ಕರಾಳ – ಒಂದು ಕಿರುಬರಹ

– ವಿನಯ ಕುಲಕರ‍್ಣಿ.

ಬೆಂಬಿಡದೆ  ಹೋದಲೆಲ್ಲಾ ಅನುಸರಿಸಿಕೊಂಡು ಬಂದು ನಮ್ಮದೇ ಎನ್ನುವಶ್ಟು ಸ್ವಂತಿಕೆ ಉಳಿಸಿಕೊಂಡಿರುವ ನೆರಳು ಕೂಡ ಕತ್ತಲೆಯ ಸಬ್ಯ ರೂಪವೇ. ಬೆಳಕಿನ ವರ‍್ಣನೆ ಕೇಳಿ ಕೇಳಿ ಆಗಿದೆ, ಅಂದಕಾರವ ಓಡಿಸು ಎಂದು ವಿನಂತಿ ಬೇರೆ. ಪೂರ‍್ಣ ಪ್ರಮಾಣದಲ್ಲಿ ತನ್ನ ಅಸ್ತಿತ್ವ ಇಂದಿಗೂ ಇರುವುದು ಬೆಳಕಿಗಲ್ಲ. ಇಶ್ಟುದ್ದ ಹೋಗು ಎಂದರೆ ಅಡ್ಡ ಏನೂ ಸಿಗದಿದ್ದಲ್ಲಿ ಅದು ಹೋಗುತ್ತಲೇ ಇರುವುದು, ಹಾಗೆ ನಮಗೆ ಏನೂ ಕಾಣದು. ನಮ್ಮ ಮಿತಿಗಳೊಂದು, ಯಾವತ್ತಿದ್ದರೂ ಮೂಗಿನ ನೇರಕ್ಕೆ. ತೀರಾ ನಂಬಿಕಸ್ತ ಬಂದು ಹೇಳಿದರೂ ಕೇಳುವ ಒಪ್ಪುವ ವ್ಯವದಾನ, ಮನಸ್ತಿತಿ ಇಲ್ಲ. ಬೆಳಗಲು ಒಂದು ಮೂಲದ ಅವಶ್ಯಕತೆ. ಪ್ರಕರತೆ ಅತೀವವಾದಾಗ ಕಣ್ಣಿಗೆ ಸಹನೆಯಾಗದಿದ್ದರೂ ದಟ್ಟಿರುಳಿನಲ್ಲಿ ಹೀಗೆ ಅನಿಸಿಲ್ಲ. ಒಂದು ಸಣ್ಣ ಬೆಳಕು ಮನಸಿನ ಮೂಲೆಯಿಂದ ಅಲ್ಲಿಲ್ಲಿ ಬೀಳುತ್ತಲೇ ಇರುವುದು. ಆದರೆ ಜಗತ್ತೇ ಸಂಪೂರ‍್ಣ ಕತ್ತಲಾದಾಗ ದಿನವಲ್ಲ, ತಿಂಗಳಲ್ಲ, ವರ‍್ಶ ವರ‍್ಶಗಳವರೆಗೆ ಸ್ತಿತಿಯನ್ನು ಊಹಿಸಲೂ ಅಸಾದ್ಯ. ಇದರಲ್ಲೇ ತಿಳಿಯುವುದು ನಮಗೆ ತಿಳಿದುದರ, ಪ್ರಯೋಗವಿಲ್ಲದೆ ಒಪ್ಪಿಕೊಂಡದರ ಬ್ರಮೆ. ಕಾಣದಾದಾಗ ಎರಡು ಹೆಜ್ಜೆ ಮುಂದೆ ಹೋಗಲು ಬಿದ್ದೇ ಬೀಳುತ್ತೇವೆಂಬ ಕಾತರಿ. ಸಮತಟ್ಟಾದ ಜಾಗದ ಬಾಶೆ ಕೊಟ್ಟರೂ, ಎಶ್ಟು ಜೋರಾಗಿ ಓಡಲು ಸಾದ್ಯ, ಏನೂ ಕಾಣಿಸದಾದರೆ?

ಕತ್ತಲೆಯೇ ತಂಪು – ಹಿತ. ಒಗ್ಗಿಕೊಳ್ಳುವ ರೂಡಿ ನಮಗಿಲ್ಲ. ಕಾಲ ಕಾಲದಿಂದ ಕರಾಳ ಕತೆಗಳನ್ನ ತಲೆಯೊಳಗೆ ತುಂಬಿಸಿ ಅದಕ್ಕೊಂದು ಕುರೂಪವನ್ನ ಹುಟ್ಟಿಸಿದ್ದಾರೆ. ತಪ್ಪು ಅವರದ್ದೇ? ಇಲ್ಲ ಅವರಿಗೆ ಕಂಡಿದ್ದೇ ಅಶ್ಟು ಆ ರಾತ್ರಿಯಲ್ಲಿ. ಬಹುಶಹ ಒಬ್ಬರೇ ಇದ್ದಾಗ ಇನ್ನಶ್ಟು ಏನೋ ಕಂಡೀತು. ಪ್ರಮಾಣ? ಅವರ ಮಾತಿನ ಮೇಲಿನ ಗೌರವ ಅಶ್ಟೇ, ಇನ್ನೇನು. ದೆವ್ವ ಬೂತದ ವಿಶಯಗಳಲ್ಲ. ಅದೇನೋ ಹೆದರಿಕೆ ಒಬ್ಬೊಬ್ಬರೇ ನಡೆಯಲು. ಕಣ್ಣಿಗೆ ಬಿದ್ದರೆ ಮಾತ್ರ ಒಳ್ಳೆಯದೇ? ನಮಗೆ ಗೊತ್ತಿರದಿದ್ದುರ ಬಗೆಗಿನ ಅಂಜಿಕೆ ಎಂದೂ ಹೋಗದು. ಬೆಳಕಿನ ಅಬಾವದಲ್ಲಿ ಏನೂ ಕಾಣದು, ಎಂದಿಗೂ ನಮಗೆ ಏನೂ ಕಚಿತವಾಗಿ ತಿಳಿಯದು. ಇಲ್ಲಿಯವರೆಗೂ ಕಂಡಿರದ ಒಂದು ಹೊಸ ವಸ್ತುವನ್ನು ತೋರಿಸಿ ಹತ್ತು ಜನರಿಗೆ ವಿವರಣೆ ಕೇಳಿದಂತೆ. ತಲೆಗೊಂದರಂತೆ ಮಾತುಗಳು. ಸಾಮ್ಯತೆ ಅಲ್ಲಲ್ಲಿ, ಆದರೆ ಮೂಲದಲ್ಲಿ ಅವರ ನೋಟ ಬೇರೆಯೇ. ಹಾಗೆಯೆ ನಮ್ಮನ್ನು ಬೇತಾಳವಾಗಿ ಅಂಟಿಕೊಂಡಿರುವ ಗಟನೆಗಳು ವ್ಯಕ್ತಿಗಳು. ಇಂದಿಲ್ಲದಿದ್ದರೇನಾಯಿತು? ಅವರು ಬಿಟ್ಟು ಹೋಗಿರುವ ನೆನಪುಗಳು ಮಾಸದೆ ಕತ್ತಲಲ್ಲಿ ಕರಗಿಕೊಂಡು ಒಂದಾಗಿವೆ. ಬಾವಿಯೊಂದಕ್ಕೆ ಲೋಟ ನೀರು ಚೆಲ್ಲಿ ಮತ್ತೆ ಅದರಿಂದಲೇ ಇನ್ನೊಂದು ಲೋಟದಿಂದ ಆರಿಸಿದರೆ ಒಂದಿಶ್ಟಾದರೂ ಹಳೆಯ ನೀರಿನ ಅಂಶವಿರಬಹುದಲ್ಲವೇ? ಅದೇ ತಾನೇ ನಮ್ಮ ಬಯಕೆ, ನಮ್ಮ ಅರಿವಿನ ಜೊತೆ ಅಂಟಿಕೊಂಡಿರುವ ವಿಶಯಗಳೇ ಕಣ್ಣ ಮುಂದೆ ಇರಬೇಕು. ಗೊತ್ತಿರುವುದನ್ನು ಎದುರಿಸಲು ಅಶ್ಟೇನೂ ದೈರ‍್ಯ ಬೇಕಿಲ್ಲ.

ಪ್ರಯತ್ನ ಆಗಿ ಹೋಗಿದೆ ನಡೆಯುತ್ತಲೂ ಇದೆ. ಹೆಕ್ಕಿ ತೆಗೆಯುವ ಆಚೆ ನೂಕುವ ಪ್ರಯತ್ನ ಪಟ್ಟಶ್ಟು ಅವರು ಅವರ ನೆನಪುಗಳು ಮನಸ್ಸಿನ ಬಾವಿಯಲ್ಲಿ ಇನ್ನು ಆಳಕ್ಕೆ ಇಳಿಯುತ್ತಿವೆ. ಕಡೆಗೊಂದು ದಿನ ಎಳೆಯಲು ಸಿಗದಶ್ಟು ದೂರ ಅಡಗಿಕೊಳ್ಳಬಹುದು. ಆದರೆ ಅವರು ಅಲ್ಲಿರುವ ಸತ್ಯ ಮಾತ್ರ ಪ್ರತಿ ಕ್ಶಣಕ್ಕೆ ಎಚ್ಚರವಾಗಿಬಿಡುತ್ತದೆ. ಇಂದಿನ ಪ್ರತಿ ಕೆಡಕುಗಳಲ್ಲಿ ಅವರ ಚಾಯೆಯ ಅಟ್ಟಹಾಸ ಮುಂದುವರೆದೇ ಇರುತ್ತದೆ. ಎಲ್ಲಿಂದ ಬಿಡುಗಡೆ? ಅವರೆಲ್ಲ ನಮ್ಮ ಬಾಗವೇ. ಅವರ ಬಗ್ಗೆ ಇರುವ ಕಲ್ಪನೆ ಕೂಡ ನಮ್ಮ ಸ್ರುಶ್ಟಿಯೇ. ಯತ್ನಿಸಿ ನೋಡಿ ಪರಿಪೂರ‍್ಣ ಕತ್ತಲೆಯಲ್ಲಿ ಮತ್ತೆ ಮತ್ತೆ ಬೇಟಿ ನೀಡುವವರು ಅವರೇ. ಯಾತನೆಗಳನ್ನು ಮನಸ್ಸು ಹತ್ತಿರಕ್ಕೆ ಇಟ್ಟುಕೊಳ್ಳುತ್ತದೆ. ನಾವು ನಿದ್ದೆಗೆ ಜಾರಿದಾಗ ಅದು ಕೂಡ ನಿದ್ದೆ ಬಂದು ಅತ್ತಿತ್ತ ಆಕಳಿಸಿ, ಸಡಿಲಿಸಿ ಅವುಗಳನ್ನ ಕನಸಿನಲ್ಲಿ ತೂರುತ್ತದೆ. ಮತ್ತದೇ ನರಳಾಟಕ್ಕೆ ಹೋಗಲು ಅವರಿಗೆ ಇಶ್ಟವಿಲ್ಲ. ಸಾವು ದೇಹಕ್ಕೆ, ಅವರ ಅಸ್ತಿತ್ವ ಇನ್ನೂ ಅದೆಶ್ಟು ದಿನವೋ.

ಬೆಳಕು ಬೇಕು ಮೈಯುರಿಯುವ ಬಿಸಿಲಲ್ಲ. ಕಣ್ಣಿಗೆ ಹಿತವೆನಿಸುವಶ್ಟು, ಸ್ಪಶ್ಟವಾಗಿ ಬೇಕಿದ್ದೆಲ್ಲ ಕಾಣುವಶ್ಟು. ಒಂದರ ಆಚೀಚೆಗಳು ತಿಳಿದ ಮೇಲೆ ಅದರ ಪ್ರಾಮುಕ್ಯತೆ ತಾನಾಗೇ ಇಳಿಯುವುದು. ಅದಕ್ಕೆ ಆತ್ಮಾವಲೋಕನ ಮುಕ್ಯ. ನಮ್ಮೊಡನೆ ನಾವು  ಮಾತನಾಡಲಿಕ್ಕೇನು ಸಂಕೋಚ. ಎಶ್ಟೇ ಜರಿದುಕೊಂಡರೂ ನಮ್ಮ ತಪ್ಪುಗಳಿಗಾಗಿ, ಕಡೆಗೆ ಮತ್ತದೇ ದೇಹ ಮುಂದೆ ನಡೆಯಲೇಬೇಕು ಕೊನೆ ಕಾಣುವವರೆಗೂ. ಬೆಳಕಿನ ಮೂಲ ಹುಡುಕಿ ಅಲ್ಲಿ ಕೂರುವುದು ಹುಚ್ಚುತನವೇ ಅದಕ್ಕೂ ಅದರ ಮಿತಿ. ಸೂರ‍್ಯನೇ ಅರ‍್ದ ದಿನಕ್ಕೆ ಸೀಮಿತ ಕಡೆಗೊಮ್ಮೆ ಅವನಿಲ್ಲವಾದರೆ ಕಟಿಣ ಕತ್ತಲೆಗೆ ಹಬ್ಬಲು ಒಂದು ಕ್ಶಣ ಸಾಕು. ಎಲ್ಲರನ್ನು ಹೊಕ್ಕು ಮನಸ್ಸನ್ನು ಬಿಚ್ಚಿಟ್ಟು ಅವರಿವರನ್ನ ಹೊರಗೆ ತಂದು, ಗಟಿಸಿದವುಗಳ ಮತ್ತೆ ಮತ್ತೆ ಪುನರಾವರ‍್ತನೆ. ಇದರಿಂದ ಬಿಡುಗಡೆ ಕಶ್ಟ. ನಾವೇ ಚೂರು ಆಸರೆಯನ್ನು ಬಯಸದೆ ಏಕಾಂಗಿಯಾಗಿ ಹುಡುಕ ಹೊರಟು ಹಿಡಿ ಹಿಡಿದು ಉಸಿರುಗಟ್ಟಿಸಬೇಕು. ಆದರೂ ಶಕ್ತಿಶಾಲಿಗಳವು ಕೆಟ್ಟ ನೆನಪುಗಳು, ನಮ್ಮಂತೆ ಜಡ ವಸ್ತುಗಳಲ್ಲ. ಸೂಕ್ಶ್ಮವಾಗಿ ಸದ್ಯಕ್ಕೆ ಹಿಂಸರಿದು ಮತ್ತೆ ಎರಗುತ್ತವೆ. ಸತತ ಹೋರಾಟ ಆಯುದ ಹೊರಲೇಬೇಕು ಕೈ ಸೋಲುವವರೆಗೂ ತಲೆ ಉರುಳುವವರೆಗೂ. ಬೆಳಕಿನ ಗೆಲುವಿನ ಬ್ರಮೆ ಹೋದಶ್ಟು ಒಳ್ಳೆಯದು. ಕಡೆಗೆ ನಿತ್ಯ ಅಸ್ತಿತ್ವ ಕತ್ತಲೆಗೆ. ಕಶ್ಟವಾದರೂ ಸತ್ಯ ಅದಕ್ಕೆ ಮೂಲವಿಲ್ಲ ಅದನ್ನು ಸಾರುವ ಮಾದ್ಯಮ ಬೇಕಿಲ್ಲ.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: