ಎಳವೆಯ ನೆನಪುಗಳು : ಲಕ್ಶ್ಮೀ ಅಜ್ಜಿ ಮತ್ತು ತಳ್ಳುಗಾಡಿಯವರು

– ಮಾರಿಸನ್ ಮನೋಹರ್.

ಸರಕಾರಿ ಸ್ಕೂಲು, Govt School

ನಾನು ಪ್ರೈಮರಿ ಸ್ಕೂಲಿನಲ್ಲಿ ಕಲಿಯುತ್ತಾ ಇದ್ದಾಗ ನಡುಹೊತ್ತಿಗೆ ಊಟದ ಬಿಡುವು ಇರುತ್ತಿತ್ತು. ಊಟದ ಬಿಡುವಿನಲ್ಲಿ ತುಂಬಾ ಇಂಟರೆಸ್ಟಿಂಗ್ ಜನರು ನನ್ನ ಸ್ಕೂಲಿಗೆ ಬರುತ್ತಿದ್ದರು! ಜಾಪಳಕಾಯಿ(ಸೀಬೇ ಹಣ್ಣು), ಬಾರೆಕಾಯಿ, ಕಿತ್ತಳೆ, ಮೋಸಂಬಿ ಮಾರುವ ಲಕ್ಶ್ಮೀ, ಮುದುಕನ ಕೂದಲು(ಸೋನ್ ಪಾಪಡಿ ತರಹದ ಸಿಹಿತಿಂಡಿ), ಉಪ್ಪು-ಶೇಂಗಾ, ಬಟಾಣಿ ಮಾರುವವನು, ಬರ‍್ಪಿನಿಂದ (ಮಂಜುಗಡ್ಡೆ) ಐಸ್ ಕ್ರೀಮ್ ಮಾಡುವವರು. ಪಾನಿಪೂರಿ, ಸಮೋಸಾ ಮಾರುವವನು ಹೀಗೆ. ಇವರು ಬಂದರೆ ನಮ್ಮ ಕುಶಿಯ ಕಟ್ಟೆ ಒಡೆಯುತ್ತಿತ್ತು. ಮುಂಜಾನೆಯಿಂದ ಪಾಟ ಕೇಳಿ ಕೇಳಿ ನಮಗೆ ತಾಳಲಾಗದ ಸುಸ್ತು ಬಂದಿರುತ್ತಿತ್ತು. ಬೆಲ್ ಹೊಡೆದ ಒಡನೆ ಜೈಲಿನಿಂದ ತುಸು ಹೊತ್ತು ಬಿಡುಗಡೆಯಾದ ಕೈದಿಗಳಂತೆ ಹೊರಗೆ ರಬಸದಿಂದ ಓಡಿ ಬರುತ್ತಿದ್ದೆವು. ಆಗ ನಮಗೆ ಎದುರಾಗುತ್ತಿದ್ದರು ಈ ನಮ್ಮ ತಿಂಡಿ ತಿನಿಸು ಹಣ್ಣು ಮಾರುವವರು. ಅವರು ನಮಗಾಗಿಯೇ ಕಾಯುತ್ತಾ ಇದ್ದ ನಮ್ಮ ನೆಂಟರು! ಸ್ಕೂಲಿಗೆ ಎಲ್ಲರೂ ಊಟದ ಡಬ್ಬಿ ತರುತ್ತಿದ್ದೆವು. ಆದರೆ ಇವರ ಬಳಿಯಿಂದ ಏನಾದರೂ ನಾವು ತಿನ್ನದಿದ್ದರೆ ಮಂಕಾಗುತ್ತಿದ್ದೆವು.

ಲಕ್ಶ್ಮೀ ಅಜ್ಜಿ ನಮಗೆ ಎಲ್ಲಕ್ಕಿಂತ ಪ್ರಿಯವಾದ ಅಜ್ಜಿ. ನಮ್ಮ ಶಾಲೆಯ ಎಲ್ಲ ಮಕ್ಕಳಿಗೂ ಮಮತೆಯ ಅಜ್ಜಿಯಾಗಿದ್ದಳು. ಮಳೆ, ಬಿಸಿಲು, ಗಾಳಿ ಏನೇ ಇರಲಿ ಅಜ್ಜಿ ನಡುಹಗಲು ಹೊತ್ತಿಗೆ ನಮ್ಮ ಸ್ಕೂಲಿನ ಮುಂದೆ ಬಂದು ಕೂತಿರುತ್ತಿದ್ದಳು. ತನ್ನ ಊರಿನಿಂದ ಆಟೋದಲ್ಲಿ ಪಟ್ಟಣಕ್ಕೆ ಬಂದು ಅಲ್ಲಿ ಹಣ್ಣುಗಳನ್ನು ಸಗಟು ಕರೀದಿ ಮಾಡಿ ನಡೆಯುತ್ತಲೇ ಹಣ್ಣಿನ ಮಾರುಕಟ್ಟೆಯಿಂದ ನಮ್ಮ ಸ್ಕೂಲಿಗೆ ಬರುತ್ತಿದ್ದಳು. ಕೆಲವೊಂದು ಸಲ ತಡವಾಗಿ ಬರುತ್ತಿದ್ದಳು. ಆಗ ಎಲ್ಲ ಮಕ್ಕಳು ಕಾತರದಿಂದ ಇವಳ ಹಾದಿ ಕಾಯುತ್ತಿದ್ದ ನೋಟ ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಅಜ್ಜಿ ತಲೆ ಮೇಲೆ ಬುಟ್ಟಿ ಹೊತ್ತುಕೊಂಡು, ಬಾಯಲ್ಲಿ ಎಲೆ ಅಡಿಕೆ ಮೆಲ್ಲುತ್ತಾ ನಗು ಮೊಗದಿಂದ ನಮ್ಮ ಅರಳಿದ ಮುಕಗಳಿಗೆ ಅಕ್ಕರೆ ತೋರಿಸುತ್ತಾ ನಮ್ಮ ಸ್ಕೂಲಿನ ಮುಂದೆ ಇದ್ದ ಕೆಂಪು ಹೂವಿನ (ಗುಲ್‌ಮೋಹರ್) ಮರದ ಕೆಳಗೆ ಕೂಡುತ್ತಿದ್ದಳು. ನಾವು ಅವಳ ಸುತ್ತಲೂ ಗುಂಪಾಗಿ ನೆರೆಯುತ್ತಿದ್ದೆವು. ಅವಳ ಬುಟ್ಟಿ ಕೆಳಗೆ ಇಳಿಸಲು ನಮ್ಮಲ್ಲಿನ ಉದ್ದವಾದ ಹುಡುಗ ಅತವಾ ಹುಡುಗಿ ನೆರವಾಗುತ್ತಿದ್ದರು.

ಅಜ್ಜಿ ಕೆಳಗೆ ಕೂತ ಮೇಲೆ ಹಣ್ಣುಗಳ ಮೇಲೆ ಮುಚ್ಚಿದ್ದ ಕುಂಚಿಯನ್ನು (ಹಳ್ಳಿಗರು ಮಳೆ ತಪ್ಪಿಸಲು ಬಳಸುವ ಬಟ್ಟೆ) ತೆಗೆದು ಅಣಿಯಾಗುತ್ತಿದ್ದಳು. ತನ್ನ ಬಳಿ ಇದ್ದ ಹರಿತವಾದ ಚಾಕು ಹಿಡಿದು ಸೀಬೆ ಕಾಯಿಗಳ ಮೇಲಿನ ತುಂಬನ್ನು ಚಕ್ ಅಂತ ಹಾರಿಸಿ ಕರ್ ಕರ್ ಅಂತ ಸೀಬೆ ಕಾಯಿ ನಾಲ್ಕು ಹೋಳಾಗಿ ಕತ್ತರಿಸಿ ಅದಕ್ಕೆ ಚಾಕುವಿನಿಂದ ಉಪ್ಪು ಸವರಿ ನಮ್ಮ ಕೈಗೆ ಕೊಡುತ್ತಾ ಇದ್ದಳು. ಅವಳ ಚಾಕಚಕ್ಯತೆ ನನ್ನನ್ನು ಬೆರಗುಗೊಳಿಸುತ್ತಿತ್ತು. ಅವಳು ಮೊದಲೇ ಹಣ ತೆಗೆದುಕೊಳ್ಳುವ ಕಮರ‍್ಶಿಯಲ್ ಬುದ್ದಿಯವಳೂ ಆಗಿದ್ದಳು. ಮಕ್ಕಳನ್ನು ಹುಸಿ ಬೆದರಿಸುತ್ತಾ, ಮಮತೆಯನ್ನೂ ತೋರಿಸುತ್ತಾ ಹಣ್ಣು ಮಾರುತ್ತಿದ್ದಳು. ಕೆಲವು ಮಕ್ಕಳು ಹಣ ತರದೇ ಅವಳ ಬಳಿ ಸಾಲ ಮಾಡಿ ಹಣ್ಣು ತಿನ್ನುತ್ತಾ ಇದ್ದರು. ಅವಳ ನೆನಪಿನ ಶಕ್ತಿ ತುಂಬಾ ಚುರುಕು. ಯಾರಿಗೂ ಬಿಡದೆ ಸಾಲ ವಸೂಲಿ ಮಾಡುತ್ತಿದ್ದಳು. ಸಾಲ ಮಾಡಿದ ಹುಡುಗ ಹುಡುಗಿಯರು ಕೆಲವು ದಿನ ಅವಳಿಂದ ಮುಕ ತಪ್ಪಿಸಿ ಓಡಾಡುತ್ತಿದ್ದರು! ಆಗ ಅವಳು ದೂರದಿಂದ “ಏಯ್…ಏಯ್…” ಅಂತ ಕರೆಯುತ್ತಿದ್ದಳು. ನಮ್ಮಲ್ಲಿ ಹಣ ಇಲ್ಲದಿದ್ದಾಗ ನಾವು ಒಬ್ಬರಿಗೊಬ್ಬರು “ಇವತ್ತು ನೀನು ತಿನ್ನಿಸು; ನಾನು ನಾಳೆ ತಿನ್ನಿಸುತ್ತೇನೆ” ಅಂತ ವಾಗ್ದಾನ ಮಾಡಿಕೊಳ್ಳುತ್ತಿದ್ದೆವು. ಹುಡುಗರು ಲಕ್ಶ್ಮೀ ಅಜ್ಜಿ ಕೊಟ್ಟ ಸೀಬೆ ಹಣ್ಣು ತೆಗೆದುಕೊಂಡು ಬದಿಗೆ ಸರಿಯುತ್ತಿದ್ದರು. ಆದರೆ ಹುಡುಗಿಯರು ಅವಳ ಬುಟ್ಟಿಯಲ್ಲಿ ಕೈಹಾಕಿ ಆರಿಸುತ್ತಾ ಕೂತು ಕೊಳ್ಳುತ್ತಿದ್ದರು. ಆಗ ಅಜ್ಜಿ “ಎಶ್ಟೊತ್ತೇ ನೀನು ಆರಿಸುವುದು? ಬೇಕಾದರೆ ತಕ್ಕೋ ಇಲ್ಲಾಂದರೆ ದೂರ ಸರಿ, ನನ್ನ ಬುಟ್ಟಿ ತಲೆ ಕೆಳಗೆ ಮಾಡಬೇಡ” ಅಂತ ಬೈದು ಬಿಡುತ್ತಿದ್ದಳು. ಅಜ್ಜಿ ಯಾವಾಗಲೂ ಚೆನ್ನಾಗಿರುವ ಸೀಬೆ, ಮೋಸಂಬಿ, ಕಿತ್ತಳೆ, ಬಾರೆಹಣ್ಣು ಮಾರುತ್ತಿದ್ದಳು, ಕೆಟ್ಟ ಹಣ್ಣುಗಳನ್ನು ಎಂದೂ ಮಾರುತ್ತಿರಲಿಲ್ಲ.

ಲಕ್ಶ್ಮೀ ಅಜ್ಜಿಗೂ ನಮ್ಮ ಸ್ಕೂಲಿನ ಹೆಡ್ ಮಾಸ್ಟರ್ ಗೂ ಒಂತರಾ ಹಾವು ಮುಂಗುಸಿ ನಂಟು! ಸ್ಕೂಲಿನ ಬಳಿ ಹಣ್ಣು ತಿಂಡಿ ಮಾರುವವರನ್ನು ಕಂಡರೆ ಹೆಡ್ ಮಾಸ್ಟರ್ ಕಿಡಿ ಕಾರುತ್ತಾ ಇದ್ದರು. ಅಜ್ಜಿಯ ಮೇಲಿನ ಅವರ ಮುನಿಸಿಗೆ ಕಾರಣವಿತ್ತು. ಹೆಡ್ ಮಾಸ್ಟರ್ ಬೈದಾಗ ಐಸ್ ಕ್ರೀಂ ಮಾರುವವನು, ಉಪ್ಪುಕಡಲೆ ಮಾರುವವನೂ ಜಾಗ ಕಾಲಿ ಮಾಡುತ್ತಿದ್ದರು, ಆದರೆ ಲಕ್ಶ್ಮೀ ಅಜ್ಜಿ ಕದಲುತ್ತಿರಲಿಲ್ಲ. ಒಂದು ದಿನ ಹೆಡ್ ಮಾಸ್ಟರ್ ಕ್ಲಾಸಿನಲ್ಲಿ ನಮಗೆ ಪಾಟ ಮಾಡುತ್ತಾ “ಜಾಪಳಕಾಯಿ ಮಾರುವವಳು ತಿಪ್ಪೆಯಲ್ಲಿ ಬೆಳೆದದ್ದನ್ನು ತಂದು ನಿಮಗೆ ಮಾರುತ್ತಾಳೆ” ಅಂದು ಬಿಟ್ಟರು. ಇದನ್ನು ಮಕ್ಕಳು ಬಂದು ಅಜ್ಜಿಗೆ ಬಿಡುವಿನ ಹೊತ್ತಿನಲ್ಲಿ ಹೇಳಿದ್ದರು. ಆಗ ಅವಳು ಹೆಡ್ ಮಾಸ್ಟರ್ ಸಿಕ್ಕಾಗ “ನೀವು ಮಕ್ಕಳಿಗೆ ನನ್ನ‌ ಬಳಿ ಹಣ್ಣು ತೆಗೆದುಕೊಳ್ಳಬೇಡಿ ಅಂತ ಹೇಳಿ, ಆದರೆ ನಾನು ತಿಪ್ಪೆಯಲ್ಲಿ ಬೆಳೆದ ಹಣ್ಣು ಮಾರುತ್ತೇನೆ ಅಂತ ಈ ಸಣ್ಣ ಮಕ್ಕಳಿಗೆ ಸುಳ್ಳು ಹೇಳಬೇಡಿ” ಅಂತ ಅವರಿಗೇ ಪಾಟ ಮಾಡಿದ್ದಳು. ಅವಳು ಯಾರಿಗೂ ಹೆದರದ ಹೆಂಗಸಾಗಿದ್ದಳು. ಹೆದರಿಕೊಂಡಿದ್ದರೆ ಅವಳು ಯಾವ ಸ್ಕೂಲಿನ ಮುಂದೆಯೂ ಹಣ್ಣು ಮಾರಲಾಗುತ್ತಿರಲಿಲ್ಲವೇನೋ?!

ಉಪ್ಪುಕಡಲೆ (ಉಪ್ಪಿನ ಶೇಂಗಾ) ಮಾರುವವನ ಬಂಡಿ ಬೇರೆ ಬಗೆಯದ್ದಾಗಿತ್ತು. ಅದರ ಮಾಟ (ಡಿಸೈನ್) ಇತರೆ ತಳ್ಳುಗಾಡಿಗಳ ಹಾಗೆ ನಾಲ್ಕು ಗಾಲಿಗಳದ್ದು ಆಗಿರಲಿಲ್ಲ. ಅದು ಮೂರು ಗಾಲಿಗಳ ಸಣ್ಣ ತಳ್ಳು ಗಾಡಿಯಾಗಿತ್ತು. ಅವನ ಬಂಡಿಯ ಮೇಲೆ ನಾಲ್ಕು ಮನೆಗಳು ಇದ್ದವು. ಒಂದರಲ್ಲಿ ಉಪ್ಪಿನ ಶೇಂಗಾ ಎರಡನೆ ಮನೆಯಲ್ಲಿ ಕರಿದ ಹಚ್ಚನೆಯ(ಹಸಿರು) ಬಟಾಣಿ, ಮೂರನೆಯ ಮನೆಯಲ್ಲಿ ಕರಿದ ಕೆಂಪು ಬಟಾಣಿ ಮತ್ತು ನಾಲ್ಕನೆಯ ಮನೆಯಲ್ಲಿ ಹುರಿದ ಉಪ್ಪು ಬಟಾಣಿ ಇರುತ್ತಿದ್ದವು. ಗೇಣು ಉದ್ದದಶ್ಟು ಇರುವ ಚುಡುವಾ ಪುಡಿಯಲ್ಲಿ (ಕೊಳವೆ ಆಕಾರಕ್ಕೆ ಸುತ್ತಿದ ಪೇಪರ್) ನಮಗೆ ಶೇಂಗಾ ಕೊಡುತ್ತಿದ್ದ. ಉಪ್ಪು ಕಡಲೆ ನಮಗೆ ಎಶ್ಟು ತಿಂದರೂ ಸಾಕಾಗುತ್ತಿರಲಿಲ್ಲ. ಅಶ್ಟು ರುಚಿಯಾಗಿ ಮಾಡಿಕೊಂಡು ಬರುತ್ತಿದ್ದ. “ನೀನು ಇವುಗಳನ್ನು ಎಲ್ಲಿಂದ ತರುತ್ತೀ?” ಅಂತ ಕೇಳುತ್ತಿದ್ದೆವು. ಅವನು “ಇವನ್ನೆಲ್ಲಾ ಮನೆಯಲ್ಲೇ ಮಾಡುತ್ತೇವೆ” ಅಂದಿದ್ದ. ಅದು ನಮಗೆ ಅಚ್ಚರಿಯ ಮಾತಾಗಿತ್ತು. ಮನೆಯಲ್ಲಿ ಅಮ್ಮನಿಗೆ “ಪಲ್ಲೀ (ಉಪ್ಕಡಲೆ) ಮಾರುವವನ ಹಾಗೆ ಶೇಂಗಾ ಹುರಿದು ಕೊಡು” ಅಂತ ದುಂಬಾಲು ಬೀಳುತ್ತಿದ್ದೆ. ಆಗ ಅಮ್ಮ “ಏಯ್ ಹೋಗೋ! ಅದನ್ನು ಮಾಡಲು ಸೌದೆಬಟ್ಟಿ ಬೇಕಾಗುತ್ತೆ ಅದನ್ನು ಎಲ್ಲಿಂದ ತರಬೇಕು? ಅದನ್ನ ಮನೆಯಲ್ಲಿ ಮಾಡಲ್ಲ. ಬೇಕಾದರೆ ಹಣ ಕೊಡುತ್ತೇನೆ, ಅವನ ಬಳಿಯೇ ನಾಳೆ ಕೊಂಡುಕೋ” ಅಂತ ಸಿಡಿಸಿ ಹಾಕುತ್ತಿದ್ದಳು. ಸಾಲ‌ ಮಾಡಿ ಹಣ್ಣು ತಿಂಡಿ ತಿನ್ನುವ ಹುಡುಗರು ಕೆಲವೊಮ್ಮೆ ಎಲ್ಲ‌ ತಳ್ಳುಗಾಡಿಯವರ ಬಳಿ ಸಾಲ‌ ಮಾಡಿ ಸ್ಕೂಲಿಗೇ ಒಂದು‌ ದಿನದ ಚಕ್ಕರ್ ಹೊಡೆಯುತ್ತಿದ್ದರು!

‘ಮುದುಕನ ಕೂದಲು’ (ಬುಡ್ಡೆ ಕೆ ಬಾಲ್ – ಸಿಹಿ ಪೇಣಿಯ ತರಹ ಇರುತ್ತದೆ, ಬಿಳಿ ಬಣ್ಣದ ಎಳೆಎಳೆಗಳು) ಮಾರುವವನು ತನ್ನ ನಾಲ್ಕು ಗಾಲಿಗಳ ತಳ್ಳುಗಾಡಿ ತಗೊಂಡು ಬರುತ್ತಿದ್ದ. ಅವನ ಬಂಡಿಯ ಮೇಲೆ ಒಂದು ಗಾಜಿನ ಬಾಕ್ಸ್ ಇರುತ್ತಿತ್ತು. ಅದರ ಬಾಯನ್ನು ಗಟ್ಟಿಯಾಗಿ ಮುಚ್ವುತ್ತಿದ್ದ. ಗಾಳಿ ಗಾಜಿನ ಬಾಕ್ಸ್ ಒಳಗೆ ಹೋದಾಗ ಅದು ಕರಗಿ ನೀರಾಗುತ್ತಿತ್ತು. ಅವನು ಮುದುಕನ ಸಿಹಿ ಕೂದಲುಗಳನ್ನು ಪೇಪರಿನಲ್ಲಿ ಹಾಕಿ ಕೊಡುತ್ತಿದ್ದ. ಮೊದಲ ಸಲ ಅದು ಏನು ಅಂತ ಪಪ್ಪನಿಗೆ ಚಿಕ್ಕವನಿದ್ದಾಗ ಕೇಳಿದ್ದೆ. ಅವರು “ಅದು ಬುಡ್ಡೆ ಕೆ ಬಾಲ್ ಅಂದರೆ ಮುದುಕನ ಕೂದಲು” ಅಂದಿದ್ದರು. ತಿನ್ನುತ್ತಿಯಾ ಅಂದರೆ ನಾನು ಮುದುಕನ ಕೂದಲು ಎಂದಿಗೂ ತಿನ್ನುವದೇ ಇಲ್ಲ ಅಂತ ಹೇಳಿದ್ದೆ! ಬರ‍್ಪನ್ನು ರಂದದಿಂದ ಕೆರೆದು ಕೆರೆದು ಮಂಜುಗಡ್ಡೆಯ ತುಣುಕುಗಳನ್ನು ಗ್ಲಾಸಿಗೆ ತುಂಬಿ ಒತ್ತಿ, ಕಡ್ಡಿ ಸಿಕ್ಕಿಸಿ ಹೊರಗೆ ತೆಗೆದು ಅದರ ಮೇಲೆ ಬಣ್ಣ ಬಣ್ಣದ ಸಿಹಿ ನೀರನ್ನು ಚಿಮುಕಿಸಿ, ಅಲಂಕಾರ ಮಾಡಿ ಬರ‍್ಪಿನ ಐಸ್ ಕ್ರೀಂ ಮಾಡಿ ಮಾರುವವನಿದ್ದ. ಬೇಸಿಗೆಯ ಕಾಲದಲ್ಲಿ ಅವನು ಬರುತ್ತಿದ್ದ. ಅವನು ಬರ‍್ಪಿನ ಐಸ್ ಕ್ರೀಂ ಮಾಡಿಕೊಡುತ್ತಾ ಇದ್ದ ಪರಿಯೇ ನಮ್ಮನ್ನು ರೋಮಾಂಚನಗೊಳಿಸಿತ್ತು. ಅವನ ಬಳಿಯಿಂದ ಬರ‍್ಪನ್ನೂ ಕೇಳುತ್ತಿದ್ದೆವು. ಅವನು ಒಂದು ಸಲ‌ ಕೊಡುತ್ತಿದ್ದ ಮತ್ತೊಂದು ಸಲ ಕೊಡುತ್ತಿರಲಿಲ್ಲ.

ನಾನೂ ನನ್ನ ಗೆಳೆಯರು ನನ್ನ ಕ್ಲಾಸ್ಮೇಟುಗಳೂ ಹಣ ಹೊಂದಿಸಿಕೊಳ್ಳುತ್ತಾ ಇವರೆಲ್ಲರ ಬಳಿ ಹಣ್ಣು, ತಿಂಡಿ, ಬರ‍್ಪಿ‌ನ ಐಸ್ ಕ್ರೀಂ ತಿನ್ನುತ್ತಿದ್ದೆವು. ಅದು ಎಲ್ಲಕಿಂತ ಕುಶಿ ಕೊಡುವ ಸಂಗತಿಯಾಗಿತ್ತು. ಹೊಟ್ಟೆ ತುಂಬ ಏನೂ ತಿನ್ನುತ್ತಿರಲಿಲ್ಲ. ಆದರೆ ಹಂಚಿಕೊಂಡು ತಮಾಶೆಯಾಗಿ ತಿನ್ನುತ್ತಾ ಕೀಟಲೆ ಮಾಡುತ್ತಿದ್ದದ್ದು ನಮ್ಮ ಮನಸ್ಸನ್ನಂತೂ ತುಂಬುತ್ತಿತ್ತು. ಒಂದು ಹಿಡಿ ಬಟಾಣಿ ಐದಾರು ಗೆಳೆಯರಲ್ಲಿ ಹಂಚಿದಾಗ ಸಿಗುತ್ತಿದ್ದದ್ದು ಸ್ವಲ್ಪವೇ ಆದರೂ ಅದು ಕೊಡುತ್ತಿದ್ದ ಕುಶಿ ಈಗ ದೊಡ್ಡ ರೆಸ್ಟೋರೆಂಟಿನಲ್ಲಿ ಊಟ ಮಾಡಿದರೂ ಸಿಗುವದಿಲ್ಲ. ಒಂದೇ ಪ್ಲೇಟ್ ಪಾನಿ ಪೂರಿ ತೆಗೆದುಕೊಂಡು ಒಂದೇ ಪ್ಲೇಟಿನಿಂದ ನಾಲ್ಕೂ ಗೆಳೆಯರು ಒಂದೊಂದು ಪುರಿ ಎತ್ತಿಕೊಂಡು ತಿನ್ನುತ್ತಿದ್ದೆವು. ತಿಂದಾದ ಮೇಲೆ ಹಣ ಕೊಡುವ ಸರದಿ ಬಂದಾಗ “ನೀ ಕೊಡು ನನ್ನ ಬಳಿ ಇಲ್ಲ” ಅಂತ ಒಬ್ಬರಿಗೊಬ್ಬರು ಕಾಲಿ ಜೇಬು ತೋರಿಸುತ್ತಾ ಗೋಳು ಹೊಯ್ದುಕೊಳ್ಳುತ್ತಿದ್ದೆವು. ಪಾನಿಪೂರಿ ಬಂಡಿಯವನು ಕೆಲವು ಸಲ ನಮ್ಮ‌ ಆಟ ನೋಡಿ “ಈಗ ಯಾರೂ ನನಗೆ ಹಣ ಕೊಡದಿದ್ದರೆ ಹಣ ಕೊಡುವವರೆಗೆ ನಿಮ್ಮ ಸೈಕಲ್ ನನ್ನ ಬಳಿ ಇಟ್ಟುಕೊಳ್ಳುತ್ತೇನೆ” ಅಂತ ಸುಮ್ಮನೆ ಹೆದರಿಸುತ್ತಿದ್ದ!

ಇವೆಲ್ಲ ಎಂತಾ ಸುಂದರ ನೆನಪುಗಳು. ಮುದ ನೀಡುವ ನೆನಪುಗಳು.

( ಚಿತ್ರ ಸೆಲೆ:  klp )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: