಟೀಂ ಗೆದ್ದಿತ್ತು ಮತ್ತು ನಾನು ಡ್ರಾಯಿಂಗ್, ಬಾಶಣದಲ್ಲಿ ಕೂಡ ಮೊದಲ ಸ್ತಾನ ಪಡೆದಿದ್ದೆ. ನಮಗೆಲ್ಲ ಮರುದಿನ ಏನು ಬಹುಮಾನ ಕೊಡುತ್ತಾರೆ ಅಂತ ತವಕ ತುಂಬಿ ಹರಿದು ಕುಶಿ ತಾಳದಾಗಿತ್ತು. ಹಾಡು ಹಾಗೂ ಪ್ರಬಂದಕ್ಕೆ “F” ಸಿಕ್ಕಿತ್ತು, ಅದಕ್ಕೆ ಪ್ರೈಜ್ ಗೀಜ್ ಏನೂ ಸಿಗಲ್ಲ ಅಂತ ಟೀಚರ್ ಗಳು ಹೇಳಿದರು. ಉಡುಗೊರೆ ಅಂದರೆ ಪೆನ್ನು, ಪೆನ್ಸಿಲ್, ಬುಕ್ ಗಳು, ಟ್ರೋಪಿ, ಕಂಪಾಸ್ ಬಾಕ್ಸ್ ಕೊಡುತ್ತಿದ್ದರು. ಆದರೂ ಎಲ್ಲರ ಮುಂದೆ ಮುಕ್ಯ ಅತಿತಿಗಳ ಕೈಲಿ ಆ ಪ್ರೈಜ್ ತೆಗೆದುಕೊಳ್ಳುವಾಗ ಆಗುತ್ತಿದ್ದ ಕುಶಿ ಪದಗಳಲ್ಲಿ ಬಣ್ಣಿಸಲು ಸಾದ್ಯವಿಲ್ಲ. ಗೆದ್ದು ತಂದ ಮೂರು ರೂಪಾಯಿ ಪೆನ್ನು, ಪೆನ್ಸಿಲ್‌, ಇರೇಸರ್, ಟಿಪಿನ್ ಬಾಕ್ಸ್, ಕಂಪಾಸ್ ಬಾಕ್ಸ್ ಕೊಡುವ ಕುಶಿಯೇ ಅಂತದ್ದು. ಇಂತಹ ದಿನಾಚರಣೆಗಳ ಹಿಂದಿನ ದಿನ ಸರಿಯಾಗಿ ನಿದ್ದೆಯೇ ಬರುತ್ತಿರಲಿಲ್ಲ. ಅಶ್ಟು ಎಕ್ಸೈಟ್‌ಮೆಂಟ್! ಯೂನಿಪಾರ‍್ಮಗಳನ್ನು ಆಗಲೇ ಮನೆಗೆಲಸದವಳಿಂದ ಚೆನ್ನಾಗಿ ಒಗೆಸಲಾಗಿತ್ತು. ನಮ್ಮ ಬಿಳಿ ಬೂಟುಗಳನ್ನು ಹಳೇ ಟೂತ್ ಬ್ರಶ್ ನಿಂದ ತಿಕ್ಕಿ ತಿಕ್ಕಿ ಮಿರಮಿರನೆ ಹೊಳೆಯುವ ಹಾಗೆ ತೊಳೆದಿದ್ದೆವು. ಸೈಕಲ್ ಗಳನ್ನು ಉಲ್ಟಾ ಮಲಗಿಸಿ ಅವುಗಳ ಕೆಸರು ಮೆತ್ತಿದ ಟಯರುಗಳನ್ನು, ಚೈನ್ ಗಳನ್ನು ವೀಲ್ ಡಿಟರ‍್ಜಂಟ ಪೌಡರ್ ಹಾಕಿ ಗ್ರೀಸ್ ಕೂಡ ಬಿಡದೆ ತೊಳೆದಿದ್ದೆವು. ಅಪ್ಪ ನಮ್ಮ ಆರ‍್ಬಟ ನೋಡಿ “ಚೈನ್ ಗಳಿಗೆ, ಬಾಲ್ ಬೇರಿಂಗ್ ಗಳಿಗೆ ಗ್ರೀಸ್ ಇರಬೇಕ್ರೋ” ಅಂತ ಹೇಳಿದ್ದು ನಮಗೆ ಕೇಳಿಸಲಿಲ್ಲ.

ನಮ್ಮ ಸ್ಕೂಲಿನ ಪಿವೋನ್, ಅಟೆಂಡರ್, ಆಯಾಗಳು ಬಾವುಟದ ಕಂಬವನ್ನು ಸಿಂಗರಿಸುತ್ತಿದ್ದರು. ಸುತಳಿಗಳಿಗೆ (ತೆಂಗಿನ ನಾರಿನ ತೆಳು ಹಗ್ಗ) ಮೂರು ಬಣ್ಣದ ಪೇಪರ್ ಗಳನ್ನು ಅಂಟಿಸುತ್ತಿದ್ದರು. ಅದಕ್ಕೆ ಮೈದಾ ಹಿಟ್ಟನ್ನು ಕುದಿಸಿ ಅಂಟು (ಗೋಂದು) ತಯಾರಿಸಿದ್ದರು. ಅದನ್ನು ನ್ಯೂಸ್ ಪೇಪರ್ ಇಲ್ಲವೇ ಕಾರ‍್ಡ್‌ಬೋರ‍್ಡ್ ಮೇಲೆ ಇಟ್ಟುಕೊಂಡು ಇಡೀ ಸ್ಕೂಲನ್ನು ಡೆಕೋರೇಟ್ ಮಾಡುತ್ತಾ ಇದ್ದರು. ಸ್ವಾತಂತ್ರ್ಯ ದಿನದ ಆಚರಣೆಯ ತಯಾರಿಯ ಸಡಗರ ಎಲ್ಲ ಕಡೆ ಪಸರಿಸಿತ್ತು. ಅದಕ್ಕಿಂತ ಹೆಚ್ಚಾಗಿ ನಮಗೆ ಏನೂ ಹೋಂವರ‍್ಕ್ ಕ್ಲಾಸ್‌ವರ‍್ಕ್‌ ಇಲ್ಲದೇ ಮೂರು ದಿನ ಹಾಯಾಗಿ ಹಕ್ಕಿಗಳಂತೆ ಹಾರಾಡಿಕೊಂಡಿದ್ದೆವು. ಸ್ಕೂಲಿನ ಹಳೇ ಮೇಜು, ಕುರ‍್ಚಿ, ಅಲಮೇರಾ ಮುರಿದ ಬೆಂಚು, ಟೆಂಟ್ ಗಳನ್ನು ಇಡುತ್ತಿದ್ದ ಯುಟಿಲಿಟಿ ರೂಮ್ ಒಂದಿತ್ತು. ಮರುದಿನದ ಸ್ವಾತಂತ್ರ ದಿನಾಚರಣೆಯ ಸಲುವಾಗಿ ಡಾನ್ಸ್ ಪ್ರೋಗ್ರಾಂಗಳಿದ್ದವು ಇದ್ದವು. ಅದರಲ್ಲಿ ಪಾಲ್ಗೊಳ್ಳುವವರು ಮತ್ತು ಡಾನ್ಸ್ ಕೋರಿಯೋಗ್ರಪಿ ಮಾಡುತ್ತಿದ್ದ ಟೀಚರ್ ಗಳು ಈ ಯುಟಿಲಿಟಿ ರೂಮನ್ನು ಡಾನ್ಸ್ ತಯಾರಿಗೆ ಬಳಸಿಕೊಳ್ಳಲು ಹೆಡ್ ಮಾಸ್ಟರ್ ಅವರಿಗೆ ಕೇಳಿಕೊಂಡಿದ್ದರು. ಅದಕ್ಕೆ ಒಪ್ಪಿಕೊಂಡು ಹೆಡ್ ಮಾಸ್ಟರ್ ಅಟೆಂಡರುಗಳಿಗೆ ಆ ರೂಮನ್ನು ಚೊಕ್ಕ ಮಾಡಲು ಹೇಳಿದ್ದರು.

ಈ ಡ್ಯಾನ್ಸ್‌ಗಳಲ್ಲಿದ್ದ ಹುಡುಗ-ಹುಡುಗಿಯರ ದರ‍್ಪವಂತೂ ಹೇಳಲು ಸಾದ್ಯವಾಗದಶ್ಟು ಹೆಚ್ಚಾಗಿತ್ತು ಅವತ್ತು. ತಾವು ಡಾನ್ಸ್ ಪ್ರಾಕ್ಟಿಸ್ ಮಾಡುವುದನ್ನು, ಸ್ಕಿಟ್ ಮಾಡುವುದನ್ನು ಯಾರೂ ನೋಡಬಾರದು ಅಂತ ಅಟೆಂಡರುಗಳಿಗೆ ಕಾವಲುಗಾರರನ್ನಾಗಿ ಮಾಡಿ ಟೀಚರ‍್‌ ಗಳ ಕಡೆಯಿಂದ ಸುಗ್ರೀವಾಗ್ನೆ ಹೊರಡಿಸಿದ್ದರು. ಇದರಿಂದ ಕುಣಿಯಲು ಬಾರದ ಮೆಜಾರಿಟಿ ಸ್ಟೂಡೆಂಟುಗಳ ಕುತೂಹಲ ಕೆರಳಿತೆ ವಿನಾ ನಾವು ಆ ಸುಗ್ರಿವಾಗ್ನೆ ಒಪ್ಪಲು ಸಿದ್ದರಿರಲಿಲ್ಲ. ನಾವು ಅವರ ಪ್ರಾಕ್ಟೀಸ್ ನೋಡಲೇಬೇಕು, ಅವರು ಕುಣಿಯುವಾಗ ಅವರನ್ನು ನೋಡಿ ನಗಬೇಕು! ವಿಶೇಶವಾಗಿ, ನಮ್ಮ ಕೆಲ ಗೆಳೆಯರನ್ನು ಹಂಗಿಸಿ ಅವರನ್ನು ಗೋಳು ಹೊಯ್ದುಕೊಳ್ಳುವ ಗೋಲ್ಡನ್‌ ಚಾನ್ಸ್ ನಾವು ಹೇಗೆ ತಪ್ಪಿಸಿಕೊಳ್ಳುವುದು?! ಅವರೆಲ್ಲ ಪಿವೋನ್ ಒಬ್ಬನನ್ನು ಯುಟಿಲಿಟಿ ರೂಮಿನ ಕಾವಲುಗಾರನನ್ನಾಗಿ ನಿಲ್ಲಿಸಿ, ಬೇರೆ ಯಾರೂ ಒಳಹೋಗಿ ಡಾನ್ಸ್ ಪ್ರಾಕ್ಟೀಸ್ ನೋಡದ ಹಾಗೆ ನಾಕಾಬಂದಿ ಮಾಡಿದ್ದರು. ನಮ್ಮ ಕುತೂಹಲ ಈಗ ನೆತ್ತಿಗೆ ಏರಿತ್ತು.

ಯುಟಿಲಿಟಿ ರೂಮಿಗೆ ಎತ್ತರಕ್ಕೆ ಕಿಟಕಿಗಳಿದ್ದವು, ಅಲ್ಲಿಂದ ಇಣಿಕಿ ನೋಡಲು ಮುಂದಾದೆವು. ಅಲ್ಲಿಂದ ಚೆನ್ನಾಗಿ ಕಾಣಿಸಲಿಲ್ಲ. ಕೆಲವರು “ಈ ರೂಮಿನ‌ ಹಿಂದೆ ಕಿಟಕಿಗಳಿವೆ ಅಲ್ಲಿಂದ ನೋಡೋಣ” ಅಂದರು. ನಾನೂ ಅವರ ಜೊತೆ ಸೇರಿಕೊಂಡು ಅಲ್ಲಿಗೆ ಹೋದೆ. ಅಲ್ಲಿ ರೂಮ್‌ನಲ್ಲಿದ್ದ ಮುರಿದ ಬೆಂಚುಗಳು ಕುರ‍್ಚಿಗಳು ಟೇಬಲ್ ಗಳು ಕಬ್ಬಿಣದ ಸಾಮಾನುಗಳು ಎಲ್ಲವನ್ನೂ ಹೊರಗೆ ತಂದು ಇಟ್ಟಿದ್ದರು. ಇದರಿಂದ ನಮಗೆ ಇನ್ನೂ ಅನುಕೂಲ ಆಯಿತು. ಮುರಿದ ಟೇಬಲ್ ಕುರ‍್ಚಿಗಳನ್ನೇ ನೇರವಾಗಿ ಇಟ್ಟು ಅದರ ಮೇಲೆ ನಿಂತು ಕಿಟಕಿಯಿಂದ ಅವರ ಡಾನ್ಸ್ ನೋಡಲು ಮುಂದಾದೆವು.

ಮೊಳೆಗಳು ಮೇಲೆ ಬಂದಿದ್ದ ಒಂದು ಮುರಿದ ಕಟ್ಟಿಗೆ ಕುರ‍್ಚಿಯ ಮೇಲೆ ನನ್ನ ಕಾಲಿಟ್ಟೆ. ಅದರ ತುಕ್ಕು ಹಿಡಿದಿದ್ದ ಮೊಳೆಗಳು ನನ್ನ ಪ್ಯಾರಾಗಾನ್ ಚಪ್ಪಲಿಯನ್ನು ತೂರಿಕೊಂಡು ಹಿಮ್ಮಡಿಯೊಳಗೆ ಹೊಕ್ಕವು. ನೋವಿನಿಂದ ಕೂಗಿಕೊಂಡೆ, ಉಳಿದವರು ಹೆದರಿಕೊಂಡರು. ನಾನು ಒಡನೇ ಕಟ್ಟಿಗೆಯನ್ನು ತೆಗೆದು ಬಿಸಾಡಿದೆ ರಕ್ತ ಸುರಿಯಲು ಆರಂಬಿಸಿತು. ಅದನ್ನು ನೋಡಿ ಇಬ್ಬರು ಓಡಿಹೋದರು. ನನ್ನ ಪ್ಯಾರಾಗಾನ್ ಚಪ್ಪಲಿ ತುಂಬ ರಕ್ತಸಿಕ್ತವಾಗಿತ್ತು, ನಾನು ಅಳಲಿಲ್ಲ. ಆದರೆ ರಕ್ತ ನೋಡಿ ನನಗೆ ಹೆದರಿಕೆಯಾಯಿತು. ನನ್ನ ಗೆಳೆಯನೊಬ್ಬ ಓಡಿ ಹೋಗಿ ಟೀಚರ್ ಗಳಿಗೆ ಹೇಳಿದ. ನಾನು ಹಾಗೇ ಕುಂಟುತ್ತಲೇ ಯುಟಿಲಿಟಿ ರೂಮ್ ಮುಂದೆ ಬಂದೆ. ಅಟೆಂಡರ್ ಬಕೆಟ್ ನೀರನ್ನು ತಂದು ಕಾಲಿನ ಮೇಲೆ ಸುರಿದು, ಡೆಟಾಲ್ ಹಾಕಿದ. ಗಾಯವಾಗಿದ್ದ ಹಿಮ್ಮಡಿಯ ಮೇಲೆ ಹತ್ತಿಯನ್ನು ಒತ್ತಿ ಇಟ್ಟು ಬ್ಯಾಂಡೇಜ್ ಸುತ್ತಿದ. ನನ್ನ ಕ್ಲಾಸ್ ಮೇಟ್ ಒಬ್ಬ “ನಿನ್ನ ಕಾಲಲ್ಲಿ ತುಕ್ಕು ಹಿಡಿದ ಮೊಳೆ ಚುಚ್ಚಿವೆ, ನಿನ್ನ ಕಾಲು ಈಗ ಕೊಳೆತು ಹೋಗುತ್ತೆ. ಅದನ್ನು ಕತ್ತರಿಸಿ ಹಾಕುತ್ತಾರೆ, ನಿನಗೆ ಚಟ್ನಿಸ್ ಆಗುತ್ತದೆ ಕಣೋ” ಅಂತೆಲ್ಲ ಹೇಳಿ ಹೆದರಿಸಿ ಬಿಟ್ಟ. ಆತ ಟೆಟಾನಸ್ ಅನ್ನುವ ಬದಲು ಚಟ್ನಿಸ್ ಅಂದಿದ್ದ. ನನಗೆ ಆಗ ಚಟ್ನಿಸ್ ಅಂದರೆ ಏನು ಅಂತ ಗೊತ್ತಿರಲಿಲ್ಲ. ಚಟ್ನಿಸ್ ಆಗುತ್ತೆ ಅಂದರೆ ನನ್ನ ಕಾಲು ಕೊಳೆತು ಟೊಮ್ಯಾಟೊ ಚಟ್ನಿ ತರಹ ಕೆಂಪಗೆ ಹಾಗೂ ಮೆತ್ತಗೆ ಆಗಿ ಬಿಡುತ್ತೆ ಅಂತ ತಪ್ಪು ತಿಳಿದುಕೊಂಡೆ! ಅಶ್ಟರಲ್ಲಿ ಅಪ್ಪ ನನ್ನನ್ನು ಸ್ಕೂಲಿನಿಂದ ಕರೆದೊಯ್ಯಲು ಬೈಕ್ ಮೇಲೆ ಬಂದರು. ಅವರನ್ನು ನೋಡಿ ನನಗೆ ಇನ್ನೂ ಹೆದರಿಕೆ ಆಯ್ತು. ಅವರು ನನ್ನ‌ ಬಳಿಗೆ ಬಂದಾಗ ಅಟೆಂಡರ ನಮ್ಮ ಸಾಹಸಗಳನ್ನು ಬಿಡಿಸಿ ಚೆನ್ನಾಗಿ ಹೇಳಿದ. ಅಪ್ಪ ಆಗಲೇ ಏನೂ ಬೈಯಲಿಲ್ಲ, ಕರೆದುಕೊಂಡು ಟೆಟಾನಸ್ ಇಂಜಕ್ಶನ್ ಕೊಡಿಸಲು ಕರೆದುಕೊಂಡು ಹೋದರು. ನನ್ನ ಪ್ರೈಜ್‌ಗಳನ್ನು ಮರುದಿನ ಅಣ್ಣ ನನ್ನ ಪರವಾಗಿ ತೆಗೆದುಕೊಂಡು ಬಂದ.

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

4 Responses

 1. ashoka p says:

  ನಿಮ್ಮ ಚಟ್ನಿಸ್ ಕತೆ ಮಜಬೂತಾಗಿದೆ

 2. ಮಾರಿಸನ್ ಮನೋಹರ್ says:

  ದನ್ಯವಾದಗಳು ಅಶೋಕ್ ಅವರೇ.

 3. Maruthi, The Vishnuvardhan says:

  ಪಾದದೊಳಗೆ ಮೊಳೆ ತೂರಿ,
  ಮೈ.. ಜಂ ಅನ್ನುತ್ತೆ

ಅನಿಸಿಕೆ ಬರೆಯಿರಿ: