ಮಕ್ಕಳ ಕತೆ: ಜೀರುಂಡೆ ಮತ್ತು ಇರುವೆ

– ಮಾರಿಸನ್ ಮನೋಹರ್.

ಇರುವೆ, ಜೀರುಂಡೆ, ant, beetle

ಬೇಸಿಗೆ ಕಾಲ ಜೋರಾಗಿ ಇತ್ತು. ಹೊಲಗಳಲ್ಲಿ ಕಾಳುಗಳ ಒಕ್ಕಣೆ ರಾಶಿ ಮಾಡುವದರಲ್ಲಿ ಒಕ್ಕಲಿಗರು ಬಿಡುವಿಲ್ಲದೆ ಓಡಾಡುತ್ತಿದ್ದರು. ದೂರದಲ್ಲಿ ಒಂದು ದೊಡ್ಡ ಮಾವಿನಕಾಯಿ ಮರವಿತ್ತು. ಅದನ್ನು ದನ ಕಾಯುವ ಹುಡುಗರು ದಬ್ಬೇನ ಮಾವಿನಮರ ಅನ್ನುತ್ತಿದ್ದರು. ಬಿರು ಬೇಸಿಗೆ ಆದ್ದರಿಂದ ಸಣ್ಣ ಹಕ್ಕಿಗಳು, ಕಾಗೆ, ಗುಬ್ಬಿ, ಗೀಜಗಗಳು ನೆರಳನ್ನು ಅರಸಿಕೊಂಡು ದಬ್ಬೇನ ಮಾವಿನಮರಕ್ಕೆ ಬಂದು ತಂಪಾಗುತ್ತಿದ್ದವು.

ಇದೇ ಮಾವಿನ ಮರದ ಪೊಟರೆಯಲ್ಲಿ ಒಂದು ಇರುವೆ ಗೂಡಿತ್ತು. ಆ ಇರುವೆ ಗೂಡಿಂದ ಇರುವೆಗಳು ಹೊರಟು ಸಾಲಾಗಿ ಹರಿಯುತ್ತಾ ಹೊಲಗಳಿಗೆ ಹೋಗುತ್ತಿದ್ದವು. ಇರುವೆಗಳು ಹೊಲಗಳಿಗೆ ಹೋಗಿ, ಅಲ್ಲಿ ಒಕ್ಕಣೆ ಮಾಡುವ ಕಣದಲ್ಲಿ ತಾಳ್ಮೆಯಿಂದ ಕೂತಿರುತ್ತಿದ್ದವು. ಕಣದಲ್ಲಿ ಎತ್ತುಗಳು ತೆನೆಗಳನ್ನು ತುಳಿದು, ಕಾಳುಗಳ ರಾಶಿ ಮಾಡುವದನ್ನು ನೋಡುತ್ತಿದ್ದವು. ಕಾಳುಗಳು ತೆನೆಯಿಂದ ಉದುರಿದಾಗ ಇರುವೆಗಳು ಕಾಳನ್ನು ಬಾಯಲ್ಲಿ ಕಚ್ಚಿ ಹಿಡಿದು ತಮ್ಮ ಗೂಡಿಗೆ ಎಳೆದು ತರುತ್ತಾ ಇದ್ದವು. ಆ ಮಾವಿನ ಮರದಲ್ಲಿ ಇರುವೆ, ಹಕ್ಕಿಗಳಶ್ಟೇ ಅಲ್ಲದೇ ಜೀರುಂಡೆಗಳೂ ಇದ್ದವು. ಈ ಜೀರುಂಡೆಗಳು ಹಗಲೂ-ಇರುಳೂ ಕೇವಲ ಕಿರ‍್ರ ಕಿರ‍್ರ ಅಂತ ಕಿರುಚುರುತ್ತಾ ದಿನ ಕಳೆಯುತ್ತಿದ್ದವು. ಜೀರುಂಡೆಗಳು ಏನೂ ಕೆಲಸ ಮಾಡುತ್ತಿರಲಿಲ್ಲ. ಕೇವಲ ಒಂದಕ್ಕೊಂದು ಮಾತಾಡುತ್ತಾ ಮಾವಿನ ಮರದ ನೆರಳಲ್ಲಿ ಮಲಗುತ್ತಾ ಕಿರ‍್ರಕಿರ‍್ರ ಸದ್ದು ಮಾಡುತ್ತಾ ಇರುತ್ತಿದ್ದವು.

ಒಮ್ಮೆ ಒಂದು ಇರುವೆಯನ್ನು ತಡೆದು ಜೀರುಂಡೆಯೊಂದು, “ಪುಟ್ಟ ಇರುವೆಯೇ ನೀನು ತುಂಬಾ ಕಶ್ಟ ಪಟ್ಟು ಕಾಳುಗಳನ್ನು ತಂದು ನಿನ್ನ ಗೂಡಿನಲ್ಲಿ ಒಯ್ದು ಇಡುತ್ತಾ ಇದ್ದಿ. ಇಶ್ಟು ಕಶ್ಟ ಯಾಕೆ ಪಡುತ್ತಾ ಇದ್ದಿ? ನನ್ನ ಹಾಗೆ ಆರಾಮಾಗಿ ಇರು” ಅಂದಿತು. ಆಗ ಇರುವೆ “ಈಗ ಬೇಸಿಗೆ ಕಾಲ ಇದೆ. ಈವಾಗ ಕಾಳುಗಳ ರಾಶಿಯಾಗುತ್ತದೆ. ಈವಾಗಲೇ ನಾವು ಕಾಳುಗಳನ್ನು ತಂದು ನಮ್ಮ ಪೊಟರೆಯ ಗೂಡಿನ ಒಳಗೆ ಚೆನ್ನಾಗಿ ಇಡುತ್ತೇವೆ. ಮುಂದೆ ಮಳೆಗಾಲ ಬರುತ್ತದೆ ಆಗ ಯಾವ ಕಾಳೂ ಊಟವೂ ನಮಗೆ ದೊರಕದು. ಆಗ ನಾವು ಕೂಡಿಟ್ಟ ಕಾಳುಗಳನ್ನು ತಿನ್ನುತ್ತೇವೆ. ಗೂಡಿನ ಒಳಗೆ ಬೆಚ್ಚಗೆ ಇರುತ್ತೇವೆ” ಅಂದಿತು. ಆಗ ಜೀರುಂಡೆ “ನಾನು ಅಶ್ಟು ದೂರದ ಚಿಂತೆ ಮಾಡುವದಿಲ್ಲ, ಇವತ್ತು ಸಿಕ್ಕ ಊಟ ತಿನ್ನುತ್ತೇನೆ” ಅಂದಿತು. ಆಗ ಇರುವೆ “ಇದು ಚಿಂತೆ ಮಾಡುವದಲ್ಲ. ಕೆಟ್ಟ ಕಾಲಕ್ಕೆ ಇವತ್ತೇ ಸ್ವಲ್ಪ ಕಾಳನ್ನು ಕೂಡಿಡುವದು ಅನ್ನುತ್ತಾರೆ. ನಿನ್ನ ಜೊತೆ ಮಾತಾಡುತ್ತಾ ನಿಂತರೆ ನನ್ನ ಕೆಲಸ ಕೆಡುವದು” ಅಂದು ಮುಂದಕ್ಕೆ ಹೊರಟು ಹೋಯಿತು. ಜೀರುಂಡೆ ತನ್ನ ಕಿರ‍್ರ ಕಿರ‍್ರ ಸದ್ದು ಹೊರಡಿಸುವದನ್ನು ಮುಂದುವರೆಸಿತು.

ಇರುವೆಗಳು ಬೇಸಿಗೆಕಾಲವೆಲ್ಲಾ ದುಡಿದೂ ದುಡಿದೂ ಕಾಳುಗಳನ್ನು ಬೇಕಾದಶ್ಟು ತಮ್ಮ ಗೂಡಿನ ಒಳಗೆ ಕೂಡಿಟ್ಟವು. ಬೇಸಿಗೆ ಮುಗಿಯಿತು, ರಾಶಿ ಒಕ್ಕಣೆಯೂ ಮುಗಿದವು,. ಒಕ್ಕಲಿಗರು ತಮ್ಮ ಕಾಳುಗಳನ್ನು ಚೀಲಗಳಲ್ಲಿ ತುಂಬಿಕೊಂಡು ಮನೆ ಕಡೆಗೆ ಹೋದರು. ಬೇಸಿಗೆ ಮುಗಿದು ಮಳೆಗಾಲ ಶುರುವಾಯಿತು. ಹೊರಗೆ ದೋ ದೋ ಅನ್ನುತ್ತಾ ಮಳೆ ಸುರಿಯತೊಡಗಿತು. ದಬ್ಬೇನ ಮಾವಿನ ಮರದಲ್ಲಿ ಇದ್ದ ಜೀರುಂಡೆಗೆ ಎಲ್ಲಿಯೂ ಊಟ ದೊರಕಲಿಲ್ಲ. ಅದಕ್ಕೆ ತುಂಬಾ ಹಸಿವು ಆಯಿತು. ಜೀರುಂಡೆ ಬೇಸಿಗೆ ಕಾಲದಲ್ಲಿ ಏನನ್ನೂ ಕೂಡಿಡಲಿಲ್ಲ. ಅದರ ಮನೆಯಲ್ಲಿ ತಿನ್ನಲು ಮಳೆಗಾಲದಲ್ಲಿ ಏನೂ ಇರಲಿಲ್ಲ. ಆಗ ಅದಕ್ಕೆ ಹೊರಗೆ ಹೋಗಲೂ ಆಗಲಿಲ್ಲ. ಯಾಕೆಂದರೆ ಹೊರಗೆ ಮಳೆ ಎಡೆಬಿಡದೆ ಸುರಿಯುತ್ತಾ ಇತ್ತು. ಆಗ ಜೀರುಂಡೆಗೆ ಇರುವೆಯ ಮಾತು ನೆನಪಾಯಿತು. ಇರುವೆಯನ್ನು ನೆನಸಿಕೊಂಡು ಅದರ ಪೊಟರೆ ಗೂಡಿನ ಬಳಿ ಬಂದು ಕಿರ‍್ರ ಕಿರ‍್ರ ಅಂತ ಸದ್ದು ಹೊರಡಿಸಿತು.

ಇರುವೆ ತನ್ನ ಗೂಡಿನಿಂದ ಹೊರಗೆ ಬಂದು ಜೀರುಂಡೆಯನ್ನು ಗುರುತು ಹಿಡಿದು ಮಾತಾಡಿಸಿತು. ಜೀರುಂಡೆ “ಇರುವೆಯೇ ನಾನು ನಿನ್ನ ಮಾತನ್ನು ಕೇಳಲಿಲ್ಲ. ನಾನು ಬೇಸಿಗೆ ಕಾಲದಲ್ಲಿ ಕಾಳುಗಳನ್ನು ಕೂಡಿಡಲಿಲ್ಲ. ಈಗ ಹೊರಗೆ ಮಳೆ ಬೀಳುತ್ತಾ ಇದೆ. ನಾನು ಹಾರುತ್ತಾ ಹೋದೆ ನನಗೆ ಕಾಳು ಸಿಗಲಿಲ್ಲ. ನಾನು ನಡೆಯುತ್ತಾ ಹೋದೆ ನನಗೆ ಕಾಳು ಸಿಗಲಿಲ್ಲ. ನಾನು ಕುಪ್ಪಳಿಸುತ್ತಾ ಹೋದೆ ನನಗೆ ಕಾಳು ಸಿಗಲಿಲ್ಲ. ನಾನು ಈಗ ತುಂಬಾ ಹಸಿದು ಹೋಗಿದ್ದೇನೆ. ನಿನ್ನ ಬಳಿ ಕಾಳುಗಳು ಇದೆಯಲ್ಲಾ ಅದರಿಂದ ನನಗೆ ಸ್ವಲ್ಪ ಕೊಡುವಿಯೋ?” ಅಂತ ಕೇಳಿ ಕೊಂಡಿತು. ಆಗ ಇರುವೆ “ನಾನು ಬೇಸಿಗೆ ಕಾಲದಲ್ಲಿಯೇ ಬೇಕಾದಶ್ಟು ಕಾಳುಗಳನ್ನು ಕೂಡಿಸಿಟ್ಟೆ. ಅದರಿಂದ ನಿನಗೆ ಸ್ವಲ್ಪ ತೆಗೆದು ಕೊಡುತ್ತೇನೆ. ಅದರಿಂದ ನಿನ್ನ ಹಸಿವೆಯನ್ನು ತೀರಿಸಿಕೋ” ಅಂತ ಹೇಳಿ ಜೀರುಂಡೆಗೆ ತನ್ನ ಬಳಿಯಿಂದ ಸ್ವಲ್ಪ ಕಾಳುಗಳನ್ನು ಕೊಟ್ಟಿತು. ಜೀರುಂಡೆಗೆ ತುಂಬಾ ಸಂತಸವಾಯ್ತು. ಅದು “ಇರುವೆಯೇ ನೀನು ಮಾಡಿದ ನೆರವನ್ನು ನಾನು ಎಂದಿಗೂ ಮರೆಯಲಾರೆ. ನಿನ್ನ ಕಶ್ಟದ ಹೊತ್ತಿಗೆ ನಾನೂ ನಿನ್ನ ನೆರವಿಗೆ ಬರುತ್ತೇನೆ” ಎಂದು ಮಾತು ಕೊಟ್ಟು ಕಾಳುಗಳನ್ನು ತನ್ನ ಮ‌ನೆಗೆ ತಂದು ಊಟ ಮಾಡಿ ಹಸಿವು ನೀಗಿಸಿಕೊಂಡಿತು.

(ಚಿತ್ರ ಸೆಲೆ: youtube)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: