ಬದುಕು ಮತ್ತು ಸಾಮಾನ್ಯ ತಿಳಿವಳಿಕೆ

– ಅಶೋಕ ಪ. ಹೊನಕೇರಿ.

‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು’ ಎಂಬಂತೆ ನಾವು ಎಶ್ಟೇ ಪದವಿಗಳನ್ನು ಪಡೆದು ವಿದ್ಯಾವಂತರಾದರೂ ನಮ್ಮ ನಿತ್ಯ ಜೀವನ ನಡೆಸಲು, ನಿತ್ಯ ಬದುಕು ನೂಕಲು ನಮಗೆ ಸಾಮಾನ್ಯ ಗ್ನಾನ, ಸಾಮಾನ್ಯ ತಿಳಿವಳಿಕೆಯೇ ನೆರವಿಗೆ ಬರುವುದು. ಊರಿಗೆ ರಾಜನಾದರೂ ಉಪ್ಪಿನ ಬೆಲೆ ಏನು ಎಂಬ ಸಾಮಾನ್ಯ ಅರಿವು ಇಲ್ಲದಿರೆ ರಾಜ ತನ್ನ ಪ್ರಜೆಗಳನ್ನು ಹೇಗೆ ಅರ‍್ತ ಮಾಡಿಕೊಳ್ಳಬಲ್ಲನು? ಮತ್ತು ಎಶ್ಟು ಉತ್ತಮ ಆಡಳಿತ ಕೊಡಬಲ್ಲನು?

ನಾನು ದೊಡ್ಡ ಸಾಹೇಬ ನನಗೆ ಲಕ್ಶ ಲಕ್ಶದಲ್ಲಿ ಸಂಬಳ ಎಂದು ಬೀಗುತಿದ್ದ ಒಬ್ಬ ಮನೆಗೆ ಬೇಕಾದ ಸಣ್ಣ ಬೆಂಕಿ ಪೊಟ್ಟಣ ತರಲು ತನ್ನ ಜವಾನನ ಕೈಯಲ್ಲಿ 100 ರೂಪಾಯಿ ಕೊಟ್ಟು ಕಳಿಸಿದಂತೆ. ಜವಾನ ತನ್ನ ಸಾಹೇಬನ ತಿಳಿವಳಿಕೆ ಕಂಡು ಒಳಗೊಳಗೆ ನಕ್ಕು, ತನ್ನ ಜೇಬಿನ ಚಿಲ್ಲರೆಯಿಂದ ಬೆಂಕಿಪೊಟ್ಟಣ ತಂದು 100 ರೂಪಾಯಿಯನ್ನು ಸಾಹೇಬನಿಗೆ ವಾಪಸು ಕೊಟ್ನಂತೆ. ಈ ಜವಾನ ವಾಸ್ತವಿಕವಾಗಿ ಸಾಮಾನ್ಯ ತಿಳಿವಳಿಕೆಯಿಂದ ಹೆಚ್ಚು ಬುದ್ದಿವಂತನಾಗಿರುತ್ತಾನೆ ಮತ್ತು ನಿತ್ಯದ ಬದುಕಿನ ಜಂಜಟಾವನ್ನು ಬಾಳೆಹಣ್ಣಿನ ಸಿಪ್ಪೆ ಸುಲಿದಶ್ಟು ಸಲೀಸಾಗಿ ನಿಬಾಯಿಸಲು ಶಕ್ತನಾಗಿರುತ್ತಾನೆ.

ಮನೆಯ ಗ್ರುಹಿಣಿಯಾದವಳಿಗೆ ಮನೆಯ ನಿತ್ಯದ ಆಗು ಹೋಗುಗಳನ್ನು ಕೇವಲ ತನ್ನ ಸಾಮಾನ್ಯ ಗ್ನಾನದಿಂದಲೇ ಗಂಡನಿಗಿಂತ ಹೆಚ್ಚು ಸಮರ‍್ತವಾಗಿ ನಿಬಾಯಿಸುತ್ತಾಳೆ. ರಾಜ್ಯದ, ದೇಶದ ಲೆಕ್ಕ ಪರಿಶೋದಕನಾದರೂ ಗಂಡನಿಗೆ ಮನೆಯ ಹಾಲಿನ ಲೆಕ್ಕ ಕಂಡಿತ ಗೋಜಲು ಎನಿಸುತ್ತದೆ‌. ಹಾಲು ತೆಗೆದುಕೊಳ್ಳದ ದಿನ, ಅರ‍್ದ ಪಾವು ಹಾಲು ತೆಗೆದುಕೊಂಡ ದಿನ, ಚಟಾಕು ಹಾಲು ಹಾಕಿಸಿಕೊಂಡ ಲೆಕ್ಕ, ಮನೆಗೆ ನೆಂಟರಿಶ್ಟರು ಬಹಳ ಬಂದಾಗ ಹೆಚ್ಚುವರಿ ಹಾಲು ತೆಗೆದುಕೊಂಡ ಲೆಕ್ಕ ಇವೆಲ್ಲವನ್ನೂ ಇಂಚಿಂಚೂ ಬಿಡದೆ ಗ್ರುಹಿಣಿ ಲೆಕ್ಕ ಮಾಡಿ ಮುಗಿಸಬಲ್ಲಳು. ಎಶ್ಟು ಜನಕ್ಕೆ ಎಶ್ಟು ಅಕ್ಕಿ ಹಾಕಿ ಅನ್ನ ಮಾಡಿ, ಎಲ್ಲರಿಗೂ ಸಾಲುವಂತೆ ಉಣ ಬಡಿಸಬೇಕು ಎನ್ನುವ ಅಳತೆಗೋಲು ರಾಜ್ಯದ ಲೆಕ್ಕ ನೋಡೋ ಪತಿರಾಯನ ಸಾಮಾನ್ಯ ಗ್ನಾನಕ್ಕೆ ನಿಲುಕದ್ದು.

ನಮ್ಮ ಕಾರು, ಬೈಕ್ ಪಂಕ್ಚರ್ ಆಗಿ ನಡು ರಸ್ತೆಯಲ್ಲಿ ನಿಂತರೆ ಸ್ಟೆಪಣಿ ತೆಗೆದು ಬದಲಾಯಿಸುವಶ್ಟು ತಾಳ್ಮೆ, ಸಾಮಾನ್ಯ ಗ್ನಾನ ನಮಗಿರದು. ಅದೇ ರಸ್ತೆಯಲಿ ಹೋಗುವ ಕೂಲಿ ಕಾರ‍್ಮಿಕನಿಗೆ ಸ್ಟೆಪಣಿ ಬದಲಾಯಿಸುವಂತೆ ಕೋರಿದರೆ ಸಲೀಸಾಗಿ ಪಟ ಪಟನೆ ಜಾಕ್ ಏರಿಸಿ, ಚಕ್ರ ಬಿಚ್ಚಿ ಇನ್ನೊಂದು ಚಕ್ರ ಬದಲಾಯಿಸಿ ಬಿಡುತ್ತಾನೆ. ಇದು ಅವನ ಸಾಮಾನ್ಯ ತಿಳಿವಳಿಕೆ. ಜಾಕ್ ಎಲ್ಲಿಗೆ ಆದಾರವಾಗಿಟ್ಟು ಏರಿಸಬೇಕು ಎಂಬುದನ್ನು ನಾವು ಹುಡುಕಾಡಿ ತಡಕಾಡುತ್ತೇವೆ. ನಮ್ಮ ಕಾರು ಬೈಕ್ ಸ್ಟಾರ್ ಆಗದೆ ರಸ್ತೆಯಲ್ಲಿ ನಿಂತರೂ ನಾವು ಗಲಿಬಿಲಿಗೆ ಒಳಗಾಗಿ, ಏನೂ ಓದದ ಓರ‍್ವ ಮೆಕ್ಯಾನಿಕ್ ನನ್ನು ಕರೆಸಿ ರಿಪೇರಿ ಮಾಡಿಸುತ್ತೇವೆ. ಆ ತೊಂದರೆ ಬಹಳ ಸರಳವಾಗಿದ್ದರೂ ನಾವು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಆ ಮೆಕ್ಯಾನಿಕ್ ಮನದಲ್ಲೆ ನಗುತ್ತ ಸರಳ ತೊಂದರೆಯನ್ನು ರಿಪೇರಿ ಮಾಡಿ ನಮ್ಮಿಂದ ಐದು ನೂರು, ಸಾವಿರ ರೂಪಾಯಿಗಳನ್ನು ಪೀಕಿಸುತ್ತಾನೆ. ಇದು ಅವನ ಸಾಮಾನ್ಯ ಗ್ನಾನ, ನಮ್ಮದು ಪುಸ್ತಕದ ಬದನೆಕಾಯಿ…!

ಏನೇ ಇರಲಿ ಒಳ್ಳೆಯ ವಿದ್ಯೆಯ ಜೊತೆಗೆ ನಮಗೆ ಸಾಮಾನ್ಯ ಗ್ನಾನವೂ ಬೇಕು. ನಮಗೆ ಪದವಿಗಳು ಹಣವನ್ನು ತಂದುಕೊಡಬಹುದು. ಆದರೆ ನಿತ್ಯದ ಬದುಕು ಸಾಗಿಸಲು ಸಾಮಾನ್ಯ ತಿಳಿವಳಿಕೆ, ಗ್ನಾನ ಅತ್ಯಗತ್ಯ. ಈ ಸಾಮಾನ್ಯ ಗ್ನಾನ, ಓದಿ ಪರೀಕ್ಶೆ ಬರೆದು ಪಡೆಯುವುದಲ್ಲ, ಬದಲಿಗೆ ಅನುಬವದಿಂದ ನೋಡಿ, ಮಾಡಿ ಕಲಿಯುವುದು. ಎಶ್ಟೇ ಪದವಿಗಳಿದ್ದರೂ, ಜೊತೆಗೆ ಸಾಮಾನ್ಯ ತಿಳಿವಳಿಕೆಯನ್ನು ಹೊಂದಿದರೆ ಒತ್ತಡ ಮುಕ್ತ ಜೀವನ ನಡೆಸಲು ಅನುಕೂಲ.

(ಚಿತ್ರ ಸೆಲೆ: healthtap.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: