ಗೂಗಲಪ್ಪನಿಗೊಂದು ಶರಣು!

ಯಶವಂತ. ಚ.

ಗೂಗಲ್,, Google

ನಮ್ಮ ಕಾಲೇಜಿನಲ್ಲಿ ಏರ‍್ಪಡಿಸುತ್ತಿದ್ದ ಕನ್ನಡ ನಾಡಹಬ್ಬ ಕಾರ‍್ಯಕ್ರಮಕ್ಕೆ ಇಂಗ್ಲೀಶಿನಲ್ಲಿ ಕೆಲವೊಂದು ವಿಶಯಗಳನ್ನು ಬರೆದು, ಅದನ್ನು ‘ಗೂಗಲ್ ಟ್ರಾನ್ಸ್ಲೇಟ್’ನಲ್ಲಿ ಕನ್ನಡಕ್ಕೆ ಅನುವಾದಿಸಿ, ತಪ್ಪು ತಿದ್ದು ಎಂದು ನನಗೆ ಕಳಿಸುತ್ತಿದ್ದರು ನನ್ನ ಗೆಳೆಯರು. ನಾನು ಅದನ್ನು ಅಳೆದು ತೂಗಿ ತಿಳಿಯದ, ಅರ‍್ತವಾಗದ ಅನುವಾದದ ಪದಗಳನ್ನು ತೆಗೆದು ಸುಳುವಾಗಿ ತಿಳಿಯುವ  ಕನ್ನಡ ಪದಗಳನ್ನು ಸೇರಿಸಿ ಮರಳಿ ಕಳಿಸುತ್ತಿದ್ದೆ. ಅರೆರೆ, ಏನಿದು, ನಾವು ನಮ್ಮ ಇಡೀ ಬಾಳಲ್ಲಿ ‘ಗೂಗಲ್ಲು’ ಬಳಸದ ಚಣ ಯಾವುದಾದರೂ ಇದೆಯೇ ಅಂತ ಅನಿಸುತ್ತದೆ ಅಲ್ಲವೇ?

ಈ ‘ಗೂಗಲು’ ಎಂಬ ಜಗತ್ತಿನ ದೊಡ್ಡ ಕಂಪನಿ ಎಲ್ಲದರಲ್ಲೂ ತನ್ನ ಅದಿಪತ್ಯವನ್ನು ಸ್ತಾಪಿಸಿಯಾಗಿದೆ! ಇದನ್ನು 1998ರಲ್ಲಿ ಲ್ಯಾರಿ ಪೇಜ್(Larry Page) ಹಾಗೂ ಸರ‍್ಗೆ ಬ್ರಿನ್ (Sergey Brin) ಎಂಬಿಬ್ಬರು ಹುಟ್ಟುಹಾಕಿದರು. ಮೊದಲು ಇದು ಶುರುವಾದದ್ದು ಒಂದು ಹುಡುಕು ಬಿಣಿಗೆಯಾಗಿ (Search Engine). ‘ಗೂಗೊಲ್( Googol)’ ಎಂದರೆ, ಒಂದರ ಮುಂದೆ  100 ಸೊನ್ನೆಗಳನ್ನು ಹಾಕಿದಾಗ ಬರುವ ಸಂಕೆ. ಅಶ್ಟು ಮಟ್ಟಿನ ಮಾಹಿತಿಯನ್ನು ಒದಗಿಸಬೇಕೆಂಬುದು ಅವರ ಗುರಿಯಾಗಿತ್ತು. ಈಗಿನ ‘Google’ ಒಂದು ತಪ್ಪಿನಿಂದ ಆದ ಹೆಸರು, ಆದರೂ ಅವರು ಅದನ್ನೇ ಮುಂದುವರೆಸಿದ್ದಾರೆ.

ಒಮ್ಮೆ ನಮ್ಮ ಬಾಳಿನಲ್ಲಿ ನಾವು ಹೇಗೆಲ್ಲಾ ಗೂಗಲ್ಲು ಬಳಸುತ್ತೇವೆ, ಬಳಸಬಹುದು ನೋಡೋಣ. ಎಲ್ಲೋ ಗೊತ್ತಿಲ್ಲದ ಊರಿಗೆ ಹೋದಾಗ ಹಿಂದೆಲ್ಲಾ ಅಕ್ಕಪಕ್ಕದವರನ್ನು ಕೇಳಿ ದಾರಿ ತಿಳಿಯುವ ಬಗೆಯಿತ್ತು. ಆದರೆ ಈಗ ಹಾಗಲ್ಲ, ಕಿಸೆಯೊಳಗೆ ಕೈಹಾಕಿ ಅಲೆಯುಲಿಯೊಳಗಿನ (Mobile) ‘ಗೂಗಲ್ ಮ್ಯಾಪ್’ ತೆರೆದರೆ ಆಯ್ತು. ಎಲ್ಲಿಗೆ ಬೇಕಾದರು ಹೋಗಲು ಅದು ದಾರಿ ತೋರಿಸುತ್ತದೆ. ಬಸ್ಸಿನ ಏರ‍್ಪಾಟೇನಾದರೂ ಇದ್ದರೆ, ಅದು ಬರುವ ಗಳಿಗೆಯಿಂದ ಹಿಡಿದು ‘ಬಸ್ಸು ನಂಬರ‍್’ವರೆಗೆ ಎಲ್ಲವನ್ನೂ ನಮಗೆ ತಿಳಿಸುತ್ತದೆ. ಇನ್ನು ಶಾಲೆ-ಕಾಲೇಜುಗಳಲ್ಲಿ ಕಲಿಯುವವರಿಗಂತೂ ಗೂಗಲ್ಲು ಆ ದೇವರಿಗೆ ಸಮ. ಏನೇ ಬೇಕಾದರೂ ಗೂಗಲಿನ ಕಾಲು ಹಿಡಿದರಾಯ್ತು, ಉತ್ತರ ತಟ್ಟಂತ ಕಣ್ಣ ಮುಂದೆ!

ನಾನೇ, ಇದುವರೆಗೆ ಎಶ್ಟು ಬಾರಿ ಗೂಗಲಿನ ಮೊರೆಹೋಗಿದ್ದೇನೋ ನನಗೇ ತಿಳಿಯದು. ಪ್ರಾಜೆಕ್ಟ್, ಅಸೈನ್ಮೆಂಟು, ನಮಗೆ ಬೇಕಾದ ‘ಕೋಡ್’ ಇವುಗಳನ್ನೆಲ್ಲಾ ನೇರವಾಗಿ ಗೂಗಲಿನಿಂದ ಬಟ್ಟಿ ಇಳಿಸಿರುವುದಂತೂ ನಿಜ ಮತ್ತು ಇದೇ ನಮ್ಮ ವಾಡಿಕೆ. ಇನ್ನು ಹೆಂಗಸರಿಗೆ ಅಚ್ಚುಮೆಚ್ಚು ‘ಯು ಟ್ಯೂಬ್’. ಇದು ಎಲ್ಲರಿಗೂ ತಿಳಿದಿರುವುದು. ನನ್ನಮ್ಮನಿಗೆ ‘ಯೂ ಟ್ಯೂಬ್’ ಎಂದರೆ ಅಲ್ಲಿ ಕೇವಲ ರಂಗೋಲಿ ಮತ್ತು ಅಡುಗೆಯ ಬಗೆಗಿನ ವೀಡಿಯೋಗಳಶ್ಟೇ ಇರುವುವು ಎಂಬ ಅನಿಸಿಕೆ ಇದೆ 🙂 . ಮನೆಗೆ ಹೋದಾಗಲೆಲ್ಲಾ ನನ್ನನ್ನು ಪೀಡಿಸಿ ಅಡುಗೆ ವೀಡಿಯೋಗಳನ್ನು ನೋಡದೆ ಹೋದರೆ ಅವರಿಗೆ ನಿದ್ದೆ ಬರಲ್ಲ.

ಗೂಗಲ್ಲಿನ ಹರವು ಗೂಗಲ್ ಡ್ರೈವ್, ಗೂಗಲ್ ಮ್ಯಾಪ್, ಯೂ ಟ್ಯೂಬ್, ಗೂಗಲ್ ಪೋಟೋಸ್, ಗೂಗಲ್ ಕ್ರೋಮ್, ಗೂಗಲ್ ಟ್ರಾನ್ಸ್ಲೇಟ್, ಗೂಗಲ್ ಅಸಿಸ್ಟೆಂಟ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ಗೂಗಲ್ ಪೇ ಯಿಂದಾಗಿ ನಾವು ಎಣಿಸಲಾರದಶ್ಟು ದೊಡ್ಡದಾಗಿದೆ. . ಗೂಗಲ್ ಪೇ ಎಂಬ ಬಳಕದಿಂದ (App)  ಅಲೆಯುಲಿಗಳಿಂದಲೇ ಹಣ ಪಾವತಿಸಬಹುದಾಗಿದೆ. ಹಣಮನೆಗೆ ಹೋಗದೆ ನೇರವಾಗಿ ನಮ್ಮ ಕಾತೆಯಿಂದ, ನಮಗೆ ತಿಳಿದಿರುವವರ ಕಾತೆಗೆ ಹಣ ಕಳುಹಿಸಲು ಗೂಗಲ್ ಪೇ ನೆರವಾಗುತ್ತದೆ. ಇದಲ್ಲದೆ ಇನ್ನು ನಮಗೆ ಬೇಕಾದ ಹಲವಾರು ಮಾರಾಟಗಾರರಿಗೆ ಹಣ ಕಳಿಸಲು ಇದನ್ನು ಬಳಸಬಹುದು. ‘ಡಿಜಟಲ್ ಇಂಡಿಯಾ’ ಎಂಬ ಹೊಸ ಹಮ್ಮುಗೆಯ ಹೊಳಹಿನಲ್ಲಿ ಮೂಡಿಬಂದ ‘ಯು ಪಿ ಐ’ ಮೂಲಕ ಇದು ಕೆಲಸ ಮಾಡುತ್ತದೆ. ಹಣ ವರ‍್ಗಾವಣೆಗೆ ಮತ್ತು ಇತರ ಮಿಂಬಲೆ ಆಪ್ ಗಳ ಮೂಲಕ ಕೊಡುಕೊಳ್ಳುವಿಕೆಯನ್ನು ನಡೆಸಲು ಇದು ಬಹಳ ಉಪಕಾರಿ. ಇನ್ನು ಗೂಗಲ್ ಡ್ರೈವ್ ಕಡತಗಳ ಏರ‍್ಪಾಟಿನಿಂದ, ಕಡತಗಳ ಸಾಪ್ಟ್ ಕಾಪಿಗಳನ್ನು ಕಿಸೆಯಲ್ಲಿ ಇಟ್ಟುಕೊಳ್ಳಲು ಸಹಕಾರಿ.

ಇನ್ನು ನಾನು ಹೇಳಲೇಬೇಕೆಂದಿರುವ ವಿಶಯ ಏನೆಂದರೆ ಗೂಗಲ್ ‘ರ‍್ಯಾನ್ಕ್ ಪೇಜ್ ಅಲ್ಗಾರಿದಮ್’ ಮೇಲೆ ಕೆಲಸ ಮಾಡುವ ಹುಡುಕು ಬಿಣಿಗೆ. ಅಂದರೆ ಒಂದು ಮಿಂಬಲೆಯ ಹಾಳೆಯನ್ನು ಎಶ್ಟು ಮಂದಿ ನೋಡಿರುವರು ಎಂಬುದರ ಮೇಲೆ ಪ್ರತಿಯೊಂದು ಹಾಳೆಗೆ ಒಂದು ಸಂಕೆಯನ್ನು ಗುರುತುಮಾಡುತ್ತದೆ. ಇದು ಪ್ರತಿಯೊಬ್ಬರ ಅನಿಸಿಕೆಗಳನ್ನು ಒಳಗೊಂಡಿರುತ್ತದೆ. ‘ಗೂಗಲ್ ಟ್ರಾನ್ಸ್ಲೇಟ್’ ಎಂಬುದು ಅದನ್ನು ಬಳಸುವವರ ಅನಿಸಿಕೆಗಳ ಮೇಲೆ ಕೆಲಸ ಮಾಡುವ ಒಂದು ತಂತ್ರಾಂಶ. ಇದು ನಾವು ನೀಡುವ ಅನಿಸಿಕೆಗಳನ್ನು ಕೂಡಿಟ್ಟು ಬಳಿಕ, ನಮ್ಮ ಅನಿಸಿಕೆಗಳನ್ನು ಬಳಸಿಕೊಂಡು ತನ್ನನ್ನು ತಾನು ತಿದ್ದಿಕೊಳ್ಳುತ್ತದೆ. ಅನುವಾದಕ್ಕೆಂದು ಗೂಗಲ್ ಟ್ರಾನ್ಸ್ಲೇಟ್ ಬಳಸುವಾಗ, ಒಂದು ವೇಳೆ ಅದು ಸರಳವಾಗಿ ತಿಳಿಯದ ಪದವನ್ನು ಸೂಚಿಸಿದರೆ, ಅದರ ಬದಲಿಗೆ ಸುಳುವಾಗಿ ತಿಳಿಯುವ ಪದವನ್ನು ಅದಕ್ಕೆ ತಿದ್ದುಪಡಿಯಾಗಿ ಸೂಚಿಸಬಹುದು. ಹೀಗೆ ಬಹುಪಾಲು ಜನರು ತಿದ್ದುಪಡಿ ಹೇಳಿದರೆ ಆ ಪದ ಬದಲಾಗುವುದು. ಇದನ್ನು ಎಲ್ಲರೂ ಮಾಡೋಣ. ಏಕೆಂದರೆ ಕನ್ನಡ ಬರುವ, ಬಾರದ ಎಶ್ಟೋ ಮಂದಿ ಅನುವಾದಕ್ಕಾಗಿ ಹೆಚ್ಚಾಗಿ ಬಳಸುವುದು ಆ ನಮ್ಮಪ್ಪ ಗೂಗಲಪ್ಪನನ್ನ 🙂

( ಚಿತ್ರ ಸೆಲೆ : medium.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Lingesh B S says:

    true

ಅನಿಸಿಕೆ ಬರೆಯಿರಿ:

%d bloggers like this: