ಅಲೈ ಮಿನಾರ್ – ಪೂರ‍್ಣವಾಗದ ಗೋಪುರ

– ಕೆ.ವಿ. ಶಶಿದರ

ಅಲೈ ಮಿನಾರ್ Alai Minar

ನವದೆಹಲಿಯಲ್ಲಿನ ಕುತುಬ್ ಮಿನಾರ್ ಇಡೀ ಪ್ರಪಂಚದಲ್ಲಿ ಹೆಸರುವಾಸಿಯಾದ ಹೆಗ್ಗುರುತು. ಕೆಂಪು ಬಣ್ಣದ ಈ ಗೋಪುರವನ್ನು, ರಜಪೂತರ ವಿರುದ್ದದ ವಿಜಯದ ಸಂಕೇತವಾಗಿ ಮೊಹಮ್ಮದ್ ಗೋರಿಯ ಅನುಯಾಯಿ ಕುತುಬುದ್ದೀನ್ ಐಬಕ್ 12ನೇ ಶತಮಾನದಲ್ಲಿ ನಿರ‍್ಮಿಸಿದ. ಆಪ್ಗಾನಿಸ್ತಾನದಲ್ಲಿ ಜಾಮ್ ಗೋಪುರವನ್ನು ನಿರ‍್ಮಿಸಿದ ಗುರಿದ್ ಸುಲ್ತಾನ್ ಗಿಯಾಸ್-ಒಡ್-ದಿನ್ ಅವರಿಂದ ಪಡೆದ ಸ್ಪೂರ‍್ತಿ ಇದಕ್ಕೆ ಮೂಲ ಎಂದು ಇತಿಹಾಸಕಾರರು ಗುರುತಿಸಿದ್ದಾರೆ. ಬಣ್ಣ ಮತ್ತು ಎತ್ತರದಲ್ಲಿ ಎರಡಕ್ಕೂ ಬಹಳ ಸಾಮ್ಯತೆ ಇದೆ.

ಕುತುಬ್ ಮಿನಾರ್ ಕಟ್ಟಲು ಪ್ರಾರಂಬಿಸಿದ ನೂರು ವರ‍್ಶಗಳ ತರುವಾಯ ಅಲ್ಲಾವುದ್ದೀನ್ ಕಿಲ್ಜಿ ಎಂಬ ಮಹತ್ವಾಕಾಂಕ್ಶೆಯ ಮತ್ತು ನಿರ‍್ದಯಿ ಆಡಳಿತಗಾರ ದೆಹಲಿಯ ಸಿಂಹಾಸನಕ್ಕೆ ಮುತ್ತಿಗೆ ಹಾಕಿದನು. ದೆಹಲಿಯನ್ನು ಆಳುತ್ತಿದ್ದ ಅವನ ಚಿಕ್ಕಪ್ಪ ಜಲಾಲುದ್ದೀನನನ್ನು ಪದಚ್ಯುತಗೊಳಿಸಿ ತಾನು ಗದ್ದುಗೆಯನ್ನು ಅಲಂಕರಿಸಿದ. ನೆರೆಯ ಸಾಮ್ರಾಜ್ಯಗಳ ರಾಜರನ್ನು ನಿಗ್ರಹಿಸಿದ, ಈ ಮಹತ್ವಾಕಾಂಕ್ಶಿ ಶೀಗ್ರದಲ್ಲೇ ತನ್ನ ರಾಜ್ಯವನ್ನು ವಿಸ್ತರಿಸಿದ. ಉತ್ತರ ಆಪ್ಗಾನಿಸ್ತಾನದಿಂದ ದಕ್ಶಿಣ ಡೆಕ್ಕನ್ ಪರ‍್ಯಾಯ ದ್ವೀಪದವರೆಗೂ ತನ್ನ ಸಾಮ್ರಾಜ್ಯ ವಿಸ್ತಾರವಾದ ಹಿನ್ನಲೆಯಲ್ಲಿ ತನ್ನ ಕಜಾನೆಯನ್ನು ಬರ‍್ತಿ ಮಾಡಿಕೊಂಡು ಸಂಪದ್ಬರಿತನಾಗಿದ್ದ.

ಇತಿಹಾಸಕಾರರ ದ್ರುಶ್ಟಿಯಲ್ಲಿ ಅಲ್ಲಾವುದ್ದೀನ್ ಕಿಲ್ಜಿಯನ್ನು ಒಬ್ಬ ಅನಾಗರಿಕ, ಅಸಂಸ್ಕ್ರುತ ಕ್ರೂರಿ ರಾಜ ಎಂದೇ ಪರಿಗಣಿಸಲ್ಪಟ್ಟಿದೆ. ಏಕೆಂದರೆ ಆತನ ಕ್ರೌರ‍್ಯ ಮಿತಿಮೀರಿದ್ದು. ಈತನಿಗೆ ತಾನು ಗೆದ್ದ ರಾಜ್ಯದ ಜನರ ತಲೆ ಚಂಡಾಡುವುದೆಂದರೆ ಬಹಳ ಕುಶಿ. ಹತ್ತಾರು ಸಾವಿರ ಜನರನ್ನು ಕೊಂದು, ವಿಕ್ರುತ ಆನಂದ ಅನುಬವಿಸಿದ ರಾಜ ಅಲ್ಲಾವುದ್ದೀನ್ ಕಿಲ್ಜಿ. ತನ್ನ ಆಡಳಿತಕ್ಕೆ ಯಾರಿಂದಲಾದರೂ ಬೀತಿಯಿದೆ ಎಂಬ ಶಂಕೆ ಬಂದರೂ ಸರಿ, ಅವರನ್ನು ಮುಗಿಸುವುದರಲ್ಲೇ ಸಂಬ್ರಮಿಸುತ್ತಿದ್ದವ ಈತ. ತನ್ನ ಇಬ್ಬರು ಸೋದರಳಿಯರು ತನ್ನ ವಿರುದ್ದ ದಂಗೆ ಏಳಲು ಯೋಜನೆ ರೂಪಿಸುತ್ತಿದ್ದಾರೆ ಎಂದು ತಿಳಿದಾಗ ಮೊದಲು ಅವರ ಕಣ್ಣುಗಳನ್ನು ಕಿಳಿಸಿ, ನಂತರ ತಲೆಯನ್ನು ತುಂಡರಿಸಿದವ ಕಿಲ್ಜಿ.

ಡೆಕ್ಕನ್‍ನಲ್ಲಿನ ಒಂದು ದೊಡ್ಡ ಗೆಲುವಿನ ನಂತರ ಕಿಲ್ಜಿ ತನ್ನ ಈ ವಿಜಯದ ಕುರುಹಾಗಿ, ಕುತುಬ್ ಮಿನಾರ‍್‌ನಂತೆಯ ಬ್ರುಹತ್ ಗೋಪುರವನ್ನು ಅದಕ್ಕಿಂತ ಎತ್ತರವಾಗಿ ಹಾಗೂ ದೊಡ್ಡದಾಗಿ ಕಟ್ಟಲು ನಿರ‍್ದರಿಸಿದ. ಅವನ ಆಸೆಯಿದ್ದುದು, ಕುತುಬ್ ಮಿನಾರ‍್‌ಗಿಂತ ಎರಡು ಪಟ್ಟು ಎತ್ತರದ ಗೋಪುರದ ಕಟ್ಟುವುದು. ಜನರ ಮನದಲ್ಲಿ ಕುತ್ಬುದ್ದೀನ್ ಐಬಕ್ ನಿರ‍್ಮಿಸಿದ ಕುತುಬ್ ಮಿನಾರ‍್‌ಗಿಂತ ಅತ್ಯಂತ ಬವ್ಯ ಸ್ಮಾರಕ ಗೋಪುರ ನಿರ‍್ಮಿಸಿದವ ಅಲ್ಲಾವುದ್ದೀನ್ ಕಿಲ್ಜಿ ಎಂಬುದು ಅಚ್ಚಳಿಯದೇ ಉಳಿಯಲಿ ಎಂಬ ಹೆಬ್ಬಯಕೆ ಆತನದಾಗಿತ್ತು. ಅಂತಹ ಮೇರು ಕ್ರುತಿಯ ಯೋಜನೆಯೇ ಅಲೈ ಮಿನಾರ್. ಇದು ಪೂರ‍್ಣಗೊಂಡಿದ್ದರೆ, ಕುತುಬ್ ಮಿನಾರ್ ಒಂದು ಪುಟ್ಟ ಗೋಪುರವಾಗುತ್ತಿತ್ತು.

1316ರಲ್ಲಿ ಅಲೈ ಮಿನಾರ್ ಗೋಪುರದ ಮೊದಲ ಹಂತ ಪೂರ‍್ಣಗೊಳ್ಳುವ ವೇಳೆಗೆ, ಕಿಲ್ಜಿಯ ಅತ್ಯಂತ ನಂಬಿಕಾರ‍್ಹ ಗುಲಾಮ ಮಲ್ಲಿಕ್ ಕಾಪೂರ್, ಅಲ್ಲಾವುದೀನ್ ಕಿಲ್ಜಿಯನ್ನು ಕೊಂದು ಹಾಕಿದ. ನಂತರ ಮಲ್ಲಿಕ್ ಕಾಪೂರ್ ರಾಜ್ಯಬಾರ ಮಾಡಿದ್ದು ಕೇವಲ ಒಂದು ತಿಂಗಳು ಮಾತ್ರ. ಇದಕ್ಕೆ ಕಾರಣ ಅಲ್ಲಾವುದ್ದೀನ್ ಕಿಲ್ಜಿಯ ಅಂಗರಕ್ಶಕ ಅವನನ್ನು ಕೊಂದಿದ್ದು. ನಂತರ ಗದ್ದುಗೆ ಏರಿದ್ದು ಅಲ್ಲಾವುದ್ದೀನ್ ಕಿಲ್ಜಿಯ ಮೊದಲ ಮಗ ಮುಬಾರಕ್ ಶಾ. ಅಪ್ಪನಂತೆ ಮಗ ಸಹ. ಈತನ ಕ್ರೌರ‍್ಯ ಎಶ್ಟಿತ್ತೆಂದರೆ, ತನ್ನ ಕಿರಿಯ ಸಹೋದರ ಗದ್ದುಗೆ ಏರದಂತೆ ತಡೆಯಲು ಅವನ ಎರಡೂ ಕಣ್ಣುಗಳನ್ನು ಕಿತ್ತು ಕುರುಡನನ್ನಾಗಿ ಮಾಡಿಸಿದ್ದ.

ತನ್ನ ತಂದೆ ಅಲ್ಲಾವುದ್ದೀನ್ ಕಿಲ್ಜಿಯ ಮಹತ್ವಾಕಾಂಕ್ಶೆಯ ಅಲೈ ಮಿನಾರ್ ಕಟ್ಟುವಲ್ಲಿ ಅವನ ಮಗ ಮುಬಾರಕ್ ಶಾ ಸಂಪೂರ‍್ಣ ಅಸಡ್ಡೆ ತೋರಿದ. ಅದ್ದರಿಂದ ಅದು ಮುಂದುವರೆಯದೇ ಮೊದಲ ಮಹಡಿಯ ಎತ್ತರಕ್ಕೆ ಸೀಮಿತವಾಯಿತು. ಕುತುಬ್ ಮಿನಾರ್ ಬಳಿ, ಉತ್ತರದಲ್ಲಿ, ಕೇವಲ ಎಂಬತ್ತು ಅಡಿ ಎತ್ತರದ ಅಲೈ ಮಿನಾರ್‍ಅನ್ನು ಈಗಲೂ ಕಾಣಬಹುದು. ಪ್ರವಾಸಿಗರಾರು ಅಲೈ ಮಿನಾರ‍್‌ಗೆ ಹೆಚ್ಚು ಪ್ರಾಶಸ್ತ್ಯ ಕೊಡುವುದಿಲ್ಲ. ಇದೇ ರೀತಿಯಲ್ಲಿ ನಮ್ಮದೇ ವಿಜಯಪುರದಲ್ಲಿನ ಗೋಲ್ ಗೊಂಬಜ್ ಎದುರು ಇರುವ, ಪೂರ‍್ಣಗೊಳ್ಳದ, ಬಾರಾ ಕಮಾನ್‍ಗೂ ಇದಕ್ಕೂ ಬಹಳ ಹೋಲಿಕೆ ಇದೆ ಅಲ್ಲವೆ?

(ಮಾಹಿತಿ ಸೆಲೆ: amusingplanet.com)

(ಚಿತ್ರ ಸೆಲೆ:  wiki)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks