ಮಕ್ಕಳ ಕತೆ: ಮಾತು ಕೇಳದ ಕೋಡಂಗಿ

– ಮಾರಿಸನ್ ಮನೋಹರ್.

ಕೋಡಂಗಿ, ಮಂಗ, monkey

ತಿಳಿ ನೀರು ಹರಿಯುತ್ತಿದ್ದ ಒಂದು ಹೊಳೆಯ ಪಕ್ಕದಲ್ಲಿ ಬಾರೆ ಹಣ್ಣಿನ ಗಿಡವಿತ್ತು. ಚಳಿಗಾಲಕ್ಕೆ ಅದರಲ್ಲಿ ಬಾರೆಹಣ್ಣುಗಳು ಹತ್ತಿದ್ದವು. ಅಲ್ಲಿದ್ದ ಒಂದು ಕೋಡಂಗಿಯು ಬಾರೆಹಣ್ಣುಗಳನ್ನು ನೋಡಿ ಅವುಗಳಲ್ಲಿ ಕೆಲವನ್ನು ತಿಂದಿತು. ಬಾರೆಹಣ್ಣು ತಿಂದದ್ದರಿಂದ ಅದಕ್ಕೆ ಕೆಮ್ಮು ಬಂತು. ಕೆಮ್ಮು ಕಡಿಮೆ ಮಾಡಲು ಏನು ಮಾಡಬೇಕು ಅಂತ ಚಿಂತಿಸಿ ಡಾಕ್ಟರ ಬಳಿ ಹೋಗುತ್ತೇನೆ ಅಂತ ಹೇಳಿಕೊಂಡಿತು. ತನ್ನ ಮೈಯ ಸುತ್ತಲೂ ಶಾಲನ್ನು ಹೊದ್ದುಕೊಂಡು ಡಾಕ್ಟರನನ್ನು ಹುಡುಕಿಕೊಂಡು ಹೋಯಿತು.

ಡಾಕ್ಟರನ ಬಳಿ ಬಂದು ಅವರ ಮುಂದೆ ಕೆಮ್ಮಿತು. ಡಾಕ್ಟರ್ “ನಿನಗೆ ಏನಾಗಿದೆ?” ಅಂತ ಕೇಳಿದರು. ಅದಕ್ಕೆ ಕೋಡಂಗಿ “ನನಗೆ ಕೆಮ್ಮು ಬಂದಿದೆ, ಕಡಿಮೆಯಾಗಲು ಏನಾದರೂ ಮದ್ದು ಕೊಡಿ” ಅಂತ ಹೇಳಿತು. ಡಾಕ್ಟರ್ “ನಿನಗೆ ಕೆಮ್ಮು ಯಾಕೆ ಬಂತು?” ಅಂತ ಕೇಳಿದರು. ಕೋಡಂಗಿ “ನನಗೆ ಗೊತ್ತಿದ್ದರೆ ನಿಮ್ಮ ಬಳಿ ಯಾಕೆ ಬರುತ್ತಿದ್ದೆ?” ಅಂತ ಕೇಳಿತು. ಡಾಕ್ಟರ್ “ನಿನ್ನೆ ಮೊನ್ನೆ ಏನಾದರೂ‌ ಹುಳಿಯಾದದ್ದು ತಿಂದಿಯಾ?” ಅಂತ ವಿಚಾರಣೆ ಮಾಡಿದರು. ಕೋಡಂಗಿ ತನ್ನ ತಲೆಯನ್ನು ಮೈಯನ್ನು ಕೆರೆದುಕೊಳ್ಳುತ್ತಾ “ಹೊಳೆ ಪಕ್ಕದಲ್ಲಿ ಒಂದು ಹುಳಿಯಾದ ಹಣ್ಣನ್ನು ತಿಂದೆ” ಅಂದಿತು. ಡಾಕ್ಟರ್ “ಹುಳಿಯಾದ ಹಣ್ಣು ಅಂದರೆ ಯಾವುದು? ಸರಿಯಾಗಿ ಹೇಳು” ಅಂತ ಗದರಿಸಿದರು.

ಕೋಡಂಗಿ “ಹುಳಿಯಾದದ್ದು ಅಂದರೆ ಹುಳಿಯಾದದ್ದು. ಅದೇ ದಾಳಿಂಬೆ ಹಣ್ಣು” ಅಂದಿತು. ಅದಕ್ಕೆ ಡಾಕ್ಟರ್ ಕೋಡಂಗಿಯನ್ನು ಸರಿಯಾಗಿ ನೋಡಿ “ನಿಜ ಹೇಳು ಯಾವ ಹಣ್ಣನ್ನು ತಿಂದೆ?” ಅಂದರು ಅದಕ್ಕೆ ಕೋಡಂಗಿ “ಬಾರೆಹಣ್ಣು ತಿಂದೆ” ಅಂತ ನಿಜ ಹೇಳಿತು. ಆಗ ಡಾಕ್ಟರ್ “ನೀನು ಬಾರೆಹಣ್ಣು ತಿಂದದ್ದಕ್ಕೆ ನಿನಗೆ ಕೆಮ್ಮು ಬಂದಿದೆ, ನೀನು ಇನ್ನು ಮುಂದೆ ಬಾರೆಹಣ್ಣು ತಿನ್ನಲೇ ಬಾರದು. ತಿಂದು ಬಿಟ್ಟರೆ ಸತ್ತು ಹೋಗ್ತಿಯಾ” ಅಂದರು. ಅವರ ಬಳಿ ಇದ್ದ ಕೆಲವು ಗುಳಿಗೆಗಳನ್ನು ಕೊಟ್ಟರು. ಒಲ್ಲದ ಮನಸ್ಸಿನಿಂದ ಗುಳಿಗೆಗಳನ್ನು ತೆಗೆದುಕೊಂಡಿತು ಕೋಡಂಗಿ. ಡಾಕ್ಟರ್ ಅವರ ನೂರು ರೂಪಾಯಿ ಫೀಸನ್ನು ಕಟ್ಟಿ ಅವರ ಬಳಿಯಿಂದ ಎದ್ದು ತನ್ನ ಮನೆಯ ಕಡೆಗೆ ಹೊರಟಿತು. ಮನೆಯ ಕಡೆಗೆ ಹೋಗುವಾಗ ದೂರದಲ್ಲಿ ಬಾರೆಹಣ್ಣು ಗಿಡ ಕಾಣಿಸಿತು.

ಕೋಡಂಗಿ ತನ್ನ ಮನಸ್ಸಿನಲ್ಲಿ “ಡಾಕ್ಟರ್ ಅವರು ಕಹಿಯಾದ ಗುಳಿಗೆಗಳನ್ನು ಕೊಟ್ಟಿದ್ದಾರೆ ಅವು ನನಗೆ ಇಶ್ಟವಿಲ್ಲ. ನನಗೆ ಬಾರೆಹಣ್ಣು ಇಶ್ಟ. ಆದರೆ ಅವರು ಬಾರೆಹಣ್ಣು ತಿನ್ನಬೇಡ ಅಂತ ಹೇಳಿದ್ದಾರಲ್ಲಾ” ಅಂತ ಮನಸಿನಲ್ಲಿ ನೊಂದುಕೊಂಡಿತು. ಮತ್ತೆ ಯೋಚನೆ ಮಾಡುತ್ತಾ “ಡಾಕ್ಟರ್ ಬಾರೆಹಣ್ಣು ತಿನ್ನಬೇಡ ಅಂತ ಹೇಳಿದ್ದಾರೆ ಬಾರೆಗಿಡ ನೋಡಬಾರದು ಅಂತ ಹೇಳಿಲ್ಲವಲ್ಲಾ” ಅಂದುಕೊಂಡು ಅಲ್ಲೇ ಇದ್ದ ಒಂದು ಕಲ್ಲಿನ ಮೇಲೆ ಕೂತುಕೊಂಡು, ಬಾರೆಗಿಡವನ್ನೇ ನೋಡುತ್ತಾ ಕೂತುಕೊಂಡಿತು. ಅರ್ದ ಗಂಟೆಯಾದ ಮೇಲೆ ಕೋಡಂಗಿ “ಡಾಕ್ಟರ್ ಬಾರೆಹಣ್ಣು ತಿನ್ನಬೇಡ ಅಂತ ಹೇಳಿದ್ದಾರೆ ಬಾರೆಗಿಡದ ಕಡೆ ಹೋಗಬಾರದು ಅಂತ ಹೇಳಿಲ್ಲವಲ್ಲಾ” ಅಂದುಕೊಂಡು ಬಾರೆಗಿಡದ ಕಡೆಗೆ ಹೋಯಿತು. ಬಾರೆಗಿಡದ ಕೆಳಗೆ ನಿಂತುಕೊಂಡು “ಡಾಕ್ಟರ್ ಬಾರೆಹಣ್ಣು ತಿನ್ನ‌ಬೇಡ ಅಂತ ಹೇಳಿದ್ದಾರೆ ಗಿಡವನ್ನು ಹತ್ತಬಾರದು ಅಂತ ಹೇಳಿಲ್ಲವಲ್ಲಾ” ಅಂದು ಬಾರೆಗಿಡವನ್ನು ಹತ್ತಿತು.

ಬಾರೆಗಿಡದ ಒಂದು ಕೊಂಬೆಯ ಮೇಲೆ ಕೂತುಕೊಂಡು “ಡಾಕ್ಟರ್ ಬಾರೆಹಣ್ಣು ತಿನ್ನಬೇಡ ಅಂತ ಹೇಳಿದ್ದಾರೆ ಬಾರೆಹಣ್ಣು ಕಡಿಯಬಾರದು ಅಂತ ಹೇಳಿಲ್ಲವಲ್ಲಾ” ಅಂದು ಕೆಲವು ಬಾರೆಹಣ್ಣುಗಳನ್ನು ಕಡಿದುಕೊಂಡಿತು. ಕೋಡಂಗಿ “ಡಾಕ್ಟರ್ ಬಾರೆಹಣ್ಣು ತಿನ್ನಬೇಡ ಅಂತ ಅಂದಿದ್ದಾರೆ ಆದರೆ ಬಾಯಲ್ಲಿ ಇಟ್ಟುಕೊಳ್ಳಬೇಡ ಅಂತ ಏನೂ ಹೇಳಿಲ್ಲವಲ್ಲಾ, ನಾನು ಬಾರೆಹಣ್ಣು ಬಾಯಲ್ಲಿ ಇಟ್ಟುಕೊಳ್ಳುತ್ತೇನೆ ಆದರೆ ತಿನ್ನುವುದೇ ಇಲ್ಲ” ಅಂತ ತಾನೇ ಯೋಚಿಸಿ ಕೈಯಲ್ಲಿದ್ದ ಬಾರೆಹಣ್ಣುಗಳನ್ನು ಬಾಯಲ್ಲಿ ಹಾಕಿಕೊಂಡು ಕುಳಿತುಕೊಂಡಿತು.ಮತ್ತೆ ಕೋಡಂಗಿ “ಡಾಕ್ಟರ್ ಅವರು ತುಂಬಾ ಬಾರೆಹಣ್ಣು ತಿನ್ನಬೇಡ ಅಂತ ಹೇಳಿರಬಹುದು ನನಗೆ ಕೆಮ್ಮು ಬಂದಿರುವುದರಿಂದ ಅವರು ಹೇಳಿದ್ದು ನನ್ನ ಕಿವಿಗಳಿಗೆ ಸರಿಯಾಗಿ ಕೇಳಿಸಲಿಲ್ಲ” ಅಂತ ಬಾಯಲ್ಲಿ ಇದ್ದ ಬಾರೆಹಣ್ಣುಗಳನ್ನು ತಿಂದು ಬಿಟ್ಟಿತು. ಬಾರೆಹಣ್ಣು ತಿಂದಾಗ ಅದರ ರುಚಿ ನಾಲಿಗೆಗೆ ಹತ್ತಿ ಕೋಡಂಗಿಯ ಬಾರೆಹಣ್ಣು ತಿನ್ನುವ ಆಸೆ ಇನ್ನೂ ಹೆಚ್ಚಾಗುತ್ತಾ ಹೋಯಿತು. ಬಾರೆಹಣ್ಣುಗಳನ್ನು ಕಡಿದು ತಿನ್ನುತ್ತಲೇ ಹೋಯಿತು ಅದರ ಕೆಮ್ಮು ಇನ್ನೂ ಹೆಚ್ಚಾಯಿತು. ಕೋಡಂಗಿ ಕೆಮ್ಮುತ್ತಾ ಕೆಮ್ಮುತ್ತಾ ಸತ್ತುಹೋಯಿತು.

(ಚಿತ್ರ ಸೆಲೆ: publicdomainpictures.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: