ಮಕ್ಕಳ ಕತೆ: ಸಂಪಿಗೆ ಮತ್ತು ಮಲತಾಯಿ

– ಮಾರಿಸನ್ ಮನೋಹರ್.

ಮಗಳು, daughter

ಸೊನ್ನಾಳ ಎಂಬ ಊರಿನಲ್ಲಿ ಕಾಳಮ್ಮ ಮತ್ತು ಬೀರಪ್ಪ ಎಂಬ ಗಂಡ ಹೆಂಡತಿ ಇದ್ದರು. ಕಾಳಮ್ಮ‌ ಬೀರಪ್ಪರಿಗೆ ತುಂಬಾ ವರುಶ ಮಕ್ಕಳು ಆಗಲಿಲ್ಲ. ಏಳು ಮಳೆಗಾಲಗಳು ಕಳೆದು ಕಾಳಮ್ಮಳಿಗೆ ಒಂದು ಹೆಣ್ಣು ಮಗು ಹುಟ್ಟಿತು. ವರುಶಗಳಾದ ಮೇಲೆ ಹುಟ್ಟಿದ ಕೂಸಿಗೆ ದಿಟ್ಟಿಯಾದೀತೆಂದು ಐದನೆಯ ತಿಂಗಳಲ್ಲಿ ತೊಟ್ಟಿಲು ಇಟ್ಟರು. ಬೇಳೆ ಕೊಬ್ಬರಿ ಹೂರಣ ಹಾಕಿ ತುಪ್ಪದ ಹೋಳಿಗೆ ಮಾಡಿಸಿದರು. ಕಾಳಮ್ಮ‌ನ ತವರು ಮನೆಯವರು ಕೂಸಿಗೆ ಬಂಗಾರದ ಬಟ್ಟಲು ಬೆಳ್ಳಿ ಹುಟ್ಟು ಉಡುಗೊರೆಯಾಗಿ ತಂದರು. ತೊಟ್ಟಿಲನ್ನು ಬಗೆ ಬಗೆಯ ಹೂಗಳಿಂದ ಸಿಂಗರಿಸಿ ಕೆಳಗೆ ಹಿಟ್ಟಿನ ದೀಪಗಳನ್ನು ಹಚ್ಚಿದರು. ಕಾಳಮ್ಮ ತನ್ನ ಹೆಣ್ಣು ಕೂಸನ್ನು ತೊಟ್ಟಿಲಿಗೆ ಹಾಕಿದಾಗ, ಎಲ್ಲರೂ ತುಂಬಾ ಚೆಲುವಾದ ಕೂಸೆಂದು ಸಂಪಿಗೆ ಅಂತ ಕರೆದರು. ಅದೇ ಅವಳ ಹೆಸರಾಯಿತು. ಬೀರಪ್ಪ ತನ್ನ ಮುದ್ದು ಮಗಳ ಕೊರಳಿಗೆ ಕೆಂಪನೆಯ ಹರಳಿದ್ದ ಕಾಸಿನ ಸರವನ್ನು ಹಾಕಿದ. ಔತಣಕ್ಕೆ ಬಂದ ಮಂದಿ ಸಡಗರ ನೋಡಿ ಬೆರಗಾದರು.

ಸಂಪಿಗೆಗೆ ಐದು ವರುಶಗಳಾದವು. ಅವಳ ತಾಯಿ ಕಾಳಮ್ಮ ಸಾಸಿವೆ ಹೊಲಕ್ಕೆ ಹೋಗಿದ್ದಾಗ ಹುಳ ಮುಟ್ಟಿ (ಹಾವು ಕಚ್ಚಿ) ತೀರಿಹೋದಳು. ಬೀರಪ್ಪ ಮತ್ತೊಂದು ಮದುವೆ ಮಾಡಿಕೊಂಡ. ಮಲತಾಯಿ ದುರ‍್ಗಮ್ಮ ಸಂಪಿಗೆಯನ್ನು ಎಳ್ಳಶ್ಟೂ ಸೇರುತ್ತಿರಲಿಲ್ಲ. ಒಂದು ವರುಶವಾದ ಮೇಲೆ ದುರ‍್ಗಮ್ಮಳಿಗೂ ಒಂದು ಹೆಣ್ಣು ಕೂಸಾಯಿತು. ದುರ‍್ಗಮ್ಮ ತನ್ನ ಮಗಳಿಗೆ ಮುಕ್ಕಮ್ಮ ಅಂತ ಹೆಸರಿಟ್ಟಳು. ಯಾಕೆಂದರೆ ಅವಳಿಗೆ ಹುಟ್ಟಿದಾಗ ಮೂರು ಕಣ್ಣುಗಳು ಇದ್ದವು. ದುರ‍್ಗಮ್ಮ ಕೆಂಪು ಹರಳಿದ್ದ ಸಂಪಿಗೆಯ ಸರವನ್ನು ತನ್ನ ಮಗಳು ಮುಕ್ಕಮ್ಮಳಿಗೆ ಕೊಟ್ಟಳು. ಮುಕ್ಕಮ್ಮ ಆ ಕಾಸಿನ ಸರವನ್ನು ಹಾಕಿಕೊಂಡು ಎಲ್ಲರ ಮುಂದೆ ಸಂಪಿಗೆಯನ್ನು ತಾಯಿಲ್ಲದ ತಬ್ಬಲಿ ಅಂತ ಹಂಗಿಸಿ ಗೋಳು ಹೊಯ್ದುಕೊಳ್ಳುತ್ತಿದ್ದಳು. ದುರ‍್ಗಮ್ಮ ಸಂಪಿಗೆಯನ್ನು ನಸುಕಿನಲ್ಲಿ ಇನ್ನೂ ಬೆಳಕು ಹರಿಯುವ ಮುನ್ನವೇ ಎಬ್ಬಿಸಿ ಕೆಲಸಕ್ಕೆ ಹಚ್ಚಿಸುತ್ತಿದ್ದಳು. ಮುಕ್ಕಮ್ಮಳನ್ನು ನಡು ಹೊತ್ತಾದರೂ ಎಬ್ಬಿಸುತ್ತಿರಲಿಲ್ಲ.

ಮನೆ ಕಸ ಹೊಡೆಯುವುದು, ಅಂಗಳ ಉಡುಗುವುದು, ದನ ಎತ್ತುಗಳ ಕೊಟ್ಟಿಗೆ, ಕುರಿ ಆಡುಗಳ ದೊಡ್ಡಿಯ ಕಸ ತೆಗೆಯುವುದು, ಗಂಗಾಳ ತಂಬಿಗೆ(ತಟ್ಟೆ-ಚೊಂಬು) ಬೆಳಗುವುದು, ಹೊಲಕ್ಕೆ ಹೋಗಿ ಹುಲ್ಲು ಮೇವು ಸೂಡುಗಳನ್ನು ತಲೆ ಮೇಲೆ ಹೊತ್ತು ತರುವುದು, ಬಾವಿಯಿಂದ ನೀರು ಸೇದುವುದು ಎಲ್ಲ ಕೆಲಸ ಸಂಪಿಗೆಯೇ ಮಾಡುತ್ತಿದ್ದಳು. ಮುಕ್ಕಮ್ಮ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ದುರ‍್ಗಮ್ಮ ಅವಳಿಗೆ ಯಾವ ಕೆಲಸ ಹೇಳುತ್ತಲೂ ಇರಲಿಲ್ಲ. ದುರ‍್ಗಮ್ಮ ಸಂಪಿಗೆಗೆ ದಿನಾಲೂ ಒಣಗಿದ ರೊಟ್ಟಿ ಮತ್ತು ಪುಡಿ ಕಾರ ತಿನ್ನಲು ಕೊಡುತ್ತಿದ್ದಳು. ಆದರೆ ತನ್ನ ಮಗಳಿಗೆ ತುಪ್ಪ ಕಲಸಿದ ಕೆಂಪಕ್ಕಿಯ ಅನ್ನ ತಿನ್ನಿಸುತ್ತಿದ್ದಳು. ತನ್ನ ಮಗಳು ಮುಕ್ಕಮ್ಮಳಿಗೆ ರೇಶಿಮೆಯ ಬಟ್ಟೆ ಹಾಕುತ್ತಿದ್ದಳು, ಆದರೆ ಮಲಮಗಳು ಸಂಪಿಗೆಗೆ ಹಳೆಯ ಹರಿದ ಬಟ್ಟೆಗಳನ್ನು ಕೊಡುತ್ತಿದ್ದಳು. ಮುಕ್ಕಮ್ಮಳಿಗೆ ದುರ‍್ಗಮ್ಮ ರುಚಿಯಾದ ಮಾವಿನ ಹಣ್ಣಿನ ರಸ ಮತ್ತು ಬೆರಕೆ ದೋಸೆಗಳೊಂದಿಗೆ ಕೈತುತ್ತು ಮಾಡಿ ತಿನ್ನಿಸುತ್ತಿದ್ದಳು ಆದರೆ ಸಂಪಿಗೆಗೆ ಬೇಲಿಯ ಗಿಡಗಳಲ್ಲಿ ಬೆಳೆಯುವ ಕಾರೆಹಣ್ಣು ತಿನ್ನಲು ಹೇಳುತ್ತಿದ್ದಳು.

ಬೀರಪ್ಪ ದುರ‍್ಗಮ್ಮಳಿಗೆ ಹೀಗೇಕೆ ಮಕ್ಕಳಲ್ಲಿ ಬೇರೆ ಬೇರೆ ಮಾಡುತ್ತಿಯಾ ಅಂತ ಕೇಳಿದರೆ ಅವಳು “ನಾನು ನನ್ನ ತವರು ಮನೆಗೆ ಹೋಗುತ್ತೇನೆ” ಎಂದು ಹೇಳುತ್ತಿದ್ದಳು. ಬೀರಪ್ಪ ಗದರಿದರೆ ಬಾವಿಯ ಕಡೆಗೆ ಓಡಿಹೋಗಿ ತನ್ನ ಎರಡು ಕಾಲುಗಳನ್ನು ಬಾವಿಯಲ್ಲಿ ಇಳಿಬಿಟ್ಟು “ನಾನು ಬಾವಿಗೆ ಹಾರಿಕೊಳ್ಳುತ್ತೇನೆ, ಆಮೇಲೆ ದೆವ್ವವಾಗಿ ಬಂದು ನಿನ್ನನ್ನು ಕಾಡುತ್ತೇನೆ” ಅಂತ ಹೆದರಿಸುತ್ತಿದ್ದಳು. ಊರವರ ಮುಂದೆ ರಂಪ ಮಾಡುವುದು ಇಶ್ಟವಿಲ್ಲದ ಬೀರಪ್ಪ ಅವಳನ್ನು ಸಂತೈಸಿ ಮನೆಗೆ ಕರೆದುಕೊಂಡು ಬರುತ್ತಿದ್ದ. ದುರ‍್ಗಮ್ಮ ಸಂಪಿಗೆಗೆ ದಿನಾಲೂ ಒಣಗಿದ ರೊಟ್ಟಿ ಮತ್ತು ಪುಡಿ ಕಾರ ಕೊಟ್ಟರೂ ಸಂಪಿಗೆಯು ಮುಕ್ಕಮ್ಮಳಿಗಿಂತ ಚೆಲುವಾಗಿ ಕಾಣಿಸುತ್ತಿದ್ದಳು. ಮಂದಿಯೂ “ಮುಕ್ಕಮ್ಮಳಿಗಿಂತ ಸಂಪಿಗೆಯೇ ಚೆಲುವಾಗಿದ್ದಾಳೆ” ಅಂತ ಹೇಳುತ್ತಿದ್ದರು. ಮಂದಿಯ ಈ ಮಾತುಗಳನ್ನು ಮುಕ್ಕಮ್ಮ ಬಂದು ದುರ‍್ಗಮ್ಮಳಿಗೆ ಹೇಳಿದಳು. ದುರ‍್ಗಮ್ಮ ಮನಸ್ಸಿನಲ್ಲಿ “ಹೌದಲ್ಲಾ! ನಾನು ಸಂಪಿಗೆಗೆ ಕಾರ ರೊಟ್ಟಿ ಕೊಟ್ಟರೂ ಅವಳೇ ನನ್ನ ಮಗಳಿಗಿಂತ ಚೆಲುವಿ ಅಂತ ಅನ್ನಿಸಿಕೊಂಡಿದ್ದಾಳೆ. ಇವತ್ತಿನಿಂದ ಅವಳನ್ನು ಉಪವಾಸ ಕೆಡವುತ್ತೇನೆ” ಅಂತ ಹೇಳಿಕೊಂಡು ಸಂಪಿಗೆಗೆ ಊಟ ಕೊಡಲೊಲ್ಲದೆ ಹೋದಳು.

ಒಂದು ವಾರ ಆದ ಮೇಲೂ ಸಂಪಿಗೆಯು ನನಗೆ ಹಸಿವಾಗಿದೆ ಅಂತ ಅಳಲಿಲ್ಲ ಅವಳ ಮುಕವೂ ಬಾಡಿರಲಿಲ್ಲ. ದುರ‍್ಗಮ್ಮ ತನ್ನ ಮಗಳು ಮುಕ್ಕಮ್ಮಳನ್ನು ಕರೆದು “ನೀನು ಸಂಪಿಗೆಯ ಜೊತೆಗೆ ಇದ್ದುಕೊಂಡು ಅವಳು ದಿನವೆಲ್ಲಾ ಏನು ಮಾಡುತ್ತಾಳೆ ಅಂತ ನೋಡು” ಅಂದಳು. ಮುಕ್ಕಮ್ಮ ತನ್ನ ಅಕ್ಕನ ಜೊತೆ ಅವಳು ಎಲ್ಲಿ ಹೋದರೂ ಅವಳ ಹಿಂದೆ ನೆರಳಿನಂತೆ ಹೋದಳು. ಸಂಪಿಗೆ ನೀರು ತರಲು ಕೆರೆಗೆ ಬಂದಳು. ತನ್ನ ಕೊಡವನ್ನು ನೀರಿನಿಂದ ತುಂಬಿಸಿ ದಣಿವಾಯ್ತು ಅಂತ ಒಂದು ಅಂಟುವಾಳದ ಗಿಡದ ಕೆಳಗೆ ಕುಳಿತಳು. ಏನೂ ಕೆಲಸ ಮಾಡದ ಮುಕ್ಕಮ್ಮ “ಅಕ್ಕಾ ನನಗೂ ತುಂಬಾ ದಣಿವಾಗಿದೆ ನಾನು ಇಲ್ಲಿ ಸ್ವಲ್ಪ ಮಲಗುತ್ತೇನೆ” ಅಂತ ಹೇಳಿ ಮಲಗಿಕೊಂಡಳು. ಸಂಪಿಗೆ ಆ ಗಿಡದ ಕೆಳಗೆ ಕೂತಿದ್ದಾಗ ಎಲ್ಲಿಂದಲೋ ಒಂದು ಪಾರಿವಾಳ ಹಾರಿ ಬಂದು ಆ ಗಿಡದ ಮೇಲೆ ಕೂತುಕೊಂಡಿತು. ಅತ್ತ ಇತ್ತ ನೋಡಿ ಕೆಳಗೆ ಬಂದು ಸಂಪಿಗೆಯನ್ನು ಮಾತಾಡಿಸಿತು. ಸಂಪಿಗೆ “ಅಮ್ಮಾ ನನಗೆ ಹಸಿವಾಗಿದೆ” ಅಂತ ಹೇಳಿದಳು. ಪಾರಿವಾಳವು ತನ್ನ ಕೊಕ್ಕಿನಿಂದ ಒಂದು ಅನ್ನದ ಅಗುಳನ್ನು ಸಂಪಿಗೆಯ ಕೈಯಲ್ಲಿ ಹಾಕಿತು. ಸಂಪಿಗೆಯ ಕೈ ತಾಕುತ್ತಲೇ ಒಂದು ಅನ್ನದ ಅಗುಳು ಬೊಗಸೆ ತುಂಬಾ ಅನ್ನವಾಯ್ತು. ಸಂಪಿಗೆ ಅದನ್ನು ತಿಂದಳು. ಪಾರಿವಾಳ ಇನ್ನೊಂದು ಅನ್ನದ ಅಗುಳು ಹಾಕಿತು, ಇನ್ನೊಂದು ಬೊಗಸೆ ಅನ್ನವಾಯ್ತು. ಹೀಗೆ ಐದು ಸಲ ಮಾಡಿತು. ಹೊಟ್ಟೆ ತುಂಬಾ ಸಂಪಿಗೆ ಅನ್ನವನ್ನು ಉಂಡಳು. ಇದನ್ನೆಲ್ಲಾ ಮುಕ್ಕಮ್ಮ ತನ್ನ ಮೂರನೇ ಕಣ್ಣಿನಿಂದ ನೋಡುತ್ತಿದ್ದಳು.

ಪಾರಿವಾಳ ಹಾರಿಹೋದ ಮೇಲೆ ಸಂಪಿಗೆ ತನ್ನ ತಂಗಿಯನ್ನು ಎಬ್ಬಿಸಿದಳು. ಎದ್ದ ಮುಕ್ಕಮ್ಮ “ಅಯ್ಯೋ ನಾನು ಮಲಗಿಕೊಂಡು ಎಶ್ಟೊಂದು ಹೊತ್ತಾಯಿತು. ಅಕ್ಕಾ ಮನೆಗೆ ಹೋಗೋಣ ಬಾ. ಇಲ್ಲದಿದ್ದರೆ ಅಮ್ಮ ಸರಪಿಸುತ್ತಾಳೆ (ಬೈಯುತ್ತಾಳೆ)” ಅಂದಳು. ಇಬ್ಬರೂ ಮನೆಗೆ ಬಂದರು. ಮುಕ್ಕಮ್ಮ ತನ್ನ ತಾಯಿಗೆ ಅಂಟುವಾಳದ ಗಿಡದ ಬಳಿ ಪಾರಿವಾಳ ಬಂದದ್ದು, ಸಂಪಿಗೆಗೆ ಐದು ಅನ್ನದ ಅಗುಳು ಕೊಟ್ಟದ್ದು, ಅದು ಐದು ಬೊಗಸೆ ಅನ್ನವಾದದ್ದು, ಸಂಪಿಗೆ ಅದನ್ನು ದಿನಾಲೂ ತಿನ್ನುತ್ತಿರುವುದನ್ನು ಹೇಳಿದಳು. ಸಂಜೆಗೆ ಬೀರಪ್ಪ ಹೊಲದಿಂದ ಮನೆಗೆ ಬರುತ್ತಿದ್ದ. ಆಗ ಮನೆಯ ಮುಂದೆ ತುಂಬಾ ಮಂದಿ ಸೇರಿದ್ದು ಕಂಡ. ತನ್ನ ಮನೆಯಲ್ಲಿ ಏನಾಯಿತು ಅಂತ ಬೀರಪ್ಪ ಅಂಗಳಕ್ಕೆ ಬಂದು ನೋಡಿದ. ದುರ‍್ಗಮ್ಮ ಅಂಗಳದ ನಡುವೆ ಹಗ್ಗದ ಮಂಚದ ಮೇಲೆ ನಾಲ್ಕು ಹಚ್ಚಡಗಳನ್ನು(ಕಂಬಳಿ) ಹೊದ್ದುಕೊಂಡು ಮಲಗಿ ಕೊಂಡಿದ್ದಳು. ಅವಳ ತಲೆಗೆ ತಿನ್ನುವ ಸುಣ್ಣವನ್ನು ಹಚ್ಚಿ ಪಟ್ಟಿ ಕಟ್ಟಿದ್ದರು. ದುರ‍್ಗಮ್ಮ ಗಟ್ಟಿಯಾದ ದನಿಯಲ್ಲಿ “ಅಯ್ಯೋ ಅಯ್ತೋ, ನನ್ನ ತಲೆ ನನ್ನ ತಲೆ, ನನ್ನ ತಲೆ ಒಡೆದುಹೋಗುತ್ತದೆ, ನಾನು ಸಾಯುತ್ತೇನೆ, ನಾನು ಇನ್ನೂ ಬದುಕುವದಿಲ್ಲ” ಅಂತ ಬೊಬ್ಬಿರಿಯುತ್ತಿದ್ದಳು. ಬೀರಪ್ಪ ಅವಳ ಬಳಿ ಬಂದು ಏನಾಯಿತು ಅಂತ ಕೇಳಿದ. ಅವಳು “ನನ್ನ ತಲೆ ಒಡೆದು ಹೋಗುತ್ತೆ , ನನ್ನ ತಲೆ ತುಂಬಾ ನೋಯುತ್ತಾ ಇದೆ, ನನ್ನ ತಲೆಗೆ ಕೆರೆಯ ಪಕ್ಕದ ಅಂಟುವಾಳದ ಗಿಡದಲ್ಲಿ ಕೂರುವ ಪಾರಿವಾಳದ ನೆತ್ತರು ಹಚ್ಚದಿದ್ದರೆ ನಾನು ಸತ್ತು ಹೋಗುತ್ತೆನೆ, ನಾನು ಸತ್ತು ಹೋದರೆ ನಿನ್ನನ್ನು ನೋಡಿಕೊಳ್ಳುವವರೂ ಪ್ರೀತಿಸುವರು ಯಾರು?” ಅಂತ ಹೇಳಿದಳು ಗೋಳಾಡುತ್ತ.

ಆಗ ಬೀರಪ್ಪ ಕೆರೆ ಪಕ್ಕದ ಅಂಟುವಾಳದ ಗಿಡದ ಬಳಿ ಬಲೆ ಹಾಕಿ ಆ ಪಾರಿವಾಳವನ್ನು ಹಿಡಿದ. ಅದರ ಕೊರಳನ್ನು ಕೊಯ್ದು, ನೆತ್ತರನ್ನು ತಂದು ದುರ‍್ಗಮ್ಮಳ ಹಣೆಗೆ ಹಚ್ಚಿದ. ಪಾರಿವಾಳದ ನೆತ್ತರು ಹಣೆಗೆ ಹಚ್ಚುತ್ತಲೇ ದುರ‍್ಗಮ್ಮ “ನನ್ನ ತಲೆ ನೋವು ಹೊರಟು ಹೋಯಿತು, ನಾನು ಗುಣವಾದೆ” ಅಂತ ಹೇಳಿ ಎದ್ದು ಕೂತಳು. ಬೀರಪ್ಪ ಸತ್ತ ಪಾರಿವಾಳವನ್ನು ತನ್ನ ಹೊಲದ ನಟ್ಟ ನಡುವೆ ಹೂಳಿದ. ಪಾರಿವಾಳ ಹೂತಿಟ್ಟ ಜಾಗದಿಂದ ಮಾವಿನ ಗಿಡ ಹುಟ್ಟಿತು. ಅದು ಇರುಳೆಲ್ಲಾ ದೊಡ್ಡದಾಗುತ್ತಲೇ ಹೋಯಿತು ಮುಂಜಾನೆ ದೊಡ್ಡ ಮಾವಿನ ಮರವಾಗಿ ನಿಂತಿತು. ಅದರ ತುಂಬಾ ರುಚಿಯಾದ ಮಾವಿನ ಹಣ್ಣುಗಳು ಬಿಟ್ಟವು. ಒಂದು ವಾರ ಮತ್ತೆ ದುರ‍್ಗಮ್ಮ ಸಂಪಿಗೆಗೆ ಊಟ ಹಾಕಲಿಲ್ಲ ಆದರೂ ಅವಳು ಚೆನ್ನಾಗಿಯೇ ಇದ್ದಳು. ಸಂಪಿಗೆಯು ಹಸಿವು ಅಂತ ಅಳಲಿಲ್ಲ ಅವಳ ಮುಕ ಬಾಡಲಿಲ್ಲ. ಮಂದಿ ಮತ್ತೆ ಸಂಪಿಗೆಯೇ ಮುಕ್ಕಮ್ಮಳಿಗಿಂತ ಚೆಲುವಾಗಿದ್ದಾಳೆ ಅಂದರು. ಇದರಿಂದ ಸಿಟ್ಟಿಗೆದ್ದ ದುರ‍್ಗಮ್ಮ ಸಂಪಿಗೆಯು ಮನೆಯಿಂದ ಹೊರಗೆ ಹೋಗುವಾಗ ಅವಳ ಮುಕಕ್ಕೆ ಕೆಮ್ಮಣ್ಣಿನ ಕೆಸರು ಮೆತ್ತಿದಳು ಅವಳನ್ನು ಯಾರೂ ಚೆಲುವಿ ಅಂತ ಅನ್ನಬಾರದು ಅಂತ. ಅವಳ ಬಾಡದ ಮುಕದ ಕಾರಣ ತಿಳಿದುಕೊಳ್ಳಲು ಮುಕ್ಕಮ್ಮಳನ್ನು ಸಂಪಿಗೆಯ ಜೊತೆಗೆ ಕಳುಹಿಸಿದಳು. ಸಂಪಿಗೆ ಎಂದಿನಂತೆ ಹೊಲಕ್ಕೆ ಬಂದು ಬದಿಗೆ ಬೆಳೆದಿದ್ದ ಹುಲ್ಲು ಮೇವು ಕೊಯ್ದುಕೊಂಡಳು. ಮೇವು ಸೂಡು ಕಟ್ಟಿ ಮಾವಿನ ಮರದ ಕೆಳಗೆ ಕೂತುಕೊಂಡಳು. ಏನೂ ಕೆಲಸ ಮಾಡದಿದ್ದರೂ ಮುಕ್ಕಮ್ಮ “ಅಕ್ಕಾ ನನಗೆ ಹೊಲಕ್ಕೆ ಬಂದು ತುಂಬಾ ದಣಿವಾಗಿದೆ, ನಾನು ಈ ಮಾವಿನ ಮರದ ಕೆಳಗೆ ಮಲಗಿಕೊಳ್ಳುತ್ತೇನೆ, ಮನೆಗೆ ಹೋಗುವಾಗ ಎಬ್ಬಿಸು ಅಂತ” ಹೇಳಿ ಮಲಗಿಕೊಂಡಳು.

ಸಂಪಿಗೆ ಮಾವಿನ ಮರಕ್ಕೆ “ಅಮ್ಮಾ ನನಗೆ ಹಸಿವಾಗಿದೆ” ಅಂದಳು. ಆಗ ಮಾವಿನ ಮರವು ತಾನಾಗೇ ತನ್ನ ರೆಂಬೆ ಕೊಂಬೆಗಳನ್ನು ಕೆಳಗೆ ತಂದಿತು. ಆಗ ಸಂಪಿಗೆ ತನಗೆ ಬೇಕಾದಶ್ಟು ಮಾವಿನ ಹಣ್ಣುಗಳನ್ನು ಆರಿಸಿ ಗಿಡದಿಂದ ಕಿತ್ತುಕೊಂಡಳು. ಮಾವಿನ ಹಣ್ಣುಗಳು ತುಂಬಾ ರುಚಿಯಾಗಿ ಇದ್ದವು. ಹೊಟ್ಟೆ ತುಂಬಾ ಮಾವಿನ ಹಣ್ಣುಗಳನ್ನು ತಿಂದಳು. ಆಗ ಹೊಲದ ಪಕ್ಕದ ದಾರಿಯಲ್ಲಿ ಅರಸನ ಮಗನು ಕುದುರೆ ಮೇಲೆ ಹೋಗುತ್ತಿದ್ದ. ಅವನು ತುಂಬಾ ಹಸಿದುಕೊಂಡಿದ್ದ ಆದರೆ, ಅವನ ಬಳಿ ತಿನ್ನಲು ಏನೂ ಇರಲಿಲ್ಲ. ಅವನು ಮಾವಿನ ಮರದ ಬಳಿ ಬಂದ. ಹಣ್ಣುಗಳನ್ನು ಕೀಳಲು ನೊಡಿದಾಗ ಕೊಂಬೆಗಳು ಮೇಲೆ ಹೋದವು ಅವು ಅವನಿಗೆ ನಿಲುಕಲಿಲ್ಲ. ಅವನು ಎಶ್ಟೇ ಪ್ರಯತ್ನ ಪಟ್ಟರೂ ಹಣ್ಣುಗಳನ್ನು ಕೀಳಲು ಆಗಲಿಲ್ಲ. ಮಾವಿನ ಮರವು ಅವನನ್ನು ದೂರ ತಳ್ಳಿತು. ಸಂಪಿಗೆ “ಅಮ್ಮಾ ಅರಸನ ಮಗನಿಗೆ ಹಸಿವಾಗಿದೆ ತಿನ್ನಲು ಹಣ್ಣು ಕೊಡು” ಅಂದಳು. ಆಗ ಮಾವಿನ ಮರವು ತನ್ನ ರೆಂಬೆ ಕೊಂಬೆಗಳನ್ನು ಕೆಳಗೆ ತಂದಿತು. ಸಂಪಿಗೆ ಬೇಕಾದಶ್ಟು ಮಾವಿನಹಣ್ಣು ಕಿತ್ತಳು. ರೆಂಬೆ ಕೊಂಬೆಗಳು ಮತ್ತೆ ಮೇಲಕ್ಕೆ ಹೋದವು. ಆದರೆ ಇದನ್ನೆಲ್ಲಾ ಮುಕ್ಕಮ್ಮ ತನ್ನ ಮೂರನೇ ಕಣ್ಣನ್ನು ತೆರೆದು ನೋಡಿದಳು. ಸಂಪಿಗೆ ಮಾವಿನ ಹಣ್ಣುಗಳನ್ನು ಅರಸನ ಮಗನಿಗೆ ಕೊಟ್ಟಳು. ಅವನು ತಿಂದು ತುಂಬಾ ಸಂತಸಪಟ್ಟ. ಸಂಪಿಗೆಯನ್ನು ನೋಡಿ “ನೀನು ಮುಕಕ್ಕೆ ಮಣ್ಣು ಏಕೆ ಹಚ್ಚಿಕೊಂಡಿದ್ದಿ?” ಅಂತ ಕೇಳಿದ. ಅದಕ್ಕೆ ಸಂಪಿಗೆ “ನನ್ನ ಮುಕದ ಮೇಲೆ ಮೊಡವೆಗಳಾಗಿವೆ, ಕೆಮ್ಮಣ್ಣು ಹಚ್ಚಿಕೊಂಡರೆ ಅವು ಹೋಗುತ್ತವೆ ಅಂತ ನನ್ನ ಮಲತಾಯಿ ಹೇಳಿದಳು, ಅದಕ್ಕೆ ಹಚ್ಚಿಕೊಂಡೆ” ಅಂದ. ಸಂಪಿಗೆಯ ಗುಣಕ್ಕೆ ಅರಸನ ಮಗ ಮೆಚ್ಚಿದ “ನಾನು ಮದುವೆ ಯಾಗುವುದಾದರೆ ನಿನ್ನನ್ನೇ, ನಾನು ನಾಳೆ ನನ್ನ ತಂದೆಯನ್ನು ಕರೆದುಕೊಂಡು ಇಲ್ಲಿಗೇ ಬರುತ್ತೇನೆ. ನೀನೂ ಇಲ್ಲಿಗೆ ಬಾ” ಅಂತ ಹೇಳಿ ಹೊರಟು ಹೋದ.

ಇದನ್ನೆಲ್ಲಾ ಮುಕ್ಕಮ್ಮ ತನ್ನ ಮೂರನೇ ಕಣ್ಣು ತೆರೆದು ನೋಡಿದ್ದಳು ಮನೆಗೆ ಬಂದ ಮೇಲೆ ತನ್ನ ತಾಯಿಗೆ ಎಲ್ಲ ಹೇಳಿದಳು. ಆಗ ದುರ‍್ಗಮ್ಮಳಿಗೆ ಸಿಟ್ಟು ಬಂತು. ಸಂಪಿಗೆಯನ್ನು ಯಾವುದೋ ಒಬ್ಬ ಕುಡುಕನಿಗೆ ಮದುವೆ ಮಾಡಿ ಕೊಡಬೇಕು ಅಂತ ದುರ‍್ಗಮ್ಮ ಯೋಚಿಸಿದ್ದಳು. ಈಗ ಅರಸನ ಮಗನ ಜೊತೆ ಅವಳ ಮದುವೆ ಆಗುವುದು ಆಕೆಗೆ ತಾಳಲಾಗಲಿಲ್ಲ. ಹೊಟ್ಟೆಕಿಚ್ಚು ಪಟ್ಟ ದುರ‍್ಗಮ್ಮ ಅರಸನ ಮಗನ ಜೊತೆ ತನ್ನ ಮಗಳು ಮುಕ್ಕಮ್ಮಳ ಮದುವೆ ಹೇಗಾದರೂ ಮಾಡಬೇಕು ಅಂತ ಸಂಪಿಗೆಯನ್ನು ಮನೆಯಲ್ಲಿ ಕೂಡಿ ಹಾಕಿದಳು. ಮರುದಿನ ಮುಕ್ಕಮ್ಮಳಿಗೆ ಸಂಪಿಗೆಯ ಹಳೇ ಹರಿದ ಬಟ್ಟೆಗಳನ್ನು ತೊಡಿಸಿದಳು, ಕೈಗೆ ಕುಡಗೋಲು ಕೊಟ್ಟಳು, ಹಗ್ಗ ಕೊಟ್ಟಳು. ಅವಳ ಮುಕಕ್ಕೆ ಗುರುತು ಸಿಗಬಾರದೆಂದು ಕೆಮ್ಮಣ್ಣಿನ ಕೆಸರು ಹಚ್ಚಿದಳು. ದುರ‍್ಗಮ್ಮ ಮುಕ್ಕಮ್ಮ ಇಬ್ಬರೂ ಹೊಲಕ್ಕೆ ಬಂದರು ಮಾವಿನ ಮರದ ಬಳಿ ಕಾಯುತ್ತಾ ನಿಂತುಕೊಂಡರು.

ಅರಸನ ಮಗನು ತನ್ನ ತಂದೆಯನ್ನೂ, ಕೆಲವು ಸೈನಿಕರನ್ನು ಕರೆದುಕೊಂಡು ಬಂದ. ಮಾವಿನ ಮರದ ಬಳಿ ಬಂದು ತಾಯಿ ಮಗಳನ್ನು ನೋಡಿದ. ಮುಕ್ಕಮ್ಮಳು ಮುಕಕ್ಕೆ ಕೆಮ್ಮಣ್ಣು ಹಚ್ಚಿ ಕೊಂಡಿದ್ದರಿಂದ ಅವಳ ಗುರುತು ಸಿಗಲಿಲ್ಲ. ಅರಸನ ಮಗ ಮುಕ್ಕಮ್ಮಳನ್ನು ನೋಡಿದ, ಕೈಯಲ್ಲಿ ಕುಡಗೋಲು, ಹಗ್ಗ, ಬಟ್ಟೆಗಳು ಎಲ್ಲ ಸಂಪಿಗೆಯದ್ದೇ ಆದರೆ ದನಿ ಮಾತ್ರ ಬೇರೆಯಾಗಿದೆ ಅಂತ ತಿಳಿದುಕೊಂಡ. ಅರಸನ ಮಗನು ಅವಳಿಗೆ “ನೀನು ನೋಡಲಿಕ್ಕೆ ಸಂಪಿಗೆಯ ತರಹ ಕಾಣುತ್ತಾ ಇದ್ದಿ, ಆದರೆ ದನಿ ಬೇರೆಯಾಗಿದೆ” ಅಂದ. ದುರ‍್ಗಮ್ಮ “ನಿನ್ನೆ ಸಂಜೆ ಹೊತ್ತಿಗೆ ಒಂದು ಸೇರು ಬೆಣ್ಣೆ ತಿಂದಳು, ಅದಕ್ಕೆ ದನಿ ಕುಳಿತುಕೊಂಡಿದೆ ಬೇರೆಯಾಗಿ ಕೇಳಿಸುತ್ತಾ ಇದೆ” ಅಂದಳು. ಮುಕ್ಕಮ್ಮ “ನಾನು ನಿನಗೆ ನಿನ್ನೆ ಕೊಟ್ಟಂತೆ ಇವತ್ತು ಮಾವಿನ ಹಣ್ಣುಗಳನ್ನು ತಿನ್ನಲಿಕ್ಕೆ ಕೊಡುತ್ತೇನೆ. ಆಗ ನಿನಗೆ ನಾನು ಸಂಪಿಗೆಯೇ ಅಂತ ನಂಬಿಕೆ ಬರುತ್ತದೆ” ಅಂದಳು. ಮಾವಿನ ಮರದ ಕಡೆಗೆ ಕೈಚಾಚಿ “ಮಾವಿನ ಮರವೇ ನನಗೆ ಹಸಿವಾಗಿದೆ, ನನಗೆ ಹಣ್ಣು ಕೊಡು” ಅಂದಳು.

ಮಾವಿನ ಮರವು ತನ್ನ ರೆಂಬೆ ಕೊಂಬೆಗಳಿಂದ ಮುಕ್ಕಮ್ಮಳನ್ನು ಹೊಡೆದು ದೂರ ತಳ್ಳಿತು. ದುರ‍್ಗಮ್ಮ ಮಾವಿನ ಮರದ ಬಳಿ ಹೋಗಿ ಹಣ್ಣು ಕೀಳಲು ನೋಡಿದಳು ಅವಳಿಗೂ ಮಾವಿನ ಮರ ತನ್ನ ಉದ್ದನೆಯ ಕೊಂಬೆಗಳಿಂದ ಹೊಡೆದು ದೂರ ತಳ್ಳಿತು. ಅವಳು ಸಂಪಿಗೆಯಲ್ಲ ಅಂತ ತಿಳಿದು ಸಿಟ್ಟಿಗೆ ಬಂದ ಅರಸನ ಮಗನು “ಈ ತಾಯಿ ಮಗಳು ನನಗೆ ಮೋಸ ಮಾಡುತ್ತಿದ್ದಾರೆ, ಇವರನ್ನು ಸೆರೆಮನೆಗೆ ಹಾಕಿ” ಅಂತ ತನ್ನ ಸೈನಿಕರಿಗೆ ಆಗ್ನೆ ಮಾಡಿದ. ಅದಕ್ಕೆ ದುರ‍್ಗಮ್ಮ “ಅರಸನ ಮಗನೇ ನಮ್ಮನ್ನು ಸೆರೆಮನೆಗೆ ತಳ್ಳಬೇಡ, ನಾನು ಅತಿಯಾಸೆ ಪಟ್ಟು ನನ್ನ ಮಗಳನ್ನು ನಿನ್ನ ಜೊತೆ ಮದುವೆ ಮಾಡಿಸಬೇಕೆಂದು ಈ ಕಪಟವನ್ನು ಮಾಡಿದೆವು. ನೀನು ಮೆಚ್ಚಿದ ಸಂಪಿಗೆಯನ್ನು ಮನೆಯಲ್ಲಿ ಕೂಡಿ ಹಾಕಿ ನನ್ನ ಮಗಳ ಮುಕಕ್ಕೆ ಕೆಮ್ಮಣ್ಣು ಹಚ್ಚಿಕೊಂಡು ಇಲ್ಲಿಗೆ ಕರೆತಂದೆ” ಅಂತ ನಿಜವನ್ನು ಹೇಳಿದಳು. ಆಗ ಅರಸನೂ ಅರಸನ ಮಗನೂ ಸೈನಿಕರೂ ಮನೆಗೆ ಬಂದು ಸಂಪಿಗೆಯನ್ನು ಹೊರಗೆ ಕರೆದುಕೊಂಡು ಬಂದರು. ಸಂಪಿಗೆಯನ್ನು ಅರಸನ ಮಗನು ಸಡಗರ ಸಂಬ್ರಮದಿಂದ ತನ್ನ ಅರಮನೆಯಲ್ಲಿ ಮದುವೆಯಾದ. ಅಂದಿನಿಂದ ಸಂಪಿಗೆಯೂ ಅರಸನ ಮಗನೂ ಸುಕವಾಗಿ ಬಾಳತೊಡಗಿದರು.

(ಚಿತ್ರ ಸೆಲೆ: pixabay.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.