ಮಕ್ಕಳಿಗೆ ಪಾಕೆಟ್ ಮನಿ – ನನ್ನ ಅನಿಸಿಕೆ

ಅಶೋಕ ಪ. ಹೊನಕೇರಿ.

ಪಾಕೆಟ್ ದುಡ್ಡು, pocket money

ಮಕ್ಕಳಿಗೆ ತಂದೆ-ತಾಯಂದಿರು ಕರ‍್ಚಿಗಾಗಿ ದುಡ್ಡು ಕೊಡುವುದು ಈಗ ಹೊಸ ವಿಚಾರವಾಗಿ ಉಳಿದಿಲ್ಲ. ಮಕ್ಕಳಿಗೆ ಪಾಕೆಟ್ ಮನಿ ಕೊಡುವುದು ಪಾಲಕರ ವಿವೇಚನೆಗೆ ಬಿಟ್ಟದ್ದು. ಇಂದಿನ ಬಹುತೇಕ ಮಕ್ಕಳು ಡಿಜಿಟಲ್ ಯುಗಕ್ಕೆ ತೆರೆದುಕೊಳ್ಳುತ್ತ ಎಲ್ಲವನ್ನೂ ಆದುನಿಕ ಶೈಲಿಯಲ್ಲಿ ನೋಡುತ್ತ ಅನುಕರಿಸುತ್ತ ಹೋಗುತ್ತಿರುವುದರಿಂದ ಇದನ್ನು ನಾವು ಬದಲಾವಣೆಯ ಪರ‍್ವ ಎನ್ನಬಹುದು. ಇದನ್ನು ಪುಶ್ಟೀಕರಿಸಲು ಇಂದಿನ ಸಾಮಾಜಿಕ ಜಾಲ ತಾಣಗಳು, ಎಲೆಕ್ಟ್ರಾನಿಕ್ ಮೀಡಿಯಾಗಳು, ಕ್ರೇಜಿ ಸಿನಿಮಾಗಳು ಮಕ್ಕಳ ಮನಸ್ಸನ್ನು ಆದುನಿಕ ಜಗತ್ತಿಗೆ ತೆರೆದುಕೊಳ್ಳಲು ಮತ್ತು ಹೆಚ್ಚಾಗಿ ಅಲ್ಲೇ ಕೇಂದ್ರೀಕರಿಸಲು, ಅದರ ಸುತ್ತ ಗಿರಕಿ ಹೊಡಿಯಲು ತಮ್ಮ ಶಕ್ತ್ಯಾನುಸಾರ ಶ್ರಮಿಸುತ್ತಿವೆ. ಹಾಗಾಗಿ ಅವುಗಳ ಬಲೆಗೆ ಬೀಳುವ ಮಕ್ಕಳಿಗೆ ಹೆಚ್ಚು ಹೆಚ್ಚು ಪಾಕೆಟ್ ಮನಿ ಕೊಡುವುದು ಅನಿವಾರ‍್ಯವಾದಂತೆ ಕಾಣುತ್ತಿದೆ.

ಹಲವಾರು ದಶಕಗಳ ಹಿಂದೆ ನಾವೆಲ್ಲ ವಿದ್ಯಾರ‍್ತಿಗಳಾಗಿದ್ದಾಗ, ನಮಗೆ ಯಾವುದೇ ಮಾದ್ಯಮಗಳು ನಮ್ಮ ಮನಸ್ಸನ್ನು ಯಾವುದೋ ತೀವ್ರತೆಗೆ, ಒತ್ತಡಕ್ಕೆ ಒಳಗಾಗುವಂತೆ ಮಾಡಿ ಅದು ಅಗತ್ಯವಾಗಿ ಹೊಂದಬೇಕು, ಪಡೆಯಬೇಕು, ಕರಿದಿಸಬೇಕು ಎಂದು ಇನ್ಪ್ಲುಯೆನ್ಸ್ ಮಾಡುತ್ತಿರಲಿಲ್ಲ. ಹಾಗಾಗಿ ನಮ್ಮ ಅಗತ್ಯಗಳೇನಿದ್ದರೂ ಕಡ್ಲೆ ಮಿಟಾಯಿ, ಕಂಬಾರ ಕಟ್ಟು, ಹುಳಿ ಪೆಪ್ಪರ‍್ಮೆಂಟ್, ಎಳ್ಳುಂಡೆ, ಪುರಿ ಉಂಡೆ ಮುಂತಾದವಕ್ಕೆ ಸೀಮಿತವಾಗಿರುತಿತ್ತು ಮತ್ತು ಇವೆಲ್ಲ ಪೈಸೆಗಳ ಬೆಲೆಯಲ್ಲಿರುತ್ತಿದ್ದರಿಂದ ಇದು ಪಾಲಕರಿಗೆ ಅತಿ ದುಬಾರಿ ಪಾಕೆಟ್ ಮನಿ ಆಗಿರಲಿಲ್ಲ. ಇಂದಿನ ಮಾದ್ಯಮಗಳ ಜಾಹೀರಾತಿನಿಂದಾಗಿ ಇಂದು ಪಿಜ್ಜಾ, ಬರ‍್ಗರ್, ಜ್ಯೂಸ್, ಚಿಕನ್, ವೀಕೆಂಡ್ ಪಾರ‍್ಟಿ, ಸ್ನೇಹಿತರೊಂದಿಗೆ ಪ್ರವಾಸ ಹೀಗೆ ಇವರ ಮೋಜುಗಳ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತಿದ್ದು ಇವರ ಪಾಕೆಟ್ ಮನಿಯ ಬೇಡಿಕೆಯ ಮೊತ್ತವು ದೊಡ್ಡದಾಗುತ್ತ ಹೋಗುತ್ತಿದೆ. ಜೊತೆಗೆ ಜಾಹೀರಾತುಗಳ ಮೋಡಿಗೆ ಒಳಗಾಗಿ ಬ್ರಾಂಡೆಡ್ ವಸ್ತುಗಳ ಕೊಳ್ಳುಬಾಕತನವೂ ಕೂಡ ಹೆಚ್ಚಾಗುತ್ತಿದೆ. ಮಕ್ಕಳು ಬೆಳೆದಂತೆ ಪಾಲಕರಿಗೆ ಅವರ ನಿರ‍್ವಹಣೆ ದುಬಾರಿಯಾಗುತ್ತಿದೆ.

ಮಕ್ಕಳಿಗೆ ಅಗತ್ಯಕ್ಕಿಂತ ಹೆಚ್ಚು ಪಾಕೆಟ್ ಮನಿ ಕೈಗೆಟುಕುವುದು ಒಂದು ರೀತಿಯಲ್ಲಿ ಸಮಂಜಸವಲ್ಲ. ಏಕೆಂದರೆ ಸಹವಾಸ ದೋಶದಿಂದ ಮೋಜು ಮಸ್ತಿಯ ಹೆಸರಲ್ಲಿ ದುಶ್ಚಟಗಳ ದಾಸರಾದರೆ ತೊಂದರೆ ಎದುರಿಸಬೇಕಾದವರು ಪಾಲಕರೇ. ಮಕ್ಕಳು ಎಂಬ ವ್ಯಾಮೋಹದಿಂದ ಹೆಚ್ಚು ಹೆಚ್ಚು ಪಾಕೆಟ್ ಮನಿ ಕೊಡುತ್ತಾ ಹೋದರೆ ಹಣದ ಬೆಲೆಯರಿಯದ ವಯಸ್ಸಿನಲ್ಲಿ ಮೋಜು ಮಸ್ತಿ ಹೆಸರಲ್ಲಿ ದುಶ್ಚಟಗಳ ದಾಸರಾಗಲು ಪಾಲಕರೇ ಪರೋಕ್ಶವಾಗಿ ಸಹಕರಿಸಿದಂತಾಗುತ್ತದೆ. ಹಾದಿ ತಪ್ಪಿದ ಮೇಲೆ ನಿಯಂತ್ರಿಸಲು ಹೋದರೆ ಮಿತಿ ಮೀರಿದ ಮಕ್ಕಳು ಕೆಲವೊಮ್ಮೆ ಕ್ರಿಮಿನಲ್ ಗಳಾಗಿ ಪರಿವರ‍್ತನೆಗೊಳ್ಳುವ ಸಾದ್ಯತೆ ಇದೆ. ಇವೆಲ್ಲ ಮಕ್ಕಳ ಮಾನಸಿಕತೆಗೂ ಸಂಬಂದಿಸಿದೆ!

ಪಾಕೆಟ್ ಮನಿ ಕೊಡುವುದರಿಂದ ಎಲ್ಲ ಮಕ್ಕಳು ಹೀಗೆ ಆಗುತ್ತಾರೆ, ಹಾದಿ ತಪ್ಪುತ್ತಾರೆ ಎಂದು ಹೇಳಲಾರೆ. ಪಾಲಕರಾದ ನಾವು ಮಕ್ಕಳನ್ನು ಶಾಲಾ ಕಾಲೇಜಿಗೆ ಕಳುಹಿಸುವುದು, ಬಯಸಿದ್ದನ್ನು ಕರೀದಿಸಿ ಕೊಡುವುದು, ಯತೇಚ್ಚವಾಗಿ ಪಾಕೆಟ್ ಮನಿ ಕೊಡುವುದು – ಇದಶ್ಟೆ ಕಾಳಜಿಯಾಗುವುದಿಲ್ಲ. ಬದಲಿಗೆ ಮಕ್ಕಳು ಶಾಲಾ ಕಾಲೇಜಿನಲ್ಲಿ ಹೇಗಿರುತ್ತಾರೆ, ಹೇಗೆ ನಡೆದುಕೊಳ್ಳುತ್ತಾರೆ, ಅವರ ಸ್ನೇಹಿತರು ಯಾರು? ಎಂತವರು? ಮೋಜು ಮಸ್ತಿ ಹೆಸರಲ್ಲಿ ಹದ್ದು ಮೀರಿ ಹೋಗುತಿದ್ದಾರಾ? ದುಶ್ಚಟಗಳಿಗೆ ಬಲಿಯಾಗುತಿದ್ದಾರಾ? ಇವೆಲ್ಲವನ್ನು ಪಾಲಕರು ಸೂಕ್ಶ್ಮವಾಗಿ ಅವಲೋಕಿಸುತ್ತ, ಅಕಸ್ಮಾತ್ ಅವರು ಹಾದಿ ತಪ್ಪುವಂತಹ ಪ್ರಮೇಯವಿದ್ದಲ್ಲಿ, ಅವರನ್ನು ಸರಿಯಾದ ಸಮಯದಲ್ಲಿ ಸರಿಯಾಗಿ ತಿದ್ದಿ, ಸರಿ ದಾರಿಯಲ್ಲಿ ನಡೆಯುವಂತೆ ದಾರಿ ತೋರಿ, ಮುಂದಾಗಬಹುದಾದ ಅನಾಹುತವನ್ನು ಪ್ರಾರಂಬ ಹಂತದಲ್ಲೆ ತಡೆಯುವಂತೆ ಎಚ್ಚರಿಕೆ ವಹಿಸುವುದು ಪಾಲಕರ ಕರ‍್ತವ್ಯವಾಗಿದೆ.

‘ಮುದ್ದು’ ಎಂಬ ಹೆಸರಲ್ಲಿ ಪಾಲಕರು ಮಕ್ಕಳನ್ನು ಹಾಳು ಮಾಡದೆ ವಿವೇಚನೆಯಿಂದ ವಿವೇಕದಿಂದ ಮಾನವೀಯ ಮೌಲ್ಯಗಳನ್ನು ತಿಳಿಸುತ್ತ, ಹಣದ ಬೆಲೆಯನ್ನು, ದುಡಿಮೆಯ ಶ್ರಮವನ್ನು ಅವರಿಗೆ ಅರ‍್ತ ಮಾಡಿಸುತ್ತ ಸನ್ಮಾರ‍್ಗದಲ್ಲಿ ನಡೆಯಲು ಮಾರ‍್ಗದರ‍್ಶನ ನೀಡುತ್ತಾ ಅಗತ್ಯಕ್ಕೆ ತಕ್ಕಶ್ಟು ಪಾಕೆಟ್ ಮನಿ ಕೊಡುವದರಲ್ಲಿ ಯಾವುದೇ ಹಾನಿಯಿಲ್ಲ ಎಂಬುದು ನನ್ನ ಅಬಿಪ್ರಾಯವಾಗಿದೆ.

( ಚಿತ್ರಸೆಲೆ : economictimes.indiatimes.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: