ಶಸ್ತ್ರಚಿಕಿತ್ಸೆಯ ನಂತರ…

– ಕೆ.ವಿ. ಶಶಿದರ

ರೋಗಿ Patient

ಬೆಳಗಿನ ಜಾವ 2 ಗಂಟೆ 25 ನಿಮಿಶ

ಐಸಿಯೂನಲ್ಲಿದ್ದ ನನಗೆ ಕೊಂಚ ಕೊಂಚವೇ ಎಚ್ಚರವಾಗುತ್ತಾ ಹೋಯಿತು. ದೀರ‍್ಗ ಶಸ್ತ್ರಚಿಕಿತ್ಸೆ ಸಮಯದಲ್ಲಿ ದೇಹದಲ್ಲಿ ಹರಿಸಿದ್ದ ಅರವಳಿಕೆಯ ಶಕ್ತಿ ಕುಂದಿದ ನಂತರ ಸಂಜೆ ಏಳರ ಹೊತ್ತಿಗೆ ಎಚ್ಚರವಾಗಿತ್ತು. ನಂತರ ಪ್ರಾರಂಬಿಸಿದ್ದು ನಳಿಕೆಯ ಮೂಲಕ ಸೆಡೆಟೀವ್ಸ್ ತುಂಬುವ ಕಾರ‍್ಯ. ನಳಿಕೆಯ ಮೂಲಕ ತುಂಬುತ್ತಿದ್ದ ಔಶದಿಯ ಪ್ರಬಾವ ಕಡಿಮೆಯಾಗಿದ್ದೋ ಅತವ ಐಸಿಯೂ ಒಳಗಿನ ಜೋರು ದನಿಯೋ ಅತವಾ ಎರಡೂ ಕಾರಣಗಳಿಗೋ ದೇವರೇ ಬಲ್ಲ, ನನಗೆ ಎಚ್ಚರವಾಗುತ್ತಾ ಹೋಯಿತು. ಸಾಮಾನ್ಯವಾಗಿ ಸೂಜಿ ಬಿದ್ದರೂ ದನಿ ಕೇಳಿಸುವಶ್ಟು ನಿಶ್ಯಬ್ದವಾಗಿ ಇರಬೇಕಾದ ಸ್ತಳ ಐಸಿಯು. ಅದಕ್ಕೆ ವ್ಯತಿರಿಕ್ತವಾಗಿತ್ತು ಇಂದು. ಮಾತನಾಡುವ. ದ್ವನಿಯಂತೂ ಸ್ಪುಟವಾಗಿತ್ತು, ಗಡುಸಾಗಿತ್ತು, ಬರಾಟೆ ಜೋರಾಗಿತ್ತು. ಕಣ್ಣು ತೆರೆದರೆ, ಹಿಂದೆ ತುಂಬಿದಂತೆ, ಮತ್ತೆಲ್ಲಿ ಸೆಡೆಟೀವ್ ಹರಿಯ ಬಿಡುತ್ತಾರೋ ಎಂಬ ಬಯದಿಂದ ಹಾಗೇ ಕಣ್ಣು ಮುಚ್ಚಿಕೊಂಡು ನಿದ್ದೆಯಲ್ಲಿರುವಂತೆ ನಾಟಕವಾಡಿದೆ. ಮೆಲ್ಲನೆ ಕಳ್ಳ ಕಣ್ಣು ತೆರೆದು ನೋಡಿದಾಗ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದುದು ಬೇರಾರು ಅಲ್ಲದೆ ನನ್ನ ಹ್ರುದಯ ಶಸ್ತ್ರಚಿಕಿತ್ಸೆ ಮಾಡಿದ್ದ ಡಾಕ್ಟರ್ ಎಂಬುದು ಗ್ಯಾರಂಟಿಯಾಯಿತು. ಶಸ್ತ್ರ ಚಿಕಿತ್ಸೆ ಮುಗಿದ ನಂತರ ಅವರೇ ತೀವ್ರ ನಿಗಾ ಗಟಕದಲ್ಲಿನ ರೋಗಿಗಳನ್ನು ರಾತ್ರಿ ಪಾಳಿಯಲ್ಲಿ ಗಮನಿಸುವ ಕೆಲಸದಲ್ಲಿ ನಿರತರಾಗಿದ್ದರು. ದನಿ ಕೇಳಿದಾಕ್ಶಣ ಡಾಕ್ಟರ್ ಯಾರ ಬಗ್ಗೆ, ತನ್ನ ಸಹ ಡಾಕ್ಟರ‍್‌ಗೆ ತಿಳಿಸುತ್ತಿದ್ದಾರೆ ಎಂಬ ಕುತೂಹಲ ಗರಿಕೆದರಿತು.

ಒಂದೆರಡು ನಿಮಿಶ ಅವರ ಸಂಬಾಶಣೆ ಆಲಿಸುತ್ತಿದ್ದ ನನಗೆ ಅವರ ಮಾತುಕತೆ ನನ್ನ ಬಗ್ಗೆಯೇ ಎಂಬುದು ಕಾತ್ರಿಯಾಯಿತು. ಕುತೂಹಲ ಮತ್ತಶ್ಟು ಹೆಚ್ಚಿತು. ಇನ್ನೂ ಶಸ್ತ್ರಚಿಕಿತ್ಸೆ ಮುಗಿದು ಎಂಟತ್ತು ಗಂಟೆಯಾಗಿಲ್ಲ ಏನು ಕಾದಿರಬಹುದು? ಎಂಬ ಬಯ ಮಿಶ್ರಿತ ಆಸಕ್ತಿ ದ್ವಿಗುಣಗೊಂಡಿತು. ಕಿವಿಯನ್ನು ಪೂರ‍್ಣ ತೆರೆದು ಗಮನವನ್ನೆಲ್ಲಾ ಅವರ ಮಾತಿನ ಮೇಲೆ ಕೇಂದ್ರೀಕರಿಸಿ ಆಲಿಸಿದೆ.
ಪೋಸ್ಟ್ ಆಪರೇಶನ್ ಕಾಂಪ್ಲಿಕೇಶನ್ ಬಗ್ಗೆ ಅವರು ಇಂಚಿಂಚು ಬಿಡದೆ ವಿವರಣೆ ನೀಡುತ್ತಿದ್ದುದು ಕಿವಿಗೆ ಅಪ್ಪಳಿಸಿತ್ತಿತ್ತು. ಹಾಗೇ ಆಲಿಸುತ್ತಾ ಮಲಗಿದ್ದೆ. ಅವರ ಮಾತಿನಲ್ಲಿ ಬಹಳಶ್ಟು ವೈದ್ಯಕೀಯ ಬಾಶೆ ಬೆರೆತಿದ್ದರಿಂದ ಪದ ಪದಗಳ ವಿವರ ತಿಳಿಯಲಿಲ್ಲ. ಕೊನೆಯಲ್ಲಿ ಅವರು ಕಾಂಪ್ಲಿಕೇಶನ್ ಹೆಚ್ಚಾಗುತ್ತಿರುವುದನ್ನು ಗಮನಿಸಿ ಮತ್ತೊಂದು ಶಸ್ತ್ರಚಿಕಿತ್ಸೆಯ ಅಗತ್ಯತೆಯ ಬಗ್ಗೆ ಹೇಳಿದ್ದು ಮಾತ್ರ ತಿಳಿಯಿತು. ಅದು ಬದ್ರವಾಗಿ ಮನದಲ್ಲಿ ದಾಕಲಾಯಿತು ಸಹ.

ಬಾಯಿತುಂಬಾ ನಳಿಕೆಗಳು ತುಂಬಿದ್ದ ಕಾರಣ ಮಾತನಾಡುವಂತಿಲ್ಲ. ಡಾಕ್ಟರ್ ಬಳಿ ಕಾಂಪ್ಲಿಕೇಶನ್ ಬಗ್ಗೆ ವಿವರ ಕೇಳಲು ಸಾದ್ಯವಿರಲಿಲ್ಲ. ಮೈಯೆಲ್ಲಾ ಜುಂ ಅಂತು. ಹೊಟ್ಟೆಯಲ್ಲಿ ಚಿಟ್ಟೆ ಓಡಾಡಿದಂತಾಯಿತು. ಏನೋ ತಳಮಳ. ಬದುಕಿದ್ದೂ ಸತ್ತ ಬದುಕು. ಕಣ್ಣು ತೆರೆಯುವಂತಿಲ್ಲ. ತೆರೆದರೆ ಮತ್ತೆ ಸೆಡೆಟೀವ್ಸ್ ತುಂಬಿ ಮಲಗಿಸಿದರೆ, ಏನಾಗುತ್ತಿದೆ??? ಎಂಬ ವಿಚಾರ ತಿಳಿಯುವುದಿಲ್ಲ. ಮನಸ್ಸು ಗೊಜಲಾಯಿತು. ನನ್ನ ಆಪ್ತರಿಗೆ ತಿಳಿಸಬೇಕೆಂದರೂ ಸಾದ್ಯವಿಲ್ಲ. ಯಾರಿಗೂ ಐಸಿಯೂ ಒಳಗೆ ಪ್ರವೇಶವಿಲ್ಲ. ಅವರಿಗೆ ತಿಳಿಯುವ ಬಗೆ ಸಹ ಇಲ್ಲ. ಅವರೆನ್ನೆಲ್ಲಾ ಕತ್ತಲಲ್ಲಿ ಇಟ್ಟಿದ್ದರು. ಡಾಕ್ಟರುಗಳು ತಾವಾಗಿಯೇ ಕಾಂಪ್ಲಿಕೇಶನ್ ಆಗಿದೆ ಎಂದು ಯಾರು ತಾನೆ ತಿಳಿಸುತ್ತಾರೆ? ತಿಳಿಸುವ ಸಾದ್ಯತೆ ಕಂಡಿತಾ ಇಲ್ಲ. ಒಂದು ರೀತಿಯಲ್ಲಿ ನನ್ನವರು ತನ್ನವರು ಇಲ್ಲದ ಅನಾತ ಬಾವಕ್ಕೆ ದಾಸನಾಗಿದ್ದೆ. ‘ದೇವರೇ ಸಾಕು ಮಾಡು ಈ ಬದುಕು, ಇನ್ನು ಏನೇನು ಕಾದಿದೆಯೋ?, ಸಾಕಪ್ಪಾ ಸಾಕು’ ಎಂಬ ವೈರಾಗ್ಯ ಕ್ಶಣ ಮನದಲ್ಲಿ ಮೂಡದಿರಲಿಲ್ಲ. ಎಂತೂ ನನ್ನ ಇಡೀ ದೇಹವನ್ನು ಡಾಕ್ಟರ‍್‌ಗಳಿಗೆ ಒಪ್ಪಿಸಿಯಾಗಿದೆ, ದೇಹಕ್ಕೆ ಚೈತನ್ಯ ನೀಡುವುದು ಬಿಡುವುದು ಈಗ ಅವರ ಕೈಯಲ್ಲಿದೆ. ‘ದೇವರೇ ಈ ಡಾಕ್ಟರುಗಳಿಗೆ ಸಮಯೋಚಿತ ಬುದ್ದಿ ನೀಡು’ ಎಂದಶ್ಟೆ ಕೇಳಿಕೊಳ್ಳಲು ಸಮರ‍್ತ ನಾನು. ಕಣ್ಣು ಮುಚ್ಚಿದಂತೆಯೇ ನಾನು ದೇವರಲ್ಲಿ ಮೊರೆ ಹೋದೆ.

ಬೆಳಗಿನ ಜಾವ 3 ಗಂಟೆ 05 ನಿಮಿಶ:

ಹಿಂದಿನ ದಿನ ನನ್ನ ಹ್ರುದಯ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸೀನಿಯರ್ ಡಾಕ್ಟರ‍್‌ಗಳು, ಅರವಳಿಕೆ ತಜ್ನರು, ಸಹಾಯಕ ಡಾಕ್ಟರ‍್‌ಗಳು, ನರ‍್ಸ್‌ಗಳು, ವಾರ‍್ಡ್‌ಬಾಯ್‍ಗಳು ಎಲ್ಲಾ ನನ್ನ ಮಂಚದ ಸುತ್ತಾ ಗೇರಾಯಿಸಿದ್ದರು. ಡಾಕ್ಟರೊಬ್ಬರು, ನರ ಕತ್ತರಿಸಿ, ಅಲ್ಲಾಡದಂತೆ ಮಂಚಕ್ಕೆ ಬಿಗಿದಿದ್ದ ನನ್ನ ಎಡಗಾಲಿನ ಕಟ್ಟನ್ನು ಕಳಚಿ, ಬಲಕ್ಕೆ ಮಕಾಡೆ ತಿರುಗಿಸಿ ಮಲಗಿಸಲು ಪ್ರಯತ್ನಿಸಿದರು. ಕಂಕುಳ ಬದಿಯಲ್ಲಿ ಎರಡೂ ಕಡೆ ನಳಿಕೆಗಳನ್ನು ತೂರಿಸಿದ್ದರಿಂದ ಅದು ಕೂಡ ಸಾದ್ಯವಾಗಲಿಲ್ಲ. ಕೊಂಚ ಬಾಗ ಬೆನ್ನು ಕಾಣುತ್ತಿದ್ದಂತೆ ಅವರಿಂದ ಬಂದ ಉದ್ಗಾರ “ಓ ಮೈ ಗಾಡ್…. ಏನಿದು ಈ ಪಾಟಿ ರಕ್ತ, ಮೊದಲು ಬೆನ್ನನ್ನು ಒರೆಸಿ ಕ್ಲೀನ್ ಮಾಡಿ” ಎಂದು ಅಲ್ಲಿದ್ದ ನರ‍್ಸ್‌ಗಳಿಗೆ ಸೂಚಿಸಿ, ಉಳಿದ ಸೀನಿಯರ್ ಡಾಕ್ಟರ‍್‌ಗಳನ್ನು ಪಕ್ಕಕ್ಕೆ ಕರೆದು ತಮ್ಮ ತಮ್ಮಲ್ಲೇ ಗುಸು ಗುಸು ಚರ‍್ಚೆ ಪ್ರಾರಂಬಿಸಿದರು. ಹಲವು ನಿಮಿಶಗಳ ಚರ‍್ಚೆಯ ನಂತರ ಒಮ್ಮತದ ಅಬಿಪ್ರಾಯಕ್ಕೆ ಬಂದು, ಅದಕ್ಕೆ ಅವಶ್ಯವಿರುವ ಕಾರ‍್ಯಕ್ರಮವನ್ನು ಯೋಜಿಸಲು ಮತ್ತು ಸೂಚನೆಗಳನ್ನು ನೀಡಲು ರಾತ್ರಿ ಪಾಳಿಯಲ್ಲಿದ್ದ ಡಾಕ್ಟರ್ ಮುಂದೆ ಬಂದರು.

ಮುಂದಿನ ಸೂಚನೆಗಳಿಗಾಗಿ ಕಾಯುತ್ತಿದ್ದ ಜೂನಿಯರ್ ಡಾಕ್ಟರ‍್‌ಗಳಿಗೆ ‘ಇಟ್ಸ್ ಅನ್ ಎಮರ‍್ಜೆನ್ಸಿ ಕೇಸ್, ಅರ‍್ದ ಗಂಟೆಯಲ್ಲಿ ಓಟಿ ತಯಾರಾಗಬೇಕು, ಬೆಳಿಗ್ಗೆ ಸೇರಿದ್ದ ಎಲ್ಲರನ್ನೂ ಹತ್ತು ನಿಮಿಶದಲ್ಲಿ ಸಮನ್ ಮಾಡಿ, ಬಿ ಕ್ವಿಕ್, ಐ ವಿಲ್ ಬಿ ದೇರ್ ಇನ್ ಟೆನ್ ಮಿನಟ್ಸ್’ ಎಂದು ಹೇಳುತ್ತಾ ಎಲ್ಲಾ ಸೀನಿಯರ್ ಡಾಕ್ಟರ‍್‌ಗಳು ತಯಾರಾಗಿ ಬರಲು ಹೊರಟರು. ಹೋಗುವಾಗ ‘ಪುಶ್ ಸೆಡೆಟೀವ್ಸ್, ಡೋಂಟ್ ಲೆಟ್ ಹಿಮ್ ಕಮ್ ಟು ಕಾನ್ಶಿಯಸ್” ಎಂದು ಹೇಳುವುದನ್ನು ಮರೆಯಲಿಲ್ಲ. ಇಶ್ಟೆಲ್ಲಾ ಆಗುತ್ತಿರುವುದು ನನಗೆ ತಿಳಿಯುತ್ತಿದೆ ಎಂಬ ಶಂಕೆ ಸಹ ಅವರಲ್ಲಿ ಮೂಡಿರಲಿಲ್ಲ. ನನಗೆ ಒಂದೆಡೆ ಎಲ್ಲಾ ತಿಳಿಯಿತಲ್ಲಾ ಎಂಬ ಕುಶಿ, ಮತ್ತೊಂದೆಡೆ ಜಿಗುಪ್ಸೆ. ತಿಳಿಯದಿದ್ದರೆ ಚಂದಿತ್ತು ಎನ್ನುವ ಬಾವ. ‘ಇವೆಲ್ಲಾ ಬೇಕಿತ್ತಾ’ ಎನ್ನುವಶ್ಟರ ಮಟ್ಟಿಗೆ ಬೇಸರವಾಗಿತ್ತು. ಮತ್ತೊಂದು ಶಸ್ತ್ರಚಿಕಿತ್ಸೆ, ಮತ್ತೆ ಐಸಿಯೂನಲ್ಲಿ ಗಂಟೆಗಟ್ಟಳೆ ಕಳೆಯುವ ಸೆರೆವಾಸ. ಯೋಚಿಸುತ್ತಿದ್ದಂತೆ ದೇಹದಲ್ಲಿನ ನಳಿಕೆಗಳ ಮೂಲಕ ಸೆಡೆಟೀವ್ಸ್ ಒಳ ಸೇರಿ ಮತ್ತೆ ಮಂಪರಿಗೆ ಜಾರಿದೆ. ಯೋಚನಾ ಲಹರಿ ಅಲ್ಲಿಗೇ ಕಡಿತವಾಯಿತು.

ಬೆಳಗಿನ ಜಾವ 3 ಗಂಟೆ 55 ನಿಮಿಶ:

ಐಸಿಯೂನಿಂದ ನನ್ನನ್ನು ಶಸ್ತ್ರಚಿಕಿತ್ಸೆಯ ಕೋಣೆಗೆ ಸಾಗಿಸುವ ಕಾರ‍್ಯಕ್ರಮ ಪ್ರಾರಂಬವಾಗಿದ್ದರಿಂದ ಎಚ್ಚರವಾಯಿತು. ಓಟಿಗೆ ಸಾಗಿಸಲು ಅನುಕೂಲ ಮಾಡಿಕೊಳ್ಳುವ ಸಲುವಾಗಿ, ಅದಕ್ಕೆ ಪೂರಕವಾಗಿ, ದೇಹದ ವಿವಿದ ಬಾಗಗಳಲ್ಲಿ ಜೋಡಿಸಿದ್ದ ನಳಿಕೆಗಳನ್ನು ಬಿಡಿಸುವ ಕಾರ‍್ಯ ಮೊದಲಾಯಿತು. ಮಂಚದ ಮೇಲೆ ಮಲಗಿದ್ದ ನನಗೆ ಸೆಡೆಟೀವ್ ನಿಲ್ಲಿಸಿದ ಕಾರಣ ಮತ್ತೆ ಪೂರ‍್ಣ ತಿಳಿಯಾಗತೊಡಗಿತು. ಗ್ಲುಕೋಸ್ ತುಂಬಿದ ಬಾಟಲ್‍ನೊಬ್ಬ, ರಕ್ತದ ಬಾಟಲ್‍ನೊಬ್ಬ, ಆಕ್ಸಿಜನ್ ನಳಿಕೆಯನ್ನು ಮತ್ತೊಬ್ಬ ಕೈಲಿ ಹಿಡಿದುಕೊಂಡು ಮೆಲ್ಲನೆ ಗಾಳಿಯನ್ನು ಊದುವ ಕೆಲಸ ಮಾಡಲು ಸೂಚಿಸಲಾಗಿತ್ತು. ಮೊದಲ ಶಸ್ತ್ರಚಿಕಿತ್ಸೆಯಾದ 24 ಗಂಟೆ ಅವದಿಯೊಳಗೆ ಎರಡನೆ ಬಾರಿ ಶಸ್ತ್ರಚಿಕಿತ್ಸೆಗಾಗಿ ನನ್ನ ಪಯಣ ಓಟಿಯತ್ತ ಸಾಗಿತ್ತು. ಸಾವು ಮರಣದ ಹೋರಾಟದ ಎರಡನೇ ಹೆಜ್ಜೆ. ಬದುಕುಳಿಯುವುದು ದೇವರ ಕೈಯಲ್ಲಿತ್ತು.

ಆಕ್ಸಿಜನ್ ಬದಲಾಗಿ ಬಾಯಿಂದ ಗಾಳಿ ಊದುತ್ತಿದ್ದ ಹುಡುಗ, ಯಾರೋ ಮಾತನಾಡಿಸಿದ ಕಾರಣ, ಬಾಯಿಂದ ನಳಿಕೆಯನ್ನು ತೆಗೆದು ಅವರೊಡನೆ ಮಾತಿಗಿಳಿದ. ಮೊದಲ ಶಸ್ತ್ರಚಿಕಿತ್ಸೆ ಸಮಯದಲ್ಲಿ ಎಡ ಶ್ವಾಸಕೋಶವನ್ನು ಪೂರ‍್ಣವಾಗಿ ಹಿಂಡಿ, ಶಸ್ತ್ರಚಿಕಿತ್ಸೆಗೆ ಸ್ತಳಾವಕಾಶ ಮಾಡಿಕೊಂಡಿದ್ದ ಕಾರಣ, ಶ್ವಾಸಕೋಶಗಳಲ್ಲಿ ಹೆಚ್ಚಿನ ಪ್ರಮಾಣದ ಗಾಳಿಯ ಶೇಕರಣೆ ಸಾದ್ಯವಿರಲಿಲ್ಲ. ಹಾಗಾಗಿ ಉಸಿರಾಟ ಕೊಂಚವೂ ಅಡಚಣೆಯಿಲ್ಲದೆ ನಿರಂತರವಾಗಿ ಸಾಗಬೇಕಿತ್ತು. ಹತ್ತಾರು ಸೆಕೆಂಡುಗಳಶ್ಟು ಕಾಲ ಕೂಡ ಉಸಿರಾಡದೆ ಇರಲು ಸಾದ್ಯವಿರಲಿಲ್ಲ. ದೇಹಕ್ಕೆ ಗಾಳಿಯನ್ನು ತುಂಬಲು ನಿಯೋಜಿಸಿದ್ದ ಆ ಹುಡುಗನಿಗೆ ಇದರ ಪೂರ‍್ಣ ಪ್ರಮಾಣದ ಅರಿವಿರಲಿಲ್ಲ. ತನ್ನ ಪಾಡಿಗೆ ತಾನು ಮಾತಿಗಿಳಿದ ಕಾರಣ, ನನಗೋ ಉಸಿರು ನಿಂತ ಅನುಬವ. ಎಶ್ಟೇ ಪ್ರಯತ್ನ ಪಟ್ಟರೂ, ಕಶ್ಟ ಪಟ್ಟರೂ ಗಾಳಿಯನ್ನು ದೇಹದೊಳಕ್ಕೆ ಎಳೆದುಕೊಳ್ಳುಲು ಸಾದ್ಯವಾಗಲೇ ಇಲ್ಲ. ನನಗರಿವಾಗತೊಡಗಿತ್ತು, ಇದೇ ನನ್ನ ಜೀವನದ ಅಂತ್ಯ ಎಂದು. ಇನ್ನೆರಡು ಮೂರು ನಿಮಿಶದಲ್ಲಿ ನನ್ನ ಪ್ರಾಣ ಪಕ್ಶಿ ಹಾರಿ ಹೋಗಿ ಅನಂತದಲ್ಲಿ ಲೀನವಾಗುತ್ತದೆ ಎಂಬ ಅರಿವು ಮೂಡತೊಡಗಿತು. ಬಾಯಿ ಬಿಟ್ಟು ಹೇಳಲು ಸಹ ಸಾದ್ಯವಿರಲಿಲ್ಲ. ಇನ್ನೆರಡು ಸೆಕೆಂಡುಗಳಲ್ಲಿ, ಕಣ್ಣು ಸುತ್ತಿ ಬಂದು ಸುತ್ತಲ್ಲೆವೂ ಕತ್ತಲಾಗಿ, ದೇಹದ ಅಂಗಾಂಗಗಳೆಲ್ಲಾ ಸ್ತಬ್ದವಾಗುತ್ತದೆ ಎಂದುಕೊಳ್ಳುತ್ತಿರುವಾಗಲೇ, ಎಲ್ಲಾ ದೇವರುಗಳಿಗೆ ನಮಿಸಿಸಲು ಇದೇ ಸರಿಯಾದ ಹೊತ್ತು ಎನಿಸಿತು. ಎಲ್ಲಾ ದೇವರುಗಳಿಗೂ ಒಟ್ಟಾಗಿಯೇ ‘ಈ ಜನ್ಮದಲ್ಲಿ ಇಂತಹ ಸುಂದರ ಒಳ್ಳೆಯ ಜೀವನ ಕೊಟ್ಟಿದ್ದಕ್ಕೆ’ ಕೋಟಿ ಕೋಟಿ ಪ್ರಣಾಮಗಳನ್ನು ಅರ‍್ಪಿಸುತ್ತಾ, ಅನಿವಾರ‍್ಯಕ್ಕೆ ಮಾನಸಿಕವಾಗಿ ತಯಾರಾದೆ.

ಯಾವುದೋ ಒಂದು ದ್ವನಿ ಕಿವಿಗೆ ಅಪ್ಪಳಿಸಿತು. ‘ಏಯ್….. ಏನ್ ಮಾಡ್ತಿದ್ದೀಯೋ? ನೋಡಲ್ಲಿ ಪೇಶಂಟ್ ಕಡೆ. ಕಣ್ಕಣ್ಣು ಬಿಡ್ತಿದ್ದಾರೆ, ಗಾಳಿ ಊದೋದು ನಿಲ್ಲಿಸ್ಕೂಡದು ಅಂತ ಡಾಕ್ಟರ್ ಹೇಳಿರಲಿಲ್ವಾ? ಮೊದ್ಲು ಊದು……. ಜೋರಾಗಿ ಊದು” ಎಂದು ಜಬರಿಸದ ಮಾತು ಕೇಳಿ ಬಂತು. ಕೂಡಲೆ ಗಾಳಿ ಊದಲು ನಿಯೋಜಿಸಿದ್ದ ಹುಡುಗ ಜೋರಾಗಿ ಊದಿದ. ಹೋಗಿದ್ದ ಜೀವ ಮತ್ತೆ ಬಂದಂತಾಯಿತು. ಕಣ್ಣೆಲ್ಲಾ ತಿಳಿಯಾಯಿತು. ಬದುಕಿದೆ ಅನಿಸಿತು. ನೆಮ್ಮದಿಯ ನಿಟ್ಟುಸಿರು ಬಿಡುವಶ್ಟು ಗಾಳಿ ಸಹ ಶ್ವಾಸಕೋಶದಲ್ಲಿ ಶೇಕರಣೆಯಾಗಿರಲಿಲ್ಲ. ಇದೆಲ್ಲಾ ನಡೆದಿದ್ದು ಕೇವಲ ಎರಡು ನಿಮಿಶದಲ್ಲಿ.? ಅಶ್ಟರಲ್ಲಿ ಓಟಿ ಎದುರಾಯಿತು. ಒಳಗೆ ಪ್ರವೇಶಿಸುತಿದ್ದಂತೆ, ಅರವಳಿಕೆ ತಜ್ನರು ಚುಚ್ಚು ಮದ್ದು ಚುಚ್ಚಿದ್ದಶ್ಟೇ, ನನಗೆ ಎಚ್ಚರ ತಪ್ಪಿತು.

ಬೆಳಗಿನ ಜಾವ 7 ಗಂಟೆ 20 ನಿಮಿಶ:

ರಾತ್ರಿ ಮತ್ತು ಎರಡನೆಯ ಶಸ್ತ್ರಚಿಕಿತ್ಸೆ ಸಮಯದಲ್ಲಿ ಮೈ ತುಂಬಾ ತುಂಬಿದ್ದ ಅರವಳಿಕೆ ಔಶದಿಯ ಶಕ್ತಿ ಕುಂದುತ್ತಾ ಬಂದಿತ್ತು. ಮೆಲ್ಲಗೆ ಕಣ್ಣು ತೆರೆದು ನೋಡಿದೆ. ಅದೇ ಐಸಿಯೂ. ಅದೇ ಮಂಚ, ಅದೇ ಜಾಗ, ಅದೇ ನಳಿಕೆಗಳ ಸಂಗಡ ಇರುವುದು ಹಾಗೂ ಎರಡನೆಯ ಶಸ್ತ್ರಚಿಕಿತ್ಸೆ ಸಹ ಸಂಪೂರ‍್ಣವಾಗಿರುವುದು ಕಾತ್ರಿಯಾಯಿತು. ಕಣ್ಣು ತೆರೆದ ಕಾರಣ ಯಶಸ್ವಿಯಾಗಿದೆ ಎಂದು ಅನಿಸತೊಡಗಿತ್ತು. ಬಹುಶಹ ದೇಹದೊಳಕ್ಕೆ ತುಂಬುತ್ತಿದ್ದ ಗ್ಲೂಕೋಸ್ ಮತ್ತು ರಕ್ತ ಮೈಹಿಡಿದಿರಬೇಕು. ಮೊದಲ ಶಸ್ತ್ರಚಿಕಿತ್ಸೆಗಿಂತ ಈಗ ಹೆಚ್ಚು ಕ್ರಿಯಾಶೀಲವಾಗಿದ್ದೇನೆ ಎಂಬ ಬಾವನೆ ಮನದಲ್ಲಿ ಮೂಡಿತು.  ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದೆ. ಅಲ್ಲಿದ್ದ ಡಾಕ್ಟರ್ ಸಹ ನನ್ನನ್ನು ಗಮನಿಸಿದರು. ಹತ್ತಿರ ಬಂದು “ಆರ್ ಯು ಆಲ್ ರೈಟ್…. ಹೌ ಆರ್ ಪೀಲಿಂಗ್ ನೌ” ಎನ್ನುತ್ತಾ ನನ್ನತ್ತ ಬಂದರು. ಅಲ್ಲಿ ಕೆಲಸ ನಿರ‍್ವಹಿಸುತ್ತಿದ್ದ ಎಲ್ಲಾ ಯಂತ್ರಗಳನ್ನು ಸೂಕ್ಶ್ಮವಾಗಿ ಗಮನಿಸುತ್ತಾ ಮತ್ತೆ ನನ್ನನ್ನು ಕುರಿತು “ನತಿಂಗ್ ಟು ವರಿ, ಯು ಕೆನ್ ವಾಕ್ ಟುಮಾರೋ ಮಾರ‍್ನಿಂಗ್” ಎನ್ನುತ್ತಾ ಬುಜವನ್ನು ಅದುಮಿ ತಮ್ಮ ಸಂತಸವನ್ನು ಹಂಚಿಕೊಂಡರು. ಅವರ ಆಶಯ ಅಕ್ಶರ ಸಹ ಸತ್ಯವಾಯಿತು. ಮಾರನೆಯ ದಿನ ಮದ್ಯಾಹ್ನ ವಾರ‍್ಡ್‍ಗೆ ಸ್ತಳಾಂತರವಾಯಿತು. ಸಂಜೆ ವೇಳೆಗೆ ನಾನು ಇಪ್ಪತೈದು ಮೀಟರ‍್‌ನಶ್ಟು ದೂರ ನಡೆದೆ. ಮನಸ್ಸಿನಲ್ಲಿ ವಿಶ್ವಾಸ ಇಮ್ಮಡಿಸಿತ್ತು. ಸಾವನ್ನು ಗೆದ್ದು ಬಂದ ಕುಶಿ ಮನೆಮಾಡಿತ್ತು. ‘ಅದ್ರುಶ್ಟವಂತರು. ಸಮಯದಲ್ಲಿ ಡ್ಯೂಟಿ ಡಾಕ್ಟರ್ ಗಮನಿಸಿದ್ದಕ್ಕೆ ಜೀವ ಉಳಿಯಿತು. ಇನ್ನರ‍್ದ ಗಂಟೆ ತಡವಾಗಿದ್ದರೂ ಜೀವಕ್ಕೆ ಅಪಾಯ ತಪ್ಪುತ್ತಿರಲಿಲ್ಲ’ ಎನ್ನುವ ಮಾತುಗಳು ಅಲ್ಲಿನ ಕಾರಿಡಾರಿನಲ್ಲಿ ಹರಿದಾಡುತ್ತಿತ್ತು.

(ಚಿತ್ರ ಸೆಲೆ: wikimedia)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: