ಕತೆ : ದಾರಿ

ವಿನಯ ಕುಲಕರ‍್ಣಿ.

ತಿರುವು ದಾರಿ, Road Turn

ದಾರಿಯುದ್ದಕ್ಕೂ ಹರಡಿ ತನ್ನ ಅಸ್ತಿತ್ವವನ್ನು ದಾಟಿ ಹೋಗುತ್ತಿರುವವರ ಕಣ್ಣು ಮೂಗುಗಳನ್ನ ಆವರಿಸಿತ್ತು ಕಸದ ರಾಶಿ. ರಸ್ತೆಯ ಆರಂಬದಿಂದ ಒಂದಿಶ್ಟು ದೂರದವರೆಗೆ ಅದರದೇ ಸಾಮ್ರಾಜ್ಯ. ಬೆಂಗಳೂರಿನ ಕೆಲವೇ ಕೆಲವು ಪ್ರದೇಶಗಳಲ್ಲಿ ಹಂದಿಗಳು ಕಾಣಸಿಗುವುದುಂಟು, ಅಂತಹುದರಲ್ಲಿ ಇದೊಂದು. ಸುತ್ತಲಿನ ಹಚ್ಚ ಹಸಿರಿನ ಹೊದಿಕೆಯೇ ಅವಕ್ಕೆ ವಾಸಸ್ತಾನ. ಎದ್ದಾಕ್ಶಣ ಇನ್ನೇನು ಸ್ವಚ್ಚಂದ ಬೆಳಗು ಆಹ್ಲಾದಕತೆಯನ್ನು ಹಂಚುವ ಸಮಯ. ಆಹ್ವಾನವಿರದಿದ್ದರೂ ಸನ್ಮಾನ್ಯ ಶ್ರೀ ಹಂದಿಯವರು ಕುಟುಂಬ ಸಮೇತರಾಗಿ ಆಹಾರವನ್ನರಸುತ್ತ ವಾಯು ವಿಹಾರಕ್ಕೆ ಬರುವದು ರೂಡಿ. ಇವರೊಡನೆ ಮಿತಿ ಮೀರಿ ಬೆಳೆದ ಇಲಿಗಳ ಸಾತ್ ಬೇರೆ. ಅಶ್ಟೇನೂ ಬುದ್ದಿಯಿರುವಂತೆ ಕಾಣುವದಿಲ್ಲ ಇಲಿಗಳಿಗೆ. ದಿನಕ್ಕೆ ಕನಿಶ್ಟ ಪಕ್ಶ ಒಂದಾದರೂ ರಸ್ತೆಯನ್ನು ದಾಟ ಹೋಗಿ ಅತ್ತಿತ್ತ ಓಡಾಡುವ ವಾಹನಗಳ ಗಾಲಿಗೆ ಸಿಕ್ಕು ಇಹಲೋಕಕ್ಕೆ ಬೈ ಹೇಳುತ್ತವೆ.

ಬೆಳಗಿನ ಸೊಬಗು ಸವಿಯುವವರಿಗೆ ಇದೊಂದೇ ಸ್ವಲ್ಪ ಇರಿಸು ಮುರಿಸು, ಅಲ್ಲದೆ ಬೇರೆ ದಾರಿಯೂ ಇಲ್ಲ ಅಂದದ ಉದ್ಯಾನ ತಲುಪಲು. ಕೆರೆಯ ಸುತ್ತಳತೆಯ ದಾರಿಯಲ್ಲಿ ನಡೆಯುವ ಹಾದಿ ಸುತ್ತ ನಿರ‍್ಮಿತವಾದ ಉದ್ಯಾನವನ. ಇದೆ ಪ್ರಶಾಂತತೆಯನ್ನರಿಸಿ ಆಗೀಗ ಹಕ್ಕಿಗಳು ಬರುತ್ತವೆ. ಬೆಳಗ್ಗೆ ಐದೂವರೆಗೆ ಗೇಟ್ ಓಪನ್ ಸಾರ‍್ವಜನಿಕರಿಗೆ. ಅದಕ್ಕೂ ನಿಶ್ಟೆಯಿಂದ ಒಂದಿಶ್ಟು ಸಮಯ ಬೇಗವೇ ಬಂದು ಸುಗಳಿಗೆಯನ್ನು ಪ್ರತ್ಯಕ್ಶವಾಗಿ ನೋಡುವ ಜನರೂ ಒಂದಿಶ್ಟಿದ್ದಾರೆ. ಆರೋಗ್ಯದ ಬಗೆಗಿನ ಕಾಳಜಿಯ ಹೆಸರಿನ ವ್ಯಾಪಾರ. ಬ್ರಾಂಡುಗಳ ಬೂಟುಗಳು ಕರೀದಿ ಆದದ್ದೇ ಆದದ್ದು, ಪುಮಾ ನೈಕಿ ರೀಬೋಕ್ ಗಳಿಗೆ ತಮ್ಮ ಬ್ರಾಂಡ್ ವ್ಯಾಲ್ಯೂನ ಅರಿವಿದೆ. ಆದರೆ ಅದನ್ನು ತೊಟ್ಟು ಹೆಮ್ಮೆಯಿಂದ ಬೀಗುವ ಮನುಶ್ಯರ ಬ್ರಾಂಡ್ ಮಾತ್ರ ಇನ್ನೂ ಬಹಳ ಉತ್ಕ್ರುಶ್ಟವಾಗಬೇಕಿದೆ.

ಅಲ್ಲಿಂದ ಒಂದು ನೂರು ಹೆಜ್ಜೆಯಶ್ಟೇ ಮುಂದೆ ಹೋಗಿ ಎಡಕ್ಕೆ ತಿರುಗಿದರೆ ಸುತ್ತಲಿನ ಏರಿಯಾದಲ್ಲೆಲ್ಲ ವರ‍್ಲ್ಡ್ ಪೇಮಸ್ ಆಗಿರುವ ಟೀ ಅಂಗಡಿ. ಗಂಡ-ಹೆಂಡತಿ ಬೆಳಕು ಮೂಡುವದರೊಳಗೆ ಬಂದು ಬಿಸಿ ಬಿಸಿ ಟೀ ಕಾಪಿಯೊಂದಿಗೆ ಒಂದಿಶ್ಟು ಮುಗುಳ್ನಗೆಯ ಸಂತಸವನ್ನು ಜನಕ್ಕೆ ಹಂಚುತ್ತಾರೆ. ಒಂದು ಸಣ್ಣ ಆಶ್ಚರ‍್ಯಕರ ವಿಶಯ, ಅಂಗಡಿಯ ಮಾಲೀಕನ ಹೆಸರು ಮಾತ್ರ ಇಲ್ಲಿಯವರೆಗೂ ಜನಕ್ಕೆ ತಿಳಿಯದ ಸಂಗತಿ. ಯಾರೂ ಪ್ರಯತ್ನ ಪಟ್ಟಿಲ್ಲವೆಂದಲ್ಲ, ಪಟ್ಟವರಿಗೂ ದೊರೆತದ್ದೂ ಒಂದು ಸಣ್ಣ ನಗುವಶ್ಟೇ. ಹೇಳಲೇಬೇಕೆಂಬ ಹಟ ಹೊತ್ತು ಪೀಡಿಸಿದ ಗಟನೆಗಳೇನು ನಡೆದಿಲ್ಲ. ಬಹುಶಹ ಟೀ ನ ರುಚಿಗಿರುವ ಪ್ರಾಮುಕ್ಯತೆ ಅದರ ಸ್ರುಶ್ಟಿಕರ‍್ತನ ಹೆಸರಿಗಿಲ್ಲ. ಅಂದ ಹಾಗೆ ಅವನ ಹೆಂಡತಿಯ ಹೆಸರು ಎಲ್ಲರಿಗೂ ಗೊತ್ತು. ನಿಂಗಮ್ಮ ಹಾಗೆ ನೋಡಿದರೆ ಒಂದಿಶ್ಟು ಜಾಸ್ತಿಯೇ ಪಬ್ಲಿಸಿಟಿ ಪಡೆದ ಹೆಂಗಸು. ಬದಲಾವಣೆಯ ಹುಡುಕಾಟದಲ್ಲಿ ದಂಪತಿಗಳು ಮೊನ್ನೆ ಲಾಲ್ ಬಾಗ್ ಮುಂದೆ ನೋಡಿ, ಅನುಕರಿಸಿ ಆಯುರ‍್ವೇದಿಕ್ ಟೀಗಳನ್ನೂ ಪರಿಚಯಿಸಿದ್ದರು.ಜೀವಿಸಲು ಇಚ್ಚಿಸುವವರು ಇದಕ್ಕೆ ಮಾರು ಹೋದರು, ಇಚ್ಚೆಯಿಂದ ಜೀವಿಸುತ್ತಿದ್ದವರಿಗೆ ಟೀ ಕಾಪಿಗಳೇ ಸರ‍್ವಸ್ವವಾಗಿದ್ದವು.

ಸದ್ಯಕ್ಕೆ ಸಮಯ ಆರೂವರೆ. ಇನ್ನರ‍್ದ ಗಂಟೆಗೆ ಊರಿಗೂರೇ ಎಚ್ಚರವಾಗಿ ಅತ್ತಿತ್ತ ಗಡಿಬಿಡಿಯಲ್ಲಿ ಓಡಾಡಲಾರಂಬಿಸುತ್ತದೆ. ಸಮಾದಾನದ ಸಮಯ – ಬೆಳಕು ಬೀಳುವವರೆಗೂ ಮಾತ್ರ. ಜನರ ಉಸಿರಿನಿಂದ ಹೊರ ಬಂದ ಕಾರ‍್ಬನ್ ಡೈ ಆಕ್ಸೈಡ್ ನಿಂದಲೇ ಸಾಕಶ್ಟು ವಾಯು ಮಾಲಿನ್ಯವಾಗಬಲ್ಲದು, ಅಂತಹ ಜನನಿಬಿಡತೆ. ನೆಮ್ಮದಿಯು ಮರೀಚಿಕೆಯನ್ನು ನಂಬಿ ಕುಳಿತಿದೆ. ಬಾವನೆಗಳು ಅರ‍್ತ ಕಂಡುಕೊಳ್ಳುವುದಿರಲಿ, ಒಬ್ಬರ ಮಾತು ಇನ್ನೊಬರಿಗೆ ಸ್ಪಶ್ಟವಾಗಿ ಅರ‍್ತವಾದರೆ ಸಾಕು.

ಟೀ ಅಂಗಡಿಯ ಅಂಗಳದಿಂದ ಒಂದೈದು ಹೆಜ್ಜೆ, ತ್ರಿವೇಣಿ ಸಂಗಮ. ಮೂರು ರಸ್ತೆಗಳು ತಮ್ಮ ತಮ್ಮ ದಿಕ್ಕಿನಿಂದ ನಡೆದು ಬಂದು ಸೇರುವ ಜಾಗ. ಅದಿಕ್ರುತವಾಗಿ ಮಹನೀಯರೊಬ್ಬರ ಮೂರ‍್ತಿಯಿತ್ತು, ಸುತ್ತ ವ್ರುತ್ತ ಎಳೆಯದರ ಕಾರಣ ಸರ‍್ಕಲ್ ಎಂದು ಪೇಮಸ್ ಆಗಲಿಕ್ಕಾಗಿಲ್ಲ ಈ ಜಾಗಕ್ಕೆ. ಆದರೆ ಎಲ್ಲ ಕಡೆಗಳಿಂದ ಗಾಡಿಯನ್ನೇರಿ ಬರುತ್ತಿರುವವರ ಮುಕದಲ್ಲಿ ಮಾತ್ರ ಅವಸರದ ಕಳೆ ರಾರಾಜಿಸುತ್ತಿರುತ್ತದೆ. ಅವಸರಕ್ಕಿರುವ ಬೆಲೆ ಅಪಗಾತಕ್ಕಿಲ್ಲ. ಕಳೆದ ಎಶ್ಟೋ ವರ‍್ಶಗಳಿಂದ ನಡೆದ ಅವಗಡಗಳನ್ನ ರಸ್ತೆಯು ನೋಡಿದೆ. ಬಹಳ ಸೀರಿಯಸ್ ಆಗಿ ಏನೂ ನಡೆಯದಿದ್ದರೂ ಅಶ್ಟಿಶ್ಟು ಬಿದ್ದ ನೆತ್ತರಿನಿಂದ ತನ್ನ ದಾಹವನ್ನು ತಣಿಸಿಕೊಂಡಿದೆ. ರಾತ್ರಿ ಮಾತ್ರ ಒಂದು ಹೆಣ್ಣು ಕರಿ ಸೀರೆ ಬಿಳಿ ಕೂದಲು ಹೊತ್ತು ತಿರುಗುವುದರ ಬಗ್ಗೆ ಸಾಕಶ್ಟು ಸಾಕ್ಶ್ಯಗಳನ್ನ ಜನ ಒಪ್ಪಿಸುತ್ತಾರೆ. ಶೌಚದಲ್ಲೂ ಪೋನ್ ಒಟ್ಟಿಗೆ ಒಯ್ಯುವ ಜನ ಮಾತ್ರ ಈ ಹೆಂಗಸಿನ ಪೋಟೋ ಒಂದು ತೆಗೆಯಲಿಕ್ಕೆ ಅಶ್ಟು ಆಸಕ್ತಿ ತೋರಿಸಿಲ್ಲ.

ರಸ್ತೆಗೆ ಅಂಟಿಕೊಂಡಂತೆ ಪೂಟ್ ಪಾತ್. ಗಣನೀಯ ಸಂಕ್ಯೆಯಲ್ಲಿ ಜನ ಓಡಲು ನಡೆಯಲು ದಿನ ಬರುವುದುಂಟು. ಬಂದಂತೆ ಬೆಳೆದ ಪರಿಚಯಗಳು. ಬಾಶೆಯ ಮಿತಿಯನ್ನು ಮೀರಿ ಬೆಳೆದ ಸುಂದರ ಸ್ನೇಹ. ಅದರಲ್ಲೂ ರಿಟೈರ‍್ಮೆಂಟ್ ಗೋಶಿಸಿದ ಜನರಿಗಂತೂ ಆಸಕ್ತಿಯ ಮಿತಿ ಬಹಳಶ್ಟು. ತಮ್ಮ ತಮ್ಮದೇ ಗುಂಪುಗಳನ್ನ ಮಾಡಿಕೊಂಡು ಯೋಗ ಮತ್ತೊಂದು ಮಗದೊಂದರಲ್ಲಿ ಎಲ್ಲರೂ ನಿರತರಾಗುವ ರೂಡಿ. ಆಗೀಗ ಒಮ್ಮತಕ್ಕೆ ಬರಲು ಒಂದಿಶ್ಟು ಹಿಂದಿ ಇಂಗ್ಲೀಶು. ಒಟ್ಟಾರೆ ಒಂದು ನಿಮಿಶ ಕುಳಿತು ಆಲಿಸಿದರೆ ತೆಲುಗು ತಮಿಳು ಹಿಂದಿ ಇಂಗ್ಲಿಶ್ ಅಲ್ಲಲ್ಲಿ ಮಲೆಯಾಳಂ ಕನ್ನಡದೊಂದಿಗೆ ಸೊಗಸಾಗಿ ಅಲೆಗಳಾಗಿ ಬಂದು ಕಿವಿಗೆ ಅಪ್ಪಳಿಸುತ್ತವೆ. ಅಂದ ಹಾಗೆ ದಿನದ ರೂಡಿಯಂತೆ ಏಳು ಜನರ ಒಂದು ಗುಂಪು ಟೀ ಅಂಗಡಿಯತ್ತ ಜೋರು ಜೋರಾಗಿ ನಗುತ್ತ ದಾವಿಸುತ್ತಿತ್ತು. ನಗುವೊಂದರ ಬಾಶೆ ಮಾತ್ರ ಒಂದೇ ಆಗಿತ್ತು. ಇನ್ನೇನು ಅವರೆಲ್ಲ ರೋಡು ದಾಟಬೇಕು ಅಶ್ಟರಲ್ಲಿ –

ವಯಸ್ಸಾದವರೇ ಪಾಪ ಹೆಲ್ಮೇಟು ಲೈಸೆನ್ಸು ಇನ್ಸುರೆನ್ಸು ಎಲ್ಲವನ್ನು ಇಟ್ಟುಕೊಂಡು, ಅದ್ಯಾವುದೋ ಗುಂಗಿನಲ್ಲಿ ಅತ್ತಿತ್ತ ನೋಡದೆ ಬಲಕ್ಕೆ ಗಾಡಿ ತಿರುಗಿಸಿದರು. ಆ ಕಡೆಯಿಂದ ರಬಸದಿಂದ ಬಂದ ಲಾರಿ.

ಲಾರಿಯವನ ಎಚ್ಚರ ಮೆಚ್ಚಲೇಬೇಕು. ಆತನ ಒಂದು ಸಮಯ ಪ್ರಜ್ನೆಯ ಬ್ರೇಕು ಸ್ಕೂಟರಿನವರ ಜೀವನಕ್ಕೆ ಬ್ರೇಕ್ ಹಾಕದೆ ಹಾಗೆ ಬದುಕಿಸಿತ್ತು.ತಕ್ಶಣಕ್ಕೆ ಅವರು ನೆಲಕ್ಕೆ ಉರುಳಿದರು, ಗಾಬರಿಯಿಂದ ಮೈಯೆಲ್ಲಾ ಕಂಪಿಸುತ್ತಿತ್ತು. ಮೇಲ್ನೋಟಕ್ಕೆ ಪುಟ್ಟ ಗಾಯದ ಅವಶೇಶಗಳೂ ಕಾಣದೆ ಹೋದರೂ ಹ್ರುದಯ ಮಾತ್ರ ಡಾಲ್ಬಿಯ ಸ್ಪೀಕರಿನಂತೆ ಬಡಿದುಕೊಳ್ಳುತ್ತಿತ್ತು. ಕಂಡವರೆಲ್ಲ ಸುತ್ತುವರಿದು ಇವರನ್ನ ಮತ್ತೆ ಸ್ಕೂಟರನ್ನ ಪಕ್ಕಕ್ಕೆ ತಂದು ಟೀ ಅಂಗಡಿಯ ಮುಂದೆ ಕೂರಿಸಿದರು. ಗುಂಪಿನವರು ಮಾತ್ರ ಲಾರಿಯವನನ್ನ ತೆಗಳದೇ ಬಿಡಲಿಲ್ಲ. ಬಹುತೇಕವು ಇಂಗ್ಲೀಶಿನಲ್ಲಿ ಇದ್ದಿದ್ದು ಅಲ್ಲದೆ ಇಂತವದೆಶ್ಟನ್ನು ನೋಡಿದ್ದವ ಮುಂದಕ್ಕೆ ಲಾರಿ ಓಡಿಸಿದ.

ಬಿದ್ದವರನ್ನು ಸಂಬಾಳಿಸಲು ಗುಂಪಿನವರೆಲ್ಲ ಟೊಂಕ ಕಟ್ಟಿ ನಿಂತರು. ಅವರ ಸಮಾದಾನದ ಮಾತುಗಳೆಲ್ಲ ಕಿರಿ ಕಿರಿಯೆನಿಸುತ್ತಿದರೂ ಹೆದರಿಕೆಯ ಮೈ ನಡುಕ ಬಿದ್ದ ವಯಸ್ಕರನ್ನು ಟ್ರಾನ್ಸ್ ನಲ್ಲೆ ಇರುವಂತೆ ಮಾಡಿತ್ತು. ಸಾವು ಸನಿಹ ಸುಳಿದ ಹೋದ ಹಾದಿಯನ್ನು ಅವರಿನ್ನೂ ದಿಟ್ಟಿಸುತ್ತಲೇ ಇದ್ದರು. ಅಶ್ಟರಲ್ಲೇ ಅಂಗಡಿಯ ಮಾಲೀಕ ಒಂದು ಕಾಪಿ ಪ್ಲೇವರಿನ ಹಾಲಿನ ಲೋಟವನ್ನ ತಂದು ಹಿಡಿದ. ಅವರು ಕೂಡ ನಡುಗುವ ಕೈಗಳಿಂದ ಸ್ವೀಕರಿಸಿದರು. ಒಪ್ಪಿಗೆ ದೊರೆತಂತೆ ಬಾವಿಸಿ ಗುಂಪಿನವರೆಲ್ಲ ಸಾಲಿನಲ್ಲಿ ನಿಂತರು ಅಂಗಡಿ ಮುಂದೆ, ತಮ ತಮಗೆ ಬೇಕಿರುವದನ್ನ ಆರ‍್ಡರ್ ಮಾಡಲು.

ಅಶ್ಟರಲ್ಲೇ ತೀರಾ ಸಂಬಂದವಿಲ್ಲದ ಎರಡು ಗಟನೆ ನಡೆದು ಸುತ್ತಲಿನ ಪರಿಸ್ತಿತಿಯನ್ನೇ ತಲೆ ಕೆಳಗು ಮಾಡಿತು. ಕಾಪಿ ಕುಡಿದವರೇ ವಯಸ್ಕರ ಬಾಯಿಂದ ಬಂದ ಮಾತು – ‘ತ್ಯಾಂಕ್ಸ್ ಮೋನಿ’ . ಅಲ್ಲೇ ಇದ್ದ ಎಲ್ಲರ ಗಮನ ಇವರು ಹೇಳಿದ ಹೆಸರಿನ ಮೇಲೆ. ಮೋನಿಯಿಂದ ಅಂತ ಪ್ರತಿಕ್ರಿಯೆ ಬರದಾದರೂ ನಿಂಗಮ್ಮನ ಮುಕದಲ್ಲಿ ಕೊಂಚ ನಾಚಿಕೆ ಕಳೆಯಾಡುತಿತ್ತು. ಆಗಲೇ ಗಟಿಸಿದ್ದು ಎರಡನೆಯದು – ಪಟ್ ಎಂಬ ಜೋರಾದ ಸದ್ದಿನೊಂದಿಗೆ. ಗಾಡಿಯನ್ನು ಬಿದ್ದವರನ್ನು ಎಬ್ಬಿಸಿದ ಬರದಲ್ಲಿ ಅವರು ದರಿಸಿದ್ದ ಹೆಲ್ಮೆಟನ್ನು ರಸ್ತೆಯಲ್ಲೇ ಮರೆತು ಬಂದಿದ್ದರು. ಈಗದರ ಮೇಲೆ ಲಾರಿಯಿನ್ನೊಂದು ರಬಸವಾಗಿ ನುಗ್ಗಿತ್ತು. ಏನನ್ನೋ ನೆನಸಿಕೊಂಡು ಸುತ್ತ ನೆರೆದಿದ್ದವರ ತಲೆಯಲೆಲ್ಲ ಅದೇ ಯೋಚನೆ. ಅವರೆಲ್ಲ ಸೇರಿ ಮೋನಿ ನಿಂಗಮ್ಮನೂ ಕೂಡಿ ಒಟ್ಟಾರೆ ದ್ರುಶ್ಟಿಯಿಂದ ಆ ಮುದಕರತ್ತ ಕಣ್ಣರಳಿಸಿಕೊಂಡು ನೋಡುತ್ತಿದ್ದರೆ, ಮೈ ನಡುಗುತ್ತಲೇ ಇದ್ದ ಮುದುಕರು ಒಂದಿಶ್ಟು ಬಾಗಿ ಅದೇ ದಾರಿಯತ್ತ ಕಣ್ಣು ಹಾಯಿಸಿದರು. ರಸ್ತೆಯ ದೂರದ ಕೊನೆಯಲ್ಲಿ  ವ್ಯಕ್ತಿಯೋರ‍್ವ ಹೊನ್ನಿನ ಆಬರಣಗಳನ್ನ ಮೈ ತುಂಬಾ ಬಾರವೆನಿಸುವಶ್ಟು ದರಿಸಿ ಹಿನ್ನೋಡದೆ ನಿದಾನವಾಗಿ ಚಲಿಸುತ್ತಿದ್ದ ಕೋಣದ ಮೇಲೆ ಕಂಡಿದ್ದ.

( ಚಿತ್ರ ಸೆಲೆ : pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: