ರೂಬಿ – ನೆಲದಡಿಯಲ್ಲೊಂದು ಅಚ್ಚರಿಯ ಜಲಪಾತ

– ಕೆ.ವಿ. ಶಶಿದರ

ರೂಬಿ ಜಲಪಾತ

ವಿಶ್ವ ವಿಸ್ಮಯಗಳ ಆಗರ. ಪ್ರಕ್ರುತಿಯ ಆರಾದಕರು ಎಶ್ಟು ಬಗೆದರೂ ಒಸರುತ್ತಲೇ ಇರುವ ವಿಸ್ಮಯಗಳಿಗೆ ವೈಜ್ನಾನಿಕ ಉತ್ತರವಿಲ್ಲ. ಇಂತಹ ವಿಸ್ಮಯಗಳಲ್ಲಿ ಒಂದು ಈ ಬೂಗತ ಜಲಪಾತ. ಸಾಮಾನ್ಯವಾಗಿ ಜಲಪಾತಗಳು ಎತ್ತರದ ಪ್ರದೇಶದಲ್ಲಿ ಹರಿದು ಬಂದು ಒಮ್ಮೆಲೆ, ಕೊಳ್ಳಗಳಲ್ಲಿ ದುಮುಕುವುದನ್ನು ವಿಶ್ವಾದ್ಯಂತ ಕಾಣಬಹುದು. ಅದರಲ್ಲೂ ಅತಿ ಎತ್ತರದಿಂದ ದುಮುಕುವ ಅಮೇರಿಕಾದ ನಯಾಗರವಾಗಲಿ, ಬಾರತದ ಜೋಗ್ ಜಲಪಾತವಾಗಲಿ ಪ್ರಕ್ರುತಿ ಸೌಂದರ‍್ಯವನ್ನು ಉತ್ತುಂಗಕ್ಕೆ ಕೊಂಡೊಯ್ದಿವೆ. ಗಂಟೆಗಟ್ಟಲೆ ಮೈಮರೆತು ಕೂತು ನೋಡಿದರೂ ತಣಿಯದ ಸೊಬಗು. ಇಲ್ಲಿ ಆಸ್ವಾದನೆಗಿಲ್ಲ ಸಮಯದ ಮಿತಿ.

ರೂಬಿ ಜಲಪಾತ ಸಾಮಾನ್ಯ ಜಲಪಾತಗಳಿಗಿಂತ ಬಿನ್ನವಾಗಿದೆ. ಇದರ ವಿಶೇಶತೆ ಏನೆಂದರೆ ಇದು ಬೂಗತ ಜಲಪಾತ. ಅಮೇರಿಕಾ ಸಂಯುಕ್ತ ಸಂಸ್ತಾನದ ಟೆನ್ನೆಸ್ಸಿ ಬಳಿಯಿರುವ ಚಟ್ಟನೂಗದ ಲುಕ್‍ಔಟ್ ಪರ‍್ವತ ಶ್ರೇಣಿಯಲ್ಲಿ ಇರುವ ಈ ಜಲಪಾತ, ಬೇರೆಲ್ಲಾ ಜಲಪಾತಗಳಂತೆ ಕೊಳ್ಳದಲ್ಲಾಗಲಿ, ಕಣಿವೆಯಲ್ಲಾಗಲಿ ದುಮುಕುವುದಿಲ್ಲ. ಇದು ದುಮುಕುವುದು ‘ಸೊಲೊಮನ್ ಟೆಂಪಲ್’ ಎಂಬ ಕಮಾನಿನ ಆಕಾರದ ಗುಮ್ಮಟದಲ್ಲಿ. ರೂಬಿ ಜಲಪಾತವನ್ನು ನೋಡ ಬರುವ ಪ್ರವಾಸಿಗರಿಗೆ ಈ ಗುಮ್ಮಟದಲ್ಲಿ ಏರ‍್ಪಡಿಸಿರುವ ಅದ್ಬುತ ರಂಗುರಂಗಿನ ಬೆಳಕು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಬೆಳಕಿನ ಚೆಲ್ಲಾಟದ ಪ್ರದರ‍್ಶನ ಅಚ್ಚರಿಯನ್ನು ಉಂಟುಮಾಡುತ್ತದೆ.

ಕಮಾನಿನ ಗುಮ್ಮಟ 145 ಅಡಿ ಎತ್ತರವಿದೆ. ಹಾಗಾಗಿ ರೂಬಿ ಜಲಪಾತ ಇಡೀ ವಿಶ್ವದಲ್ಲೇ ಅತಿ ಆಳವಾದ ವಾಣಿಜ್ಯ ಗುಹೆಗಳಲ್ಲಿ ಪ್ರಮುಕವಾಗಿದೆ. ಮೇಲಿನಿಂದ ದುಮುಕುವ ನೀರು ಈ ಗುಮ್ಮಟದ ತಳದಲ್ಲಿನ ಕೊಳದಲ್ಲಿ ಸಂಗ್ರಹವಾಗುತ್ತದೆ. ಹೀಗೆ ಸಂಗ್ರಹವಾಗಿ, ಕೊಳ ತುಂಬಿದ ನಂತರ, ಹೆಚ್ಚಾದ ನೀರು ಅಂತಿಮವಾಗಿ ಲುಕ್‍ಔಟ್ ಪರ‍್ವತದ ತಳದಲ್ಲಿರುವ ಟೆನ್ನೆಸ್ಸಿ ನದಿಯನ್ನು ಸೇರುತ್ತದೆ.

ಈ ಅದ್ಬುತ ಆಕರ‍್ಶಣೆಯು ಮಿಲಿಯಾಂತರ ನೋಡುಗರನ್ನು ತನ್ನ ವರ‍್ಣರಂಜಿತ ಇತಿಹಾಸದಲ್ಲಿ ಸ್ವಾಗತಿಸಿದೆ ಹಾಗೂ ರಂಜಿಸಿದೆ. ಈಗಲೂ ಇದೇ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ. 1928ರಲ್ಲಿ ರೂಬಿ ಜಲಪಾತದ ಸಂಸ್ತಾಪಕ ಲಿಯೊ ಲ್ಯಾಂಬರ‍್ಟ್ ಈ ಗುಹೆಯನ್ನು ಅಮೂಲಾಗ್ರ ಬದಲಾವಣೆ ಮಾಡಿ ಪ್ರವಾಸಿಗರ ಆಕರ‍್ಶಣಾ ಕೇಂದ್ರವಾಗಿಸಲು ಚಿಂತಿಸಿದಾಗ, ಪ್ರವಾಸೋದ್ಯಮವು ಇನ್ನೂ ಶೈಶಾವಸ್ತೆಯಲ್ಲಿತ್ತು. ಬದಲಾವಣೆಯ ನಂತರ, ಈ ರಸ್ತೆ ಬದಿಯ ಆಕರ‍್ಶಣೆ ಬಹು ಬೇಗ, ನೋಡಲೇ ಬೇಕಾದ ಪ್ರವಾಸಿ ಸ್ತಳವಾಗಿ ಮಾರ‍್ಪಾಡಾಗಿದ್ದು, ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದು ಹೌದು. ಊಹೆಗೆ ನಿಲುಕದಶ್ಟು ಪ್ರಾಮುಕ್ಯತೆ ಪಡೆದಿದ್ದು ಈಗ ಇತಿಹಾಸ.

ರೂಬಿ ಜಲಪಾತದ ಗುಹೆಗಳು, ಲುಕ್‍ಔಟ್ ಪರ‍್ವತ ಶ್ರೇಣಿಯಲ್ಲಿ ಕಂಡು ಬರುವ ಇತರೆ ಗುಹೆಗಳಂತಲ್ಲ. ಇಲ್ಲಿಗೆ ಹೋಗಲು ಯಾವುದೇ ದಾರಿ ಇರಲಿಲ್ಲ. ಈ ಕಾರಣದಿಂದ ಮೊದಮೊದಲು ಇದರ ಬಳಿ ಹೋಗಲು ಚಾರಣಿಗರಿಗೂ ಸಾದ್ಯವಿರಲಿಲ್ಲ. 20ನೇ ಶತಮಾನದ ಆದಿಯವರೆವಿಗೂ ಇಲ್ಲಿಗೆ ಪ್ರವೇಶ ಅಬೇದ್ಯವಾಗಿತ್ತು. ಸಾಮಾನ್ಯ ಗುಹೆಗಳಿಗೆ ಸಂಬಂದಿಸಿದಂತೆ, ಆಗ್ನೇಯ ಅಮೇರಿಕಾ ಸಂಯುಕ್ತ ಸಂಸ್ತಾನದಲ್ಲಿ ಇರುವ ಕಲಾಕ್ರುತಿಗಳಲ್ಲಿ ರೂಬಿ ಗುಹೆಯ ಬಗ್ಗೆ ಮಾಹಿತಿ ಈ ಕಾರಣಕ್ಕಾಗಿ ಲಬ್ಯವಿಲ್ಲ.

1905ರ ಲುಕ್‍ಔಟ್ ಪರ‍್ವತ ಶ್ರೇಣಿಯಲ್ಲಿ ರೈಲ್ವೆ ಸುರಂಗ ಮಾರ‍್ಗವನ್ನು ನಿರ‍್ಮಿಸ ಹೊರಟ ಸಮಯದಲ್ಲಿ ಇದಕ್ಕಿದ್ದ ಪ್ರಾಕ್ರುತಿಕ ದಾರಿಯನ್ನು ಪೂರ‍್ಣವಾಗಿ ಮುಚ್ಚಲಾಯಿತು. 1920ರಲ್ಲಿ, ಗುಹೆಗಳ ಬಗ್ಗೆ ಅತ್ಯಾಸಕ್ತಿ ಹೊಂದಿದ್ದ ಉತ್ಸಾಹಿ ರಸಾಯನ ಶಾಸ್ತ್ರಜ್ನ ಲಿಯೋ ಲ್ಯಾಂಬರ‍್ಟ್, ಈ ಗುಹೆಯನ್ನು ಮತ್ತೆ ತೆರೆದು ಪ್ರವಾಸಿ ಆಕರ‍್ಶಣೆಯ ಕೇಂದ್ರವನ್ನಾಗಿ ಮಾಡಬಹುದೆಂಬ ಮಹತ್ವಾಕಾಂಕ್ಶೆಯಿಂದ ಅದಕ್ಕಾಗಿಯೇ ಕಂಪನಿಯೊಂದನ್ನು ರಚಿಸಿದ. ಹಾಲಿ ಇದ್ದ ಸ್ತಳಕ್ಕಿಂತ ಕೊಂಚ ಎತ್ತರದಲ್ಲಿ ಗುಹೆಯ ಪ್ರವೇಶವನ್ನು ನಿರ‍್ಮಿಸಿ ಅದಕ್ಕೆ ಪ್ರವಾಸಿಗರನ್ನು ಏರಿಳಿ (ಎಲಿವೇಟರ‍್) ಮೂಲಕ ಸಾಗಿಸುವ ಯೋಜನೆಯನ್ನು ರೂಪಿಸಿದ. ತನ್ನ ಯೋಜನೆಯನ್ನು ಕಾರ‍್ಯಗತಗೊಳಿಸುವ ಉದ್ದೇಶದಿಂದ ಗುಹೆಯ ಮೇಲಿರುವ ಸ್ತಳದಲ್ಲಿ ಸಾಕಶ್ಟು ಬೂಮಿಯನ್ನು ಆತ ಹುಟ್ಟು ಹಾಕಿದ ಕಂಪನಿ ಕರೀದಿಸಿತು. 1928ರಲ್ಲಿ ಕರೀದಿಸಿದ ಸ್ತಳದಲ್ಲಿದ್ದ ಸುಣ್ಣದ ಕಲ್ಲನ್ನು ಕೊರೆದು ಗುಹೆಯನ್ನು ಪ್ರವೇಶಿಸಲು ಸೂಕ್ತ ಮಾರ‍್ಗ ನಿರ‍್ಮಾಣ ಪ್ರಾರಂಬಿಸಿದ ಲ್ಯಾಂಬರ‍್ಟ್. ಕೊರೆತ ಪ್ರಾರಂಬಿಸಿದಾಗ, ಅಲ್ಲಿ ಹದಿನೆಂಟು ಇಂಚು ಎತ್ತರ ಮತ್ತು ನಾಲ್ಕು ಅಡಿಗಳಶ್ಟು ಅಗಲದ ಸಣ್ಣ ಮಾರ‍್ಗ ಗೋಚರಿಸಿತು. ಅಯಾಚಿತವಾದ ಈ ಸಂಶೋದನೆ ಬೂಗತವಾಗಿದ್ದ ಗುಪ್ತ ರೂಬಿ ಗುಹೆ ಮತ್ತು ಜಲಪಾತದ ಅನಾವರಣಕ್ಕೆ ನಾಂದಿಯಾಯಿತು.

ಲಿಯೋ ಲ್ಯಾಂಬರ‍್ಟ್‍ನ ತನ್ನ ಮುಂದಿನ ಬೇಟಿಯ ಸಮಯದಲ್ಲಿ, ಪ್ರಿಯ ಮಡದಿ ರೂಬಿಯನ್ನೂ ಕರೆದೊಯ್ದು, ತನ್ನ ಪ್ರೀತಿಯ ಸಂಕೇತವಾಗಿ ಈ ಜಲಪಾತಕ್ಕೆ ಆಕೆಯ ಹೆಸರನ್ನೇ ನಾಮಕರಣ ಮಾಡಿದ. ಪ್ರವಾಸಿಗರ ಓಡಾಟಕ್ಕೆ ಹಾಗೂ ಜಲಪಾತವನ್ನು ಪೂರ‍್ಣವಾಗಿ ನೋಡಲು, ಸೊಬಗಿನ ಆಸ್ವಾದನೆಗೆ ಬೇಕಾಗಿರುವ ಎಲ್ಲಾ ಕ್ರಮವನ್ನು 1954ರಲ್ಲಿ ಲ್ಯಾಂಬರ‍್ಟ್ ಏರ‍್ಪಾಡು ಮಾಡಿದ. ಜನ ಈ ಸುಂದರ ಜಲಪಾತ ನೋಡಲು ಬರುತ್ತಿರುವುದು ಹೆಚ್ಚಾದಂತೆ, ಪ್ರವಾಸಿಗರ ಸುರಕ್ಶತೆಯ ಬಗ್ಗೆ ಅತಿ ಹೆಚ್ಚು ಮುತುವರ‍್ಜಿ ವಹಿಸಿದ ಲ್ಯಾಂಬರ‍್ಟ್, ಜಲಪಾತಕ್ಕೆ ಹರಿದು ಬರುವ ನೀರು, ತನ್ನ ಹರಿವಿನ ಮಾರ‍್ಗದಲ್ಲ್ಲಿ, ಪರ‍್ವತದ ಪ್ರದೇಶದ ಬೂಮಿಯಲ್ಲಿನ ಮೆಗ್ನೀಶಿಯಮ್ ಅನ್ನು ಹೀರಿಕೊಂಡು ಬರುವ ಕಾರಣ, ಅದರಲ್ಲಿನ ಮೆಗ್ನೀಸಿಯಮ್‍ನ ಸಾಂದ್ರತೆ ಹೆಚ್ಚು. ಈ ನೀರನ್ನು ಸೇವಿಸಿದರೆ, ಹೆಚ್ಚು ಪ್ರಮಾಣದ ಮೆಗ್ನೀಸಿಯಮ್ ದೇಹ ಸೇರಿ, ಮಲವಿಸರ‍್ಜನೆ ಅತಿಯಾಗುತ್ತದೆ. ಆದ್ದರಿಂದ ಪ್ರವಾಸಿಗರು ಈ ನೀರನ್ನು ಕುಡಿಯದಂತೆ ಎಚ್ಚರಿಕೆಯ ಪಲಕಗಳನ್ನು ಅಲ್ಲಲ್ಲಿ ಕಂಡು ಬರುವಂತೆ ಹಾಕಿಸಿದ.

ರೂಬಿ ಪಾಲ್ಸ್ ಮತ್ತು ಲುಕ್‍ಔಟ್ ಮೌಂಟೆನ್ ಕೊಳ್ಳದ ಸಂಕೀರ‍್ಣವನ್ನು ರಾಶ್ಟ್ರೀಯ ಐತಿಹಾಸಿಕ ಹೆಗ್ಗುರುತಾಗಿ ಗುರುತಿಸಲಾಗಿದೆ. ಮಳೆಗಾಲದಲ್ಲೂ ಸಹ ಹೋಗಬಹುದಾದ ಸ್ತಳ ಇದಾಗಿದೆ. ಇದು ಬೂಗತ ಜಲಪಾತವಾದ ಕಾರಣ, ಇಲ್ಲಿ ಮಳೆಯ ಅವಾಂತರ ಇರುವುದಿಲ್ಲ. ಈ ಗುಹೆಯಲ್ಲಿ ರಂಗು ರಂಗಿನ ಎಲೆಕ್ಟ್ರಿಕ್ ದೀಪಗಳನ್ನು ಅಳವಡಿಸಿರುವ ಹಿನ್ನೆಲೆಯಲ್ಲಿ, ಸೌಮ್ಯವಾಗಿ ದುಮುಕುವ ನೀರು, ಬಣ್ಣಗಳ ಚಿತ್ತಾರವನ್ನು ಹೊದ್ದು ಲಾಸ್ಯವಾಡುತ್ತಾ ಇಳಿದು ಬರುವುದು ಮನಕ್ಕೆ ಆನಂದ, ಕಣ್ಣಿಗೆ ಹಬ್ಬ. ಎಲೆಕ್ಟ್ರಿಕ್ ದೀಪಗಳ ಅಳವಡಿಕೆಯ ನಂತರ, ರೂಬಿ ಪಾಲ್ಸ್, ಪ್ರತಮ ವಾಣಿಜ್ಯ ಗುಹೆ ಎಂಬ ಹೆಗ್ಗಳಿಕೆಗೆ ಬಾಜನವಾಗಿದೆ.

(ಮಾಹಿತಿ ಸಲೆ: rubyfalls.com )

(ಚಿತ್ರ ಸೆಲೆ: wiki)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks