ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 2ನೆಯ ಕಂತು

ಸಿ.ಪಿ.ನಾಗರಾಜ.

ಬಸವಣ್ಣ,, Basavanna

ಆತ್ಮಸ್ತುತಿ ಪರನಿಂದೆಯ ಕೇಳಿಸದಿರಯ್ಯಾ. (408-40)

ಆತ್ಮಸ್ತುತಿ=ವ್ಯಕ್ತಿಯು ತನ್ನ ನಡೆನುಡಿಗಳನ್ನು ತಾನೇ ದೊಡ್ಡದಾಗಿ ಇತರರ ಮುಂದೆ ಹೊಗಳಿಕೊಳ್ಳುವುದು/ಗುಣಗಾನ ಮಾಡುವುದು/ಬಣ್ಣಿಸುವುದು; ಸ್ತುತಿ=ಹೊಗಳಿಕೆ/ಕೊಂಡಾಟ/ಗುಣಗಾನ; ಪರ=ಬೇರೆಯ/ಅನ್ಯ/ಇತರ; ನಿಂದೆ=ತೆಗಳಿಕೆ/ಬಯ್ಯುವಿಕೆ/ಕಡೆಗಣಿಸಿ ಮಾತನಾಡುವುದು;

ಪರನಿಂದೆ=ಇತರರ ನಡೆನುಡಿಯನ್ನು ಕುರಿತು ಅಣಕಿಸುತ್ತ/ಟೀಕಿಸುತ್ತ/ಹಂಗಿಸುತ್ತ/ಕಡೆಗಣಿಸುತ್ತ ಮಾತನಾಡುವುದು/ಬಯ್ಯುವುದು/ತೆಗಳುವುದು;ಕೇಳಿಸದಿರು+ಅಯ್ಯಾ; ಕೇಳು=ಆಲಿಸು/ಕಿವಿಗೊಡು; ಕೇಳಿಸು=ಕೇಳುವಂತೆ ಮಾಡು/ಕಿವಿಗೆ ಬೀಳು/ಕೇಳಿ ಬರುವುದು; ಕೇಳಿಸದಿರು=ಕೇಳದಂತೆ ಮಾಡು/ಕಿವಿಗೆ ಬೀಳದಂತೆ ಮಾಡು;

ಯಾವಾಗಲೂ ತನ್ನನ್ನು ತಾನೇ ಹೊಗಳಿಕೊಳ್ಳುತ್ತಿರುವ ಮತ್ತು ಇತರರನ್ನು ತೆಗಳುತ್ತಿರುವ ವ್ಯಕ್ತಿಗಳೊಡನೆ ಯಾವುದೇ ಬಗೆಯ ನಂಟನ್ನು/ಒಡನಾಟವನ್ನು ಇಟ್ಟುಕೊಳ್ಳಬಾರದು. ಯಾಕೆಂದರೆ ಇಂತಹ ವ್ಯಕ್ತಿಗಳು ಇತರರ ಒಳ್ಳೆಯ ನಡೆನುಡಿಗಳನ್ನು ಕಂಡು ಮೆಚ್ಚುವುದಿಲ್ಲ. ತನ್ನೊಬ್ಬನನ್ನು ಹೊರತು ಪಡಿಸಿಕೊಂಡು ಉಳಿದೆಲ್ಲರನ್ನೂ ಮತ್ತು ಎಲ್ಲವನ್ನೂ ಕಂಡು ಕರುಬುತ್ತಿರುತ್ತಾರೆ ಇಲ್ಲವೇ ಹೊಟ್ಟೆಕಿಚ್ಚಿನಿಂದ ನರಳುತ್ತಿರುತ್ತಾರೆ.

ಆನೆಯನೇರಿಕೊಂಡು ಹೋದಿರೇ ನೀವು
ಕುದುರೆಯನೇರಿಕೊಂಡು ಹೋದಿರೇ ನೀವು
ಕುಂಕುಮ ಕಸ್ತೂರಿಯ ಹೂಸಿಕೊಂಡು ಹೋದಿರೇ ಅಣ್ಣಾ
ಸತ್ಯದ ನಿಲವನರಿಯದೆ ಹೋದಿರಲ್ಲಾ
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ. ( 638-59 )

ಆನೆ+ಅನ್+ಏರಿಕೊಂಡು; ಆನೆ=ಗಜ/ಕರಿ; ಅನ್=ಅನ್ನು; ಏರು=ಹತ್ತು/ಮೇಲೆ ಹೋಗುವುದು; ಹೋಗು=ತೆರಳು/ಗಮಿಸು; ಹೋದಿರೇ=ಹೋದಿರಲ್ಲವೇ;

ಕುದುರೆ+ಅನ್+ಏರಿಕೊಂಡು; ಕುದುರೆ=ಅಶ್ವ/ತುರಗ/ಹಯ; ಕುಂಕುಮ=ಒಂದು ಬಗೆಯ ಮಂಗಳ ದ್ರವ್ಯ/ಹಣೆಗೆ ಹಚ್ಚಿಕೊಳ್ಳುವ ವಸ್ತು; ಕಸ್ತೂರಿ=ಕಸ್ತೂರಿ ಎಂಬ ಹೆಸರಿನ ಪ್ರಾಣಿಯ ಹೊಕ್ಕುಳಿನಲ್ಲಿ ದೊರೆಯುವ ಸುವಾಸನೆಯುಳ್ಳ ವಸ್ತು; ಹೂಸು=ಬಳಿದುಕೊಳ್ಳುವುದು/ಲೇಪಿಸಿಕೊಳ್ಳುವುದು;

ಆನೆಯನೇರಿಕೊಂಡು/ಕುದುರೆಯನೇರಿಕೊಂಡು/ಕುಂಕುಮ ಕಸ್ತೂರಿಯ ಹೂಸಿಕೊಂಡು=ಈ ನುಡಿಗಳು ರೂಪಕಗಳಾಗಿ ಬಳಕೆಗೊಂಡಿವೆ.

ಆನೆಯ ಮೇಲೆ ಅಂಬಾರಿಯಲ್ಲಿ ಕುಳಿತು ಸಾಗುವ ಇಲ್ಲವೇ ಕುದುರೆಯ ಮೇಲೆ ಕುಳಿತು ಸವಾರಿ ಮಾಡುವವರು ಅಂದರೆ ರಾಜಮಹಾರಾಜರು/ಸಾಮಂತರು/ಪಾಳೆಯಗಾರರು/ಮಾಂಡಲಿಕರು/ಸಮಾಜದಲ್ಲಿ ಉನ್ನತವಾದ ಗದ್ದುಗೆಯಲ್ಲಿರುವ ವ್ಯಕ್ತಿಗಳು;

ಕುಂಕುಮ ಕಸ್ತೂರಿಯನ್ನು ಲೇಪಿಸಿಕೊಂಡಿರುವ ವ್ಯಕ್ತಿಗಳು ಅಂದರೆ ಜನಸಮುದಾಯಕ್ಕೆ ಸತ್ಯ/ನೀತಿ/ನ್ಯಾಯದ ನಡೆನುಡಿಗಳನ್ನು ತಿಳಿಯಹೇಳುವುದನ್ನೇ ತಮ್ಮ ಕಸುಬನ್ನಾಗಿ ಮಾಡಿಕೊಂಡಿರುವ ಗುರುಹಿರಿಯರು/ಜಾತಿ ಜಗದ್ಗುರುಗಳು/ದೇವ ಮಾನವರು;

ಅಣ್ಣ=ಒಡಹುಟ್ಟಿದವರಲ್ಲಿ ಹಿರಿಯನಾದವನು/ಗಂಡಸರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ; ಸತ್ಯ=ದಿಟ/ವಾಸ್ತವ/ನಿಜ; ನಿಲವು+ಅನ್+ಅರಿಯದೆ; ನಿಲವು=ಇರುವಿಕೆ/ರೀತಿ/ಬಗೆ; ಅರಿ=ತಿಳಿ/ಗ್ರಹಿಸು; ಹೋದಿರಿ+ಅಲ್ಲಾ; ಅಲ್ಲಾ=ಅಲ್ಲವೇ ;

ಸತ್ಯದ ನಿಲವನರಿಯದೆ ಹೋದಿರಲ್ಲಾ=ಮಾನವ ಸಮುದಾಯದ ಬದುಕಿನಲ್ಲಿ ಯಾವುದು ದಿಟ-ಯಾವುದು ಸಟೆ / ಯಾವುದು ವಾಸ್ತವ-ಯಾವುದು ಕಲ್ಪಿತ / ಯಾವುದು ಸರಿ-ಯಾವುದು ತಪ್ಪು ಎಂಬುದನ್ನು ತಿಳಿಯಲಿಲ್ಲ;

ಸದ್ಗುಣ+ಎಂಬ; ಸದ್ಗುಣ=ಒಳ್ಳೆಯ ನಡೆನುಡಿ/ ಉತ್ತಮ ಗುಣ; ಎಂಬ=ಎನ್ನುವ; ಫಲ=ಬೆಳೆ; ಬಿತ್ತು=ಬೀಜಹಾಕು/ಹರಡು; ಬೆಳೆ=ಉತ್ಪತ್ತಿ ಮಾಡು;

ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ=ಒಳ್ಳೆಯ ನಡೆನುಡಿಗಳಿಂದ ಬಾಳುವುದು ಎಲ್ಲಕ್ಕಿಂತ ದೊಡ್ಡದು ಎಂಬ ಅರಿವನ್ನು ಹಾಗೂ ಸಹಮಾನವರ ಮತ್ತು ಸಮಾಜದ ಒಳಿತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಒಳಿತನ್ನು ಕಾಣಬೇಕೆಂಬ ಎಚ್ಚರವನ್ನು ಜನಮನದಲ್ಲಿ ಮೂಡಿಸಲಿಲ್ಲ;

ಸಮಾಜದಲ್ಲಿ ಎತ್ತರದ ಗದ್ದುಗೆಯಲ್ಲಿ ಕುಳಿತು ಆಡಳಿತವನ್ನು ನಡೆಸುವವರು ಮತ್ತು ಜನರಿಗೆ ತಿಳಿಯ ಹೇಳುವ ಗುರುಹಿರಿಯರು ಮೊದಲು ತಾವು ಒಳ್ಳೆಯ ನಡೆನುಡಿಗಳಿಂದ ಬಾಳುತ್ತ, ಜನಮನದಲ್ಲಿ ಒಳ್ಳೆಯತನದ ಅರಿವು ಮತ್ತು ಎಚ್ಚರವನ್ನು ಮೂಡಿಸದಿದ್ದರೆ , ಅಂತಹ ಆಡಳಿತದಿಂದ ಮತ್ತು ಹಿರಿತನದಿಂದ ಏನೊಂದು ಪ್ರಯೋಜನವಿಲ್ಲವೆಂಬ ಸಂಗತಿಯನ್ನು ಈ ನುಡಿಗಳು ಸೂಚಿಸುತ್ತಿವೆ.

ಇದಿರ ಗುಣವ ಬಲ್ಲೆವೆಂಬರು
ತಮ್ಮ ಗುಣವನರಿಯರು. (123-20 )

ಇದಿರ=ಇತರರ/ಬೇರೆಯವರ/ಅನ್ಯರ/ಎದುರಿಗೆ ಇರುವವರ; ಗುಣ=ನಡತೆ/ನಡೆನುಡಿ; ಬಲ್ಲೆವು+ಎಂಬರು; ಬಲ್=ತಿಳಿ/ಅರಿ; ಬಲ್ಲೆವು=ತಿಳಿದಿದ್ದೇವೆ/ಅರಿತಿದ್ದೇವೆ; ಎಂಬರು=ಎನ್ನುವರು/ಎಂದು ಹೇಳುವರು;

ಇದಿರ ಗುಣವ ಬಲ್ಲೆವೆಂಬರು=ಬೇರೆಯವರ ನಡೆನುಡಿಗಳಲ್ಲಿ ಯಾವುದು ಕೆಟ್ಟದ್ದು/ಯಾವುದು ಒಳ್ಳೆಯದು ಎಂಬುದು ತಮಗೆ ಚೆನ್ನಾಗಿ ತಿಳಿದಿದೆ/ಅನ್ಯರ ವರ‍್ತನೆಯಲ್ಲಿ ಕಂಡುಬರುವ ಒಳಿತು ಕೆಡುಕಿನ ಗುಣಗಳನ್ನು ಒರೆಹಚ್ಚಿ ನೋಡಬಲ್ಲ ಕಸುವು ನಮ್ಮಲ್ಲಿದೆ ಎನ್ನುವರು;

ಗುಣ+ಅನ್+ಅರಿಯರು; ಅನ್=ಅನ್ನು; ಅರಿ=ತಿಳಿ/ಗ್ರಹಿಸು; ಅರಿಯರು=ತಿಳಿಯರು/ತಿಳಿದುಕೊಂಡಿಲ್ಲ;

ತಮ್ಮ ಗುಣವನರಿಯರು=ತಮ್ಮ ನಡೆನುಡಿಯಲ್ಲಿನ ಒಳಿತು ಕೆಡುಕನ್ನು /ಇತಿಮಿತಿಗಳನ್ನು/ಕುಂದುಕೊರತೆಗಳನ್ನು ಅರಿತುಕೊಂಡಿಲ್ಲ/ತಿಳಿದುಕೊಂಡಿಲ್ಲ;

ವ್ಯಕ್ತಿಯು ಇತರರ ಗುಣಾವಗುಣಗಳನ್ನು ಒರೆಹಚ್ಚಿ ನೋಡಿ ಬೆಲೆಕಟ್ಟುವುದರ ಬದಲು, ತನ್ನ ನಡೆನುಡಿಯು ಹೇಗಿದೆಯೆಂಬುದನ್ನು ಅರಿತುಕೊಂಡು, ತನ್ನಲ್ಲಿರುವ ಕೆಟ್ಟದ್ದನ್ನು ಹತ್ತಿಕ್ಕಿಕೊಂಡು, ಒಳ್ಳೆಯತನದಿಂದ ಬಾಳುವುದನ್ನು ಕಲಿಯಬೇಕು.

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: