ಇಳಿಸಂಜೆಯ ಬದುಕಿನ ಕತೆಗಳು

ವೆಂಕಟೇಶ ಚಾಗಿ.

ಅಜ್ಜ-ಅಜ್ಜಿ, old aged people

ಸ್ವಾವಲಂಬಿ

ಆ ಅಜ್ಜಿಯ ವಯಸ್ಸು ಸುಮಾರು ಎಪ್ಪತ್ತು ಇರಬಹುದು. ತಲೆಯ ಮೇಲೆ ತರಕಾರಿ ಬುಟ್ಟಿಯನ್ನು ಹೊತ್ತುಕೊಂಡು “ತರಕಾರಿಯವ್ವೊ” ಎಂದು ಮೆಲುದನಿಯಿಂದ ಕೂಗುತ್ತಾ, ಮೆಲ್ಲನೆ ಹೆಜ್ಜೆ ಹಾಕುತ್ತಾ ನಮ್ಮ ಓಣಿಯ ಮೂಲಕ ಹಾದು ಹೋಗುವ ಅಜ್ಜಿ ಎಲ್ಲರಿಗೂ ಚಿರಪರಿಚಿತ. ಪ್ರತಿದಿನ ಬೆಳಗಿನ ಹೊತ್ತಿನಲ್ಲಿ ಪಕ್ಕದ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಮಾಡಿ ಉಳಿದ ತರಕಾರಿಯನ್ನು ಹೊತ್ತು ಸಾಗುತ್ತಾ, ಮನೆ ಸೇರುವ ಮುನ್ನ ಅದನ್ನೆಲ್ಲಾ ಮಾರಾಟ ಮಾಡುವ ಕಾಯಕ ಆ ಅಜ್ಜಿಯದು. ಉಳಿದ ತರಕಾರಿಯಾದ್ದರಿಂದ ಓಣಿಯ ಮಹಿಳೆಯರು ಜಾಸ್ತಿನೆ ಚೌಕಾಸಿ ಮಾಡಿ ತರಕಾರಿ ಕೊಳ್ಳುತ್ತಿದ್ದರು. ಕೆಲವರು “ನಿನಗ್ಯಾಕೆ ಅಜ್ಜಿ ಈ ವ್ಯಾಪಾರ ಎಲ್ಲಾ” ಎಂದಾಗ ಅಜ್ಜಿ ಹೇಳುತ್ತಿದ್ದುದು ಇಶ್ಟೇ, “ಶಕ್ತಿ ಇರೋತನಕ ದುಡಿಬೇಕವ್ವ” ಎಂಬುದು. ಇದು ಅಜ್ಜಿಯ ರೆಡಿಮೇಡ್ ಉತ್ತರ.

ಒಂದೆರಡು ದಿನ ಅಜ್ಜಿ ಕಾಣೆಯಾಗಿದ್ದಳು. ಅಜ್ಜಿಯ ದನಿ ಆ ಎರಡು ದಿನಗಳ ಕಾಲ ಯಾರಿಗೂ ಕೇಳಿಸಲಿಲ್ಲ. ಓಣಿಯಲ್ಲಿ ಎರಡು ಮೂರು ಜನ ತರಕಾರಿ ಮಾರುವವರು ಬಂದು ಹೋಗುತ್ತಿದ್ದರಿಂದ ಯಾರೂ ಅಜ್ಜಿಯ ಬಗ್ಗೆ ಚಿಂತಿಸಿರಲಿಲ್ಲ. ಮೂರು ದಿನಗಳ ನಂತರ ಅಜ್ಜಿಯ ದನಿ ಕೇಳಿಸಿತು. ಕೆಲವರು ತರಕಾರಿ ಕೊಳ್ಳುವ ನೆಪದಲ್ಲಿ ಅಜ್ಜಿಯ ಗೈರು ಹಾಜರಿಯ ಬಗ್ಗೆ ವಿಚಾರಿಸಿದರು. ಅಜ್ಜಿ ತಾನು ಕೂಡಿಟ್ಟ ಹಣದಲ್ಲಿ ಒಂದು ಸಣ್ಣ ಮನೆ ಕರೀದಿಸಿರುವುದಾಗಿ, ಆ ಮನೆಗೆ ತನ್ನ ಸಾಮಾನುಗಳನ್ನು ಸಾಗಿಸಿರುವುದಾಗಿ ಹೇಳಿದಳು. “ಅಜ್ಜಿ, ಈ ಇಳಿವಯಸ್ಸಿನಲ್ಲಿ ಮಕ್ಕಳ ಜೊತೆ ಇರುವುದು ಬಿಟ್ಟು ಇದೆಲ್ಲಾ ಬೇಕಾ ನಿಂಗೆ?” ಎಂದು ಕೆಲವರು ಪ್ರಶ್ನೆ ಹಾಕಿದಾಗ, “ಅವರನ್ನೆಲ್ಲಾ ನಂಬಿಕೊಂಡಿರೊಕಾಗಲ್ಲ” ಎನ್ನುತ್ತಾ ಅಜ್ಜಿ ಮುಂದಿನ ಓಣಿಗೆ ಹೆಜ್ಜೆ ಹಾಕಿದಳು. ಅಜ್ಜಿಯ ಮನದ ಮಾತುಗಳು ಹಾಗೇ ಉಳಿದವು.

ಇಳಿವಯಸ್ಸಿನಲ್ಲೂ ಅಜ್ಜಿ ದುಡಿಯುತ್ತಿರುವುದನ್ನು ಕಂಡು ಕೆಲವರು ಬೇಶ್ ಎಂದರೆ ಮತ್ತೆ ಕೆಲವರು “ಅಜ್ಜಿಗೆ ಹೊಂದಾಣಿಕೆ ಕೊರತೆ ಅನಿಸುತ್ತೆ ಅದಕ್ಕೆ ಮಕ್ಕಳಿಂದ ದೂರ ಇದ್ದಾಳೆ” ಎಂದುಕೊಂಡರು. ಇವೆಲ್ಲವನ್ನು ಕೇಳಿಸಿಕೊಂಡ ಅಜ್ಜಿಯ ಮೌನ ಅಜ್ಜಿಯನ್ನು ಹಿಂಬಾಲಿಸುತ್ತಿತ್ತು.

ಮರಗಳೇ ಮಕ್ಕಳು

ಆ ಊರಿನ ಉದ್ಯಾನವನದಲ್ಲಿ ಒಬ್ಬ ವಯಸ್ಸಾದ ವ್ಯಕ್ತಿಯೊಬ್ಬರು ಪ್ರತಿದಿನ ಅಲ್ಲಿರುವ ಗಿಡಗಳಿಗೆ ನೀರು ಹಾಕುತ್ತಾ ಅಲ್ಲಿ ಬಿದ್ದಿರುವ ಕಸಕಡ್ಡಿಗಳನ್ನು ಸ್ವಚ್ಚಗೊಳಿಸುತ್ತಾ ಉದ್ಯಾನವನದ ಸಣ್ಣ ಪುಟ್ಟಕೆಲಸಗಳನ್ನು ಮಾಡುತ್ತಾ ಎಲ್ಲರಿಗೆ ಚಿರಪರಿಚಿತನಾಗಿದ್ದರು. “ಇಂತಹ ಇಳಿವಯಸ್ಸಿನಲ್ಲೂ ಈ ಕೆಲಸ ಈ ಮುದುಕನಿಗೆ ಬೇಕೆ?” ಎಂದು ಕೆಲವರು ಹೀಯಾಳಿಸುತ್ತಿದ್ದರು. ಮತ್ತೆ ಕೆಲವರು ‘ಇವನೆಲ್ಲೋ ಹುಚ್ಚ’ ಇರಬೇಕು ಎನ್ನುತ್ತಿದ್ದರು. ಮತ್ತೆ ಕೆಲವರು ಆ ವಯಸ್ಸಾದ ವ್ಯಕ್ತಿಯ ಕೆಲಸವನ್ನು ಕಂಡು, ಆ ವ್ಯಕ್ತಿಯನ್ನು ಪ್ರಶಂಸಿಸುತ್ತಿದ್ದರು. ಕೆಲವರು ಯಾರನ್ನು ಲೆಕ್ಕಿಸದೇ ತಮ್ಮ ಪಾಡಿಗೆ ತಾವು ತೆರಳುತ್ತಿದ್ದರು.

ಒಬ್ಬ ಯುವಕನಿಗೆ ಆ ವಯಸ್ಸಾದ ವ್ಯಕ್ತಿಯ ಬಗ್ಗೆ ತಿಳಿಯುವ ಕುತೂಹಲ ಉಂಟಾಗಿ ಹತ್ತಿರಬಂದು ಅಜ್ಜನ ಪೂರ‍್ವಾಪರವನ್ನು ವಿಚಾರಿಸತೊಡಗಿದ. ಆಗ ಆ ಅಜ್ಜ “ತುಂಬಾ ವರುಶಗಳ ಹಿಂದೆ, ನಾನು ಸೇವಕನಾಗಿ ಸೇರಿಕೊಂಡು ಈ ಉದ್ಯಾನವನದಲ್ಲಿ ಕಾರ‍್ಯ ನಿರ‍್ವಹಿಸುತ್ತಿದ್ದೆ. ಆ ದಿನಗಳಲ್ಲಿ ನಾನು ಈ ಉದ್ಯಾನವನಕ್ಕಾಗಿ ತುಂಬಾ ಬೆವರು ಸುರಿಸಿದ್ದೇನೆ. ಈ ಎಲ್ಲಾ ಗಿಡಮರಗಳನ್ನು ನಾನೇ ಬೆಳೆಸಿದ್ದೇನೆ. ನನ್ನ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಇವುಗಳನ್ನು ಬೆಳೆಸಿದ್ದೇನೆ. ನನಗೆ ನಿವ್ರುತ್ತಿ ಆಗಿ ಹನ್ನೆರಡು ವರ‍್ಶಗಳಾದವು. ನನ್ನ ಮಗ ಇದೇ ಉದ್ಯಾನವನದ ಉಸ್ತುವಾರಿ ಆಪೀಸರ್ ಆಗಿ ಕೆಲಸ ಮಾಡುತ್ತಿದ್ದಾನೆ. ನಾನು ನಿವ್ರುತ್ತಿ ಆದರೂ ನನಗೆ ಈ ಉದ್ಯಾನವನದೊಂದಿಗೆ ಬಿಡಿಸಲಾರದ ನಂಟಿದೆ. ಮಕ್ಕಳ ಹಾಗೆ ನಾನು ಬೆಳಿಸಿದ ಈ ಗಿಡಮರಗಳನ್ನು ನಾನು ಇರುವವರೆಗೂ ನಾನೆಂದೂ ಬಿಟ್ಟು ಹೋಗುವುದಿಲ್ಲ. ನನ್ನ ಮನೆಯಲ್ಲಿರುವ ಮಕ್ಕಳಿಗಿಂತ ಉದ್ಯಾನವನದ ಮಕ್ಕಳೇ ತುಂಬಾ ಸಂತೋಶವನ್ನು ಕೊಡುತ್ತವೆ. ನಾನಿಲ್ಲಿ ಮಾಣಿಯಾಗಿ ಕೆಲಸ ನಿರ‍್ವಹಿಸುತ್ತಿಲ್ಲ. ಈ ಮಕ್ಕಳ ಪೋಶಕನಾಗಿ ನಾನಿಲ್ಲಿದ್ದೇನೆ” ಎಂದಾಗ ಆ ಯುವಕ ಮೌನಕ್ಕೆ ಶರಣಾದ.

( ಚಿತ್ರ ಸೆಲೆ : quora.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: