ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 6ನೆಯ ಕಂತು

ಸಿ.ಪಿ.ನಾಗರಾಜ.

ಬಸವಣ್ಣ,, Basavanna

ಕೋಣನ ಹೇರಿಂಗೆ
ಕುನ್ನಿ ಬಸುಕುತ್ತಬಡುವಂತೆ
ತಾವೂ ನಂಬರು
ನಂಬುವರನೂ ನಂಬಲೀಯರು
ತಾವೂ ಮಾಡರು
ಮಾಡುವರನೂ ಮಾಡಲೀಯರು. (664-61)

( ಕೋಣ=ಗಂಡು ಎಮ್ಮೆ; ಹೇರು=ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಬೇಕಾದ ವಸ್ತುಗಳಿಂದ ತುಂಬಿರುವ ಗಾಡಿ/ಬಂಡಿ; ಹೇರಿಂಗೆ=ಹೇರಿಗೆ/ಗಾಡಿಗೆ/ಬಂಡಿಗೆ; ಕೋಣನ ಹೇರು=ಕೋಣಗಳನ್ನು ಕಟ್ಟಿರುವ ಬಂಡಿ/ಗಾಡಿ; ಕುನ್ನಿ=ನಾಯಿ; ಬಸುಕುತ್ತ+ಪಡು+ಅಂತೆ; ಬಸುಕುತ್ತ=ನಾಲಗೆಯನ್ನು ಹೊರಚಾಚಿ ಜೊಲ್ಲನ್ನು ಸುರಿಸುತ್ತ, ಬಿಡುತ್ತಿರುವ ಉಸಿರನ ಲಯಕ್ಕೆ ತಕ್ಕಂತೆ ದನಿಯನ್ನು ಹೊರಡಿಸುತ್ತ; ಪಡು=ಹೊಂದು; ಅಂತೆ=ಹಾಗೆ/ಆ ರೀತಿ/ಆ ಬಗೆ;

ಕೋಣನ ಹೇರಿಂಗೆ ಕುನ್ನಿ ಬಸುಕುತ್ತಬಡುವಂತೆ=ತುಂಬಿದ ಬಂಡಿಯನ್ನು ಕೋಣಗಳು ಶ್ರಮದಿಂದ ಎಳೆದುಕೊಂಡು ಮುಂದೆ ಮುಂದೆ ಸಾಗುತ್ತಿರುವಾಗ, ಬಂಡಿಯ ಎರಡು ಚಕ್ರಗಳ ನಡುವಣ ಜಾಗದಲ್ಲಿ ನಡೆದು ಬರುತ್ತಿರುವ ನಾಯಿಯು ತಾನೇ ಬಂಡಿಯನ್ನು ಎಳೆಯುತ್ತಿದೆಯೇನೋ ಎನ್ನುವಂತೆ ಏದುಸಿರನ್ನು ಬಿಡುತ್ತಿರುತ್ತದೆ;

ತಾವೂ=ವ್ಯಕ್ತಿಗಳು; ನಂಬು=ನೆಚ್ಚು/ನೆಮ್ಮು/ವಿಶ್ವಾಸವಿಡು; ನಂಬರು=ನಂಬುವುದಿಲ್ಲ; ನಂಬುವರನೂ=ನಂಬುವವರನ್ನೂ/ವಿಶ್ವಾಸವಿಟ್ಟಿರುವವರನ್ನು; ನಂಬಲ್+ಈಯರು; ನಂಬಲ್=ನಂಬಿಕೆಯಿಟ್ಟುಕೊಂಡು ಬಾಳಲು; ಈ=ಕೊಡು/ಅವಕಾಶವನ್ನು ನೀಡು; ಈಯರು=ಕೊಡುವುದಿಲ್ಲ/ಬಿಡುವುದಿಲ್ಲ;

ತಾವೂ ನಂಬರು ನಂಬುವರನೂ ನಂಬಲೀಯರು=ತಾವು ನಂಬುವುದಿಲ್ಲ, ನಂಬಿದವರನ್ನು ಅವರ ನಂಬಿಕೆಯಂತೆ ಬಾಳಲು ಬಿಡದೆ, ಅಡ್ಡಗಾಲು ಹಾಕುತ್ತಾರೆ;

ಮಾಡು=ಕೆಲಸದಲ್ಲಿ ತೊಡಗು/ನಿರ‍್ವಹಿಸು/ನಡೆಸು; ಮಾಡರು=ಮಾಡುವುದಿಲ್ಲ ; ಮಾಡುವರನೂ=ಮಾಡುವವರನ್ನೂ; ಮಾಡಲ್+ಈಯರು; ಮಾಡಲ್=ಕೆಲಸದಲ್ಲಿ ತೊಡಗಲು/ಕೆಲಸವನ್ನು ಮಾಡಿ ಮುಗಿಸಲು;

ತಾವೂ ಮಾಡರು ಮಾಡುವರನೂ ಮಾಡಲೀಯರು=ತಾವು ಒಳ್ಳೆಯ ಕೆಲಸಗಳನ್ನು ಮಾಡುವುದಿಲ್ಲ. ಒಳ್ಳೆಯ ಕೆಲಸದಲ್ಲಿ ತೊಡಗಲು ಹೊರಟವರಿಗೆ ಅಡೆತಡೆಗಳನ್ನು ಒಡ್ಡುತ್ತಾರೆ;

ಕುಟುಂಬದ ನೆಲೆ/ದುಡಿಮೆಯ ನೆಲೆ/ಸಾರ‍್ವಜನಿಕ ನೆಲೆಗಳಲ್ಲಿ ವ್ಯಕ್ತಿಯು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾಗ, ಅದನ್ನು ಕಂಡು ಕರುಬಿ, ಆ ಕೆಲಸ ನಡೆಯದಂತೆ ತಡೆಯಲು/ಕೆಲಸ ಮಾಡುವ ವ್ಯಕ್ತಿಯ ಕಸುವನ್ನು ಕುಗ್ಗಿಸಲು ಕೆಲವರು ಪ್ರಯತ್ನಿಸುತ್ತಾರೆ. ಇಂತಹವರು ತಾವಾಗಿಯೇ ಒಳ್ಳೆಯ ಕೆಲಸವನ್ನು ಮಾಡಲು ಮುಂದೆ ಬರುವುದಿಲ್ಲ; ಮಾಡುವವರನ್ನು ಮಾಡಲು ಬಿಡುವುದಿಲ್ಲ. ಆದರೆ ನಡೆಯುವ ಎಲ್ಲಾ ಕೆಲಸಗಳು ತಮ್ಮಿಂದಲೇ ಆಗುತ್ತಿವೆ ಎಂಬ ರೀತಿಯ ಮಾತುಕತೆಯಲ್ಲಿ ತೊಡಗಿರುತ್ತಾರೆ. ಇಂತಹ ವ್ಯಕ್ತಿಗಳ ನೀಚತನದ ನಡೆನುಡಿಯನ್ನು ಕುರಿತು ಕೋಣನ ಬಂಡಿಯ ನೆರಳಿನಲ್ಲಿ ಸಾಗುತ್ತಿರುವ ನಾಯಿಯ ರೂಪಕದ ಮೂಲಕ ಹೇಳಲಾಗಿದೆ.

ಛಲಬೇಕು ಶರಣಂಗೆ
ಪರಧನವನೊಲ್ಲೆನೆಂಬ
ಛಲಬೇಕು ಶರಣಂಗೆ
ಪರಸತಿಯನೊಲ್ಲೆನೆಂಬ. (677 – 62)

ಛಲ=ಚಲ/ಗಟ್ಟಿ ಮನಸ್ಸು/ಕಯ್ಗೊಂಡ ಕೆಲಸವನ್ನು ಮಾಡುತ್ತೇನೆ ಎಂಬ ನಂಬಿಕೆಯನ್ನು ತನ್ನಲ್ಲಿ ತಾನು ಹೊಂದಿರುವುದು; ಬೇಕು=ಅಗತ್ಯ/ಅವಶ್ಯಕ; ಛಲಬೇಕು=ಗಟ್ಟಿಯಾದ ಮನಸ್ಸನ್ನು ಹೊಂದಿರಬೇಕು/ಎಂತಹ ಸನ್ನಿವೇಶದಲ್ಲಿಯೂ ಇಬ್ಬಗೆಯ ತುಡಿತಕ್ಕೆ ಮನಸ್ಸು ಒಳಗಾಗಬಾರದು; ಶರಣ=ಒಳ್ಳೆಯ ನಡೆನುಡಿಗಳಿಂದ ತನ್ನ ಬದುಕನ್ನು ರೂಪಿಸಿಕೊಂಡು, ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವವನು/ಶಿವನನ್ನು ಒಲಿದವನು/ಶಿವನನ್ನು ಪೂಜಿಸುವವನು; ಶರಣಂಗೆ=ಶರಣನಿಗೆ;

ಪರ+ಧನ+ಅನ್+ಒಲ್ಲೆನ್+ಎಂಬ; ಪರ=ಇತರ/ಬೇರೆಯ/ಅನ್ಯ; ಧನ=ಹಣ/ಸಂಪತ್ತು/ಒಡವೆ ವಸ್ತು/ಆಸ್ತಿಪಾಸ್ತಿ; ಪರಧನ=ಬೇರೆಯವರ ಸಂಪತ್ತು; ಅನ್=ಅನ್ನು; ಒಲ್=ಬಯಸು/ಇಚ್ಚಿಸು; ಒಲ್ಲೆನ್=ನಾನು ಬಯಸುವುದಿಲ್ಲ/ನನಗೆ ಬೇಕಾಗಿಲ್ಲ; ಎಂಬ=ಎನ್ನುವ; ಪರ+ಸತಿ+ಅನ್+ಒಲ್ಲೆನ್+ಎಂಬ; ಸತಿ=ಹೆಂಡತಿ/ಮಡದಿ/ಹೆಂಗಸು/ಹೆಣ್ಣು; ಪರಸತಿ=ಬೇರೆಯವನ ಮಡದಿ/ಹೆಂಡತಿ;

ಶಿವಶರಣನಾದವನು ಸಮಾಜ ಒಪ್ಪಿತವಲ್ಲದ ಕಾಮದ ನಂಟನ್ನು ಹೊಂದಬಾರದು ಮತ್ತು ಇತರರ ಸಂಪತ್ತನ್ನು ಕಪಟತನದಿಂದ/ದಬ್ಬಾಳಿಕೆಯಿಂದ ದೋಚಬಾರದು ಎಂಬ ಕಟ್ಟಲೆಯನ್ನು ತನಗೆ ತಾನೇ ಹಾಕಿಕೊಂಡು ಬಾಳಬೇಕು.

ಜ್ಞಾನದ ಬಲದಿಂದ
ಅಜ್ಞಾನದ ಕೇಡು ನೋಡಯ್ಯಾ
ಜ್ಯೋತಿಯ ಬಲದಿಂದ
ತಮಂಧದ ಕೇಡು ನೋಡಯ್ಯಾ. (842 – 75)

ಜ್ಞಾನ=ತಿಳುವಳಿಕೆ/ಅರಿವು; ಬಲ+ಇಂದ; ಬಲ=ಶಕ್ತಿ/ಕಸುವು/ಮಹಿಮೆ/ಹಿರಿಮೆ; ಅಜ್ಞಾನ=ಅರಿವಿಲ್ಲದಿರುವಿಕೆ/ತಿಳುವಳಿಕೆಯಿಲ್ಲದಿರುವುದು; ಕೇಡು=ನಾಶ/ಅಳಿವು/ಹಾನಿ/ಇಲ್ಲವಾಗುವುದು; ನೋಡು+ಅಯ್ಯಾ; ನೋಡು=ಕಾಣು/ತಿಳಿ;

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ=ಒಳ್ಳೆಯ ಅರಿವನ್ನು ಪಡೆಯುತ್ತಿದ್ದಂತೆಯೇ ಮನದಲ್ಲಿ ನೆಲೆಮಾಡಿದ್ದ ತಪ್ಪು ತಿಳುವಳಿಕೆಯು ಇಲ್ಲವಾಗುತ್ತದೆ;

ಜ್ಯೋತಿ=ಬೆಳಗುತ್ತಿರುವ ದೀಪದಿಂದ ಹೊರಹೊಮ್ಮುತ್ತಿರುವ ಕಾಂತಿ/ಬೆಳಕು; ತಮಂಧ=ಕತ್ತಲೆ;

ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ=ಬೆಳಕು ಹರಡುತ್ತಿದ್ದಂತೆಯೇ ಕವಿದಿದ್ದ ಕತ್ತಲೆಯು ಇಲ್ಲವಾಗುತ್ತದೆ;

ಒಳ್ಳೆಯ ತಿಳುವಳಿಕೆ/ಅರಿವಿನ ನಡೆನುಡಿಗಳಿಗೆ ‘ಜ್ಯೋತಿಯನ್ನು’ ಮತ್ತು ತಪ್ಪು ತಿಳುವಳಿಕೆ/ದಡ್ಡತನ/ತಿಳಿಗೇಡಿತನದ ನಡೆನುಡಿಗಳಿಗೆ ತಮಂದವನ್ನು ರೂಪಕವಾಗಿ ಬಳಸುತ್ತಾರೆ;

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: