ಟ್ರಾಪಿಕ್ : ಇದಕ್ಕೆ ಪರಿಹಾರವೇ ಇಲ್ಲವೇ?

– ವಿನಯ ಕುಲಕರ‍್ಣಿ.

ಎಂದಿನಂತೆ ಇದೂ ಒಂದು, ಬ್ರುಹತ್ತಾಗಿ ಬೆಳೆದಂತ ಸಮಸ್ಯೆಯನ್ನ ಅತ್ತಿತ್ತ ಎಳೆದು ಏನಾದರೂ ಆಗಬಹುದೇ ಎಂದು ನೋಡುವಂತದ್ದು. ಟ್ರಾಪಿಕ್ ನ ಸಮಸ್ಯೆಯನ್ನ ಕಡಿಮೆ ಮಾಡಲಿಕ್ಕೆ, ಮೆಟ್ರೋ ಮಾಡ ಹೊರಟು ಇನ್ನೂ ಹೆಚ್ಚಿನ ಅವಾಂತರ ತಂದೊಡ್ಡುವ ಪರಿಸ್ತಿತಿ. ಇರುವ ಇಶ್ಟುದ್ದ ರಸ್ತೆಯಲ್ಲೇ ಅರ‍್ದದಶ್ಟನ್ನು ಪರಿಹಾರವೇ ನುಂಗಿ ನಿಂತಾಗ, ಇನ್ನ್ಯಾವ ದಿಕ್ಕಿನಲ್ಲಿ ಉತ್ತರ ಹುಡುಕಬೇಕು? ಇಲ್ಲಿರುವ ಅಶ್ಟೂ ಜನರಿಗೆ ಜಾಗ ಕೊಟ್ಟರೂ ಅವರವರ ರೂಡಿಗಳಿಂದ ಮನಸ್ತಿತಿಗಳಿಂದ ಟ್ರಾಪಿಕ್ ಅಲ್ಲಿಲ್ಲಿ ಆಗುವಂತಹದ್ದೇ. ಕಾರಣಗಳನ್ನು ನೋಡ ಹೊರಟರೂ ಆ ದಾರಿಯು ದೂರದ ಪ್ರಯಾಣ ಪ್ರಯಾಸವೇ. ಹೆಬ್ಬಾಳಕ್ಕೆ ಹೋಗುವಾಗ ವೈಟ್ ಟಾಪಿಂಗ್ ಹೆಸರಲ್ಲಿ ಒಂದರ‍್ದ ರೋಡು, ವೈಟ್ ಪೀಲ್ಡ್ ಅಲ್ಲಿ ಮೆಟ್ರೋ ಕಾರಣವಾಗಿ ಒಂದರ‍್ದ ರೋಡು ಕಣ್ಮರೆಯಾಗುತ್ತಲೇ ಇವೆ. ಇತ್ತೀಚಿಗೆ ಬಂದದ್ದು ಒಂದು ವಾರ ಆಗಿದೆ ಅಶ್ಟೇ. ಪ್ರತ್ಯೇಕವಾಗಿ ಬಸ್ ಗಳಿಗೆ ಒಂದು ಲೇನ್. ಅದರಲ್ಲೂ ಜನ ಹೋಗಿ ನಿಂತದ್ದೇ ನಿಂತದ್ದು. ಗೋಶಣೆಯೇನೋ ದಿನ ಪತ್ರಿಕೆಗಳಲ್ಲೆಲ್ಲ, ಆದರೆ ಸದ್ಯಕ್ಕೆ ಅದನ್ನು ಪಾಲಿಸುವಂತೆ ಯಾರೂ ಕಾಣುವುದಿಲ್ಲ. ಬೆಂಗಳೂರಿನ ಮೂಲ ಗುಣದಲ್ಲೇ ಅವಸರ ತುಂಬಿಕೊಂಡಿದೆ. ಒಂದಡಿ ಜಾಗ ಸಿಕ್ಕರೂ ಯಾವುದೊ ಕಾರಣದಿಂದ ಒಬ್ಬರು ಬಂದು ಅದನ್ನು ಆಕ್ರಮಿಸಿಕೊಳ್ಳುತ್ತಾರೆ. ನಿಯಮ ಪಾಲನೆಯ ವಿವೇಚನೆ ಮೂಡಿಸುವದು ಕಶ್ಟದ ಕೆಲಸವೇ. ನಿಯಮ ಪಾಲಿಸದೇ ಸಿಗುವ ಅಶ್ಟೋ ಇಶ್ಟು ಲಾಬ, ವಿದೇಯತೆಯಿಂದ ಪಾಲಿಸುವಾಗ ಮಾತ್ರ ಏನೂ ದಕ್ಕದು. ಇದರಿಂದಲೇ ಆಕ್ರೋಶ ಹುಟ್ಟಿಕೊಳ್ಳುವದು. ನಮ್ಮೊಂದೂ ಪ್ರಶ್ನೆಗೆ ಸಮಾದಾನ ದೊರಕದಿದ್ದರೆ ನಾವು ಕಂಡು ಕೊಂಡಿದ್ದೇ ಸಮಾದಾನ.

ದೂಳು, ರಸ್ತೆಗುಂಡಿಗಳು ಪಕ್ಕಕ್ಕಿಡಬೇಕಾದ ವಿಶಯ. ಅದರಿಂದಾಗುವ ಆರೋಗ್ಯದ ಹಾನಿ, ಅದರ ಲೆಕ್ಕ ಬೇರೆಯೇ. ಬೆಳ್ಳಂದೂರಿನಿಂದ ಪಕ್ಕದಲ್ಲೇ ತಾಸು ತಾಸುಗಳವರೆಗೆ ಜನ ಕಾರಿನಲ್ಲಿ ಕಾಯುವದುಂಟು. ಇತ್ತೀಚೆಗೆ ನೊರೆಯೊಂದು ಕಡಿಮೆ! ಎಲ್ಲಿ ನೋಡಿದರಲ್ಲಿ ಜನ, ಒಬ್ಬರ ಚಲನವಲನ ಇನ್ನೊಬ್ಬರಿಗೆ ಸಹನೆಯಾಗದು. ತಾವು ಓಡಿಸುವದ ಬಿಟ್ಟು ಪ್ರತಿ ಇನ್ನೆಲ್ಲರಿಗೂ ಕೊಡಲಿಕ್ಕೆ ಸಲಹೆಗಳು. ಬಲಕ್ಕೆ ಯೂ ಟರ‍್ನ್ ತೆಗೆದುಕೊಳ್ಳಬೇಕಿರುವವನು ಎಡದ ಆ ಮೂಲೆಯಲ್ಲಿದ್ದು ಅಲ್ಲಿಂದ ಗಾಡಿ ತಿರುಗಿಸುವದು. ರಸ್ತೆಯ ಎಡ ಮೂಲೆಯ ಸಂದಿ ಜಾಗದಲ್ಲಿ ಸ್ಕೂಟರು ಬೈಕ್ ಗಳು ದಾಟುವದನ್ನ ಸಹಿಸದೆ, ಅಡ್ಡ ಬಂದು ನಿಲ್ಲುವ ಆಟೋಗಳು ಕಾರುಗಳು. ಮೈ ಮೇಲೆ ಬಂದು ಸಾವಿನ ಸಾಮೀಪ್ಯ ತೋರುವ ಬಸ್ ಗಳು ಲಾರಿಗಳು. ಇನ್ನು ಒಬ್ಬ ಹಾಕಿದ ತಕ್ಶಣದ ಬ್ರೇಕ್ ನಿಂದ ಹಿಂದೆ 5 ಗಾಡಿಗಳು ಒಬ್ಬರಿಗೊಬ್ಬರು ಡಿಕ್ಕಿ ಹೊಡೆಯುವದು. ಇನ್ನು ಅವಾಚ್ಯ ಎನ್ನಿಸದಶ್ಟು ಬೈಗುಳಗಳು ರೋಡಿನಲ್ಲಿ ಸಹಜವಾಗಿವೆ!

ಇನ್ನು ಆಪೀಸಿಗೆ ಲೇಟ್ ಆಗಿ ಬರುವವರಿಗಂತೂ ಇದೊಂದು ನೆಪ, ಕೇಳಿದವರಿಗೂ ಸಾಕಾಗಿರಬೇಕು. ಟ್ರಾಪಿಕ್ ಒಂದನ್ನೇ ಕಾರಣವಾಗಿಟ್ಟುಕೊಂಡು ಜನ ಎಶ್ಟೊಂದು ಒಳ್ಳೊಳ್ಳೆಯ ಕೆಲಸಗಳ ಆಪರ್ ಗಳನ್ನ ಕೈ ಬಿಟ್ಟಿದ್ದಿದೆ. ಈ ಊರಿನ ಒಂದು ಮೂಲೆಯಿಂದ ವಿರುದ್ದ ದಿಕ್ಕಿನ ಇನ್ನೊಂದು ಮೂಲೆಗೆ ದಿನ ಪ್ರಯಾಣಿಸುವವರಿಗೆ ಅದರ ಕಶ್ಟದ ತೂಕ ಗೊತ್ತು. ಬೇರೆ ಊರಿಂದ ಬಂದು ನೋಡಿದವರಿಗಂತೂ ಗಾಬರಿಯೇ. ಕೊನೆಗೂ ಮೆಟ್ರೋ ಬಂದು ಒಂದಿಶ್ಟು ಉಸಿರಾಡಲು ಜಾಗ ಸಿಕ್ಕಿದೆ, ಇಲ್ಲವಾದರೆ ಒಂದು 10 ಕಿ ಮೀ ಮೆಜೆಸ್ಟಿಕ್ ನ ದಿಕ್ಕಿನೆಡೆಗೆ ಹೋಗಲು ಕಮ್ಮಿಯೆದರೂ 90 ನಿಮಿಶ. ಹಬ್ಬದ ದಿನಗಳಲ್ಲಿ ಬೇರೆ ಊರಿಗೆ ಹೋಗುತ್ತಿರುವವರು ಬಸ್ ಹತ್ತಿಕೊಂಡರೆ ಸಾದನೆಯಾಗಿತ್ತು. ಹಾಗೆ ತಪ್ಪಿಸಿಕೊಂಡು ಇಲ್ಲೇ ಉಳಿದವರೂ ಇದ್ದಾರೆ.

ಆಪಾದನೆಯಲ್ಲ,ಆದರೂ ಟ್ರಾಪಿಕ್ಕಿನ ಪೊಲೀಸರು ಹತಾಶರೇ. ಬರುವ ನಾಲ್ಕು ಹೆಲ್ಮೆಟ್ ಇಲ್ಲದ ಗಾಡಿಗಳಲ್ಲಿ ಅವರ ಕೈಗೆ ಸಿಗುವದು ಒಂದೋ ಎರಡೋ. ಎಲ್ಲಿಯವರೆಗೂ ಉಲ್ಲಂಗನೆ ಮಾಡಿದಾಗ ದಂಡ ಕಾಯಂ ಅಲ್ಲ ಎನ್ನಿಸುವದೋ, ಅಲ್ಲಿಯವರೆಗೂ ಬರುವ ಎಲ್ಲ ನಿಯಮಗಳು ಗಾಳಿಗೆ ತೂರಿಕೊಳ್ಳುತ್ತವೆ. ಯಾರೋ ಪಾಪ ನಸೀಬು ಕೆಟ್ಟವರು ಹೆಲ್ಮೆಟ್ ಇಲ್ಲದೆ ಇನ್ಶೂರೆನ್ಸ್ ಇಲ್ಲದೆ ಎಮಿಶನ್ ಟೆಸ್ಟ್ ಇಲ್ಲದೆ ಸಿಕ್ಕು ದಂಡ ಕೊಟ್ಟು ರಶೀದಿ ಪಡೆದುಕೊಂಡು ಬಂದಿರಬಹುದು. ಉಳಿದವರೆಲ್ಲ ಇನ್ನು ಹಾಯಾಗಿ ಹಾಗೆಯೇ ಓಡಾಡುತ್ತಿರುವರು. ಹೊಸ ನಿಯಮಗಳೇನೋ ಬರುತ್ತಲೇ ಇರುತ್ತವೆ, ಆದರೆ ಜನರ ಪ್ರತಿಕ್ರಿಯೆ ಮಾತ್ರ ನೀರಸವೇ ಆಗಿರುತ್ತದೆ. ಮತ್ತದೇ ಸೌಂಡು, ದೂಳು ಉಸಿರುಕಟ್ಟಿಸುವ ಮಾಲಿನ್ಯದಲ್ಲಿ ಓಡುತ್ತಲೇ ಇರಬೇಕು. ಪರಿಹಾರ ಸೂಚನೆ ತುಂಬಾ ಕಶ್ಟಕರವಾದದ್ದೇ. ಇಶ್ಟು ದಿನ ಅದಕ್ಕೆ ಯಾರೂ ಪ್ರಯತ್ನ ಪಟ್ಟಿಲ್ಲವೆಂದೂ ಅಲ್ಲ. ಸರಳ ಲೆಕ್ಕದಲ್ಲಿ ಒಂದು ಕೆ ಜಿ ಯ ಡಬ್ಬಿಯಲ್ಲಿ ಎರಡಕ್ಕೂ ಹೆಚ್ಚಿನ ಕೆಜಿಯಶ್ಟು ಸಾಮಾನು ತುಂಬಿ ತುರುಕಿದಂತೆ. ಡಬ್ಬಿ ಒಡೆದು ಹೋಗಬೇಕಶ್ಟೆ ಆದರೆ ಇನ್ನೇನು ಆಗುವ ಸಾದ್ಯತೆ ಸದ್ಯಕ್ಕೆ ಇಲ್ಲ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: