ಮಕ್ಕಳ ಕತೆ: ಅಜ್ಜಿ ಮತ್ತು ಕುಂಬಳಕಾಯಿ

– ಮಾರಿಸನ್ ಮನೋಹರ್.

ಕುಂಬಳಕಾಯಿ, ಅಜ್ಜಿ, pumpkin, old lady

ಗಡಿಕಿಣ್ಣಿ ಎಂಬ ಊರಿನಲ್ಲಿ ಸುಬ್ಬಮ್ಮ‌ ಇರುತ್ತಿದ್ದಳು. ಅವಳ ಗಂಡ ತೀರಿಹೋಗಿ ಪಾಪ ತನ್ನ ಗುಡಿಸಲಿನಲ್ಲಿ ಒಬ್ಬಳೇ ಬದುಕುತ್ತಿದ್ದಳು. ಅವಳಿಗೆ ಇದ್ದ ಒಬ್ಬ ಮಗಳು ಮದುವೆ ಮಾಡಿಕೊಂಡು ತನ್ನ ಗಂಡನ ಊರಿಗೆ ಹೋಗಿದ್ದಳು. ಅಂದಿನಿಂದ ಅಜ್ಜಿ ಸುಬ್ಬಮ್ಮ‌ ತನ್ನ ಪುಟ್ಟ ಮನೆಯಲ್ಲಿ ತಾನೇ ಅಡುಗೆ ಮಾಡಿಕೊಂಡು ಇರುತ್ತಿದ್ದಳು. ಮಗಳು ಮದುವೆಯಾಗಿ ಹೋದ ದಿನದಿಂದ ಅವಳಿಗೆ ಒಂಟಿತನದ ಕೊರಗು ಹತ್ತಿಕೊಂಡಿತು. ಆದ್ದರಿಂದ ಸರಿಯಾಗಿ ತಿನ್ನದೇ, ಕುಡಿಯದೆ, ಮಂದಿಯೊಂದಿಗೆ ಬೆರೆಯದೆ ಅವಳು ಬಡವಾಗ ತೊಡಗಿದಳು. ಅವಳನ್ನು ಬೇಟಿಯಾಗಲು ಆಗ ಈಗ ಒಂದು ಬೆಕ್ಕು ಬರುತ್ತಾ ಇತ್ತು. ಸುಬ್ಬಮ್ಮ‌ ಒಂದು ಬಟ್ಟಲಲ್ಲಿ ಹಾಲು ಹಾಕಿ ಅದರ ಮುಂದೆ ಇಡುತ್ತಿದ್ದಳು.

ಹೀಗೆ ಒಂದು ದಿನ ಬೆಕ್ಕು ಅವಳು ತನ್ನ ಪುಟ್ಟ ಮನೆಯಲ್ಲಿ ಇದ್ದಾಗ ಒಳ ಬಂತು. ಸುಬ್ಬಮ್ಮ ಕೊಟ್ಟ ಹಾಲನ್ನು ಕುಡಿಯುತ್ತಾ ಬೆಕ್ಕು, “ಸುಬ್ಬಮ್ಮ ನೀನು ಈಗ ಹೊರಗೆ ಎಲ್ಲಿಯೂ ಹೋಗುತ್ತಾ‌ ಇಲ್ಲ, ಬರುತ್ತಾ ಇಲ್ಲ. ನಿನ್ನನ್ನು ನೋಡಿದ ಹೆಂಗಸರು ಸುಬ್ಬಮ್ಮ ಹಾಸಿಗೆ ಹಿಡಿದಿದ್ದಾಳೆ. ಅವಳ ಕೊಡ ತುಂಬುತ್ತಾ ಬಂತು ಅಂತ ಮಾತಾಡುತ್ತಾ ಇದ್ದಾರೆ” ಅಂದಿತು. ಇದನ್ನು ಕೇಳಿದ ಅಜ್ಜಿ ಸುಬ್ಬಮ್ಮ “ನಾನು ಮುದುಕಿಯಾದೆ, ನನ್ನನ್ನು ನೋಡಿಕೊಳ್ಳಲು ಈಗ ಯಾರೂ ಇಲ್ಲ. ಅದಕ್ಕೆ ನನಗೆ ಚಿಂತೆಯಾಗಿದೆ” ಅಂದಳು. ಬೆಕ್ಕು “ನಿನಗೆ ಡೋಣಗಾಪುರದಲ್ಲಿ ಒಬ್ಬ ಮಗಳಿದ್ದಾಳಲ್ಲಾ, ಅಲ್ಲಿಗೇಕೆ ಹೋಗಬಾರದು?” ಅಂದಿತು. ಅಜ್ಜಿ ಸುಬ್ಬಮ್ಮ‌ “ಹೌದು ನಾನು ಇವತ್ತು ಸಂಜೆಯೇ ಅವಳ ಊರಿಗೆ ಹೋಗುತ್ತೇನೆ. ಸರಿಯಾಗಿ ರುಚಿ ರುಚಿಯಾದ ಊಟ ಮಾಡದೇ ತುಂಬಾ ದಿನಗಳು ಆದವು. ನನ್ನ ಮುದ್ದು ಮಗಳ ಮನೆಗೆ ಹೋಗಿ ಚಕ್ಕುಲಿ, ಕೋಡುಬಳೆ, ಕರ‍್ಚಿಕಾಯಿ, ರವೆ ಉಂಡೆ ತಿಂದು ದಪ್ಪವಾಗಿ ಬರುತ್ತೇನೆ. ಆಗ ಯಾರೂ ನನ್ನನ್ನು ಬಡ ಸುಬ್ಬಮ್ಮ ಅಂತ ಕರೆಯುವುದಿಲ್ಲ” ಅಂದಳು. ಬೆಕ್ಕು ಹಾಲು ಕುಡಿದು ಹೊರಟು ಹೋಯಿತು.

ಮುದುಕಿ ಸುಬ್ಬಮ್ಮ‌ ತನ್ನ ಬಟ್ಟೆಗಳನ್ನು ಗಂಟು ಮಾಡಿ ಕಟ್ಟಿಕೊಂಡು, ಗುಡಿಸಲಿನ ಬಾಗಿಲನ್ನು ಮುಚ್ಚಿ ಕೀಲಿ ಹಾಕಿ, ಅದನ್ನು ಸೊಂಟದಲ್ಲಿ‌ ಸಿಕ್ಕಿಸಿಕೊಂಡು ಅಂಗಳಕ್ಕೆ ಬಂದಳು. ಸುಬ್ಬಮ್ಮಳ ಮನೆ ಹಿತ್ತಲಲ್ಲಿ ಕುಂಬಳಕಾಯಿ ಬಳ್ಳಿ ಇತ್ತು. ಅದರಲ್ಲಿ ಒಂದು ದೊಡ್ಡ ಕುಂಬಳಕಾಯಿ ಬಿಟ್ಟಿತ್ತು. ಅದನ್ನು ಕಡಿದುಕೊಂಡು ಬಂದು ಸುಬ್ಬಮ್ಮ ಅದರ ಮೇಲಿನ ತುಂಬನ್ನು ತೆರೆದು ಒಳಗೆ ಕುಳಿತು, ಕುಂಬಳಕಾಯಿಗೆ “ನಡಿ ಗುಡುಗುಡು, ನಡಿ ಗುಡುಗುಡು… ನನ್ನ ಮಗಳ ಮನೆಗೆ ಗುಡುಗುಡು” ಅಂದಳು. ಆಗ ಕುಂಬಳಕಾಯಿ ಗುಡುಗುಡು ಉರುಳುತ್ತಾ ಗಡಿಕಿಣ್ಣಿಯಿಂದ ಡೋಣಗಾಪುರದ ಕಡೆಗೆ ಓಡತೊಡಗಿತು. ಹಾಗೆ ಸುಬ್ಬಮ್ಮ ತನ್ನ ಮಗಳ ಊರಿನ ಕಡೆಗೆ ಕುಂಬಳಕಾಯಿಯಲ್ಲಿ ಕುಳಿತು ಹೋಗುತ್ತಿರುವಾಗ ದಾರಿಯ ನಡುವೆ ಒಂದು ಕಾಡು ಬಂತು.

ಕಾಡಿನ ಮೂಲಕ ಹಾದು ಹೋಗುತ್ತಿರುವಾಗ ಸುಬ್ಬಮ್ಮ ಕುಂಬಳಕಾಯಿಗೆ “ಗುಡುಗುಡು ಕುಂಬಳಕಾಯಿ, ಮೆಲ್ಲಗೆ ಹೋಗು. ನಿನ್ನ ಸಪ್ಪಳ ಯಾರಿಗೂ ಕೇಳಿಸಬಾರದು” ಅಂದಳು. ಅದಕ್ಕೆ ಕುಂಬಳಕಾಯಿ ಜೋರಾಗಿ ಓಡದೆ, ಮೆಲ್ಲಗೆ ಉರುಳುತ್ತಾ ಸಾಗಿತು. ಆದರೂ ಇದರ ಸಪ್ಪಳ ಒಂದು ಹುಲಿ ಕೇಳಿಸಿಕೊಂಡಿತು. ಅದು ಎದುರಿನಿಂದ ಬಂದು ಕುಂಬಳಕಾಯಿಯನ್ನು ತಡೆ ಹಿಡಿಯಿತು. ಹುಲಿ, “ಯಾರದು ಒಳಗೆ? ಬಾ ಹೊರಗೆ” ಎಂದು ಜೋರಾಗಿ ಗರ‍್ಜಿಸಿತು. ಸುಬ್ಬಮ್ಮ‌ ಒಳಗಿನಿಂದ ಅಂಜುತ್ತಾ ಹೊರಗೆ ಬಂದಳು. ಹುಲಿ, “ನನಗೆ ತುಂಬಾ‌ ಹಸಿವಾಗಿದೆ, ನಾನು ಮೂರು ದಿನದಿಂದ ಹಸಿದುಕೊಂಡಿದ್ದೇನೆ, ನನಗೆ ತುಂಬಾ ಹಸಿವಾಗಿದೆ. ಈಗ ನಿನ್ನನ್ನು ಹರಿದು ತಿನ್ನುತ್ತೇನೆ” ಅಂದಿತು. ಅದಕ್ಕೆ ಅಜ್ಜಿ ಸುಬ್ಬಮ್ಮ “ಎಲವೋ ದಡ್ಡ ಹುಲಿಯೇ, ನನ್ನನ್ನು ಸರಿಯಾಗಿ ನೋಡು, ನಾನು ಸರಿಯಾಗಿ ಊಟ ಮಾಡದೇ ಬಡಕಲಾಗಿ ಹೋಗಿದ್ದೇನೆ. ನನ್ನಲ್ಲಿ ಮಾಂಸ ಕೊಬ್ಬು ಏನೂ ಇಲ್ಲ. ನನ್ನಲ್ಲಿ ಈಗ ಒಣಗಿದ ಎಲುಬು ಚರ‍್ಮ ಇದೆ, ಇದರಿಂದ ನಿನ್ನ ಹೊಟ್ಟೆ ತುಂಬುವುದಿಲ್ಲ. ನಾನು ಈಗ ನನ್ನ ಮಗಳ ಮನೆಗೆ ಹೋಗುತ್ತಾ ಇದ್ದೇನೆ, ನನ್ನ ಮಗಳ ಬಳಿ ತುಂಬಾ ನಾಟಿ ಕೋಳಿಗಳಿವೆ. ನಾನು ಅವಳ ಮನೆಗೆ ಹೋದರೆ ಅವಳು ನನಗಾಗಿ ದಿನಾಲೂ ನಾಟಿ ಕೋಳಿ ಸಾರು ಮಾಡಿ ನನಗೆ ಒತ್ತಾಯ ಮಾಡಿ ತಿನ್ನಿಸುವಳು. ಅಶ್ಟೇ ಅಲ್ಲದೇ ಅಲ್ಲಿ ನಾನು ಅಮಾವಾಸ್ಯೆ ಹುಣ್ಣಿಮೆಗೆ ಚೆನ್ನಾಗಿ ಬೇಳೆ ಹೋಳಿಗೆ, ತುಪ್ಪ, ಚಿತ್ರಾನ್ನ, ಕಜ್ಜಾಯ ತಿಂದು ತುಂಬಾ ದಪ್ಪವಾಗಿ ಬರುತ್ತೇನೆ. ಆಗ ನನ್ನನ್ನು ತಿನ್ನು” ಅಂದಳು. ಹುಲಿ‌ ಚೆನ್ನಾಗಿ ಯೋಚನೆ ಮಾಡಿ “ಆಯ್ತು ಹೋಗು ನಿನ್ನನ್ನು ಆಗಲೇ ತಿನ್ನುತ್ತೇನೆ” ಅಂತ ಹೇಳಿ, ಮುದುಕಿ ಸುಬ್ಬಮ್ಮಳನ್ನು ಮುಂದೆ ಹೋಗಲು ಬಿಟ್ಟಿತು. ಕುಂಬಳಕಾಯಿ ಗುಡುಗುಡುನೆ ಉರುಳುತ್ತಾ ಮುಂದೆ ಸಾಗಿತು.

ಕಾಡಿನಲ್ಲಿ ಇನ್ನೂ ಸ್ವಲ್ಪ ಮುಂದೆ ಹೋದಾಗ ಕರಡಿ ಎದುರಿಗೆ ಬಂತು. ಅದೂ ಕೂಡ ಅಜ್ಜಿ ಸುಬ್ಬಮ್ಮಳನ್ನು ತಿನ್ನುತ್ತೇನೆ ಅಂದಿತು. ಆಗ ಸುಬ್ಬಮ್ಮ “ಅಯ್ಯೋ ದಡ್ಡ ಕರಡಿಯೇ, ನಾನು ಸರಿಯಾಗಿ ಊಟ ಮಾಡದೆ ಬಡವಾಗಿ ಹೋಗಿದ್ದೇನೆ. ನನ್ನ ಬಳಿ ಒಣಗಿದ ಎಲುಬು ಬಿಟ್ಟರೆ ಬೇರೇನೂ ಇಲ್ಲ, ಈಗ ನಾನು ನನ್ನ ಮಗಳ ಮನೆಗೆ ಹೋಗುತ್ತೇನೆ. ಅಲ್ಲಿ ನಾನು ಚೆನ್ನಾಗಿ ರುಚಿ ರುಚಿಯಾದ ರವೆ ಉಂಡೆ, ಅವಲಕ್ಕಿ, ನಿಪ್ಪಟ್ಟು, ಬೆಲ್ಲದ ಪಾಕ,ನಾಟಿ ಕೋಳಿ ಸಾರು ಎಲ್ಲ ತಿಂದು ದಪ್ಪವಾಗಿ ಬರುತ್ತೇನೆ. ಆಗ ನನ್ನನ್ನು ತಿನ್ನು” ಅಂದಳು. ಕರಡಿಯು ಚೆನ್ನಾಗಿ ಯೋಚಿಸಿ “ಆಯ್ತು, ನಿನ್ನನ್ನು ಆಗಲೇ ತಿನ್ನುತ್ತೇನೆ” ಅಂದಿತು ಮತ್ತು ಅವಳನ್ನು ಮುಂದೆ ಹೋಗಲು ಬಿಟ್ಟಿತು. ಮತ್ತೆ ಕುಂಬಳಕಾಯಿ ಗುಡಗುಡನೆ ಉರುಳುತ್ತಾ ಮುಂದೆ ಸಾಗಿತು. ಈಗ ಕಾಡಿನ ಹಾದಿ ಮುಗಿಯಿತು. ಕಾಡಿನಿಂದ ಹೊರಗೆ ಬರುತ್ತಲೇ ಕುಂಬಳಕಾಯಿ ಜೋರಾಗಿ ಓಡತೊಡಗಿತು. ಈಗ ಕುಂಬಳಕಾಯಿ ಮುಂದೆ ಬೆಟ್ಟ ಗುಡ್ಡಗಳು ಬಂಡೆಗಳು ಇದ್ದ ಹಾದಿ ಬಂತು.

ಮುದುಕಿ ಸುಬ್ಬಮ್ಮ “ಗುಡುಗುಡು ಕುಂಬಳಕಾಯಿ ಜೋರಾಗಿ ಉರುಳಬೇಡ, ಜೋರಾಗಿ ಓಡಬೇಡ, ನೀನು ಬಂಡೆಗೆ ಬಡಿದು ಒಡೆದುಹೋಗುತ್ತೀ” ಅಂದಳು. ಅದಕ್ಕೆ ಕುಂಬಳಕಾಯಿ ಮತ್ತೆ ಮೆಲ್ಲಗೆ ಉರುಳತೊಡಗಿತು. ಆಗ ಒಡನೇ ಬಂಡೆಗಳ ಸಂದಿಯಿಂದ, ಗುಡ್ಡಗಳ ಹಿಂದಿನಿಂದ ಕಳ್ಳರು ದರೋಡೆಕೋರರು ಬಂದರು. ಅವರು ಮುಕಕ್ಕೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ಕತ್ತಿ ಹಿಡಿದುಕೊಂಡಿದ್ದರು. ಕಳ್ಳರು ಆ ಕುಂಬಳಕಾಯಿಯನ್ನು ಹಿಡಿದು ನಿಲ್ಲಿಸಿ “ಯಾರಿದು ಒಳಗೆ? ಬಾ ಹೊರಗೆ” ಅಂತ ಕಿರುಚಿದರು. ಆಗ ಸುಬ್ಬಮ್ಮ ಕಳ್ಳರು ಬಂದಿದ್ದಾರೆಂದು ಗೊತ್ತಾಗಿ, ಸೆರಗನ್ನು ತಲೆ ಮೇಲೆ ಹೊದ್ದುಕೊಂಡು ಹೊರಗೆ ಬಂದಳು. ಕಳ್ಳರು “ನಿನ್ನ ಬಳಿ ಹಣ ಒಡವೆ, ಬೆಳ್ಳಿ-ಬಂಗಾರ, ಹರಳು-ರತ್ನ ಇದ್ದರೆ ಕೊಡು ಇಲ್ಲದಿದ್ದರೆ ನಿನ್ನನ್ನು ಕೊಂದು ಹಾಕುತ್ತೇವೆ ಮತ್ತು ನಿನ್ನ ಕುಂಬಳಕಾಯಿಯನ್ನು ಕತ್ತರಿಸಿಬಿಡುತ್ತೇವೆ” ಅಂದರು. ಅದಕ್ಕೆ ಸುಬ್ಬಮ್ಮ ನಕ್ಕು “ಅಯ್ಯೋ ದಡ್ಡ ಕಳ್ಳರೇ ಮತ್ತು ದರೋಡೆಕೋರರೇ, ನಾನು ಸರಿಯಾಗಿ‌ ಊಟ ಮಾಡದೇ ಬಡಕಲಾಗಿ ಒಣಗಿ ಹೋಗಿದ್ದೇನೆ. ಇನ್ನು ನನ್ನ ಬಳಿ ಹಣ ಬೆಳ್ಳಿ ಬಂಗಾರ ರತ್ನ ಹರಳು ಎಲ್ಲ ಎಲ್ಲಿಂದ ಬರಬೇಕು? ಅವೆಲ್ಲ ನನ್ನ ಬಳಿ ಇರುತ್ತಿದ್ದರೆ ನಾನು ಈ ಕುಂಬಳಕಾಯಿಯಲ್ಲಿ ಕುಳಿತು ಬರುತ್ತಿರಲಿಲ್ಲ ಆನೆ, ಒಂಟೆ ಇಲ್ಲವೇ ಕುದುರೆ ಮೇಲೆ ಕುಳಿತು ಬರುತ್ತಿದ್ದೆ. ಈಗ ನಾನು ಮಗಳ ಮನೆಗೆ ಹೋಗುತ್ತಾ ಇದ್ದೇನೆ. ಅಲ್ಲಿಂದ ಬರುವಾಗ ನನ್ನ ಮಗಳು ನನಗೆ ಬೆಳ್ಳಿ-ಬಂಗಾರ, ಒಡವೆ-ಹರಳು ಕೊಟ್ಟು ಕಳಿಸುವಳು. ಆಗ ಬೇಕಾದರೆ ನೀವು ಬಂದು ಅವುಗಳನ್ನು ತೆಗೆದುಕೊಳ್ಳಿ” ಅಂದಳು. ಆಗ ಕಳ್ಳರು ಅವಳನ್ನು ಮುಂದೆ ಹೋಗಲು ಬಿಟ್ಟರು.

ಕುಂಬಳಕಾಯಿ ಜೋರಾಗಿ ಓಡುತ್ತಾ ಎಲ್ಲಿಯೂ ನಿಲ್ಲದೇ ಡೋಣಗಾಪುರಕ್ಕೆ ಬಂದು ಸುಬ್ಬಮ್ಮಳ ಮಗಳ ಮನೆ ಮುಂದೆ ಬಂದು ನಿಂತಿತು. ಕುಂಬಳಕಾಯಿಯಿಂದ ಹೊರಗೆ ಬಂದ ಮುದುಕಿ ಸುಬ್ಬಮ್ಮ, ಮಗಳನ್ನು ಬೇಟಿ ಮಾಡಿ ದಾರಿಯಲ್ಲಿ ನಡೆದ ಎಲ್ಲವನ್ನು ಮಗಳಿಗೆ ಒಂದು ಮಾತೂ ಬಿಡದಂತೆ ಹೇಳಿದಳು. ಆಗ ಮಗಳು “ಅಮ್ಮಾ ನೀನು ಏನೂ‌ ಕೊರಗಬೇಡ. ನನ್ನ ಮನೆಯಲ್ಲಿ ಬೇಕಾದಶ್ಟು ದಿನ ಇದ್ದು ಉಂಡು ತಿಂದು ಚೆನ್ನಾಗಿರು” ಅಂದಳು. ಸುಬ್ಬಮ್ಮ ಮಗಳ ಮನೆಯಲ್ಲಿ ದಿನಾಲೂ ರುಚಿ-ರುಚಿಯಾದ ತಿಂಡಿ ತಿನ್ನುತ್ತಾ, ಪ್ರತಿ ರಾತ್ರಿ ನಾಟಿ ಕೋಳಿ ಸಾರು ಅನ್ನ ಊಟ ಮಾಡುತ್ತಾ, ಸಿಹಿ‌ ಸಿಹಿಯಾದ ಹುಗ್ಗಿ ಪಾಯಸ ಕುಡಿಯುತ್ತಾ, ಬೇಸರವಾದಾಗ ಚಕ್ಕುಲಿ ಕರ‍್ಜಿಕಾಯಿ ಕೋಡಬಳೆ, ನಿಪ್ಪಟ್ಟು, ಕಜ್ಜಾಯ, ಅವಲಕ್ಕಿ, ರವೆ ಉಂಡೆ ಮೆಲ್ಲುತ್ತಾ ಆರು ತಿಂಗಳು ಕಳೆದಳು.

ಆರು ತಿಂಗಳಾದ ಮೇಲೆ ದಪ್ಪವಾದ ಸುಬ್ಬಮ್ಮ ಮಗಳಿಗೆ “ನಾನು ಈಗ ನನ್ನ ಊರಿಗೆ ಹೋಗುತ್ತೇನೆ, ಈ ಊರಲ್ಲಿ ಇದ್ದು ಇದ್ದು ನನಗೆ ಬೇಸರವಾಗಿದೆ” ಅಂದಳು. ಆಗ ಮಗಳು, ಹಿಂದೆ ದಾರಿಯಲ್ಲಿ ಹುಲಿ ಕರಡಿ ಕಳ್ಳರು ಸಿಕ್ಕಿದ್ದರೆಂದು ತಾಯಿ ಹೇಳಿದ್ದನ್ನು ನೆನಪು ಮಾಡಿಕೊಂಡು, ಸುಬ್ಬಮ್ಮಳಿಗೆ “ಅಮ್ಮಾ, ನೀನು ಸ್ವಲ್ಪ ನಿಲ್ಲು” ಅಂತ ಹೇಳಿ ಅಡುಗೆ ಮನೆಗೆ ಹೋದಳು. ಅಡುಗೆ ಮನೆಯಲ್ಲಿ ಅವಳು ಹನ್ನೆರಡು ಕೋಡುಬಳೆ ಮಾಡಿದಳು. ಅಕ್ಕಿ ಹಿಟ್ಟಿನಿಂದ ದುಂಡುದುಂಡಾದ ಕಡುಬು, ಕಡಲೆ ಹಿಟ್ಟಿನಿಂದ ಉದ್ದನೆಯ ಸೇವುಗಳನ್ನು ಮಾಡಿ, ಒಂದು ಡಬ್ಬಿಯಲ್ಲಿ ಕಾರದ ಪುಡಿ ತುಂಬಿದಳು ಮತ್ತೊಂದು ಡಬ್ಬಿಯಲ್ಲಿ ಬಿಸಿಬಿಸಿ ಬೂದಿ ತುಂಬಿದಳು. ಇವೆಲ್ಲವುಗಳನ್ನು ತೆಗೆದುಕೊಂಡು ಹೊರಗೆ ಬಂದಳು. ಅಕ್ಕಿ ಹಿಟ್ಟಿನ ಕಡುಬುಗಳನ್ನು ಸಂಚಿ ಚೀಲದಲ್ಲಿ ತುಂಬಿದಳು. ಕೋಡುಬಳೆಗಳನ್ನು ಕೈಗೆ ತೊಡಿಸಿದಳು, ಸೇವುಗಳನ್ನು ಕೊರಳಿಗೆ ಹಾಕಿದಳು. ಕಾರದ ಡಬ್ಬಿ ಬೂದಿ ಡಬ್ಬಿ ಎರಡನ್ನೂ ತಾಯಿಗೆ ಕೊಟ್ಟಳು. ಸುಬ್ಬಮ್ಮ ತನ್ನ ಕುಂಬಳಕಾಯಿಯಲ್ಲಿ ಕೂತುಕೊಂಡು ಅದಕ್ಕೆ “ನಡಿ ಗುಡುಗುಡು, ನಡಿ ಗುಡುಗುಡು… ನಮ್ಮ‌ಮನೆಗೆ ಗುಡುಗುಡು” ಅಂದಳು.

ಕುಂಬಳಕಾಯಿ ಮುಂದಕ್ಕೆ ಉರುಳುತ್ತಾ ಗಡಿಕಿಣ್ಣಿ ಊರಿನ ಕಡೆಗೆ ಸಾಗಿತು. ಕುಂಬಳಕಾಯಿ ಈಗ ಬೆಟ್ಟಗುಡ್ಡಗಳಿದ್ದ ಹಾದಿಗೆ ಬಂತು. ಕಳ್ಳರು ಕುಂಬಳಕಾಯಿ ಬರುತ್ತಿರುವುದನ್ನು ನೋಡಿದರು. ಸುಬ್ಬಮ್ಮ ಹೊರಗೆ ಬಂದು “ನನ್ನ ಮಗಳು ನನಗೆ ಬಂಗಾರದ ಸರ ಮಾಡಿಸಿದ್ದಾಳೆ ತಗೊಳ್ಳಿ” ಅಂತ ಕೊರಳಲ್ಲಿ ಇದ್ದ ಸೇವುಗಳನ್ನು ಕೊಟ್ಟಳು. “ನನ್ನ ಮಗಳು ನನಗೆ ಅಂತ ಬೆಳ್ಳಿ ಕಾಸು ಕೊಟ್ಟಿದ್ದಾಳೆ ತಗೊಳ್ಳಿ” ಅಂತ ಅಕ್ಕಿಹಿಟ್ಟಿನ ಕಡುಬುಗಳನ್ನು ಕೊಟ್ಟಳು. “ನನ್ನ ಮಗಳು ನನಗೆ ಅಂತ ಬಂಗಾರದ ಬಳೆ ಮಾಡಿಸಿದ್ದಾಳೆ ಅದೂ ನೀವೇ ತಗೊಳ್ಳಿ” ಅಂತ ಕೈಯಲ್ಲಿದ್ದ ಕೋಡುಬಳೆಗಳನ್ನು ಕಳ್ಳರಿಗೆ ಕೊಟ್ಟು ತನ್ನ ಕುಂಬಳಕಾಯಿಗೆ “ನಡಿ ಗುಡುಗುಡು… ನಡಿ ಗುಡುಗುಡು” ಅಂತ ಹೇಳಿದಳು. ಕುಂಬಳಕಾಯಿ ಜೋರಾಗಿ ಓಡುತ್ತಾ ಕಳ್ಳರಿಂದ ತಪ್ಪಿಸಿಕೊಂಡು ದೂರ ಕಾಡಿನ ಹಾದಿಗೆ ಬಂತು.

ಈಗ ಅದರ ಎದುರಿಗೆ ಕರಡಿ ಬಂತು. ಸುಬ್ಬಮ್ಮ ಕರಡಿಯ ಬಳಿಗೆ ಬಂದು “ಕರಡಿಯೇ, ನಾನು ನನ್ನ ಮಗಳ ಮನೆಯಲ್ಲಿ ತಿಂದು ಉಂಡು ದಪ್ಪವಾಗಿ ಬಂದಿದ್ದೇನೆ. ನೀನು ಈಗ ನನ್ನನ್ನು ತಿನ್ನು ಆದರೆ ನಿನಗೆ ಅಂತ ಒಂದು ಕಿವಿಯೋಲೆ ನನ್ನ ಮಗಳು ಕೊಟ್ಟಿದ್ದಾಳೆ. ಮೊದಲು ಅದನ್ನು ಹಾಕಿಕೋ. ನಿನ್ನ ಕಿವಿ ಇಲ್ಲಿ ಕೊಡು” ಅಂದಳು. ಕರಡಿ ತನ್ನ ಕಿವಿ ಕೊಟ್ಟಿತು ಆಗ ಸುಬ್ಬಮ್ಮ‌ ಅದರ ಕಿವಿಯಲ್ಲಿ ಬಿಸಿ ಬೂದಿ ಹಾಕಿದಳು. ಕರಡಿ ನೋವಿನಿಂದ‌ ಕಿವಿಯನ್ನು ಕೆರೆದು ಕೊಳ್ಳುತ್ತಿರುವಾಗ ಸುಬ್ಬಮ್ಮ ಕುಂಬಳಕಾಯಿಗೆ “ನಡಿ ಗುಡುಗುಡು… ನಡಿ ಗುಡುಗುಡು” ಅಂತ ಹೇಳಿದಳು. ಕುಂಬಳಕಾಯಿ ಜೋರಾಗಿ ಓಡುತ್ತಾ ಮುಂದಕ್ಕೆ ಹೋಯಿತು.

ತುಂಬಾ ದೂರ ಬಂದ ಮೇಲೆ ಅವರಿಗೆ ಹುಲಿ ಎದುರಾಯಿತು. ಸುಬ್ಬಮ್ಮ‌ ಹೊರಗೆ ಬಂದು “ಹುಲಿಯೇ, ನಾನು ನನ್ನ ಮಗಳ ಮನೆಯಲ್ಲಿ ಚೆನ್ನಾಗಿ ತಿಂದು ಉಂಡು ದಪ್ಪವಾಗಿ ಬಂದಿದ್ದೇನೆ. ಹುಲಿಯೇ ನೀನು ನೋಡಲಿಕ್ಕೆ ತುಂಬಾ‌ ಸುಂದರವಾಗಿರುವೆ ಆದರೆ ನಿನ್ನಲ್ಲಿ ಒಂದು ಕಡಿಮೆಯಾಗಿದೆ. ನಿನ್ನ ಕಣ್ಣಿಗೆ ಕಾಡಿಗೆ ಹಚ್ಚುತ್ತೇನೆ ಆಮೇಲೆ ನೀನು ನನ್ನನ್ನು ತಿನ್ನು, ನಿನ್ನ ಕಣ್ಣನ್ನು ಅರಳಿಸು” ಅಂದಳು. ಹುಲಿಯು ತನ್ನ ಕಣ್ಣನ್ನು ಅರಳಿಸಿತು ಆಗ ಅಜ್ಜಿ ಸುಬ್ಬಮ್ಮ ಅದರ ಕಣ್ಣಿಗೆ ಕಾರದ ಪುಡಿ ಎರಚಿದಳು. ಹುಲಿ ನೋವಿನಿಂದ ತನ್ನ ಕಣ್ಣನ್ನು ಉಜ್ಜಿ ಕೊಳ್ಳುತ್ತಿರುವಾಗ ಸುಬ್ಬಮ್ಮ ತನ್ನ ಕುಂಬಳಕಾಯಿಗೆ “ನಡಿ ಗುಡುಗುಡು ನಡಿ ಗುಡುಗುಡು… ಜೋರಾಗಿ ಓಡು ಗುಡುಗುಡು” ಅಂತ ಹೇಳಿದಳು. ಆಗ ಕುಂಬಳಕಾಯಿ ಬೇಗ ಬೇಗ ಉರುಳುತ್ತಾ ಊರಿಗೆ ಬಂದು ಅವಳ ಗುಡಿಸಲಿಗೆ ಬಂದು ಮುಟ್ಟಿತು.

(ಚಿತ್ರ ಸೆಲೆ: interesteng.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: