ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 4ನೆಯ ಕಂತು

ಸಿ.ಪಿ.ನಾಗರಾಜ.

ಬಸವಣ್ಣ,, Basavanna

ಏನ ಮಾಡಿದಡೇನಯ್ಯಾ
ಎನ್ನಲ್ಲಿ ದಿಟವಿಲ್ಲದನ್ನಕ್ಕರ
ಏನ ಹಮ್ಮಿದಡೇನಯ್ಯಾ
ಎನ್ನಲ್ಲಿ ದಿಟವಿಲ್ಲದನ್ನಕ್ಕರ.(1388–128)

ಏನ್=ಯಾವುದು; ಏನ=ಯಾವುದನ್ನು ತಾನೆ; ಮಾಡಿದಡೆ+ಏನ್+ಅಯ್ಯಾ; ಮಾಡು=ನೆರವೇರಿಸು/ನಡೆಸು/ಆಚರಿಸು/ಕೆಲಸದಲ್ಲಿ ತೊಡಗು; ಮಾಡಿದಡೆ=ಮಾಡಿದರೆ;

ಎನ್ನ+ಅಲ್ಲಿ; ಎನ್ನ=ನನ್ನ; ನನ್ನಲ್ಲಿ=ನನ್ನ ನಡೆನುಡಿಯಲ್ಲಿ/ವರ‍್ತನೆಯಲ್ಲಿ/ವ್ಯವಹಾರದಲ್ಲಿ; ದಿಟ+ಇಲ್ಲದ+ಅನ್ನಕ್ಕರ; ದಿಟ=ಸತ್ಯ/ನಿಜ/ವಾಸ್ತವ; ಅನ್ನಕ್ಕರ=ಅಲ್ಲಿಯ ವರೆಗೆ/ಅಲ್ಲಿಯ ತನಕ; ದಿಟವಿಲ್ಲದನ್ನಕ್ಕರ=ನಿಜವಿಲ್ಲದಿರುವ ತನಕ;

ಏನ ಮಾಡಿದಡೇನಯ್ಯಾ ಎನ್ನಲ್ಲಿ ನಿಜವಿಲ್ಲದನ್ನಕ್ಕ=ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತಾಗುವಂತಹ ನಡೆನುಡಿಗಳನ್ನು ಹೊಂದದಿರುವ ವ್ಯಕ್ತಿಯು ಮಾಡುವ ಯಾವುದೇ ಬಗೆಯ ಕೆಲಸಗಳಿಂದ ಏನೊಂದು ಪ್ರಯೋಜನವಿಲ್ಲ;

ಹಮ್ಮಿದಡೆ+ಏನ್+ಅಯ್ಯಾ; ಹಮ್ಮು=ಯೋಜಿಸು/ವಿಚಾರಮಾಡು/ಕಯ್ಗೊಂಡ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲು ಹಲವು ರೀತಿಯಲ್ಲಿ ಚಿಂತಿಸುವುದು;

ಏನ ಹಮ್ಮಿದಡೇನಯ್ಯಾ ಎನ್ನಲ್ಲಿ ದಿಟವಿಲ್ಲದನ್ನಕ್ಕರ=ಒಳ್ಳೆಯ ನಡೆನುಡಿಗಳಿಲ್ಲದ ವ್ಯಕ್ತಿಯು ಹಾಕಿಕೊಳ್ಳುವ ಯಾವ ಯೋಜನೆಗಳಿಂದಲೂ ಯಾರಿಗೂ ಒಳಿತಾಗುವುದಿಲ್ಲ. ಏಕೆಂದರೆ ದಿಟದ ನಡೆನುಡಿಗಳಿಲ್ಲದ ವ್ಯಕ್ತಿಯ ಜೀವನವು ಸುಳ್ಳು/ಕಪಟತನದಿಂದ ಕೂಡಿರುತ್ತದೆ.

ಒಳಗೆ ಕುಟಿಲ ಹೊರಗೆ ವಿನಯವಾಗಿ
ಭಕ್ತರೆನಿಸಿಕೊಂಬವರ
ಬಲ್ಲನೊಲ್ಲನಯ್ಯಾ ಲಿಂಗವು
ಅವರು ಶಿವಪಥಕ್ಕೆ ಸಲ್ಲರು ಸಲ್ಲರಯ್ಯಾ.(96–18)

ಒಳಗೆ=ಮನಸ್ಸಿನಲ್ಲಿ/ಚಿತ್ತದಲ್ಲಿ/ಅಂತರಂಗದಲ್ಲಿ; ಕುಟಿಲ=ಮೋಸ/ವಂಚನೆ/ತಳುಕುಬಳುಕಿನ ನಡೆನುಡಿ; ಹೊರಗೆ=ಬಹಿರಂಗದಲ್ಲಿ/ನಿತ್ಯ ಜೀವನದ ವ್ಯವಹಾರಗಳಲ್ಲಿ/ಇತರರ ಒಡನಾಟದಲ್ಲಿ;

ಭಕ್ತರ್+ಎನಿಸಿಕೊಂಬವರ; ಭಕ್ತ=ಒಳ್ಳೆಯ ನಡೆನುಡಿಗಳೇ ದೇವರನ್ನು ಒಲಿಸಿಕೊಳ್ಳುವ ಆಚರಣೆಯೆಂದು ತಿಳಿದುಕೊಂಡು ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುತ್ತಿರುವ ವ್ಯಕ್ತಿ; ಎನ್=ಹೇಳು/ನುಡಿ; ಎನಿಸು=ಎಂದು ಹೇಳುವ ಹಾಗೆ ಮಾಡು; ಎನಿಸಿಕೊಂಬವರ=ಎನಿಸಿಕೊಳ್ಳುವವರನ್ನು/ಎಂದು ಕರೆಯಿಸಿಕೊಳ್ಳುವವರನ್ನು;

ಬಲ್ಲನ್+ಒಲ್ಲನ್+ಅಯ್ಯಾ; ಬಲ್=ತಿಳಿ/ಅರಿ; ಬಲ್ಲನ್=ತಿಳಿದಿರುವನು/ಅರಿತಿರುವನು; ಒಲ್=ಮೆಚ್ಚು/ಒಪ್ಪು/ಸಮ್ಮತಿಸು; ಒಲ್ಲನ್=ನಿರಾಕರಿಸುತ್ತಾನೆ/ತಿರಸ್ಕರಿಸುತ್ತಾನೆ/ತನ್ನವರೆಂದು ಮೆಚ್ಚುವುದಿಲ್ಲ; ಲಿಂಗ=ಈಶ್ವರ/ಶಿವ/ದೇವರು;

ಅವರು=ಒಳಗೊಂದು ಹೊರಗೊಂದು ಬಗೆಯ ನಡೆನುಡಿಯುಳ್ಳವರು/ಬಾಯಲ್ಲಿ ಒಳಿತನ್ನು ಹೇಳುತ್ತ, ಕಯ್ಯಲ್ಲಿ ಕೆಟ್ಟದ್ದನ್ನು ಮಾಡುತ್ತಿರುವ ವ್ಯಕ್ತಿಗಳು; ಶಿವ=ದೇವರು/ಈಶ್ವರ; ಪಥ=ದಾರಿ/ಮಾರ‍್ಗ/ಹಾದಿ; ಶಿವಪಥ=ಒಳ್ಳೆಯ ನಡೆನುಡಿಯಲ್ಲಿ ಬದುಕನ್ನು ನಡೆಸುವುದು; ಸಲ್=ಒಪ್ಪಿಗೆಯಾಗು/ಯೋಗ್ಯವಾಗಿರು/ತಕ್ಕುದಾಗಿರು/ಸಮ್ಮತವಾಗು; ಸಲ್ಲರು=ಒಪ್ಪಿಗೆಯಾಗುವುದಿಲ್ಲ/ಯೋಗ್ಯರಾಗುವುದಿಲ್ಲ/ತಕ್ಕವರು ಎನಿಸುವುದಿಲ್ಲ; ಸಲ್ಲರ್+ಅಯ್ಯಾ;

ಅವರು ಶಿವಪಥಕ್ಕೆ ಸಲ್ಲರು=ಅಂತರಂಗದ ಮನದಲ್ಲಿ ಸಹಮಾನವರಿಗೆ ಮತ್ತು ಸಮಾಜಕ್ಕೆ ಕೆಡುಕನ್ನು ಮಾಡುವ ಒಳಮಿಡಿತಗಳಿಂದ ಕೂಡಿ, ಬಹಿರಂಗದಲ್ಲಿ ಒಳ್ಳೆಯವರಂತೆ ನಟಿಸುವ ವ್ಯಕ್ತಿಗಳು ಶಿವನ ಒಲವಿಗೆ/ಕರುಣೆಗೆ ಪಾತ್ರರಾಗುವುದಿಲ್ಲ.

ಓದಿನ ಹಿರಿಯರು ವೇದದ ಹಿರಿಯರು
ಶಾಸ್ತ್ರದ ಹಿರಿಯರು ಪುರಾಣದ ಹಿರಿಯರು
ವೇಷದ ಹಿರಿಯರು ಭಾಷೆಯ ಹಿರಿಯರು
ಇವರೆಲ್ಲರು
ತಮ್ಮ ತಮ್ಮನೆ ಮೆರೆದರಲ್ಲದೆ
ನಿಮ್ಮ ಮೆರೆದುದಿಲ್ಲ. (1115–101)

ಓದು=ಕಲಿ/ಲಿಪಿರೂಪದ ಬರಹದಲ್ಲಿನ ವಿಚಾರಗಳನ್ನು ತಿಳಿಯುವುದು; ಹಿರಿ=ದೊಡ್ಡದು/ಮಿಗಿಲಾದುದು; ಹಿರಿಯರು=ವಯಸ್ಸಿನಲ್ಲಿ ದೊಡ್ಡವರು/ಹೆಚ್ಚಾಗಿ ತಿಳಿದವರು/ಲೋಕಜೀವನದ ಆಗುಹೋಗುಗಳನ್ನು ಚೆನ್ನಾಗಿ ತಿಳಿದವರು;

ಓದಿನ ಹಿರಿಯರು=ನೂರಾರು ಹೊತ್ತಿಗೆಗಳನ್ನು ಓದಿ, ಅಪಾರವಾದ ತಿಳುವಳಿಕೆಯನ್ನು/ಅರಿವನ್ನು ತಮ್ಮದಾಗಿಸಿಕೊಂಡಿರುವವರು;

ವೇದ=ಅರಿವು/ತಿಳುವಳಿಕೆ/ ಇಂಡಿಯಾದೇಶದಲ್ಲಿದ್ದ ಪ್ರಾಚೀನ ಜನಸಮುದಾಯದವರು ನಿಸರ‍್ಗ ದೇವತೆಗಳನ್ನು ಪೂಜಿಸುತ್ತಿದ್ದ ಆಚರಣೆಗಳ ವಿವರವನ್ನು ಒಳಗೊಂಡ ರುಗ್ವೇದ-ಯಜುರ‍್ವೇದ-ಅತರ‍್ವಣ ವೇದ-ಸಾಮವೇದ ಎಂಬ ನಾಲ್ಕು ವೇದಗಳು;

ವೇದದ ಹಿರಿಯರು=ನಾಲ್ಕು ವೇದಗಳನ್ನು ಚೆನ್ನಾಗಿ ಓದಿ ಕರಗತ ಮಾಡಿಕೊಂಡಿರುವ ವ್ಯಕ್ತಿಗಳು;

ಶಾಸ್ತ್ರ=ದೇವತೆಗಳ ಪೂಜೆಯಲ್ಲಿ ಅನುಸರಿಸಬೇಕಾದ ಸಂಪ್ರದಾಯಗಳನ್ನು ಮತ್ತು ಜನಸಮುದಾಯದ ಹುಟ್ಟು/ಮದುವೆ/ಸಾವಿನ ಸನ್ನಿವೇಶಗಳಲ್ಲಿ ಮಾಡಬೇಕಾದ ಆಚರಣೆಗಳನ್ನು ವಿವರಿಸುವ ಹೊತ್ತಿಗೆ;

ಶಾಸ್ತ್ರದ ಹಿರಿಯರು=ಪೂಜೆಯ ಆಚರಣೆಗಳಲ್ಲಿ ಪರಿಣಿತರಾದವರು;

ಪುರಾಣ=ಜಗತ್ತಿನ ಹುಟ್ಟು, ಜೀವರಾಶಿಗಳ ಉಗಮ, ದೇವರ ಇರುವಿಕೆ ಮತ್ತು ಮಾನವ ಸಮುದಾಯದ ಬೆಳವಣಿಗೆಯ ಬಗ್ಗೆ ಜನಮನದ ಕಲ್ಪನೆಯಲ್ಲಿ ರೂಪುಗೊಂಡಿರುವ ಸಂಗತಿಯನ್ನೊಳಗೊಂಡ ಕತೆ. ಇಂಡಿಯಾದ ಜನಸಮುದಾಯದ ಮನದಲ್ಲಿ ಹದಿನೆಂಟು ಪುರಾಣಗಳು ರೂಪುಗೊಂಡಿವೆ;

ಪುರಾಣದ ಹಿರಿಯರು=ಹದಿನೆಂಟು ಪುರಾಣಗಳ ಬಗ್ಗೆ ಚೆನ್ನಾಗಿ ಅರಿತವರು;

ವೇಷ=ಮಯ್ಯ ಮೇಲೆ ಉಟ್ಟುಕೊಳ್ಳುವ ಉಡುಗೆ/ಬಟ್ಟೆ ಮತ್ತು ತೊಟ್ಟುಕೊಳ್ಳುವ ತೊಡುಗೆ/ಒಡವೆ;

ವೇಷದ ಹಿರಿಯರು=ತಾವು ಉಡುವ ಬಟ್ಟೆಬರೆಗಳಿಂದ ಮತ್ತು ತೊಡುವ ಒಡವೆ ವಸ್ತುಗಳಿಂದಲೇ ಜನರ ಮುಂದೆ ತಮ್ಮನ್ನು ತಾವು ‘ದೇವ ಮಾನವರು/ಜಾತಿ ಜಗದ್ಗುರುಗಳು/ಸಮಾಜದ ಹಿತವನ್ನು ಕಾಪಾಡುವವರು’ ಎಂದು ತೋರಿಸಿಕೊಳ್ಳುವ/ಬಿಂಬಿಸಿಕೊಳ್ಳುವ ವ್ಯಕ್ತಿಗಳು;

ಇವರ್+ಎಲ್ಲರು; ತಮ್ಮ ತಮ್ಮನೆ=ವ್ಯಕ್ತಿಯಾಗಿ ತಮ್ಮನ್ನು ಕುರಿತು ಮಾತ್ರ/ತಮ್ಮೊಬ್ಬರನ್ನು; ಮೆರೆ=ಇತರರ ಮುಂದೆ ತಮ್ಮನ್ನು ತಾವು ಹೊಗಳಿಕೊಳ್ಳುವುದು/ದೊಡ್ಡವರೆಂದು ಹೇಳಿಕೊಳ್ಳುವುದು/ತಾವು ಕಲಿತಿರುವ ವಿದ್ಯೆಯನ್ನು ಮತ್ತು ತಮ್ಮ ಮಾತಿನ ಕುಶಲತೆಯನ್ನು ಆಡಂಬರದಿಂದ ತೋರಿಸಿಕೊಳ್ಳುವುದು/ಅಹಂಕಾರದಿಂದ ಬೀಗುವುದು;

ನಿಮ್ಮ=ಶಿವ/ಈಶ್ವರ/ಒಳ್ಳೆಯ ನಡೆನುಡಿಗಳ ಸಂಕೇತವಾದ ದೇವರಾದ ಕೂಡಲಸಂಗಮನನ್ನು; ಮೆರೆದುದು+ಇಲ್ಲ;

ನಿಮ್ಮ ಮೆರೆಯುವುದು ಎಂದರೆ ನಿತ್ಯ ಜೀವನದಲ್ಲಿ ವ್ಯಕ್ತಿಯು ಒಳ್ಳೆಯ ನಡೆನುಡಿಗಳಿಂದ ಬಾಳುತ್ತ, ತನ್ನ ಒಳಿತಿನ ಜತೆಜತೆಗೆ ಸಹಮಾನವರ ಮತ್ತು ಸಮಾಜದ ಹಿತವನ್ನು ಕಾಪಾಡುವುದು. ಶಿವಶರಣಶರಣೆಯರ ಪಾಲಿನ ದೇವರು ಮಣ್ಣು/ಮರ/ಕಲ್ಲು/ಲೋಹದಿಂದ ಮಾಡಿದ ವಿಗ್ರಹ/ಮೂರ‍್ತಿಯಾಗಿರಲಿಲ್ಲ. ವ್ಯಕ್ತಿಯು ತನ್ನ ನಿತ್ಯದ ಬದುಕಿನಲ್ಲಿ ಆಚರಿಸುವ ಒಳ್ಳೆಯ ನಡೆನುಡಿಯೇ ಅವರಿಗೆ ದೇವರಾಗಿತ್ತು.

ನಿಮ್ಮ ಮೆರೆದುದಿಲ್ಲ=ಸಮಾಜದಲ್ಲಿ ತಮ್ಮನ್ನು ತಾವು ದೊಡ್ಡವರು/ಹಿರಿಯರು ಎಂದು ತೋರಿಸಿಕೊಳ್ಳುತ್ತಿರುವ/ಹೇಳಿಕೊಳ್ಳುತ್ತಿರುವ ವ್ಯಕ್ತಿಗಳಲ್ಲಿ ಬಹುತೇಕ ಮಂದಿ ತಮ್ಮ ದಿನನಿತ್ಯದ ಜೀವನದಲ್ಲಿ ಒಳ್ಳೆಯ ನಡೆನುಡಿಗಳಿಂದ ಬಾಳುತ್ತಿಲ್ಲ.

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: